ಚಿಕ್ಕಬಳ್ಳಾಪುರ: ಜನ್ಮದಿನದಂದೇ ಸ್ವಾಮೀಜಿ ಮೇಲೆ ಹಲ್ಲೆ, ಮಠಕ್ಕೆ ನುಗ್ಗಿ ಹೊಡೆದ ವೃದ್ಧೆಯ ಕುಟುಂಬಸ್ಥರು !

Published : Jan 10, 2026, 06:38 PM IST
 Omkara Jyothi Mutt Swamiji

ಸಾರಾಂಶ

ಚಿಕ್ಕಬಳ್ಳಾಪುರ ತಾಲೂಕಿನ ಓಂಕಾರ ಜ್ಯೋತಿ ಮಠದ ಉಮಾಮಹೇಶ್ವರ ಸ್ವಾಮೀಜಿ ಅವರ ಹುಟ್ಟುಹಬ್ಬದ ದಿನವೇ ಅವರ ಮೇಲೆ ಹಲ್ಲೆ ನಡೆದಿದೆ. ಮಠದ ಜಾಗವನ್ನು ಗಿಫ್ಟ್ ಡೀಡ್ ಮಾಡಿಸಿಕೊಂಡಿದ್ದಾರೆ ಎಂಬ ಆರೋಪದ ಮೇಲೆ ವೃದ್ಧೆಯ ಕುಟುಂಬಸ್ಥರು ಈ ಕೃತ್ಯ ಎಸಗಿದ್ದು, ಗಾಯಾಳು ಸ್ವಾಮೀಜಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಚಿಕ್ಕಬಳ್ಳಾಪುರ: ಹುಟ್ಟುಹಬ್ಬದ ಸಂಭ್ರಮದಲ್ಲಿದ್ದ ಸ್ವಾಮೀಜಿಯ ಮೇಲೆ ಹಲ್ಲೆ ನಡೆಸಿದ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಕಳವಾರ ಗ್ರಾಮದ ಓಂಕಾರ ಜ್ಯೋತಿ ಮಠದ ಬಳಿ ನಡೆದಿದೆ. ಓಂಕಾರ ಜ್ಯೋತಿ ಮಠದ ಸ್ವಾಮೀಜಿ ಉಮಾಮಹೇಶ್ವರ ಸ್ವಾಮೀಜಿ ಅವರ ಮೇಲೆ ಹಲ್ಲೆ ನಡೆಸಲಾಗಿದ್ದು, ಈ ಘಟನೆ ಪ್ರದೇಶದಲ್ಲಿ ತೀವ್ರ ಸಂಚಲನಕ್ಕೆ ಕಾರಣವಾಗಿದೆ.

ಗಿಫ್ಟ್ ಡೀಡ್ ವಿಚಾರವೇ ಗಲಾಟೆಗೆ ಕಾರಣ

ಪೊಲೀಸರು ಹಾಗೂ ಸ್ಥಳೀಯರಿಂದ ಲಭ್ಯವಾದ ಮಾಹಿತಿಯಂತೆ, ಮಠದ ಜಯಮ್ಮ ಎಂಬ ವೃದ್ಧ ಮಹಿಳೆಯನ್ನು ಯಾಮಾರಿಸಿ ಮಠದ ಜಾಗವನ್ನು ಟ್ರಸ್ಟ್ ಹೆಸರಿಗೆ ಗಿಫ್ಟ್ ಡೀಡ್ (ದಾನ ಪತ್ರ) ಮಾಡಿಸಿಕೊಂಡಿದ್ದಾರೆ ಎಂಬ ಆರೋಪ ಸ್ವಾಮೀಜಿ ಹಾಗೂ ಮಠದ ಟ್ರಸ್ಟ್ ವಿರುದ್ಧ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಜಯಮ್ಮ ಅವರ ಕುಟುಂಬಸ್ಥರು ಸ್ವಾಮೀಜಿ ಉಮಾಮಹೇಶ್ವರ ಮೇಲೆ ಆಕ್ರೋಶಗೊಂಡು ಮಠದ ಬಳಿ ಗಲಾಟೆ ನಡೆಸಿದ್ದು, ಹಲ್ಲೆಗೆ ಮುಂದಾಗಿದ್ದಾರೆ ಎನ್ನಲಾಗಿದೆ.

ಮಠದ ಹಿನ್ನೆಲೆ

ಈ ಮಠವನ್ನು ಕೆಲ ವರ್ಷಗಳ ಹಿಂದೆ ಮರಿಯಪ್ಪ ಸ್ವಾಮಿ ಎಂಬವರು ನಿರ್ಮಿಸಿದ್ದರು. ಅವರ ನಿಧನದ ಬಳಿಕ, ಪತ್ನಿ ಜಯಮ್ಮ ಅವರು ಮಠದ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು. ಸುಮಾರು ಆರು ತಿಂಗಳ ಹಿಂದೆ ಮಠದ ಜಾಗವನ್ನು ಓಂಕಾರ ಜ್ಯೋತಿ ಮಠ ಟ್ರಸ್ಟ್ ಹೆಸರಿಗೆ ಗಿಫ್ಟ್ ಡೀಡ್ ಮಾಡಲಾಗಿದೆ. ಇದರಲ್ಲಿ ಜಯಮ್ಮ ಅವರನ್ನು ಟ್ರಸ್ಟ್‌ನ ಗೌರವಾಧ್ಯಕ್ಷೆಯಾಗಿ ನೇಮಕ ಮಾಡಲಾಗಿದೆ . ಆದರೆ ಈ ಪ್ರಕ್ರಿಯೆ ಅಕ್ರಮವಾಗಿದೆ ಎಂದು ಜಯಮ್ಮ ಅವರ ಕುಟುಂಬದವರು ಆರೋಪಿಸಿದ್ದಾರೆ.

ಹುನ್ನಾರ ನಡೆಸಿದ ಆರೋಪ

ಮಠದ ಜಾಗವನ್ನು ಟ್ರಸ್ಟ್ ಹೆಸರಿಗೆ ವರ್ಗಾವಣೆ ಮಾಡುವಲ್ಲಿ ಉಮಾಮಹೇಶ್ವರ ಸ್ವಾಮೀಜಿ ಸೇರಿದಂತೆ ಹಲವರು ಸೇರಿಕೊಂಡು ಹುನ್ನಾರ ನಡೆಸಿದ್ದಾರೆ ಎಂಬ ಗಂಭೀರ ಆರೋಪವನ್ನು ಕುಟುಂಬಸ್ಥರು ಮಾಡಿದ್ದಾರೆ. ಈ ವಿಚಾರವೇ ಜಗಳಕ್ಕೆ ಕಾರಣವಾಗಿ ಇದೀಗ ಹಿಂಸಾತ್ಮಕ ರೂಪ ಪಡೆದಿದೆ ಎಂದು ತಿಳಿದುಬಂದಿದೆ.

ಆಸ್ಪತ್ರೆಗೆ ದಾಖಲು, ಪೊಲೀಸ್ ಪರಿಶೀಲನೆ

ಹಲ್ಲೆಯಲ್ಲಿ ಗಾಯಗೊಂಡ ಉಮಾಮಹೇಶ್ವರ ಸ್ವಾಮೀಜಿಯನ್ನು ಚಿಕಿತ್ಸೆಗಾಗಿ ಚಿಕ್ಕಬಳ್ಳಾಪುರ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ತಿಳಿದುಬಂದಿದೆ. ಘಟನೆಯ ಮಾಹಿತಿ ಪಡೆದ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸರು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಎರಡೂ ಕಡೆಯವರ ಹೇಳಿಕೆಗಳನ್ನು ಪಡೆದು ತನಿಖೆ ಆರಂಭಿಸಿದ್ದು, ಗಿಫ್ಟ್ ಡೀಡ್ ಮತ್ತು ಟ್ರಸ್ಟ್ ದಾಖಲೆಗಳ ಪರಿಶೀಲನೆ ನಡೆಸಲಾಗುತ್ತಿದೆ.

ಉದ್ವಿಗ್ನ ವಾತಾವರಣ

ಹುಟ್ಟುಹಬ್ಬದ ದಿನವೇ ಸ್ವಾಮೀಜಿಯ ಮೇಲೆ ಹಲ್ಲೆ ನಡೆದಿರುವುದು ಭಕ್ತರಲ್ಲಿ ಆಘಾತ ಮೂಡಿಸಿದ್ದು, ಮಠದ ಸುತ್ತಮುತ್ತ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಘಟನೆಯ ನಿಖರ ಸತ್ಯಾಂಶ ತನಿಖೆಯಿಂದ ಹೊರಬರಬೇಕಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮಕ್ಕೆ ಸಿದ್ಧತೆ ನಡೆಸಿದ್ದಾರೆ.

 

PREV
Read more Articles on
click me!

Recommended Stories

ಪಾಳುಬಿದ್ದ ವಿವಾದಿತ ಪರಶುರಾಮ ಥೀಮ್ ಪಾರ್ಕ್, ನಿರ್ಮಿತಿ ಕೇಂದ್ರ ಉಡುಪಿ ಸಂಸ್ಥೆ ಜವಾಬ್ದಾರಿ
ಡೆಂಟಲ್ ಕಾಲೇಜು ವಿದ್ಯಾರ್ಥಿನಿಗೆ 'ಸ್ಲಂನಿಂದ ಬಂದ ಕೋತಿ' ಎಂದಿದ್ದ ಲೆಕ್ಚರ್: ಸಾವಿನ ಹಿಂದಿದೆ ಕಿರುಕುಳದ ಕಥೆ!