ಐತಿಹಾಸಿಕ ಬೆಳಗಾವಿ ಗಣೇಶೋತ್ಸವ: ಗಣೇಶ ಮಂಟಪಗಳಿಗೆ ಸಾವರ್ಕರ್ ಭಾವಚಿತ್ರ ವಿತರಣೆ

By Girish Goudar  |  First Published Aug 31, 2022, 10:41 AM IST

ಬೆಳಗಾವಿ ನಗರದಲ್ಲಿ ರಾತ್ರಿ ವೇಳೆಗೆ 378 ಸಾರ್ವಜನಿಕ ಗಣೇಶನ ವಿಗ್ರಹ ಪ್ರತಿಷ್ಠಾಪನೆ, ಗಣೇಶ ಮಂಟಪಗಳಿಗೆ ಸಾವರ್ಕರ್ ಭಾವಚಿತ್ರ ವಿತರಿಸಿದ ಮುರುಘೇಂದ್ರಗೌಡ ಪಾಟೀಲ್
 


ವರದಿ: ಮಹಾಂತೇಶ ಕುರಬೇಟ್, ಏಷ್ಯಾನೆಟ್ ಸುವರ್ಣನ್ಯೂಸ್, ಬೆಳಗಾವಿ

ಬೆಳಗಾವಿ(ಆ.31):  ಬೆಳಗಾವಿ ಗಣೇಶೋತ್ಸವದಲ್ಲಿ ಈ ಬಾರಿ ಸಾವರ್ಕರ್ ಹವಾ ಜೋರಾಗಲಿದೆ. ಈ ಬಾರಿ ಗಣೇಶೋತ್ಸವವನ್ನು ಸಾವರ್ಕರ್ ಗಣೇಶೋತ್ಸವವನ್ನಾಗಿ ಆಚರಿಸುವಂತೆ ಹಿಂದೂಪರ ಸಂಘಟನೆಗಳು ಕರೆ ನೀಡಿದ್ದವು. ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್, ಚಕ್ರವರ್ತಿ ಸೂಲಿಬೆಲೆ ಖುದ್ದು ಬೆಳಗಾವಿಗೆ ಆಗಮಿಸಿ ಬೆಳಗಾವಿಯ ಗಣೇಶೋತ್ಸವ ಮಂಡಳಿಗಳ ಜೊತೆ ಸಭೆ ಮಾಡಿದ್ದರು. ಅಷ್ಟೇ ಅಲ್ಲದೇ ಬೆಳಗಾವಿ ದಕ್ಷಿಣ ಬಿಜೆಪಿ ಶಾಸಕ ಅಭಯ್ ಪಾಟೀಲ್, ಬೆಳಗಾವಿ ಉತ್ತರ ಬಿಜೆಪಿ ಶಾಸಕ ಅನಿಲ್ ಬೆನಕೆ ಇದಕ್ಕೆ ಬೆಂಬಲವಾಗಿ ನಿಂತಿದ್ದರು. ಈಗ ಬೆಳಗಾವಿ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಮಹಾನಗರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುರುಘೇಂದ್ರಗೌಡ ಪಾಟೀಲ್ ವೀರ್ ಸಾವರ್ಕರ್ ಭಾವಚಿತ್ರ ಇರುವ ಫೋಟೋಗಳನ್ನು ಗಣೇಶೋತ್ಸವ ಮಂಡಳಿಗಳಿಗೆ ವಿತರಣೆ ಮಾಡಿದ್ದಾರೆ.

Tap to resize

Latest Videos

ಗಣೇಶ ಪ್ರತಿಷ್ಠಾಪನೆಗೂ ಮುನ್ನವೇ ಬೆಳಗಾವಿ ನಗರದ ಕಣಬರಗಿ, ರಾಮತೀರ್ಥ ನಗರ, ವೈಭವ ನಗರ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ಪ್ರತಿಷ್ಠಾಪನೆಗೊಳ್ಳಲಿರುವ ಗಣೇಶ ಮಂಟಪಗಳಿಗೆ ತೆರಳಿ ವೀರ್ವ ಸಾವರ್ಕರ್ ಭಾವಚಿತ್ರ ಹಂಚಿಕೆ ಮಾಡಿದ್ದಾರೆ‌. ಇದೇ ವೇಳೆ ಮಾತನಾಡಿರುವ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮುರುಘೇಂದ್ರಗೌಡ ಪಾಟೀಲ್, 'ಈ ಬಾರಿ ಗಣೇಶೋತ್ಸವದಲ್ಲಿ ವೀರ್ ಸಾವರ್ಕರ್ ಅಭಿಯಾನ ಶುರು ಮಾಡಿದ್ದೇವೆ. ಬೆಳಗಾವಿ ಉತ್ತರ ಕ್ಷೇತ್ರದಲ್ಲಿ ಇರುವ ಪ್ರತಿ ಮಂಟಪಗಳಿಗೆ ತೆರಳಿ ವೀರ್ ಸಾವರ್ಕರ್ ಭಾವಚಿತ್ರ ಇರುವ ಫೋಟೋವನ್ನು ಮುರುಘೇಂದ್ರಗೌಡ ಪಾಟೀಲ್ ಫೌಂಡೇಶನ್ ವತಿಯಿಂದ ವಿತರಣೆ ಮಾಡುತ್ತಿದ್ದೇವೆ' ಎಂದು ತಿಳಿಸಿದ್ದಾರೆ.

ಬೆಳಗಾವಿ: 25 ದಿನವಾದರೂ ಸಿಗದ ಚಿರತೆ, ಹೆಚ್ಚಿದ ಆತಂಕ

ಬೆಳಗಾವಿ ಗಣೇಶೋತ್ಸವಕ್ಕಿದೆ ಶತಮಾನದ ಇತಿಹಾಸ

ಸ್ವಾತಂತ್ರ್ಯ ಚಳವಳಿಯಲ್ಲಿ ಜನರನ್ನು ಒಗ್ಗೂಡಿಸುವ ಉದ್ದೇಶದಿಂದ ಬಾಲಗಂಗಾಧರ ತಿಲಕ್‌ರವರು ಸಾರ್ವಜನಿಕ ಗಣೇಶ ವಿಗ್ರಹ ಪ್ರತಿಷ್ಠಾಪನೆಗೆ ಕರೆ ನೀಡಿದ್ದರು. 1905ರಲ್ಲಿ ಖುದ್ದು ಬಾಲಗಂಗಾಧರ ತಿಲಕ್‌ರವರು ಬೆಳಗಾವಿಗೆ ಬಂದು ಸಾರ್ವಜನಿಕ ಗಣೇಶ ವಿಗ್ರಹ ಪ್ರತಿಷ್ಠಾಪಿಸಿದ್ದರು. ಅಂದಿನಿಂದ ಬೆಳಗಾವಿಯಲ್ಲಿ ಪ್ರತಿ ವರ್ಷ 11 ದಿನಗಳ ಕಾಲ ಅದ್ಧೂರಿ ಗಣೇಶೋತ್ಸವ ಆಚರಿಸಲಾಗುತ್ತಿದೆ. ಬೆಳಗಾವಿ ನಗರದ ರವಿವಾರಪೇಟೆ, ಝೆಂಡಾ ಚೌಕ್ ಮಾರುತಿ ಗಲ್ಲಿ, ಕಾಮತ್ ಗಲ್ಲಿ ಸೇರಿ ಕೆಲವು ಗಣೇಶೋತ್ಸವ ಮಂಡಳಿಗಳು ಶತಮಾನೋತ್ಸವ ಆಚರಿಸಿವೆ.

ಮಧ್ಯಾಹ್ನದವರೆಗೆ ಕುಂದಾನಗರಿ ಬೆಳಗಾವಿ ಮನೆ ಮನೆಗಳಲ್ಲಿ  ಗಣೇಶನ ಪ್ರತಿಷ್ಠಾಪಿಸಲಾಗುತ್ತೆ. ಬಳಿಕ ವಿವಿಧೆಡೆಯಿಂದ ಬೃಹದಾಕಾರದ ಮೂರ್ತಿಗಳನ್ನು ನಗರದ ವಿವಿಧ ಬಡಾವಣೆಗಳಲ್ಲಿ ಮೆರವಣಿಗೆ ಮೂಲಕ ತಂದು ಪ್ರತಿಷ್ಠಾಪಿಸಲಾಗುತ್ತೆ. ಇನ್ನು ಗಣೇಶೋತ್ಸವ ಹಿನ್ನೆಲೆ ಬೆಳಗಾವಿ ನಗರ ಸೇರಿ ಜಿಲ್ಲೆಯಾದ್ಯಂತ ಬಿಗಿ ಭದ್ರತೆ ಒದಗಿಸಲಾಗಿದೆ. ನಿನ್ನೆಯಷ್ಟೇ ಎಡಿಜಿಪಿ ಅಲೋಕ್‌ಕುಮಾರ್ ನೇತೃತ್ವದಲ್ಲಿ ಅತಿಸೂಕ್ಷ್ಮ ಪ್ರದೇಶಗಳಿಗೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಶಾಂತಿಯುತ ಗಣೇಶೋತ್ಸವ ಆಚರಿಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಅಷ್ಟೇ ಅಲ್ಲದೇ ಬೆಳಗಾವಿ ನಗರದ ಪ್ರಮುಖ ಬೀದಿಗಳಲ್ಲಿ ರೂಟ್ ಮಾರ್ಚ್ ಮಾಡಿ ಯಾರಾದರೂ ನಿಯಮ ಉಲ್ಲಂಘಿಸಿದ್ರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಖಡಕ್ ಎಚ್ಚರಿಕೆ ನೀಡಿದ್ದಾರೆ. ಕೆಎಸ್‌ಆರ್‌ಪಿ, ಡಿಎಆರ್ ಹೋಮ್‌ ಗಾರ್ಡ್ ಸೇರಿದಂತೆ ಬೆಳಗಾವಿಗೆ ರ‍್ಯಾಪಿಡ್ ಆ್ಯಕ್ಷನ್ ಫೋರ್ಸ್‌ನ ತುಕಡಿ ನಿಯೋಜಿಸಲಾಗುವುದು ಎಂದೂ ಸಹ ಅಲೋಕ್‌ ಕುಮಾರ್ ತಿಳಿಸಿದ್ದಾರೆ.
 

click me!