ನಗರಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲು ಆಗಮಿಸಿದ್ದ ಅಶ್ವತ್ಥ ನಾರಾಯಣ| ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್ ಕುಮಾರ್‌ರನ್ನು ದೂರವಾಣಿ ಮೂಲಕ ಸಂಪರ್ಕಿಸಿ ವೀಕೆಂಡ್ ಕರ್ಫ್ಯೂನಿಂದ ವಿನಾಯ್ತಿ ಕೋರಿದ ಡಿಸಿಎಂ| ಸಚಿವರ ನಡೆಗೆ ವ್ಯಾಪಕ ಟೀಕೆ|
ರಾಮನಗರ(ಏ.23): ನಗರಸಭೆ ಚುನಾವಣೆ ಹಿನ್ನೆಲೆಯಲ್ಲಿ ಶನಿವಾರ ರಾಮನಗರದಲ್ಲಿ ವೀಕೆಂಡ್ ಕರ್ಫ್ಯೂನಿಂದ ವಿನಾಯ್ತಿ ನೀಡುವಂತೆ ಉಪಮುಖ್ಯಮಂತ್ರಿಯೂ ಆಗಿರುವ ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ.ಎನ್. ಅಶ್ವತ್ಥ ನಾರಾಯಣ ಅವರು ಜಿಲ್ಲಾಧಿಕಾರಿಗಳಿಗೆ ದೂರವಾಣಿ ಮೂಲಕ ಮನವಿ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಲಾಕ್‌ಡೌನ್ ಅವಧಿಯಲ್ಲಿ ಚುನಾವಣಾ ಕಾರ್ಯಕ್ಕೆ ವಿನಾಯ್ತಿ ಕೇಳಿರುವ ಸಚಿವರ ನಡೆ ಇದೀಗ ಆಕ್ಷೇಪಕ್ಕೆ ಕಾರಣವಾಗಿದೆ.
ನಗರಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲು ಆಗಮಿಸಿದ್ದ ಅಶ್ವತ್ಥ ನಾರಾಯಣ ಅವರು ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್ ಕುಮಾರ್‌ರನ್ನು ದೂರವಾಣಿ ಮೂಲಕ ಸಂಪರ್ಕಿಸಿ ವೀಕೆಂಡ್ ಕರ್ಫ್ಯೂನಿಂದ ವಿನಾಯ್ತಿ ಕೋರಿದ್ದಾರೆ.
ಮಾಲಾಧಾರಿಯಾಗಿ ಅಯ್ಯಪ್ಪ ದರ್ಶನ ಪಡೆದ ಡಿಸಿಎಂ ಅಶ್ವಥ್ ನಾರಾಯಣ
ಶನಿವಾರ ತಮ್ಮ ಪಕ್ಷದ ಪ್ರಣಾಳಿಕೆ ಬಿಡುಗಡೆ, ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುವ ಕಾರ್ಯಕ್ರಮ ಇದ್ದು, ಕರ್ಫ್ಯೂ ಇದ್ದರೆ ಅದು ಸಾಧ್ಯವಾಗುವುದಿಲ್ಲ. ಹೀಗಾಗಿ ಈ ಕಾರ್ಯಕ್ರಮಕ್ಕೆ ವಿನಾಯ್ತಿ ನೀಡುವಂತೆ ಸಾರ್ವಜನಿಕರ ಎದುರಿನಲ್ಲೇ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು. ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಅನುಮತಿ ನೀಡಿದರೆ ಅವಕಾಶ ಮಾಡಿಕೊಡುವುದಾಗಿ ಜಿಲ್ಲಾಧಿಕಾರಿಗಳು ಪ್ರತಿಕ್ರಿಯಿಸಿದ್ದಾರೆ ಎಂದು ಗೊತ್ತಾಗಿದೆ. ಈ ಸಂಭಾಷಣೆಯ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಟೀಕೆಗಳು ವ್ಯಕ್ತವಾಗಿವೆ.