ಬೆಂಗಳೂರು: ಸುಪ್ರೀಂನಲ್ಲೇ ವಾರ್ಡ್‌ ವಿಂಗಡಣೆ ಬಗ್ಗೆ ಸ್ಪಷ್ಟನೆ ಪಡೆಯಿರಿ, ಹೈಕೋರ್ಟ್‌

By Kannadaprabha NewsFirst Published Aug 18, 2022, 6:57 AM IST
Highlights

ಬಿಬಿಎಂಪಿ ಚುನಾವಣೆ ಅರ್ಜಿಗಳ ಬಗ್ಗೆ 26ಕ್ಕೆ ಸುಪ್ರೀಂನಲ್ಲಿ ವಿಚಾರಣೆ ಹಿನ್ನೆಲೆ ಮಧ್ಯಂತರ ಆದೇಶಕ್ಕೆ ಹೈ ನಕಾರ

ಬೆಂಗಳೂರು(ಆ.18):  ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ ವಾರ್ಡ್‌ಗಳ ಪುನರ್‌ ವಿಂಗಡಣೆ ಆಕ್ಷೇಪಿಸಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆ ನಡೆಸುವ ಹಾಗೂ ಅರ್ಜಿಗಳ ಕುರಿತು ಯಾವುದಾದರೂ ಮಧ್ಯಂತರ ಆದೇಶ ಹೊರಡಿಸುವ ಬಗ್ಗೆ ಸುಪ್ರೀಂಕೋರ್ಟ್‌ನಿಂದ ಸ್ಪಷ್ಟನೆ ಪಡೆಯುವಂತೆ ಅರ್ಜಿದಾರರಿಗೆ ಹೈಕೋರ್ಟ್‌ ಸೂಚಿಸಿದೆ. ಬಿಬಿಎಂಪಿ ವಾರ್ಡ್‌ಗಳ ಪುನರ್‌ ವಿಂಗಡಣೆ ಪ್ರಶ್ನಿಸಿ ವಕೀಲ ಎಸ್‌.ಇಸ್ಮಾಯಿಲ್‌ ಜಬಿವುಲ್ಲಾ, ಮಾಜಿ ಕಾಪೋರೇಟರ್‌ಗಳಾದ ಬಿ.ಎನ್‌.ಮಂಜುನಾಥ್‌ ರೆಡ್ಡಿ, ಎನ್‌.ನಾಗರಾಜ್‌ ಮತ್ತಿತರರು ಸಲ್ಲಿಸಿರುವ ಪ್ರತ್ಯೇಕ ತಕರಾರು ಅರ್ಜಿಗಳನ್ನು ನ್ಯಾಯಮೂರ್ತಿ ಹೇಮಂತ್‌ ಚಂದನ್‌ ಗೌಡರ್‌ ಅವರ ಪೀಠ ಬುಧವಾರ ವಿಚಾರಣೆ ನಡೆಸಿತು.

ಚುನಾವಣಾ ಆಯೋಗದ ಪರ ವಕೀಲರು ಅರ್ಜಿಗಳನ್ನು ವಜಾಗೊಳಿಸುವಂತೆ ಕೋರಿದರೆ, ಅರ್ಜಿದಾರರು ರಾಜ್ಯ ಸರ್ಕಾರ ಬಿಬಿಎಂಪಿ ವಾರ್ಡ್‌ಗಳಿಗೆ ಮೀಸಲು ಪಟ್ಟಿಯನ್ನು ಅಂತಿಮಗೊಳಿಸಿದೆ. ಹಾಗಾಗಿ, ವಾರ್ಡ್‌ ಮರು ವಿಂಗಡಣೆ ಮಾಡಿ ಹೊರಡಿಸಿರುವ ಅಧಿಸೂಚನೆಗೆ ತಡೆ ನೀಡಬೇಕು ಎಂದು ಮನವಿ ಮಾಡಿದರು.

ಬೆಂಗಳೂರು: ಬಿಬಿಎಂಪಿ ಮೀಸಲು ಕರಡು ಪಟ್ಟಿಯೇ ಫೈನಲ್‌..!

ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಬಿಬಿಎಂಪಿ ಚುನಾವಣೆಗೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ಅರ್ಜಿಗಳು ಆಗಸ್ಟ್‌ 26ರಂದು ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆಗೆ ಬರಲಿದೆ. ಇಂತಹ ಸಂದರ್ಭದಲ್ಲಿ ಹೈಕೋರ್ಟ್‌ ಈ ಅರ್ಜಿಗಳ ವಿಚಾರಣೆ ಮುಂದುವರಿಸಿ ಯಾವುದೇ ಆದೇಶ ಹೊರಡಿಸಬೇಕಿದ್ದರೆ ಸುಪ್ರೀಂಕೋರ್ಚ್‌ನ ಸ್ಪಷ್ಟನೆಯ ಅಗತ್ಯವಿದೆ. ಮತ್ತೊಂದೆಡೆ ಸುರೇಶ್‌ ಮಹಾಜನ್‌ ಪ್ರಕರಣದಲ್ಲಿ ಮಧ್ಯ ಪ್ರದೇಶದ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ ನೀಡಿರುವ ತೀರ್ಪು, ಈ ಅರ್ಜಿಗಳ ವಿಚಾರಣೆ ಮುಂದುವರಿಸಲು ಹೈಕೋರ್ಟ್‌ ಕೈ ಕಟ್ಟಿಹಾಕಿದಂತಾಗಿದೆ ಎಂದು ಹೇಳಿತು.

ಬಿಬಿಎಂಪಿ ವ್ಯಾಜ್ಯ ನಿರ್ವಹಣೆಗೆ ಅಧಿಕಾರಿ ನೇಮಕ, ಒಂಟಿ ಮನೆ ಯೋಜನೆ ಮತ್ತೆ ಜಾರಿ

ಆದ್ದರಿಂದ ಪ್ರಕರಣದಲ್ಲಿ ಅರ್ಜಿದಾರರು ಸುಪ್ರೀಂ ಕೋರ್ಟ್‌ನಿಂದ ಸ್ಪಷ್ಟನೆ ಪಡೆದುಕೊಂಡು ಬಂದರೆ ವಿಚಾರಣೆ ಮುಂದುವರಿಸಲು ಅನುಕೂಲವಾಗುತ್ತದೆ. ಅದಕ್ಕಾಗಿ ಯಾವುದೇ ಮಧ್ಯಂತರ ಆದೇಶ ಹೊರಡಿಸುವುದಿಲ್ಲ. ಅರ್ಜಿಗಳ ಮೆರಿಟ್‌ ಆಧಾರದ ಮೇಲೆ ಅಂತಿಮ ತೀರ್ಪು ನೀಡಲಾಗುವುದು ಎಂದು ಹೇಳಿದ ನ್ಯಾಯಪೀಠ ಆ.29ಕ್ಕೆ ವಿಚಾರಣೆ ಮುಂದೂಡಿತು.

ವಾದ ವಿವಾದಗಳನ್ನು ಆಲಿಸಿದ ನ್ಯಾಯಪೀಠ, ಚುನಾವಣೆಗೆ ನಡೆಸಲು ಸರ್ಕಾರ ತರಾತುರಿ ಮಾಡುತ್ತಿದೆ. ಹಾಗಾಗಿ, ಸುಪ್ರೀಂಕೋರ್ಟ್‌ನಿಂದಲೇ ಸ್ಪಷ್ಟನೆ ಸಿಕ್ಕರೆ ಒಳ್ಳೆಯದು ಎಂದು ನುಡಿಯಿತು. ಹಾಗೆಯೇ, ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ವಾರ್ಡ್‌ಗಳು ಸೇರಿದಂತೆ ಜನಸಂಖ್ಯೆ ವ್ಯತ್ಯಾಸವಾಗಿರುವ ವಾರ್ಡ್‌ಗಳ ಮಾಹಿತಿ ಸಲ್ಲಿಸುವಂತೆ ಹಾಗೂ ಅರ್ಜಿಗಳಿಗೆ ಸಲ್ಲಿಸಲಾಗಿರುವ ಲಿಖಿತ ಆಕ್ಷೇಪಣೆಗಳಿಗೆ ಪೂರಕ ದಾಖಲೆ ಒದಗಿಸುವಂತೆ ಸರ್ಕಾರಿ ವಕೀಲರಿಗೆ ಸೂಚಿಸಿ ವಿಚಾರಣೆ ಮುಂದೂಡಿತು.
 

click me!