ಸಂವಿಧಾನ ನನಗೆ ಮುಕ್ತವಾಗಿ ಜೀವಿಸುವ, ಮಾತನಾಡುವ, ಸಂಚಾರ ಮಾಡುವ ಸ್ವಾತಂತ್ರ್ಯ ನೀಡಿದರೂ ಪೊಲೀಸರು, ಬಿಜೆಪಿ ಮತ್ತು ಕಾಂಗ್ರೆಸ್ ಸರ್ಕಾರಗಳು ಮಾತ್ರ ನನ್ನ ಸ್ವಾತಂತ್ರ್ಯವನ್ನು ತಡೆಯುತ್ತಿದ್ದಾರೆ: ಮುತಾಲಿಕ್
ಧಾರವಾಡ(ಆ.18): ದೇಶಕ್ಕೆ ಸ್ವಾತಂತ್ರ್ಯ ದೊರೆತು 75 ವರ್ಷಗಳಾದವು. ಆದರೆ, ಇದೇ ಸಂದರ್ಭದಲ್ಲಿ ಹಿಂದೂಗಳ ಪರವಾಗಿ ಹೋರಾಟ ಮಾಡಿದ್ದಕ್ಕೆ ನನ್ನ ಸ್ವಾತಂತ್ರ್ಯ ಹರಣವಾಗಿದೆ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಬೇಸರ ವ್ಯಕ್ತಪಡಿಸಿದ್ದಾರೆ.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, 75ನೇ ಸ್ವಾತಂತ್ರ್ಯ ಸಂಭ್ರಮವಾಗಿ ನಡೆದರೂ ನನಗೆ ಮಾತ್ರ ಆ ಸ್ವಾತಂತ್ರ್ಯ ಇಲ್ಲವಾಗಿದೆ. ಗೋವಾ ಬಿಜೆಪಿ ಸರ್ಕಾರ ನನಗೆ ಎಂಟು ವರ್ಷದಿಂದ ನಿಷೇಧ ಮಾಡಿದೆ. ಎರಡು ದಿನಗಳ ಹಿಂದಷ್ಟೇ ನಿಷೇಧ ಮಾಡಿರುವ ಬಗ್ಗೆ ನೋಟಿಸ್ ಕಳುಹಿಸಲಾಗಿದೆ. ಬರೀ ಗೋವಾ ಮಾತ್ರವಲ್ಲದೇ ರಾಜ್ಯದಲ್ಲೂ ಸ್ವತಂತ್ರವಾಗಿ ಸಂಚಾರ ಮಾಡುವ ಹಾಗಿಲ್ಲ. ಮಂಗಳೂರಿನ ಪ್ರವೀಣ ಕೊಲೆಯಾದಾಗ ಅವರ ಮನೆಗೆ ಹೋದಾಗಲೂ ಪ್ರವೇಶಕ್ಕೆ ನಿಷೇಧ ಮಾಡಿದರು. ಗದಗದಲ್ಲೂ ನಿಷೇಧ ಮಾಡಲಾಗಿದೆ. ಹಾಗೆಯೇ, ಇಡೀ ರಾಜ್ಯದಲ್ಲಿ ಎಲ್ಲೇ ಹೋದರೂ ನನ್ನ ಸ್ವಾತಂತ್ರ್ಯವನ್ನು ಪೊಲೀಸ್ ಇಲಾಖೆ ಕಸಿದುಕೊಂಡಿದೆ. ಸಂವಿಧಾನ ನನಗೆ ಮುಕ್ತವಾಗಿ ಜೀವಿಸುವ, ಮಾತನಾಡುವ, ಸಂಚಾರ ಮಾಡುವ ಸ್ವಾತಂತ್ರ್ಯ ನೀಡಿದರೂ ಪೊಲೀಸರು, ಬಿಜೆಪಿ ಮತ್ತು ಕಾಂಗ್ರೆಸ್ ಸರ್ಕಾರಗಳು ಮಾತ್ರ ನನ್ನ ಸ್ವಾತಂತ್ರ್ಯವನ್ನು ತಡೆಯುತ್ತಿದ್ದಾರೆ ಎಂದು ಕಿಡಿಕಾರಿದರು.
ಪ್ರವೀಣ್ ಕೊಲೆ ನಂತರವೂ ಎಚ್ಚೆತ್ತುಕೊಳ್ಳದ ರಾಜ್ಯ ಸರ್ಕಾರ: ಪ್ರಮೋದ್ ಮುತಾಲಿಕ್
ಹಿಂದೂ ಮತಗಳಿಂದ ಬಿಜೆಪಿ ರಾಜಕೀಯ ಮಾಡುತ್ತಿದ್ದರೂ ನನ್ನ ಸ್ವಾತಂತ್ರ್ಯ ತಡೆಯುವ ಮೂಲಕ ಹಿಂದುತ್ವ ಹಾಗೂ ದೇಶಭಕ್ತಿಯನ್ನು ತಡಿಯುತ್ತಿದ್ದೀರಿ. ಇದರಿಂದ ನಾನು ಪೊಲೀಸ್ ಇಲಾಖೆಗೆ ಧಿಕ್ಕಾರ ಹೇಳುತ್ತಿದ್ದೇನೆ. ಇವರಿಗೆ ಹೋರಾಟಗಾರರು ಬೇಡ, ದುಡ್ಡಿನ ಮದ ಬಂದಿದೆ. ಅದಕ್ಕಾಗಿ ಹೀಗೆ ಮಾಡುತ್ತಿದ್ದಾರೆ ಎಂದು ಬಿಜೆಪಿ ಸರ್ಕಾರದ ವಿರುದ್ಧ ಮುತಾಲಿಕ ಆಕ್ರೋಶ ವ್ಯಕ್ತಪಡಿಸಿದರು.