ದಸರಾ ಮಹೋತ್ಸವದ ಜಂಬೂಸವಾರಿಗೆ ಸಿದ್ಧವಾಗುತ್ತಿರುವ ಗಜಪಡೆ ನಡಿಗೆ ತಾಲೀಮು ಪ್ರತಿನಿತ್ಯ ನಡೆಯುತ್ತಿದ್ದು, ಶುಕ್ರವಾರ ಸಂಜೆ ಭೀಮ ಆನೆ ಮೈಮೇಲೆ 550 ಕೆ.ಜಿ. ಬಾರ ಹೊರಿಸಿ ತಾಲೀಮು ನಡೆಸಲಾಯಿತು.
ಮೈಸೂರು : ದಸರಾ ಮಹೋತ್ಸವದ ಜಂಬೂಸವಾರಿಗೆ ಸಿದ್ಧವಾಗುತ್ತಿರುವ ಗಜಪಡೆ ನಡಿಗೆ ತಾಲೀಮು ಪ್ರತಿನಿತ್ಯ ನಡೆಯುತ್ತಿದ್ದು, ಶುಕ್ರವಾರ ಸಂಜೆ ಭೀಮ ಆನೆ ಮೈಮೇಲೆ 550 ಕೆ.ಜಿ. ಬಾರ ಹೊರಿಸಿ ತಾಲೀಮು ನಡೆಸಲಾಯಿತು.
23 ವರ್ಷದ ಭೀಮ ಆನೆಯ ಮೇಲೆ ನಮ್ದಾ, ಗಾದಿ, ಮರಳು ಮೂಟೆಗಳನ್ನು ಸೇರಿದಂತೆ ಒಟ್ಟು 550 ಕೆ.ಜಿ ಬಾರ ಹೊತ್ತು ಭೀಮ ಆನೆಯು ರಾಜಮಾರ್ಗದಲ್ಲಿ ಸಾಗಿತು. ಮಾವುತ ಗುಂಡ ಯಶಸ್ವಿಯಾಗಿ ಭೀಮನನ್ನು ಮುನ್ನಡೆಸಿದರು.ಬಾರ ಹೊತ್ತ ಭೀಮ ಆನೆ ಜೊತೆಗೆ ಅಂಬಾರಿ ಆನೆ ಅಭಿಮನ್ಯು, ಮಾಜಿ ಅಂಬಾರಿ ಆನೆ ಅರ್ಜುನ, ಧನಂಜಯ, ಮಹೇಂದ್ರ, ಗೋಪಿ, ಕಂಜನ್, ವರಲಕ್ಷ್ಮಿ ಮತ್ತು ವಿಜಯ ಆನೆಗಳು ಪಾಲ್ಗೊಂಡಿದ್ದವು.
ಅರಮನೆ ಆನೆ ಬಿಡಾರದಿಂದ ಹೊರಟ ಗಜಪಡೆಯು ಚಾಮರಾಜ ವೃತ್ತ, ಕೆ.ಆರ್. ವೃತ್ತ, ಸಯ್ಯಾಜಿರಾವ್ ರಸ್ತೆ, ಆರ್ಎಂಸಿ ವೃತ್ತ, ಹೈವೆ ವೃತ್ತದ ಮೂಲಕ ಬನ್ನಿಮಂಟಪದ ಪಂಜಿನ ಕವಾಯತು ಮೈದಾನಕ್ಕೆ ತಲುಪಿದವು. ಕೆಲಕಾಲ ವಿಶ್ರಾಂತಿ ಬಳಿಕ ಅದೇ ಮಾರ್ಗವಾಗಿ ಅರಮನೆಗೆ ಹಿಂದಿರುಗಿದವು. ಶುಕ್ರವಾರ ಬೆಳಗ್ಗೆ ಸಹ ಅರಮನೆಯಿಂದ ಆಯುರ್ವೇದ ವೃತ್ತದವರೆಗೆ ದಸರಾ ಆನೆಗಳು ಬರಿ ಮೈಯಲ್ಲೇ ನಡಿಗೆ ತಾಲೀಮಿನಲ್ಲಿ ಪಾಲ್ಗೊಂಡಿದ್ದವು. ಈ ವೇಳೆ ಡಿಸಿಎಫ್ ಸೌರಭಕುಮಾರ್, ಆರ್ ಎಫ್ಒ ಸಂತೋಷ್, ಪಶುವೈದ್ಯ ಡಾ. ಮುಜೀಬ್ ಉರ್ ರೆಹಮಾನ್ ಹಾಗೂ ಸಿಬ್ಬಂದಿ ಇದ್ದರು.
ಈ ಬಾರಿ ಸರಳ ದಸರಾ
ಮೈಸೂರು (ಸೆ.22): ರಾಜ್ಯದಲ್ಲಿ ಬರ ಪರಿಸ್ಥಿತಿ ಇರುವುದರಿಂದ ಈ ಬಾರಿ ವಿಶ್ವವಿಖ್ಯಾತ ದಸರಾ ಮಹೋತ್ಸವವನ್ನು ಸರಳವಾಗಿ ಆಚರಿಸುವುದಾಗಿ ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ತಿಳಿಸಿದ್ದಾರೆ. ರಾಜ್ಯದಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿದೆ. ರೈತಾಪಿ ವರ್ಗ ಸಂಕಷ್ಟದಲ್ಲಿದೆ. ಆದ್ದರಿಂದ ರಾಜ್ಯ ಸರ್ಕಾರ ಸರಳ ಹಾಗೂ ಅರ್ಥಪೂರ್ಣ ದಸರೆ ಆಚರಣೆಗೆ ನಿರ್ಧರಿಸಿದ ಎಂದು ಅವರು ಹೇಳಿದ್ದಾರೆ.
ಸಾಂಪ್ರದಾಯಿಕವಾಗಿ ಆಚರಿಸಿ: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವವನ್ನು ಅದ್ದೂರಿ, ಸರಳ ಎಂಬ ಗೊಂದಲವಿಲ್ಲದೇ ಸಾಂಪ್ರದಾಯಿಕವಾಗಿ ಆಚರಿಸುವಂತೆ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ. ನಾರಾಯಣಗೌಡ ಆಗ್ರಹಿಸಿದ್ದಾರೆ. ಮೊದಲು ಈ ಬಾರಿ ದಸರೆಯನ್ನು ಅದ್ದೂರಿಯಾಗಿ ಆಚರಿಸಲಾಗುವುದು ಎಂದು ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪಹೇಳಿದರು. ಇತ್ತೀಚೆಗೆ ಬರದ ಹಿನ್ನೆಲೆಯಲ್ಲಿ ಸರಳವಾಗಿ ಆಚರಿಸುವುದಾಗಿ ಹೇಳಿದ್ದಾರೆ.
ಬಿಜೆಪಿಗೆ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಮಹಿಳಾ ಮೀಸಲಾತಿ ನೆನಪಾಗಿದೆ: ಮಹದೇವಪ್ಪ
ಇದರಿಂದ ದಸರೆಯ ಸಂದರ್ಭದಲ್ಲಿ ಹೊರ ರಾಜ್ಯ ಹಾಗೂ ವಿದೇಶಗಳಿಂದ ಬರುವವರಿಗೆ ಗೊಂದಲ ಉಂಟಾಗುತ್ತದೆ. ದಸರೆಗೆ ಬರುವವರಿಗೆ ಜಂಬೂ ಸವಾರಿಯೇ ಮುಖ್ಯವೇ ಹೊರತು ಇತರೆಯಲ್ಲ. ಆದರೆ ಸಾಂಪ್ರದಾಯಿಕ ದಸರಾ ಎಂದೇ ಹೇಳಿದರೆ ಸಾಕು ಎಂದಿದ್ದಾರೆ. ದಸರೆಯ ದುಂದು ವೆಚ್ಚ ಕಡಿಮೆ ಮಾಡಿ, ಹೊರಗಿನಿಂದ ಕಲಾವಿದರನ್ನು ಕರೆಸುವ ಬದಲು ಸ್ಥಳೀಯರಿಗೆ ಅವಕಾಶ ನೀಡಿ ಎಂದು ಅವರು ಸಲಹೆ ನೀಡಿದ್ದಾರೆ. ಮಹಿಷ ದಸರೆಗೆ ಅವಕಾಶ ನೀಡದಂತೆಯೂ ಅವರು ಆಗ್ರಹಿಸಿದ್ದಾರೆ.
ಇಲಾಖೆಯ ಜೊತೆ ಕೈಜೋಡಿಸಿ: ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಲು ಇಲಾಖೆಯ ಜೊತೆ ಕೈಜೋಡಿಸುವಂತೆ ಪ್ರವಾಸೋದ್ಯಮ ಅಭಿವೃದ್ಧಿ ಸಲಹಾ ಸಮಿತಿ ರಚಿಸಿ ಎರಡು ತಿಂಗಳಿಗೊಮ್ಮೆ ಸಭೆ ನಡೆಸಿ ಮೈಸೂರಿನ ಪ್ರವಾಸೋದ್ಯಮದ ಅಭಿವೃದ್ಧಿಗೆ ಕ್ರಮ ವಹಿಸಲಾಗುವುದು ಎಂದು ಪ್ರವಾಸೋದ್ಯಮ ಇಲಾಖೆಯ ಜಂಟಿ ನಿರ್ದೇಶಕಿ ಎಂ.ಕೆ. ಸವಿತಾ ತಿಳಿಸಿದರು. ಸೆ.27 ರಂದು ಆಚರಿಸಲಿರುವ ವಿಶ್ವ ಪ್ರವಾಸೋದ್ಯಮ ದಿನಾಚರಣೆಯ ಅಂಗವಾಗಿ ಪ್ರವಾಸೋದ್ಯಮ ಇಲಾಖೆಯಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕೇವಲ ದಸರಾ ಸಂದರ್ಭದಲ್ಲಿ ಮಾತ್ರವಲ್ಲದೆ ಉಳಿದ ದಿನಗಳಲ್ಲಿಯೂ ಜಿಲ್ಲೆಯ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಲು ಬೇಕಾದ ಸಲಹೆ ಸೂಚನೆಗಳನ್ನು ಪಡೆಯಲು ಪ್ರವಾಸೋದ್ಯಮ ಸಲಹಾ ಸಮಿತಿ ರಚಿಸಿ, 2 ತಿಂಗಳಿಗೊಮ್ಮೆ ಸಭೆ ನಡೆಸಿ ಅಲ್ಲಿ ಬರುವ ಸಲಹೆಗಳನ್ನು ಸೂಚನೆಗಳನ್ನು ಸರ್ಕಾರದ ಗಮನಕ್ಕೆ ತರುವುದಕ್ಕೆ ಅಗತ್ಯ ಕ್ರಮ ವಹಿಸಲಾಗುವುದು. ಇದಕ್ಕೆ ಪ್ರವಾಸೋದ್ಯಮ ಇಲಾಖೆಗೆ ಸಂಬಂಧಪಟ್ಟ ಎಲ್ಲಾ ಸಂಘಗಳ ಸಹಕಾರ ಮುಖ್ಯ ಎಂದರು.
ದೇಶದಲ್ಲಿ ಸಂವಿಧಾನಕ್ಕಿಂತ ಬೇರೆ ಯಾವ ಧರ್ಮವು ದೊಡ್ಡದಲ್ಲ: ಸಚಿವ ಮಹದೇವಪ್ಪ
ಜಿಲ್ಲೆಯಲ್ಲಿರುವ ಹೋಟೆಲ್, ರೆಸಾರ್ಟ್ ಮತ್ತು ಹೋಂ ಸ್ಟೇಗಳಿಗೆ ಭೇಟಿ ನೀಡುವ ಪ್ರವಾಸಿಗರಿಗೆ ಸ್ವಚ್ಛತೆ, ಪರಿಸರ ಮಾಲಿನ್ಯ ತಡೆಗಟ್ಟಲು ಹಾಗೂ ನೈರ್ಮಲ್ಯ, ಶುಚಿತ್ವದ ಬಗ್ಗೆ ಅರಿವು ಮೂಡಿಸುವುದು ಸೇರಿದಂತೆ ಇನ್ನಿತರೆ ಪರಿಸರಸ್ನೇಹಿ ಚಟುವಟಿಕೆಗಳನ್ನು ಪ್ರಸ್ತುತಿ ಪಡಿಸಲು ಎಲ್ಲಾ ಹೋಟೆಲ್ ಮತ್ತು ರೆಸ್ಟೋರೆಂಟ್ ಗಳಲ್ಲಿ ಸಾಮಾನ್ಯ ಅಡ್ವೈಸರಿಗಳನ್ನು ಪಾಲಿಸುವಂತೆ ಅವರು ಸೂಚಿಸಿದರು.