ಗುತ್ತಿಗೆದಾರರಿಗೆ ಸಿಗದ ಬಾಕಿ ಹಣ: ಬಾಗಲಕೋಟೆಯಲ್ಲಿ ಶುರುವಾಯ್ತು ಕಸ ಸಂಗ್ರಹಣೆ, ವಿಲೇವಾರಿ ಸಂಕಷ್ಟ..!

By Girish Goudar  |  First Published Jul 21, 2023, 11:38 PM IST

ಬಾಗಲಕೋಟೆಯ ನವನಗರದಲ್ಲಿ ಕಸ ಸಂಗ್ರಹಣೆ & ವಿಲೇವಾರಿ ಸಮಸ್ಯೆ, ಎಲ್ಲೆಂದರಲ್ಲಿ ಕಸವೋ ಕಸ, ನವನಗರದಲ್ಲಿ ಕಳೆದ ಒಂದು ವಾರದಿಂದ ಕಸ ಸಂಗ್ರಹಣೆಯೇ ಬಂದ್​, ಕಸ ಹಾಕಲು ತಡಕಾಡುತ್ತಿರೋ ಜನರಿಂದ ಎಲ್ಲೆಂದರಲ್ಲಿ ಕಸ. 


ವರದಿ:-ಮಲ್ಲಿಕಾರ್ಜುನ ಹೊಸಮನಿ, ಏಷಿಯಾನೆಟ್ ಸುವರ್ಣ ನ್ಯೂಸ್​, ಬಾಗಲಕೋಟೆ 

ಬಾಗಲಕೋಟೆ(ಜು.21): ಸಾಮಾನ್ಯವಾಗಿ ಉತ್ತರ ಕರ್ನಾಟಕದ ಬಾಗಲಕೋಟೆ ನಗರ ಅಂದ್ರೆ ಸಾಕು ಜನರು ಸ್ವಚ್ಚತೆ ನಗರ ಅಂತೆಲ್ಲಾ ಕರೀತಾರೆ, ಯಾಕಂದ್ರೆ ನೋಡೋಕೆ ಅಚ್ಚುಕಟ್ಟಾದ ಬಡಾವಣೆಗಳು, ಸುಂದರ ಮರಗಿಡಗಳು, ಸುಗಮವಾದ ರಸ್ತೆಗಳು ಇಲ್ಲಿ ಕಂಡು ಬರ್ತಾವೆ, ಆದ್ರೆ ಈಗ ಬಾಗಲಕೋಟೆಯ ನವನಗರದಲ್ಲಿ ಕಸ ಸಂಗ್ರಹಣೆ ಮತ್ತು ವಿಲೇವಾರಿ ಇಲ್ಲದೆ ಎಲ್ಲೆಂದರಲ್ಲಿ ಕಸ ಬಿದ್ದು ಗಲೀಜಾಗಿ ಕಂಡು ಬರುತ್ತಿದೆ. ಇದ್ರಿಂದ ಜನರು ಹಿಡಿಶಾಪ ಹಾಕುವಂತಾಗಿದ್ದು, ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅದ್ಯಾಕೆ ಹೀಗೆ, ಏನಾಗಿದೆ? ಅಂತೀರಾ. ಈ ಕುರಿತ ವರದಿ ಇಲ್ಲಿದೆ ನೋಡಿ...

Tap to resize

Latest Videos

undefined

ಒಂದೆಡೆ ರಸ್ತೆ ಪಕ್ಕದಲ್ಲಿ, ಅಂಗಡಿಗಳ ಹಿಂದೆ ಮುಂದೆ ಸೇರಿದಂತೆ ಎಲ್ಲೆಂದರಲ್ಲಿ ಬಿದ್ದಿರೋ ಕಸ, ಇನ್ನು ತುಂಬಿ ಹೋಗಿರೋ ಚರಂಡಿಗಳು, ಸ್ವಚ್ಚತೆ ಕಾಣದೆ ಇರೋ ಮಾರ್ಕೆಟ್​ ತಾಣಗಳು, ಅಂದಹಾಗೆ ಇಂತಹವೊಂದು ದೃಶ್ಯಗಳು ಕಾಣ ಸಿಗೋದು ಬಾಗಲಕೋಟೆಯ ನವನಗರದಲ್ಲಿ. ಹೌದು. ಸ್ವಚ್ಚತೆಗೆ ಹೆಸರಾಗಿ ರಾಜ್ಯದ ಗಮನ ಸೆಳೆಯುತ್ತಿದ್ದ ಬಾಗಲಕೋಟೆ ನಗರದಲ್ಲಿ ಇದೀಗ ಕಸ ಸಂಗ್ರಹಣೆ ಮತ್ತು ವಿಲೇವಾರಿ ದೊಡ್ಡ ಸಮಸ್ಯೆಯಾಗಿದೆ. ಕೃಷ್ಣಾ ಮೇಲ್ದಂಡೆ ಯೋಜನೆಯಲ್ಲಿ ಆಲಮಟ್ಟಿ ಹಿನ್ನೀರಿನಲ್ಲಿ ಮನೆ ಮಠ ಕಳೆದುಕೊಂಡವರಿಗಾಗಿ ಪುನರ್ವಸತಿ ಕಲ್ಪಿಸುವುದಕ್ಕಾಗಿ ನವನಗರವನ್ನ ನಿರ್ಮಾಣ ಮಾಡಲಾಯಿತು. ಸ್ವಚ್ಚತೆಗೆ ಹೆಸರಾಗಿದ್ದ ನವನಗರದಲ್ಲಿ ಈಗ ಕಳೆದ ಒಂದು ವಾರದಿಂದ ಕಸದ ಸಂಗ್ರಹಣೆ ಮತ್ತು ವಿಲೇವಾರಿ ಸ್ಥಗಿತಗೊಂಡಿದೆ. ಯಾಕಂದ್ರೆ ನವನಗರದಲ್ಲಿ ಗುತ್ತಿಗೆ ಆಧಾರದ ಮೇಲೆಯೇ ಕಸ ಸಂಗ್ರಹಣೆ  ಮತ್ತು ವಿಲೇವಾರಿಯಾಗುತ್ತಿದ್ದು, ಗುತ್ತಿಗೆದಾರರಿಗೆ ಬಾಕಿ ಹಣವನ್ನ ನೀಡಿಲ್ಲ ಎನ್ನುವ ಕಾರಣಕ್ಕೆ ಕಸ ಸಂಗ್ರಹಣೆ ಸ್ಥಗಿತವಾಗಿದೆ. ಇದ್ರಿಂದ ನವನಗರದ ತುಂಬೆಲ್ಲಾ ಎಲ್ಲೆಂದರಲ್ಲಿ ಕಸ ಕಂಡು ಬರುತ್ತಿದ್ದು, ಇತ್ತ ಮಾರ್ಕೆಟ್​ ನಡೆದ ಬಳಿಕ ಸ್ವಚ್ಚತೆಯಾಗಿರಬೇಕಾದ ಸ್ಥಳಗಳೆಲ್ಲಾ ಕಸದಿಂದ ಕೂಡಿದ್ದು, ರೋಗ ರುಜಿನಗಳಿಗೆ ಆಹ್ವಾನ ನೀಡುವಂತಾಗಿದ್ದು, ಕೂಡಲೇ ಸಂಭಂದಪಟ್ಟ ಅಧಿಕಾರಿಗಳು ಈ ಸಂಬಂಧ ಸೂಕ್ತ ಕ್ರಮಕೈಗೊಳ್ಳಬೇಕು ಅಂತಾರೆ ಸ್ಥಳೀಯರಾದ ಬಸವರಾಜ್ ಜಾಲವಾದಿ.        

ಅನ್ನಭಾಗ್ಯ ಯೋಜನೆ ಹಣ: ತಾಂತ್ರಿಕ ಸಮಸ್ಯೆಗೆ ಫಲಾನುಭವಿಗಳು ಅತಂತ್ರ..!                    

ಗುತ್ತಿಗೆದಾರರಿಗೆ ಬಾಕಿ ನೀಡದ ಹಿನ್ನೆಲೆ ಬಂದ್​ ಆಗಿರೋ ಕಸ ಸಂಗ್ರಹಣೆ ಮತ್ತು ವಿಲೇವಾರಿ...

ಇನ್ನು ಪ್ರತಿವರ್ಷ ಕಸ  ಸಂಗ್ರಹಣೆ ಮತ್ತು ವಿಲೇವಾರಿ, ಕುಡಿಯುವ ನೀರು, ಒಳಚರಂಡಿ ಸೇರಿದಂತೆ ವರ್ಷಕ್ಕೆ 40 ಕೋಟಿ ಖರ್ಚು ಮಾಡಬೇಕಾಗುತ್ತದೆ, ಆದ್ರೆ ಸಧ್ಯ 20 ಕೋಟಿ ರೂಪಾಯಿ ಬಾಕಿ ಇರುವ ಹಿನ್ನೆಲೆಯಲ್ಲಿ ಗುತ್ತಿಗೆದಾರರು ಸಹ ಕಾರ್ಯನಿರ್ವಹಣೆಗೆ ಹಿಂದೆ ಮುಂದೆ ನೋಡಬೇಕಾದ ಅನಿವಾರ್ಯತೆ ಆಗಿದೆ. ಈ ಮಧ್ಯೆ ಬಾಗಲಕೋಟೆ ಪಟ್ಟಣ ಅಭಿವೃದ್ದಿ ಪ್ರಾಧಿಕಾರದಲ್ಲಿ 377 ಕೋಟಿ ರೂಪಾಯಿ ಕಾರ್ಪಸ್ ಫಂಡ್​ ಇರಿಸಲಾಗಿತ್ತು, ಪ್ರತಿವರ್ಷ ಅದರಿಂದ ಬರುವ ಬಡ್ಡಿಯಿಂದಲೇ ನವನಗರದ ಮೂಲಭೂತ ಸೌಲಭ್ಯಗಳ ನಿರ್ವಹಣಾ ಕಾರ್ಯಗಳು ನಡೆಯುತ್ತಿದ್ದವು, ಆದ್ರೆ ಈಗ ಸರ್ಕಾರ ಬಾಗಲಕೋಟೆ ಪಟ್ಟಣ ಅಭಿವೃದ್ದಿ ಪ್ರಾಧಿಕಾರದ 377 ಕೋಟಿ ರೂಪಾಯಿ ಕಾರ್ಪಸ್ ಫಂಡ್​​ನ್ನ ಪಡೆದುಕೊಂಡಿದ್ದೇ ಇಂದಿನ ಅವ್ಯವಸ್ಥೆಗೆ ಕಾರಣ ಎನ್ನಲಾಗುತ್ತಿದೆ. 

ಸಮಸ್ಯೆ ಹಿನ್ನೆಲೆ ಬೆಂಗಳೂರಿಗೆ ದೌಡಾಯಿಸಿದ ಬಿಟಿಡಿಎ ಅಧಿಕಾರಿಗಳು...

ಇನ್ನು ನವನಗರದಲ್ಲಿ ಈಗಾಗಲೇ ಕಸ ಎಲ್ಲೆಂದರಲ್ಲಿ ಹಾಕುತ್ತಿರೋದು ಒಂದು ಭಾಗವಾದರೆ, ಇನ್ನು ಕುಡಿಯುವ ನೀರು ಮತ್ತು ಒಳಚರಂಡಿ ಸ್ವಚ್ಚತೆ ಸೇರಿದಂತೆ ಕೆಲವೊಂದು ಕಾರ್ಯಗಳು ಗುತ್ತಿಗೆ ಆಧಾರದ ಮೇಲೆಯೇ ನಡೆಯುತ್ತಿರೋದ್ರಿಂದ ಗುತ್ತಿಗೆದಾರರಿಗೆ ಬಾಕಿ ಹಣ ಪಾವತಿಸಬೇಕಿರುವುದು ಅನಿವಾರ್ಯವಾಗಿದೆ. ಈ ನಡುವೆ 377 ಕೋಟಿ ಹಣ ಕಾರ್ಪಸ್​ ಫಂಡ್​ ಸರ್ಕಾರ ಪಡೆದಿರೋದ್ರಿಂದ ಸಧ್ಯ ಬಿಟಿಡಿಎಗೆ ಅನುದಾನದ ಅವಶ್ಯಕತೆ ಇದ್ದು, ಈ ಮಧ್ಯೆ ಈ ಸಮಸ್ಯೆಗಳು ಮತ್ತಷ್ಟು ಉಲ್ಭಣವಾಗದಿರಲಿ ಅನ್ನೋ ಕಾರಣಕ್ಕೆ ಬಾಗಲಕೋಟೆ ಪಟ್ಟಣ ಅಭಿವೃದ್ದಿ  ಪ್ರಾಧಿಕಾರದ ಹಿರಿಯ ಅಧಿಕಾರಿಗಳು ಈಗಾಗಲೇ ಬೆಂಗಳೂರಿಗೆ ದೌಡಾಯಿಸಿದ್ದು, ಜನಪ್ರತಿನಿಧಿಗಳೊಂದಿಗೆ ಚರ್ಚೆ ನಡೆಸಿದ್ದಾರೆ. ಆದ್ರೆ ಇತ್ತ ಬಾಗಲಕೋಟೆಯ ನವನಗರದಲ್ಲಿ ಕಸ ಸಂಗ್ರಹಣೆ ಮತ್ತು ವಿಲೇವಾರಿ ನಿಂತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದ್ದು, ಶೀಘ್ರ ಕ್ರಮಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.                    

ಒಟ್ಟಿನಲ್ಲಿ ಅಂದಚೆಂದಕ್ಕೆ ಹೆಸರಾಗಿ ರಾಜ್ಯದ ಜನರ ಗಮನ ಸೆಳೆಯುತ್ತಿದ್ದ ಬಾಗಲಕೋಟೆಯ ನವನಗರ ಇದೀಗ ಕಸ ಸಂಗ್ರಹಣೆ ಮತ್ತು ವಿಲೇವಾರಿ ಇಲ್ಲದೆ ಅವ್ಯವಸ್ಥೆಯ ಆಗರವಾಗಿದ್ದು, ಆದಷ್ಟು ಬೇಗ ಜಿಲ್ಲೆಯ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಗಮನ ಹರಿಸಿ ಸಮಸ್ಯೆ ಪರಿಹರಿಸುವ ಕಾರ್ಯ ಮಾಡುವಂತಾಗಲಿ ಎನ್ನೋದೆ ಎಲ್ಲರ ಆಶಯ.

click me!