ಕೋವಿಡ್ ಮಿತಿ ಮೀರಿದರೆ ನಿಯಂತ್ರಿಸಲು ಹರಸಾಹಸ| ಮನೆಮನೆಗೆ ತೆರಳಿ ಜನರನ್ನು ತಾಪಮಾನವನ್ನು ಪರೀಕ್ಷಿಸಿ. ಆಕ್ಸಿಜನ್ ಲೆವೆಲ್ ತಪಾಸಣೆ ಮಾಡಿ. ವಿಟಮಿನ್ ಸಿ, ಜಿಂಕ್, ಪ್ಯಾರಾಸಿಟಮಲ್ ಮಾತ್ರೆಗಳನ್ನು ಸಮರ್ಪಕವಾಗಿ ಸಂಗ್ರಹಿಸಿಟ್ಟುಕೊಳ್ಳಿ| ರೆಮ್‌ಡಿಸಿವರ್ ಔಷಧಿಯನ್ನು ಹೆಚ್ಚಿನ ಪ್ರಮಾಣದಲ್ಲಿ ತರಿಸಿಕೊಳ್ಳಿ ಎಂದು ಅಧಿಕಾರಿಗಳಿಗೆ ಸೂಚಿಸಿದ ಬೊಮ್ಮಾಯಿ|
ಹಾವೇರಿ(ಏ.23): ಕೋವಿಡ್ ಎರಡನೇ ಅಲೆಯನ್ನು ಗಂಭೀರವಾಗಿ ಪರಿಗಣಿಸಿ. ಶಿಗ್ಗಾಂವಿ ಮತ್ತು ಸವಣೂರು ಪಟ್ಟಣಗಳ ಸರ್ಕಾರಿ ಆಸ್ಪತ್ರೆಗಳನ್ನು ಸ್ವಚ್ಛವಾಗಿರಿಸಿ. ಒಬ್ಬ ಕೋವಿಡ್ ಸೋಂಕಿತನ ಸಂಪರ್ಕ ಇರುವ 20 ಜನರ ಟೆಸ್ಟಿಂಗ್ ಕಡ್ಡಾಯವಾಗಿ ಮಾಡಬೇಕು. ಮನೆ ಮನೆಗೆ ಹೋಗಿ ಜನರ ಆಕ್ಸಿಜನ್ ಲೆವೆಲ್ ಮತ್ತು ತಾಪಮಾನವನ್ನು ಪರೀಕ್ಷೆ ಮಾಡಿ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಗುರುವಾರ ಬೆಂಗಳೂರಿನಿಂದ ವೀಡಿಯೋ ಕಾನ್ಫರೆನ್ಸ್ ಮೂಲಕ ಶಿಗ್ಗಾಂವಿ ಮತ್ತು ಸವಣೂರು ತಾಲೂಕು ಆಡಳಿತದ ಅಧಿಕಾರಿಗಳ ಜತೆ ಸಭೆ ನಡೆಸಿ, ಕೋವಿಡ್ ನಿಯಂತ್ರಿಸಲು ಕಟ್ಟುನಿಟ್ಟಿನ ಕ್ರಮಗಳನ್ನು ಜರುಗಿಸುವಂತೆ ಸೂಚನೆ ನೀಡಿದ್ದಾರೆ.
ಶಿಗ್ಗಾಂವಿ ಪಟ್ಟಣದಲ್ಲಿರುವ ಸರ್ಕಾರಿ ಆಸ್ಪತ್ರೆಯನ್ನು ಮೊದಲು ಸ್ವಚ್ಛವಾಗಿರಿಸಿ. ಪಟ್ಟಣವನ್ನು ಶುಚಿತ್ವಗೊಳಿಸಿ. ನೈರ್ಮಲ್ಯ ಕಾಪಾಡಲು ಮೊದಲ ಆದ್ಯತೆ ನೀಡಿ ಎಂದು ಪುರಸಭೆ ಅಧಿಕಾರಿಗಳಿಗೆ ಸಚಿವರು ತಾಕೀತು ಮಾಡಿದರು. ಈವರೆಗೆ ಈ ಕೆಲಸ ಮಾಡದ ಪುರಸಭೆ ಅಧಿಕಾರಿಗಳನ್ನು ಸಚಿವರು ತರಾಟೆಗೆ ತೆಗೆದುಕೊಂಡರು.
'ಕೊರೋನಾ ತಡೆಯಲು ಸರ್ಕಾರ ಇಂದಿಗೂ ಸಜ್ಜಾಗಿಲ್ಲ'
ಸವಣೂರು ಬಹಳ ಸೂಕ್ಷ್ಮ ಪ್ರದೇಶ. ಇಲ್ಲಿ ಕೋವಿಡ್ ಮಿತಿ ಮೀರಿದರೆ ನಿಯಂತ್ರಿಸಲು ಹರಸಾಹಸ ಪಡಬೇಕಾಗುತ್ತದೆ. ಆದ್ದರಿಂದ ಮನೆಮನೆಗೆ ತೆರಳಿ ಜನರನ್ನು ತಾಪಮಾನವನ್ನು ಪರೀಕ್ಷಿಸಿ. ಆಕ್ಸಿಜನ್ ಲೆವೆಲ್ ತಪಾಸಣೆ ಮಾಡಿ. ವಿಟಮಿನ್ ಸಿ, ಜಿಂಕ್, ಪ್ಯಾರಾಸಿಟಮಲ್ ಮಾತ್ರೆಗಳನ್ನು ಸಮರ್ಪಕವಾಗಿ ಸಂಗ್ರಹಿಸಿಟ್ಟುಕೊಳ್ಳಿ. ರೆಮ್‌ಡಿಸಿವರ್ ಔಷಧಿಯನ್ನು ಹೆಚ್ಚಿನ ಪ್ರಮಾಣದಲ್ಲಿ ತರಿಸಿಕೊಳ್ಳಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಸವಣೂರಿನಲ್ಲಿ ಪ್ರತಿದಿನ 250 ಮತ್ತು ತಾಲೂಕಿನ ಇತರೆಡೆ 200 ಸೇರಿದಂತೆ ಒಟ್ಟು ಪ್ರತಿದಿನ 450ಕ್ಕೂ ಹೆಚ್ಚು ಕೋವಿಡ್ ಟೆಸ್ಟಿಂಗ್ ಮಾಡುವಂತೆ ಅವರು ಆದೇಶ ನೀಡಿದರು. ಶಿಗ್ಗಾಂವಿ, ಸವಣೂರು ಮತ್ತು ಹಾನಗಲ್ಲ ತಾಲೂಕುಗಳಲ್ಲಿನ ಆಸ್ಪತ್ರೆಗಳಲ್ಲಿ ಶುಚಿತ್ವ ಮತ್ತು ಪಟ್ಟಣದಲ್ಲಿ ಸ್ವಚ್ಛತೆಯನ್ನು ಕಾಪಾಡುವ ಹೊಣೆಗಾರಿಕೆ ಸವಣೂರು ಉಪವಿಭಾಗಾಧಿಕಾರಿಗಳಿಗೆ ಹಾಗೂ ತಹಸೀಲ್ದಾರರಿಗೆ ಸೇರಿದ್ದು ಎಂದರು.
ಕೋವಿಡ್ ಸೋಂಕಿತರನ್ನು ಪತ್ತೆ ಹಚ್ಚಿ ಅವರನ್ನು ತಪಾಸಣೆ ಮಾಡುವ ಕಾರ್ಯದಲ್ಲಿ ಇತರೆ ಇಲಾಖೆ ಅಧಿಕಾರಿಗಳೊಂದಿಗೆ ಸಹಕರಿಸಿ. ಜಾತ್ರೆ ರದ್ದುಪಡಿಸುವ ಸಂಬಂಧಪಟ್ಟಂತೆ ದೇವಸ್ಥಾನಗಳ ಮುಖಂಡರ ಜತೆ ಮಾತುಕತೆ ನಡೆಸಿ. ಕಲ್ಯಾಣಮಂಟಪಗಳು ನಿಯಮಗಳನ್ನು ಉಲ್ಲಂಘಿಸಿದರೆ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿ. ಜನಸಂದಣಿಯನ್ನು ನಿಯಂತ್ರಿಸಿ ಎಂದು ಸವಣೂರು ಡಿವೈಎಸ್‌ಪಿಗೆ ಸೂಚನೆ ನೀಡಿದ್ದಾರೆ.