ಡೆಂಟಲ್ ಕಾಲೇಜು ವಿದ್ಯಾರ್ಥಿನಿಗೆ 'ಸ್ಲಂನಿಂದ ಬಂದ ಕೋತಿ' ಎಂದಿದ್ದ ಲೆಕ್ಚರ್: ಸಾವಿನ ಹಿಂದಿದೆ ಕಿರುಕುಳದ ಕಥೆ!

Published : Jan 10, 2026, 06:12 PM ISTUpdated : Jan 10, 2026, 06:17 PM IST
Bengaluru Dental Collge Student Yashaswini

ಸಾರಾಂಶ

ಬೊಮ್ಮನಹಳ್ಳಿಯ ಡೆಂಟಲ್ ಕಾಲೇಜು ವಿದ್ಯಾರ್ಥಿನಿ ಯಶಸ್ವಿನಿ ಆತ್ಮ*ಹತ್ಯೆಗೆ ಶರಣಾಗಿದ್ದು, ಕಾಲೇಜು ಉಪನ್ಯಾಸಕರ ನಿರಂತರ ಕಿರುಕುಳವೇ ಸಾವಿಗೆ ಕಾರಣ ಎಂದು ಪೋಷಕರು ಆರೋಪಿಸಿದ್ದಾರೆ. ವಿದ್ಯಾರ್ಥಿನಿ ಬರೆದ ಡೆತ್ ನೋಟ್ ಲಭ್ಯವಾಗಿದ್ದು, ಸಹಪಾಠಿಗಳು ನ್ಯಾಯಕ್ಕಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಬೆಂಗಳೂರು/ಆನೇಕಲ್ (ಜ.10): ಪ್ರತಿಷ್ಠಿತ ಬೊಮ್ಮನಹಳ್ಳಿಯ ಡೆಂಟಲ್ ಕಾಲೇಜಿನ ಮೂರನೇ ವರ್ಷದ ವಿದ್ಯಾರ್ಥಿನಿ ಯಶಸ್ವಿನಿ (23) ಎಂಬಾಕೆ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಆನೇಕಲ್ ತಾಲ್ಲೂಕಿನ ಚಂದಾಪುರದಲ್ಲಿ ನಡೆದಿದೆ. ಮೇಲ್ನೋಟಕ್ಕೆ ಇದೊಂದು ಸಾಮಾನ್ಯ ಆತ್ಮ*ಹತ್ಯೆಯಂತೆ ಕಂಡರೂ, ಕಾಲೇಜು ಆಡಳಿತ ಮಂಡಳಿ ಮತ್ತು ಉಪನ್ಯಾಸಕರ ನಿರಂತರ ಕಿರುಕುಳವೇ ಮಗಳ ಸಾವಿಗೆ ಕಾರಣ ಎಂದು ಪೋಷಕರು ಗಂಭೀರ ಆರೋಪ ಮಾಡಿದ್ದರು. ಇದೀಗ ವಿದ್ಯಾರ್ಥಿನಿ ಕಾಲೇಜಿನಲ್ಲಿ ಅಳುತ್ತಾ ಕುಳಿತುಕೊಂಡಿರುವ ಹಾಗೂ ಸಾವಿಗೂ ಮುನ್ನ ಬರೆದಿರುವ ಡೆತ್‌ ನೋಟ್ ಲಭ್ಯವಾಗಿದೆ.

'ನೀನು ಕೋತಿಯಂತಿದ್ದೀಯಾ' ಎಂದಿದ್ದರಾ ಶಿಕ್ಷಕಿ?

ಮೃತ ಯಶಸ್ವಿನಿ ಓರಲ್ ಮೆಡಿಸಿನ್ ಮತ್ತು ರೇಡಿಯಾಲಜಿ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದರು. ಕಾಲೇಜಿನ ಡಾ. ನಿಶಾ ಎಂಬುವವರು ವಿದ್ಯಾರ್ಥಿಗಳಿಗೆ ಮಾನಸಿಕ ಟಾರ್ಚರ್ ನೀಡುತ್ತಿದ್ದರು ಎಂಬ ಆರೋಪ ಕೇಳಿಬಂದಿದೆ. 'ನೀನು ಬರುವುದು ಸ್ಲಂನಿಂದ, ನೋಡಲು ಕೋತಿಯ ಹಾಗೆ ಇದ್ದೀಯಾ' ಎಂದು ಯಶಸ್ವಿನಿಯನ್ನು ಸಹಪಾಠಿಗಳ ಮುಂದೆ ಅವಮಾನಿಸಲಾಗುತ್ತಿತ್ತು ಎಂದು ಹೇಳಲಾಗಿದೆ. ಬುಧವಾರ ಕಣ್ಣಿನ ನೋವಿನ ಕಾರಣ ಯಶಸ್ವಿನಿ ರಜೆ ಹಾಕಿದ್ದರು. ಮರುದಿನ ಕಾಲೇಜಿಗೆ ಬಂದಾಗ, 'ಯಾವ ಡ್ರಾಪ್ಸ್ ಹಾಕಿದೆ? ಎಷ್ಟು ಹನಿ ಹಾಕಿದೆ? ಇಡೀ ಬಾಟಲ್ ಸುರಿದುಕೊಂಡಾ?' ಎಂದು ಉಪಹಾಸ ಮಾಡಿ ಅವಮಾನಿಸಲಾಗಿತ್ತು ಎನ್ನಲಾಗಿದೆ.

ವೈರಲ್ ವಿಡಿಯೋ ಮತ್ತು ಕಿರುಕುಳ

ಓಎಂಆರ್ ಸೀಟ್ (OMR Sheet) ನೀಡಿಲ್ಲವೆಂದು ಯಶಸ್ವಿನಿ ಕಾಲೇಜಿನಲ್ಲೇ ಕಣ್ಣೀರು ಹಾಕುತ್ತಾ ಕುಳಿತಿದ್ದ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸೆಮಿನಾರ್‌ಗೆ ಅವಕಾಶ ನೀಡದೆ ಇರುವುದು, ರೇಡಿಯಾಲಜಿ ಕೇಸ್‌ಗಳನ್ನು ನೀಡದೆ ಸತಾಯಿಸುವುದು ಸೇರಿದಂತೆ ಪ್ರಾಂಶುಪಾಲರು ಮತ್ತು ಸಿಬ್ಬಂದಿ ಯಶಸ್ವಿನಿಯನ್ನು ಗುರಿಯಾಗಿಸಿಕೊಂಡಿದ್ದರು ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ಸೀನಿಯರ್ ವಿದ್ಯಾರ್ಥಿಗಳಿಗೂ ಇದೇ ರೀತಿ ಟಾರ್ಚರ್ ನೀಡಿದ್ದ ಬಗ್ಗೆ ಆಡಳಿತ ಮಂಡಳಿಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ.

ಡೆತ್ ನೋಟ್‌ನಲ್ಲಿ ಏನಿದೆ?

ಯಶಸ್ವಿನಿ ಸಾವಿಗೂ ಮುನ್ನ ಬರೆದಿರುವ ಡೆತ್ ನೋಟ್ ಲಭ್ಯವಾಗಿದ್ದು, ಅದರಲ್ಲಿ 'ನಾನು ಬದುಕೋಕೆ ಯೋಗ್ಯಳಲ್ಲ, ನಾನು ಒಳ್ಳೆ ಮಗಳಲ್ಲ, ನನ್ನ ಸಾವಿಗೆ ಯಾರೂ ಕಾರಣರಲ್ಲ' ಎಂದು ಬರೆದಿದ್ದಾರೆ. ಆದರೆ, ಕಾಲೇಜಿನ ನಿರಂತರ ಕಿರುಕುಳದಿಂದ ಮಾನಸಿಕವಾಗಿ ಜರ್ಜರಿತರಾಗಿದ್ದ ಮಗಳು ಒತ್ತಡಕ್ಕೆ ಮಣಿದು ಈ ರೀತಿ ಬರೆದಿದ್ದಾರೆ ಎಂಬುದು ಪೋಷಕರ ವಾದವಾಗಿದೆ.

ಸಹಪಾಠಿಗಳ ಪ್ರತಿಭಟನೆ

ಇನ್ನು ಪರಿಮಳ ಮತ್ತು ಭೋದೆವಯ್ಯ ದಂಪತಿಯ ಒಬ್ಬಳೇ ಮಗಳಾಗಿದ್ದ ಯಶಸ್ವಿನಿ ಸಾವಿನಿಂದ ಚಂದಾಪುರದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ. ಆಕ್ಸ್‌ಫರ್ಡ್ ಕಾಲೇಜು ಆಡಳಿತ ಮಂಡಳಿ ವಿರುದ್ಧ ಕ್ರಮ ಕೈಗೊಳ್ಳಬೇಕು ಮತ್ತು ಯಶಸ್ವಿನಿಗೆ ನ್ಯಾಯ ಸಿಗಬೇಕು ಎಂದು ಆಗ್ರಹಿಸಿ ಸಹಪಾಠಿಗಳು ಶವಾಗಾರದ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ಕಾಲೇಜಿನ ಪ್ರಾಂಶುಪಾಲರು ಮತ್ತು ಅವಮಾನಿಸಿದ ಉಪನ್ಯಾಸಕಿ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವಂತೆ ಪೋಷಕರು ಪೊಲೀಸರನ್ನು ಒತ್ತಾಯಿಸಿದ್ದಾರೆ.

 

PREV
Read more Articles on
click me!

Recommended Stories

ಲಕ್ಕುಂಡಿ: ಮನೆ ಅಡಿಪಾಯ ತೋಡುವಾಗ ಪುರಾತನ ನಿಧಿ ಪತ್ತೆ! 101 ದೇವಸ್ಥಾನಗಳ ಊರಲ್ಲಿದೆಯೇ ಚಿನ್ನದ ಗಣಿ?
ಮಕ್ಕಳ ಅನ್ನದಲ್ಲಿ ಇಲಿ-ಹಲ್ಲಿಗಳ ಮಲ: ಮಕ್ಕಳಿಂದಲೇ ಶೌಚಾಲಯ ಕ್ಲೀನಿಂಗ್; ಇದು ಇಂದಿರಾ ಗಾಂಧಿ ವಸತಿ ಶಾಲೆಯೋ? ನರಕವೋ?