ಪಾಳುಬಿದ್ದ ವಿವಾದಿತ ಪರಶುರಾಮ ಥೀಮ್ ಪಾರ್ಕ್, ನಿರ್ಮಿತಿ ಕೇಂದ್ರ ಉಡುಪಿ ಸಂಸ್ಥೆ ಜವಾಬ್ದಾರಿ

Published : Jan 10, 2026, 06:28 PM IST
 Parashurama Theme Park

ಸಾರಾಂಶ

ಕಾರ್ಕಳದ ಪಾಳುಬಿದ್ದ ಪರಶುರಾಮ ಥೀಮ್ ಪಾರ್ಕ್ ಸ್ವಚ್ಛತೆ, ನಿರ್ವಹಣೆ ಮತ್ತು ಭದ್ರತೆಗೆ ಸಂಬಂಧಿಸಿದಂತೆ ಉಡುಪಿ ಜಿಲ್ಲಾಧಿಕಾರಿ ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ. ಕಾಮಗಾರಿ ಪೂರ್ಣಗೊಳ್ಳುವವರೆಗೆ ನಿರ್ಮಿತಿ ಕೇಂದ್ರವೇ ಸಂಪೂರ್ಣ ಜವಾಬ್ದಾರಿಯಾಗಿ

ಕಾರ್ಕಳ: ಪರಶುರಾಮ ಥೀಮ್ ಪಾರ್ಕ್ ಆವರಣದಲ್ಲಿ ಪೊದೆಗಿಡಗಳು ಬೆಳೆದು ಪಾಳು ಬಿದ್ದಿರುವ ಹಿನ್ನೆಲೆಯಲ್ಲಿ ಪಾರ್ಕ್ ಸ್ವಚ್ಛತೆ, ನಿರ್ವಹಣೆ ಹಾಗೂ ಭದ್ರತೆಗೆ ಸಂಬಂಧಿಸಿದಂತೆ ಉಡುಪಿ ಜಿಲ್ಲಾಧಿಕಾರಿಯವರು ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ. ಪಾರ್ಕ್ ಕುರಿತು ಸಿಐಡಿ ತನಿಖೆ ಹಾಗೂ ಉಚ್ಚ ನ್ಯಾಯಾಲಯದಲ್ಲಿ ಪ್ರಕರಣ ವಿಚಾರಣೆ ನಡೆಯುತ್ತಿರುವುದರಿಂದ ಸಾರ್ವಜನಿಕರಿಂದ ಸ್ವಚ್ಛತಾ ಕಾರ್ಯ ಕೈಗೊಳ್ಳುವುದು ಸೂಕ್ತವಲ್ಲ ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದ್ದಾರೆ.

ಪೊಲೀಸ್ ಭದ್ರತೆ

ಪಾರ್ಕ್ ಗೆ ನಗರ ಠಾಣಾ ಪೊಲೀಸ್ ಭದ್ರತೆ ಒದಗಿಸಲಾಗಿದ್ದು ಮತ್ತು ಸ್ವಚ್ಛಗೊಳಿಸುವ ಕಾರ್ಯವು ಶುಕ್ರವಾರ ನಡೆಯುತ್ತಿದೆ. ಪಾರ್ಕ್ ಕಾಮಗಾರಿ ಸಂಪೂರ್ಣ ಹಸ್ತಾಂತರವಾಗುವವರೆಗೂ ಅನುಷ್ಠಾನ ಸಂಸ್ಥೆಯಾದ ನಿರ್ಮಿತಿ ಕೇಂದ್ರ ಉಡುಪಿ ಸಂಸ್ಥೆಯೇ ಸ್ವಚ್ಛತೆ, ನಿರ್ವಹಣೆ ಹಾಗೂ ಭದ್ರತೆಗೆ ಸಂಪೂರ್ಣ ಜವಾಬ್ದಾರಿಯಾಗಿರುತ್ತದೆ ಎಂದು ಆದೇಶಿಸಲಾಗಿದೆ. ತಕ್ಷಣ ಸ್ವಚ್ಛತಾ ಕಾರ್ಯ, ಗಿಡಗಂಟಿ ತೆರವು, ಕಸ ವಿಲೇವಾರಿ, ಸಿಸಿ ಕ್ಯಾಮೆರಾ ಅಳವಡಿಕೆ ಹಾಗೂ 24×7 ಕಾವಲುಗಾರರ ನಿಯೋಜನೆ ಕೈಗೊಳ್ಳಲು ಸೂಚಿಸಲಾಗಿದೆ.

ಅನಧಿಕೃತ ಪ್ರವೇಶ ತಡೆಯುವುದು, ಅತಿಕ್ರಮಣ ಮಾಡಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದು, ರಸ್ತೆ ಸ್ವಚ್ಛತೆ ಕಾಪಾಡುವುದು ಹಾಗೂ ಅಮೂಲ್ಯ ವಸ್ತುಗಳ ರಕ್ಷಣೆಗೂ ಜಿಲ್ಲಾಧಿಕಾರಿಯವರು ನಿರ್ದೇಶನ ನೀಡಿದ್ದಾರೆ. ಕೈಗೊಂಡ ಕ್ರಮಗಳ ಅನುಪಾಲನ ವರದಿಯನ್ನು ಜನವರಿ 10ರೊಳಗೆ ಸಲ್ಲಿಸುವಂತೆ ಹಾಗೂ ಪ್ರತಿವಾರ ಜಿಪಿಎಸ್ ಸಹಿತ ಫೋಟೊಗಳೊಂದಿಗೆ ವರದಿ ನೀಡುವಂತೆ ಆದೇಶಿಸಲಾಗಿದೆ.

ಜ.14ರಿಂದ ಸ್ವಚ್ಛತಾ ಕಾರ್ಯ

ಪರಶುರಾಮ ಥೀಮ್ ಪಾರ್ಕ್ ಸ್ವಚ್ಛತೆ ಹಾಗೂ ಭದ್ರತೆ ವಿಚಾರದಲ್ಲಿ ಜಿಲ್ಲಾಡಳಿತ ಕೊನೆಗೂ ಸ್ಪಂದಿಸಿರುವುದನ್ನು ಕಾರ್ಕಳ ಶಾಸಕ ಹಾಗೂ ಮಾಜಿ ಸಚಿವ ವಿ. ಸುನಿಲ್ ಕುಮಾರ್ ಸ್ವಾಗತಿಸಿದ್ದಾರೆ. ಜ.14ರಿಂದ ಸ್ವಚ್ಛತಾ ಕಾರ್ಯ ಹಾಗೂ ಒಂದು ತಿಂಗಳ ಕಾಲ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲು ಅವಕಾಶ ಕೋರಿ ತಾವು ಬರೆದ ಪತ್ರಕ್ಕೆ ಉಡುಪಿ ಜಿಲ್ಲಾಧಿಕಾರಿಗಳು ಸಕಾಲಿಕವಾಗಿ ಸ್ಪಂದಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಪಾರ್ಕ್ ಸ್ವಚ್ಛತೆ ಮತ್ತು ಭದ್ರತೆ ಕುರಿತಂತೆ ಜ.10ರೊಳಗೆ ಅನುಸರಣಾ ವರದಿ ಸಲ್ಲಿಸಲು ಜಿಲ್ಲಾಡಳಿತ ನಿರ್ಮಿತಿ ಕೇಂದ್ರಕ್ಕೆ ಸೂಚಿಸಿರುವುದನ್ನು ಸ್ವಾಗತಿಸಿದ ಅವರು, ಸ್ವಚ್ಛತಾ ಕಾರ್ಯವನ್ನು ಇಲಾಖೆಯಿಂದಲೇ ನಿರ್ವಹಿಸುವಂತೆ ಆದೇಶಿಸಿರುವುದು ಸರ್ಕಾರದ ಕಾಳಜಿಯನ್ನು ತೋರಿಸುತ್ತದೆ ಎಂದರು. ಪಾರ್ಕ್ ಸ್ವಚ್ಛತೆಯ ಜೊತೆಗೆ ಭದ್ರತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಹಾಗೂ ಒಂದು ತಿಂಗಳ ಕಾಲ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೂಲಕ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಬೇಕು ಎಂದು ಅವರು ಆಗ್ರಹಿಸಿದರು.

ಇನ್ನು 2027ರಲ್ಲಿ ನಡೆಯಲಿರುವ ಕಾರ್ಕಳದ ಶ್ರೀ ಬಾಹುಬಲಿ ಮಹಾಮಸ್ತಕಾಭಿಷೇಕದೊಳಗೆ ಪರಶುರಾಮ ಥೀಮ್ ಪಾರ್ಕ್ ಯೋಜನೆ ಪೂರ್ಣಗೊಳ್ಳಬೇಕು. ಮಸ್ತಕಾಭಿಷೇಕಕ್ಕೆ ಆಗಮಿಸುವ ಭಕ್ತರು ಪಾರ್ಕ್ ವೀಕ್ಷಿಸಲು ಅವಕಾಶ ಕಲ್ಪಿಸುವಂತೆ ಜಿಲ್ಲಾಡಳಿತ ಕಾರ್ಯನಿರ್ವಹಿಸಲಿ ಎಂದು ವಿ. ಸುನಿಲ್ ಕುಮಾರ್ ಆಶಿಸಿದ್ದಾರೆ.

 

PREV
Read more Articles on
click me!

Recommended Stories

ಡೆಂಟಲ್ ಕಾಲೇಜು ವಿದ್ಯಾರ್ಥಿನಿಗೆ 'ಸ್ಲಂನಿಂದ ಬಂದ ಕೋತಿ' ಎಂದಿದ್ದ ಲೆಕ್ಚರ್: ಸಾವಿನ ಹಿಂದಿದೆ ಕಿರುಕುಳದ ಕಥೆ!
ಲಕ್ಕುಂಡಿ: ಮನೆ ಅಡಿಪಾಯ ತೋಡುವಾಗ ಪುರಾತನ ನಿಧಿ ಪತ್ತೆ! 101 ದೇವಸ್ಥಾನಗಳ ಊರಲ್ಲಿದೆಯೇ ಚಿನ್ನದ ಗಣಿ?