ಬೆಂಗಳೂರು: ‘ನಮ್ಮ ಕ್ಲಿನಿಕ್‌’ಗೆ ವೈದ್ಯರು, ಜಾಗವೇ ಸಿಗುತ್ತಿಲ್ಲ..!

By Kannadaprabha News  |  First Published Aug 18, 2022, 6:33 AM IST

ಪ್ರಾಯೋಗಿಕವಾಗಿ ಆರಂಭಿಸಲಾದ 2 ಕ್ಲಿನಿಕ್‌ಗೆ ಭಾರಿ ಸ್ಪಂದನೆ ಹಿನ್ನೆಲೆ ಎಲ್ಲ ವಾರ್ಡಲ್ಲೂ ಕ್ಲಿನಿಕ್‌ ಆರಂಭಕ್ಕೆ ಸಿದ್ಧತೆ


ವಿಶ್ವನಾಥ ಮಲೇಬೆನ್ನೂರು

ಬೆಂಗಳೂರು(ಆ.18):  ನಗರದಲ್ಲಿ ಎರಡು ಕಡೆ ಪ್ರಾಯೋಗಿಕವಾಗಿ ಆರಂಭಿಸಲಾದ ‘ನಮ್ಮ ಕ್ಲಿನಿಕ್‌’ಗೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಆದರೆ, ಎಲ್ಲ ವಾರ್ಡ್‌ಗಳಲ್ಲಿ ನಮ್ಮ ಕ್ಲಿನಿಕ್‌ ಕಾರ್ಯಾರಂಭಕ್ಕೆ ವೈದ್ಯರ ಕೊರತೆ ಹಾಗೂ ಸೂಕ್ತ ಕಟ್ಟಡ ಸಿಗದಿರುವುದು ತಲೆ ನೋವಾಗಿ ಪರಿಣಮಿಸಿದೆ.

Tap to resize

Latest Videos

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿರುವ ಮೊಹಲ್ಲಾ ಕ್ಲಿನಿಕ್‌ ಮಾದರಿಯಲ್ಲಿ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆ ನೀಡುವ ಉದ್ದೇಶದಿಂದ ರಾಜ್ಯ ಸರ್ಕಾರವು ಬಜೆಟ್‌ನಲ್ಲಿ ಘೋಷಿಸಿದ ‘ನಮ್ಮ ಕ್ಲಿನಿಕ್‌’ ಯೋಜನೆಯನ್ನು ಬಿಬಿಎಂಪಿಯ ಎಲ್ಲಾ 243 ವಾರ್ಡ್‌ನಲ್ಲಿ ಆರಂಭಕ್ಕೆ ಭರದ ಸಿದ್ಧತೆ ನಡೆಯುತ್ತಿದೆ. ಇನ್ನು ಈಗಾಗಲೇ ಪ್ರಾಯೋಗಿಕವಾಗಿ ಆರಂಭಿಸಲಾದ ಮಲ್ಲೇಶ್ವರ ಹಾಗೂ ಪದ್ಮನಾಭ ನಗರ ವಾರ್ಡ್‌ನ ನಮ್ಮ ಕ್ಲಿನಿಕ್‌ಗೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಉಳಿದ ಎಲ್ಲ ಕಡೆ ಮೂರು ತಿಂಗಳಲ್ಲಿ ಕ್ಲಿನಿಕ್‌ ಆರಂಭಿಸುವುದಕ್ಕೆ ಬಿಬಿಎಂಪಿ ತೀರ್ಮಾನಿಸಿದೆ. ಆದರೆ, ವೈದ್ಯರ ಕೊರತೆ ಹಾಗೂ ಕ್ಲಿನಿಕ್‌ ಶುರು ಮಾಡಲು ಎಲ್ಲ ವಾರ್ಡ್‌ನಲ್ಲಿ ಸ್ಥಳ ಲಭ್ಯವಾಗುವುದು ಯೋಜನೆಯ ಜಾರಿಗೆ ಹಿನ್ನಡೆ ಉಂಟಾಗುತ್ತಿದೆ.

BBMP Recruitment; ನಮ್ಮ ಕ್ಲಿನಿಕ್‌ ವಿವಿಧ ಹುದ್ದೆಗೆ ಒಟ್ಟು 1,499 ಅರ್ಜಿ ಸಲ್ಲಿಕೆ

ಗುತ್ತಿಗೆ ಎಂದು ವೈದ್ಯರ ನಿರಾಸಕ್ತಿ?

ಬಿಬಿಎಂಪಿಯು ನಮ್ಮ ಕ್ಲಿನಿಕ್‌ಗೆ ಡಾಕ್ಟರ್‌ ನೇಮಕಕ್ಕೆ ಅರ್ಜಿ ಆಹ್ವಾನಿಸಿತ್ತು. ಈ ವೇಳೆ 156 ಮಂದಿ ಮಾತ್ರ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಒಂದು ವರ್ಷದ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ವೈದ್ಯರು ಹಿಂದೇಟು ಹಾಕುತ್ತಿದ್ದಾರೆ. ಜತೆಗೆ, ಸ್ನಾತಕೋತ್ತರ ಪದವಿ, ಎಂಡಿ ಹಾಗೂ ಎಂಎಸ್‌ ಸೇರಿದಂತೆ ಉನ್ನತ ಶಿಕ್ಷಣ ಪಡೆಯುವ ಉದ್ದೇಶದಿಂದ ವೈದ್ಯರು ನಮ್ಮ ಕ್ಲಿನಿಕ್‌ನಲ್ಲಿ ಕಾರ್ಯ ನಿರ್ವಹಿಸಲು ಆಸಕ್ತಿ ತೋರುತ್ತಿಲ್ಲ ಎನ್ನಲಾಗುತ್ತಿದೆ.

12 ವಾರ್ಡ್‌ಗಳಲ್ಲಿ ಸ್ಥಳವಿಲ್ಲ

ನಮ್ಮ ಕ್ಲಿನಿಕ್‌ಗೆ ಕನಿಷ್ಠ 30/40 ಅಳತೆಯ ಕಟ್ಟಡ ಬೇಕಾಗಿದೆ. 243 ವಾರ್ಡ್‌ಗಳ ಪೈಕಿ 171 ವಾರ್ಡ್‌ಗಳಲ್ಲಿ ಸರ್ಕಾರಿ ಮತ್ತು ಪಾಲಿಕೆಯ ಕಟ್ಟಡದಲ್ಲಿ ಹಾಗೂ 60 ವಾರ್ಡ್‌ಗಳಲ್ಲಿ ಬಾಡಿಗೆ ಕಟ್ಟಡದಲ್ಲಿ ಕ್ಲಿನಿಕ್‌ ಆರಂಭಿಸುವುದಕ್ಕೆ ತಯಾರಿಕೆ ಮಾಡಿಕೊಳ್ಳಲಾಗುತ್ತಿದೆ. ಉಳಿದಂತೆ ಬಿಬಿಎಂಪಿ ಕೇಂದ್ರ ಭಾಗದ ಪೂರ್ವ ಮತ್ತು ಪಶ್ಚಿಮ ವಲಯದ 12 ವಾರ್ಡ್‌ಗಳಲ್ಲಿ ಸರ್ಕಾರಿ ಕಚೇರಿ ಇರಲಿ ಬಾಡಿಗೆ ಕೊಟ್ಟು ಕ್ಲಿನಿಕ್‌ ನಡೆಸುವುದಕ್ಕೂ ಸೂಕ್ತ ಖಾಸಗಿ ಕಟ್ಟಡ ಸಿಗುತ್ತಿಲ್ಲ.
ಈ ಹಿಂದೆ ಇಂದಿರಾ ಕ್ಯಾಂಟೀನ್‌ ಆರಂಭಿಸುವ ಸಂದರ್ಭದಲ್ಲಿಯೂ ಇದೇ ರೀತಿ ಸಮಸ್ಯೆ ಉಂಟಾಗಿತ್ತು. ಕೊನೆಗೆ ಸ್ಥಳ ಸಿಗದ ವಾರ್ಡ್‌ಗಳಿಗೆ ಮೊಬೈಲ್‌ ಇಂದಿರಾ ಕ್ಯಾಂಟೀನ್‌ ಆರಂಭಿಸಲಾಗಿತ್ತು.

ಜು.25ಕ್ಕೆ ‘ನಮ್ಮ ಕ್ಲಿನಿಕ್‌’ಗೆ BBMP ನೇರ ನೇಮಕಾತಿ

ಸ್ಥಳ ಸಿಗದ ವಾರ್ಡ್‌ಗಳು

ಮಲ್ಲಸಂದ್ರ, ಟಿ.ದಾಸರಹಳ್ಳಿ, ಗಾಯತ್ರಿ ನಗರ, ಶಿವ ನಗರ, ಚಾಮರಾಜ ಪೇಟೆ, ನಂದಿನಿ ಲೇಔಟ್‌, ಜೈಮಾರುತಿ ನಗರ, ವೆಂಕಟೇಶಪುರ, ಬಾಣಸವಾಡಿ, ಬೈಯಪ್ಪನಹಳ್ಳಿ, ಜಲಕಂಟೇಶ್ವರ ನಗರ ಹಾಗೂ ಶಾಂತಿ ನಗರ.

ವೈದ್ಯರ ಕೊರತೆ ಆಗಲ್ಲ

ಕಳೆದ ವಾರ 156 ಮಂದಿ ಡಾಕ್ಟರ್‌ ಅರ್ಜಿ ಸಲ್ಲಿಸಿದ್ದಾರೆ. ಈ ಹಿಂದೆ ಎಂಟು ವಲಯಕ್ಕೆ ತಲಾ ಒಬ್ಬ ಡಾಕ್ಟರ್‌ ನೇಮಕಕ್ಕೆ ಅರ್ಜಿ ಆಹ್ವಾನಿಸಿದ ಸಂದರ್ಭದಲ್ಲಿ 54 ಮಂದಿ ಅರ್ಜಿ ಸೇರಿದಂತೆ ಒಟ್ಟು 210 ಅರ್ಜಿ ಸಲ್ಲಿಕೆ ಆಗಿವೆ. ಹಾಗಾಗಿ, ನಮ್ಮ ಕ್ಲಿನಿಕ್‌ಗೆ ಡಾಕ್ಟರ್‌ ಸಮಸ್ಯೆ ಎದುರಾಗುವುದಿಲ್ಲ. ಇನ್ನು 12 ವಾರ್ಡ್‌ಗಳಲ್ಲಿ ಒಂದು ವಾರದಲ್ಲಿ ಸ್ಥಳ ಗುರುತಿಸಲಾಗುವುದು ಅಂತ ಬಿಬಿಎಂಪಿ ಆರೋಗ್ಯ ವಿಭಾಗದ ವಿಶೇಷ ಆಯುಕ್ತ ಡಾ. ತ್ರಿಲೋಕಚಂದ್ರ ತಿಳಿಸಿದ್ದಾರೆ. 

ನಮ್ಮ ಕ್ಲಿನಿಕ್‌ಗೆ ಸ್ಥಳ ಗುರುತಿಸಿದ ವಾರ್ಡ್‌ ವಿವರ

ವಲಯ ಖಾಸಗಿ ಕಟ್ಟಡ ಸರ್ಕಾರಿ ಕಟ್ಟಡ ಸ್ಥಳ ಸಿಗದ ವಾರ್ಡ್‌

ಪೂರ್ವ 7 34 6
ಪಶ್ಚಿಮ 0 40 6
ಬೊಮ್ಮನಹಳ್ಳಿ 17 10 0
ದಾಸರಹಳ್ಳಿ 6 6 0
ಮಹದೇವಪುರ 21 5 0
ಆರ್‌ಆರ್‌ನಗರ 4 18 0
ದಕ್ಷಿಣ 3 45 0
ಯಲಹಂಕ 2 13 0
ಒಟ್ಟು 60 171 12
 

click me!