Railway News : ಮಿಷನ್ ಜೀವನ್ ರಕ್ಷಾ ಅಡಿಯಲ್ಲಿ 2021ರಲ್ಲಿ 601 ಮಂದಿಯ ರಕ್ಷಣೆ ಮಾಡಿದ ರೈಲ್ವೇ ರಕ್ಷಣಾ ಪಡೆ!
522 ಆಕ್ಸಿಜನ್ ರೈಲುಗಳು ತಮ್ಮ ನಿಗದಿತ ಗುರಿ ತಲುಪು ಸಹಾಯ ಮಾಡಿದ ಆರ್ ಪಿಎಫ್
ಮಾನವ ಕಳ್ಳಸಾಗಣೆದಾರರಿಂದ 630 ಜನರನ್ನು ರಕ್ಷಣೆ
2021ರಲ್ಲಿ ಆರ್ ಪಿಎಫ್ ನಿರ್ವಹಣೆ ಬಗ್ಗೆ ಪ್ರಕಟಣೆ ನೀಡಿದ ರೈಲ್ವೆ ಇಲಾಖೆ
ನವದೆಹಲಿ (ಜ. 6): ಇಡೀ ಭಾರತದ ಜೀವನಾಡಿಯಾಗಿರುವ ರೈಲ್ವೇಸ್ (Railways), ಕಳೆದ ಎರಡು ವರ್ಷದಲ್ಲಿ ಅವಿರತವಾಗಿ ಕಾರ್ಯನಿರ್ವಹಿಸಿದೆ. ಪ್ರಯಾಣಿಕರ ಸಾಗಾಟ, ಅಗತ್ಯವಸ್ತುಗಳು, ಆಕ್ಸಿಜನ್ ಟ್ಯಾಂಕರ್, ಸರಕು ಸಾಗಣೆ ಈ ಎಲ್ಲವುಗಳಲ್ಲಿ ರೈಲ್ವೇಸ್ ನ ಮಾತ್ರ ಮಹತ್ವದ್ದಾಗಿದೆ. ಇಂಥ ರೈಲ್ವೇಸ್ ನ ಕಾರ್ಯ ಚಟುವಟಿಕೆಗಳು ನಿರಾಳವಾಗಿ ನಡೆಯಲು ಕಾರಣರಾಗಿರುವವರು ರೈಲ್ವೇ ರಕ್ಷಣಾ ಪಡೆ (Railway Protection Force) ಅಥವಾ ಆರ್ ಪಿಎಫ್ (RPF). ರೈಲ್ವೇ ವ್ಯವಸ್ಥೆಯಲ್ಲ ಎಲೆಮರೆಕಾಯಿಯಂತೆ ಉಳಿದುಕೊಳ್ಳುವ ಆರ್ ಪಿಎಫ್, 2021ರಲ್ಲಿ ಜೀವನ್ ರಕ್ಷಾ ಅಭಿಯಾನದಲ್ಲಿ (Mission Jeewan Raksha) 601 ಜನರನ್ನು ರಕ್ಷಣೆ ಮಾಡಿದೆ ಎಂದು ರೈಲ್ವೇ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ. 2021ರಲ್ಲಿ ರೈಲ್ವೇ ಇಲಾಖೆಯ ಅಗತ್ಯ ವಿಭಾಗವಾಗಿರುವ ಆರ್ ಪಿಎಫ್ ನ ಕಾರ್ಯವೈಖರಿ ಹೇಗಿತ್ತು ಎನ್ನುವುದರ ಮಾಹಿತಿ ಇಲ್ಲಿದೆ.
2ನೇ ಅಲೆಯ ಹೊತ್ತಿಗೆ ದೇಶದಲ್ಲಿ ಆಕ್ಸಿಜನ್ ಕೊರತೆ ದಟ್ಟವಾಗಿ ಕಾಡಿತ್ತು. ಇಂಥ ಹಂತದಲ್ಲಿ ರೈಲ್ವೇ ಇಲಾಖೆ ಒಟ್ಟು 522 ವಿಶೇಷ ಆಕ್ಸಿಜನ್ ರೈಲುಗಳನ್ನು (Oxygen Special Train) ನಿಗದಿತ ಸ್ಥಳಗಳಿಗೆ ಓಡಿಸಿತ್ತು. ಈ ರೈಲುಗಳು ಯಾವುದೇ ತಡೆಯಿಲ್ಲದೆ ಪ್ರಯಾಣ ಮಾಡುವ ನಿಟ್ಟಿನಲ್ಲಿ ಆರ್ ಪಿಎಫ್ ಕೆಲಸ ಮಾಡಿತ್ತು. ಅಲ್ಲದೆ, ಪ್ರಮುಖ ಸ್ಟೇಷನ್ ಗಳಲ್ಲಿ ಕೋವಿಡ್ (Covid)ಸಹಾಯ ಬೂತ್ ಗಳನ್ನು ಸ್ಥಾಪನೆ ಮಾಡಲಾಗಿತ್ತು. ಇಲ್ಲಿ ಹಲವಾರು ಮೂಲಗಳಿಮದ ಬಂದ ಮಾಹಿತಿಯನ್ನು ಇವರು ಪಡೆದುಕೊಂಡಿದ್ದು ಮಾತ್ರವಲ್ಲದೆ, ಅಗತ್ಯವಿರುವವರಿಗೆ ತಕ್ಷಣವೇ ಸಹಾಯಕ್ಕೆ ಧಾವಿಸಿದ್ದರು. ಎಲ್ಲಾ ನಿಲ್ದಾಣಗಳಲ್ಲಿ ಕೋವಿಡ್ ಸೂಕ್ತ ವರ್ತನೆಗಳನ್ನು ಪಾಲಿಸುವ ನಿಟ್ಟಿನಲ್ಲಿ ಆರ್ ಪಿಎಫ್ ಶ್ರಮವಹಿಸಿತ್ತು. ತಮ್ಮ ಕರ್ತವ್ಯವನ್ನು ನಿರ್ವಹಣೆ ಮಾಡುವ ಸಮಯದಲ್ಲಿ 26 ಆರ್ ಪಿಎಫ್ ಸಿಬ್ಬಂದಿ ಕೋವಿಡ್-19 ವೈರಸ್ ಗೆ ಬಲಿಯಾಗಿದ್ದಾರೆ.
601 ಜೀವಗಳ ರಕ್ಷಣೆ: ತಮ್ಮ ಜೀವದ ಅಪಾಯವನ್ನು ಲೆಕ್ಕಿಸದೆ 2021ರಲ್ಲಿ ಜೀವನ್ ರಕ್ಷಾ ಅಭಿಯಾನದ ಅಡಿಯಲ್ಲಿ ಆರ್ ಪಿಎಫ್ ಸಿಬ್ಬಂದಿ 601ಯ ಪ್ರಾಣ ಉಳಿಸಿದ್ದಾರೆ. ಭಾರ್ವರಿ ರೈಲ್ವೇ ನಿಲ್ದಾಣದಲ್ಲಿ ಮಹಿಳೆಯೊಬ್ಬಳು ಆತ್ಮಹತ್ಯೆಗೆ ಯತ್ನಿಸುತ್ತಿದ್ದ ವೇಳೆ ಹೆಡ್ ಕಾನ್ಸ್ ಸ್ಟೇಬಲ್ ಗ್ಯಾನ್ ಚಂದ್ ಸಾವಿಗೀಡಾಗಿರುವುದು ಕೇವಲ ಒಂದು ಉದಾಹರಣೆಯಷ್ಟೇ. ಕಳೆದ ನಾಲ್ಕು ವರ್ಷಗಳಲ್ಲಿ ರೈಲು ಚಕ್ರದಡಿ ಸಿಲುಕಬಹುದಾಗಿದ್ದ 1600 ಜೀವಗಳನ್ನು ಆರ್ ಪಿಎಫ್ ಸಿಬ್ಬಂದಿ ಕಾಪಾಡಿದೆ. ಆರ್ ಪಿಎಫ್ ನ ಶೌರ್ಯವನ್ನು ಪರಿಗಣಿಸಿ ಈವರೆಗೂ 9 ಜೀವನ್ ರಕ್ಷಾ ಪದಕ ಹಾಗೂ 1 ಶೌರ್ಯ ಪದಕ ರಾಷ್ಟ್ರಪತಿಯಿಂದ ದೊರಕಿದೆ.
Railways Rules: ರೈಲಲ್ಲಿ ಹೋಗುತ್ತಿದ್ದರೂ ಬೇಕಾಬಿಟ್ಟಿ ಲಗೇಜ್ ತೆಗೆದುಕೊಂಡು ಹೋಗೋ ಹಾಗಿಲ್ಲ!
ಮಹಿಳಾ ಭದ್ರತೆ: ದೂರದ ರೈಲುಗಳಲ್ಲಿ ವಿಶೇಷವಾಗಿ ಒಂಟಿಯಾಗಿ ಪ್ರಯಾಣಿಸುವ ಅಥವಾ ಅಪರಾಧಕ್ಕೆ ಗುರಿಯಾಗುವ ಮಹಿಳಾ ಪ್ರಯಾಣಿಕರಿಗೆ ಭದ್ರತೆ ಒದಗಿಸಲು “ಮೇರಿ ಸಹೇಲಿ” (Meri Saheli) ಎಂಬ ಉಪಕ್ರಮವನ್ನು ಪ್ರಾರಂಭಿಸಲಾಯಿತು. ಈ ಉದ್ದೇಶಕ್ಕಾಗಿ ಆರ್ ಪಿಎಫ್ ಭಾರತದಾದ್ಯಂತ ಪ್ರಮುಖ ರೈಲು ನಿಲ್ದಾಣಗಳಲ್ಲಿ 244 "ಮೇರಿ ಸಹೇಲಿ" ತಂಡಗಳನ್ನು ನಿಯೋಜಿಸಿದೆ. ಮಹಿಳೆಯರ ಸುರಕ್ಷತೆ ಗಮನದಲ್ಲಿಟ್ಟುಕೊಂಡು 840 ನಿಲ್ದಾಣಗಳಲ್ಲಿ ಸಿಸಿಟಿವಿ ವ್ಯವಸ್ಥೆ, 4 ಸಾವಿರ ಮಹಿಳಾ ಕೋಚ್ ಗಳು, ಮಹಿಳಾ ಭದ್ರತಾ ಸಿಬ್ಬಂದಿ ಸೇರಿದಂತೆ ಹಲವು ವ್ಯವಸ್ಥೆಗಳನ್ನು ಮಾಡಲಾಗಿದೆ.
Child Labor : ಟಿಕೆಟ್ ಇಲ್ಲದ ಬಾಲಕನ ಬಳಿ 500 ರೂ. ಸುಲಿಗೆ.. ಎಂಥಾ ಕಾಲ!
ಮಾನವ ಕಳ್ಳ ಸಾಗಾಣಿಕೆ: ರೈಲು ಸಾರಿಗೆಯ ಮೂಲಕ ಮಾನವ ಕಳ್ಳಸಾಗಣೆ ಪ್ರಕರಣಗಳಲ್ಲಿ ಆರ್ ಪಿಎಫ್ ತಕ್ಷಣವೇ ಕಾರ್ಯನಿರ್ವಹಿಸಿದೆ. 2021ರಲ್ಲಿ ಮಾನವ ಕಳ್ಳ ಸಾಗಾಣೆದಾರರ ಹಿಡಿತದಿಂದ 630 ಜನರನ್ನು ರಕ್ಷಣೆ ಮಾಡಲಾಗಿದ್ದು, ಇದರಲ್ಲಿ 54 ಮಹಿಲೆಯರು, 94 ಅಪ್ರಾಪ್ತ ಬಾಲಕಿಯರು, 81 ಪುರುಷರು ಮತ್ತು 401 ಅಪ್ರಾಪ್ತ ಬಾಲಕರು ಸೇರಿದ್ದಾರೆ.
ಮಕ್ಕಳ ರಕ್ಷಣೆ: ಕುಟುಂಬದಿಂದ ಹಲವಾರು ಕಾರಣಗಳಿಂದ ನಾಪತ್ತೆಯಾದ/ಬೇರ್ಪಟ್ಟ ಮಕ್ಕಳನ್ನು ಮತ್ತೆ ಒಂದುಗೂಡಿಸುವಲ್ಲಿ ಆರ್ ಪಿಎಫ್ ಪ್ರಮುಖ ಪಾತ್ರ ವಹಿಸಿದೆ. ಭಾರತೀಯ ರೈಲ್ವೆಯ ಸಂಪರ್ಕಕ್ಕೆ ಬಂದ ಹಾಗೂ ಆರೈಕೆ ಮತ್ತು ರಕ್ಷಣೆಯ ಅಗತ್ಯವಿರುವ 11,900ಕ್ಕೂ ಅಧಿಕ ಮಕ್ಕಳನ್ನು ರಕ್ಷಣೆ ಮಾಡಿದೆ. 132 ಚೈಲ್ಡ್ ಹೆಲ್ಪ್ ಡೆಸ್ಕ್ ಗಳು ಕಾರ್ಯನಿರ್ವಹಣೆ ಮಾಡುತ್ತಿವೆ. ಇದರಲ್ಲಿ ಆರ್ ಪಿಎಫ್ ಮಕ್ಕಳ ರಕ್ಷಣೆಗಾಗಿ ನಾಮನಿರ್ದೇಶಿತ ಎನ್ ಜಿಓ ಗಳ ಜೊತೆ ಕೆಲಸ ಮಾಡುತ್ತಿದೆ.
2021ರಲ್ಲಿ ಆರ್ ಪಿಎಫ್ ನ ಸಾಹಸಗಳೇನು?
- ರೈಲ್ವೇ ಪ್ರಯಾಣಿಕರ ಮೇಲೆ ಅಪರಾಧ ಎಸಗಿದ 3 ಸಾವಿರಕ್ಕೂ ಅಧಿಕ ಕ್ರಿಮಿನಲ್ ಗಳನ್ನು ಬಂಧಿಸಿ ಸ್ಥಳೀಯ ಪೊಲೀಸರಿಗೆ ನೀಡಿದೆ
- ರೈಲ್ವೇ ಆಸ್ತಿಪಾಸ್ತಿಗಳನ್ನು ಕದ್ದ ಆರೋಪದಲ್ಲಿ 8744 ವ್ಯಕ್ತಿಗಳನ್ನು ಬಂಧನ ಮಾಡಿದ್ದು, 5.83 ಕೋಟಿ ರೂ. ಮೌಲ್ಯದ ಆಸ್ತಿಯನ್ನು ವಶಪಡಿಸಿಕೊಳ್ಳಲು ಯಶ ಕಂಡಿದೆ
- ಟಿಕೆಟ್ ಮಾರಾಟದ ಅವ್ಯವಹಾರದಲ್ಲಿ ಭಾಗಿಯಾದ ವಿಚಾರದಲ್ಲಿ 4600ಕ್ಕೂ ಅಧಿಕ ಅಪರಾಧಿಳನ್ನು ಬಂಧಿಸಲಾಗಿದ್ದು 4100ಕ್ಕೂ ಅಧಿಕ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಇವರಲ್ಲಿದ್ದ 2.8 ಕೋಟಿ ರೂ. ಅಕ್ರಮ ಹಣವನ್ನೂ ವಶಪಡಿಸಿಕೊಳ್ಳಲಾಗಿದೆ.
- 15.7 ಕೋಟಿ ರೂಪಾಯಿಗೂ ಅಧಿಕ ವೆಚ್ಚದ ಮಾದಕ ದ್ರವ್ಯ ಸಾಗಾಣೆಯನ್ನು ತಡೆಹಿಡಿಯುವಲ್ಲಿ ಯಶಸ್ವಿಯಾಗಿದೆ. ಈ ಕುರಿತಂತೆ 620 ಡ್ರಗ್ ಪೆಡ್ಲರ್ ಗಳ ಬಂಧನವಾಗಿದೆ.
- ವನ್ಯಜೀವಿಗಳ ಅಕ್ರಮ ವ್ಯಾಪಾರದಲ್ಲಿ ತೊಡಗಿರುವ ಕಳ್ಳಸಾಗಣೆದಾರರ ವಿರುದ್ಧ ಕಠಿಣ ಕ್ರಮ ಕೈಗೊಂಡಿದೆ. 2021 ರ ವರ್ಷದಲ್ಲಿ, ಆರ್ ಪಿಎಫ್ ಹಲವಾರು ನಿರ್ಬಂಧಿತ ವನ್ಯಜೀವಿಗಳನ್ನು ಅಂದರೆ ಪಕ್ಷಿಗಳು, ಹಾವುಗಳು, ಆಮೆ, ನವಿಲು, ಸರೀಸೃಪ ಇತ್ಯಾದಿಗಳನ್ನು ಮತ್ತು ಅವುಗಳ ಸಂಸ್ಕರಿಸಿದ ಉತ್ಪನ್ನಗಳೊಂದಿಗೆ ಶ್ರೀಗಂಧದ ಮರ ಮತ್ತು ಇತರ ಸಸ್ಯ ಮತ್ತು ಪ್ರಾಣಿಗಳನ್ನು ವಶಕ್ಕೆ ಪಡೆದುಕೊಂಡಿದೆ.