ತಾಯಿ ಗರ್ಭದಲ್ಲಿ ಸಮರ್ಪಕ ಬೆಳವಣಿಗೆ ಆಗದೆ ಆರೂವರೆ ತಿಂಗಳಿಗೇ ಜನಿಸಿದ ಶಿಶುವಿನ ಹೆರಿಗೆ ಮಾಡಿಸುವಲ್ಲಿ ನಗರದ ಶಿರಾಗೇಟ್‌ನ ಅದಿತಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ತಜ್ಞ ವೈದ್ಯರು ಯಶಸ್ವಿಯಾಗಿದ್ದಾರೆ. ತೀರಾ ಅಪರೂಪ ಎನ್ನುವ ಈ ಸವಾಲಿನ ಪ್ರಕರಣವನ್ನು ವೈದ್ಯರು ಯಶಸ್ವಿಯಾಗಿ ನಿಭಾಯಿಸಿದ್ದಾರೆ. ತಾಯಿ ಹಾಗೂ ಮಗು ಈಗ ಆರೋಗ್ಯವಾಗಿದ್ದಾರೆ.
ತುಮಕೂರು : ತಾಯಿ ಗರ್ಭದಲ್ಲಿ ಸಮರ್ಪಕ ಬೆಳವಣಿಗೆ ಆಗದೆ ಆರೂವರೆ ತಿಂಗಳಿಗೇ ಜನಿಸಿದ ಶಿಶುವಿನ ಹೆರಿಗೆ ಮಾಡಿಸುವಲ್ಲಿ ನಗರದ ಶಿರಾಗೇಟ್‌ನ ಅದಿತಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ತಜ್ಞ ವೈದ್ಯರು ಯಶಸ್ವಿಯಾಗಿದ್ದಾರೆ. ತೀರಾ ಅಪರೂಪ ಎನ್ನುವ ಈ ಸವಾಲಿನ ಪ್ರಕರಣವನ್ನು ವೈದ್ಯರು ಯಶಸ್ವಿಯಾಗಿ ನಿಭಾಯಿಸಿದ್ದಾರೆ. ತಾಯಿ ಹಾಗೂ ಮಗು ಈಗ ಆರೋಗ್ಯವಾಗಿದ್ದಾರೆ.
ಅದಿತಿ ಆಸ್ವತ್ರೆಯ ವ್ಯವಸ್ಥಾಪಕ ನಿರ್ದೇಶಕರೂ ಆದ ತಜ್ಞ ಡಾ.ಚಂದನ್ ಹಾಗೂ ಡಾ.ಲಿಖಿತಾ ಅವರು ಶುಕ್ರವಾರ ಆಸ್ಪತ್ರೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿ, ಸುಮಾರು 3-4 ತಿಂಗಳ ಕಾಲ ತಾಯಿಯ ಆರೋಗ್ಯದ ಬಗ್ಗೆ ವಿಶೇಷ ನಿಗಾ ವಹಿಸಿ, ಚಿಕಿತ್ಸೆ ನೀಡಿ ಸುರಕ್ಷಿತವಾಗಿ ಹೆರಿಗೆ ಮಾಡಿಸಿ ತಾಯಿ ಮಗುವನ್ನು ರಕ್ಷಿಸಲಾಗಿದೆ ಎಂದು ಹೇಳಿದರು.
ನಗರದ ಶಿರಾಗೇಟ್ ಟೂಡಾ ಲೇಔಟ್ ನಿವಾಸಿಯಾದ ಗರ್ಭಿಣಿ ತಾಯಿ ದಿವ್ಯಾ ಅವರನ್ನು ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆ ಮಾಡಿದಾಗ ಮಗುವಿನ ಬೆಳವಣಿಗೆ ಸಮರ್ಪಕವಾಗಿರಲಿಲ್ಲ ಎಂಬುದು ತಿಳಿದು ಬಂದಿತು, ಈ ಪ್ರಕರಣವನ್ನು ಸವಾಲಾಗಿ ಸ್ವೀಕರಿಸಿ ತಾಯಿಗೆ ಹಾಗೂ ಗರ್ಭದಲ್ಲಿರುವ ಶಿಶುವಿಗೆ ಸೂಕ್ತ ಚಿಕಿತ್ಸೆ, ಔಷಧೋಪಚಾರ ಮಾಡುತ್ತಾ ಆರೋಗ್ಯ ರಕ್ಷಣೆ ಮಾಡಲಾಯಿತು.
ಅವಧಿ ತುಂಬಿದ ಹೆರಿಗೆಗಾಗಿ ಚಿಕಿತ್ಸೆ ಮೂಲಕ ಪ್ರಯತ್ನ ಮಾಡಲಾಯಿತಾದರೂ ಸಾಧ್ಯವಾಗದೆ ಆರೂವರೆ ತಿಂಗಳಿಗೆ ಹೆರಿಗೆಯಾಯಿತು. ಜನಿಸಿದ ಗಂಡು ಶಿಶುವಿನ ತೂಕ ೭೭೦ ಗ್ರಾಂ ಇತ್ತು. ಅದರ ಶ್ವಾಸಕೋಶ ಬೆಳವಣಿಗೆ ಆಗಿರಲಿಲ್ಲ, ರಕ್ತ ಉತ್ಪಾದನಾ ಅಂಗಾಗಗಳು ಬೆಳವಣಿಗೆ ಆಗಿರಲಿಲ್ಲ. ಹೆರಿಗೆಯಾದ ಅರ್ಧಗಂಟೆಯಿಂದ ಶಿಶುವನ್ನು ವೆಂಟಿಲೇಟರ್‌ನಲ್ಲಿಟ್ಟು ಚಿಕಿತ್ಸೆ ಆರಂಭಿಸಿದೆವು ಎಂದರು.
ಇದು ಅಪರೂಪದ ಪ್ರಕರಣ. ತಾಯಿ ದಿವ್ಯಾ ಅವರಿಗೆ ಈ ಮೊದಲು ಅಬಾರ್ಷನ್ ಆಗಿತ್ತು. ಈ ಪ್ರಕರಣದಲ್ಲೂ ಅಬಾರ್ಷನ್ ಆಗುವ ಅಪಾಯವಿತ್ತು. ಯಾಕೆಂದರೆ ಸರ್ವೀಕ್ಸ್ ಎನ್ನುವುದರ ಉದ್ದಳತೆ ಕಡಿಮೆ ಇತ್ತು. ಆದರೆ ಮತ್ತೆ ಸ್ಟಿಚ್ ಹಾಕಿದೆವು. 24 ವಾರ ಚಿಕಿತ್ಸೆ ಬಳಿಕ ಹೆರಿಗೆಯಾಯಿತು. ಈ ರೀತಿಯ ಮಕ್ಕಳಲ್ಲಿ ಕಣ್ಣಿನ ಬೆಳವಣಿಗೆ ಸರಿಯಾಗಿ ಆಗಿರುವುದಿಲ್ಲ. ಕಣ್ಣಿನ ಪರೀಕ್ಷೆ ಮಾಡಿದ್ದೇವೆ ಅದಕ್ಕೆ ಲೇಸರ್ ತೆರಪಿ ಬೇಕಾಗಿರುವುದರಿಂದ ಆಪರೇಷನ್ ಮಾಡುತ್ತೇವೆ. ಇಂತಹ ಮಕ್ಕಳಲ್ಲಿ ರಕ್ತವೂ ಕಡಿಮೆ ಇರುತ್ತದೆ. ನಾಲ್ಕು ಬಾರಿ ರಕ್ತ ಹಾಕಲಾಗಿದೆ. ಕರುಳು ಬೆಳವಣಿಗೆ ಸಹ ಆಗಿರುವುದಿಲ್ಲ. ಹಾಲನ್ನು ಜೀರ್ಣಿಸಿಕೊಳ್ಳುವುದೂ ಕಷ್ಟವಾಗಿತ್ತು. ಅದಕ್ಕೂ ಚಿಕಿತ್ಸೆ ನೀಡಿ ಈಗ ಮಗು ಹಾಲನ್ನು ಜೀರ್ಣ ಮಾಡಿಕೊಳ್ಳುತ್ತದೆ ಎಂದು ಡಾ.ಚಂದನ್ ಹೇಳಿದರು.
ಡಾ.ಲಿಖಿತಾ ಮಾತನಾಡಿ, ಇಂತಹ ಮಗುವಿಗೆ ಜೀರ್ಣ ಶಕ್ತಿಯೂ ಕಡಿಮೆ ಇರುವುದರಿಂದ ಅದಕ್ಕೂ ಚಿಕಿತ್ಸೆ ನೀಡಲಾಗಿದೆ. ಸಾಕಷ್ಟು ಕಷ್ಟ ಅನುಭವಿಸಿದ ಮಗು ಈಗ ಆರೋಗ್ಯವಾಗಿದೆ. ಇಂದು ಮಗುವಿನ ತೂಕ ಒಂದು ಕೇಜಿ೪೦೦ ಗ್ರಾಂ ಆಗಿದ್ದು ಆರೋಗ್ಯವಾಗಿರುವ ತಾಯಿ ಮಗುವನ್ನು ಡಿಸ್ಚಾರ್ಜ್ ಮಾಡಲಾಗಿದೆ ಎಂದು ಹೇಳಿದರು
ಚಿಕಿತ್ಸೆ ಪಡೆತ ತಾಯಿ ದಿವ್ಯಾ, ಇವರ ಪತಿ ಸಂಜಯ್ ಅವರು ಮಗು ಜೊತೆ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದು ಅನುಭವ ಹಂಚಿಕೊಂಡರು.