ಹಲವಾರು ಗೊಂದಲಗಳಿಂದಾಗಿ ಈ ಯೋಜನೆಯ ಅಡಿ ಫಲಾನುಭವಿಗಳು ನಿರೀಕ್ಷಿತ ಮಟ್ಟದಲ್ಲಿ ನೋಂದಣಿ ಮಾಡಿಕೊಳ್ಳುವುದು ಸಾಧ್ಯವಾಗಲಿಲ್ಲ. ಹೀಗಾಗಿ ಬಹುತೇಕ ನೋಂದಣಿ ಕೇಂದ್ರಗಳ ಮುಂದೆ ಜನದಟ್ಟಣೆ ಕಂಡು ಬರಲಿಲ್ಲ.
ರುದ್ರಪ್ಪ ಆಸಂಗಿ
ವಿಜಯಪುರ(ಜು.21): ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಗಳಲ್ಲೊಂದಾದ ಮನೆಯ ಯಜಮಾನಿಗೆ ಪ್ರತಿ ತಿಂಗಳು 2000 ನೀಡುವ ಗೃಹಲಕ್ಷ್ಮಿ ಯೋಜನೆಗೆ ಜಿಲ್ಲೆಯಲ್ಲಿ ಗುರುವಾರ ವಿದ್ಯುಕ್ತವಾಗಿ ಚಾಲನೆ ದೊರೆತಿದ್ದು, ಆದರೆ ಆರಂಭದ ದಿನದಂದು ಹಲವಾರು ಗೊಂದಲಗಳು, ಎಡರು ತೊಡರುಗಳು ಎದುರಾಗಿ ಪ್ರಥಮ ಚುಂಬನಂ ದಂತ ಭಗ್ನಂ ಎನ್ನುವಂತಾಗಿದೆ.
ಜಿಲ್ಲೆಯಾದ್ಯಂತ ಗೃಹಲಕ್ಷ್ಮಿ ಯೋಜನೆಗೆ ನೋಂದಾವಣೆ ಮಾಡಿಕೊಳ್ಳಲು ಒಟ್ಟು 537 ನೋಂದಣಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಈ ಪೈಕಿ ನಗರ ಪ್ರದೇಶಗಳಲ್ಲಿ ಒಟ್ಟು ಕರ್ನಾಟಕ ಒನ್ 26 ಕೇಂದ್ರಗಳು, ಗ್ರಾಮೀಣ ಪ್ರದೇಶಗಳಲ್ಲಿ ಒಟ್ಟು 300 ಗ್ರಾಮ ಒನ್ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಇದಲ್ಲದೆ 211 ಬಾಪೂಜಿ ಸೇವಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಒಟ್ಟು 537 ನೋಂದಣಿ ಕೇಂದ್ರಗಳಲ್ಲಿ ವಿಧ್ಯುಕ್ತವಾಗಿ ಗುರುವಾರ ಚಾಲನೆ ಸಿಕ್ಕಿದೆ. ಆದರೆ ಹಲವಾರು ಗೊಂದಲಗಳಿಂದಾಗಿ ಈ ಯೋಜನೆಯ ಅಡಿ ಫಲಾನುಭವಿಗಳು ನಿರೀಕ್ಷಿತ ಮಟ್ಟದಲ್ಲಿ ನೋಂದಣಿ ಮಾಡಿಕೊಳ್ಳುವುದು ಸಾಧ್ಯವಾಗಲಿಲ್ಲ. ಹೀಗಾಗಿ ಬಹುತೇಕ ನೋಂದಣಿ ಕೇಂದ್ರಗಳ ಮುಂದೆ ಜನದಟ್ಟಣೆ ಕಂಡು ಬರಲಿಲ್ಲ.
ಬೆಳಗಾವಿ ಜಿಲ್ಲೆಯ 14.71 ಲಕ್ಷ ಕುಟುಂಬಗಳಿಗೆ ಗೃಹಲಕ್ಷ್ಮೀ ಲಾಭ
ಈ ಯೋಜನೆ ಅಡಿ ನೋಂದಣಿ ಮಾಡಿಕೊಳ್ಳಲು ಫಲಾನುಭವಿಗಳು ಮುಂಚಿತವಾಗಿ ಸರ್ಕಾರದ ಸೂಚನೆಯಂತೆ ಮೊಬೈಲ್ ಸಂಖ್ಯೆ: 8147500500 ಗೆ ಮಿಸ್ಡ್‌ಕಾಲ್ ನೀಡಿ ನೋಂದಣಿಗೆ ಪೂರ್ವಾನುಮಂತಿ ಪಡೆಯಬೇಕಿದೆ. ಹೀಗಾಗಿ, ಯಾವ ಫೋನ್ ನಂಬರ್‌ಗೆ ಯಾವ ರೀತಿ ಮಿಸ್ಡ್‌ಕಾಲ್ ಮಾಡಬೇಕು. ಯಾವ ನಂಬರ್‌ಗೆ ಫೋನ್ ಕರೆ ಮಾಡಿ ಮಾತನಾಡಬೇಕು ಎಂಬುವುದು ತಿಳಿಯದೇ ಫಲಾನುಭವಿಗಳು ಗೊಂದಲದಲ್ಲಿ ಇದ್ದಾರೆ. ಎಷ್ಟೋ ಫಲಾನುಭವಿಗಳು ಸೂಚಿಸಿದ ಮೊಬೈಲ್ ನಂಬರ್‌ಗೆ ಮಿಸ್ಡ್‌ಕಾಲ್ ಮಾಡಿದರೆ ವಿಳಂಬವಾಗಿ ಮೆಸ್ಸೆಜ್ ಬರುತ್ತದೆ. ಕೆಲವೊಬ್ಬರಿಗೆ ಮೆಸೆಜ್ ಬಂದಿಲ್ಲ ಎಂಬ ದೂರುಗಳು ಸಾಕಷ್ಟುಕೇಳಿ ಬಂದವು. ಇದರಿಂದಾಗಿ ನಿಗದಿತ ಕರ್ನಾಟಕ ಒನ್, ಗ್ರಾಮ ಒನ್ ಹಾಗೂ ಬಾಪೂಜಿ ಕೇಂದ್ರಗಳಲ್ಲಿ ನೋಂದಣಿ ಮಾಡಿಕೊಳ್ಳಲು ಬಹಳಷ್ಟುವಿಳಂಬವಾಗಿದೆ. ಕೆಲ ಫಲಾನುಭವಿಗಳು ಮೆಸ್ಸೆಜ್ ಬಂದ ಮೇಲೆ ತಮ್ಮ ವ್ಯಾಪ್ತಿಗೆ ಬರುವ ನೋಂದಣಿ ಕೇಂದ್ರ ಎಲ್ಲಿದೆ ಎಂಬುವುದು ಹುಡುಕಿಕೊಂಡು ಅಲೆದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಬಹಳ ಹೊತ್ತಿನವರೆಗೆ ಫಲಾನುಭವಿಗಳು ಅಲೆದಾಡಿ ನಂತರ ತಮ್ಮ ನೋಂದಣಿ ಕೇಂದ್ರ ತಲುಪಿದ ಪ್ರಸಂಗಗಳು ನಡೆದವು.
ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 11, ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ 3 ನೋಂದಣಿ ಕೇಂದ್ರಗಳು ಕಾರ್ಯಾರಂಭ ಮಾಡಿವೆ. ಪಟ್ಟಣ ಪಂಚಾಯತಿ ವ್ಯಾಪ್ತಿಯ ಗ್ರಾಮೀಣ ಪ್ರದೇಶದಲ್ಲಿ ಗ್ರಾಮ ಒನ್ ಹಾಗೂ ಬಾಪೂಜಿ ಕೇಂದ್ರ ಕಂಡು ಹಿಡಿಯಲು ಅಷ್ಟೇನೂ ಕಷ್ಟವಾಗುವುದಿಲ್ಲ. ಆದರೆ ವಿಜಯಪುರ ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ 11 ಕರ್ನಾಟಕ ಒನ್ ಕೇಂದ್ರಗಳು ಇವೆ. ಆದರೆ ಈ ಕೇಂದ್ರಗಳು ಎಲ್ಲಿವೆ. ಯಾವ ಕೇಂದ್ರಗಳಲ್ಲಿ ಯಾವ ವಾರ್ಡಿನ ಫಲಾನುಭವಿಗಳು ಬರುತ್ತಾರೆ ಎಂಬುವುದು ಗೊತ್ತಾಗುತ್ತಿಲ್ಲ. ಈ ಬಗ್ಗೆ ಫಲಾನುಭವಿಗಳಿಗೆ ಸಾಕಷ್ಟುತಿಳಿವಳಿಕೆ ಕೂಡ ನೀಡಿಲ್ಲ. ಹೀಗಾಗಿ ಫಲಾನುಭವಿಗಳು ಫಜೀತಿಗೆ ಬಿದ್ದಿದ್ದಾರೆ.
ಗೃಹ ಲಕ್ಷ್ಮಿ ಯೋಜನೆಗೆ ಭರ್ಜರಿ ರೆಸ್ಪಾನ್ಸ್: ಮೊದಲ ದಿನ 60 ಸಾವಿರ ಮಹಿಳೆಯರ ನೋಂದಣಿ
ಕೆಲವೊಂದು ನೋಂದಣಿ ಕೇಂದ್ರಗಳಲ್ಲಿ ಸರ್ವರ್ ಇರಲಿಲ್ಲ ಎಂಬ ದೂರುಗಳು ಕೇಳಿ ಬಂದವು. ಆದರೆ ಅಧಿಕಾರಿಗಳು ಈ ದೂರು ಅಲ್ಲಗಳೆದಿದ್ದಾರೆ. ಒಂದು ನೋಂದಣಿ ಕೇಂದ್ರದ ವ್ಯಾಪ್ತಿಗೆ 2 ಕಿ.ಮಿ. ಪ್ರದೇಶದಲ್ಲಿನ ಫಲಾನುಭವಿಗಳು ಬರುತ್ತಾರೆ ಎಂದು ಹೇಳಲಾಗಿದೆ. ಆದರೆ ಮೊಬೈಲ್‌ಗೆ ಮಿಸ್ಡ್ ಕಾಲ್ ಮಾಡಿದ ನಂತರ 20 ಕಿ.ಮಿ. ವ್ಯಾಪ್ತಿಯ ಗ್ರಾಮೀಣ ಪ್ರದೇಶಗಳಿಂದ ಫಲಾನುಭವಿಗಳ ಹೆಸರು ಸೂಚಿಸಿ ಅನುಮೋದನೆ ನೀಡಲಾಗಿದೆ. ಹೀಗಾಗಿ ವಿಜಯಪುರ ನಗರ ಪಾಲಿಕೆ ವ್ಯಾಪ್ತಿಯ ನೋಂದಣಿ ಕೇಂದ್ರಕ್ಕೆ ಬಹಳಷ್ಟುಮಂದಿ ಫಲಾನುಭವಿಗಳು ಬಂದಿಲ್ಲ. ವಿಜಯಪುರ ನೋಂದಣಿ ಕೇಂದ್ರಗಳು ಫಲಾನುಭವಿಗಳು ಇಲ್ಲದೆ ಬಿಕೋ ಎನ್ನುತ್ತಿದ್ದವು.
ಇದು ಹೊಸ ಯೋಜನೆಯಾಗಿದ್ದರಿಂದಾಗಿ ಮೊದಲ ದಿನದಂದು ಹೇಳಿಕೊಳ್ಳುವಷ್ಟುಫಲಾನುಭವಿಗಳ ನೋಂದಣಿ ಮಾಡಿಕೊಳ್ಳಲು ಸಾಧ್ಯವಾಗಿಲ್ಲ. ಹೀಗಾಗಿ ನೋಂದಣಿ ಮಾಡಿಕೊಂಡ ಫಲಾನುಭವಿಗಳ ನಿಖರ ಅಂಕಿ ಸಂಖ್ಯೆಯನ್ನು ಅಧಿಕಾರಿಗಳು ಹೇಳದೆ ಜಾರಿಕೊಳ್ಳುತ್ತಿದ್ದಾರೆ.