
ಗದಗ (ಅ.13): ಗದಗ ಜಿಲ್ಲೆಯಲ್ಲಿ ಚಿರತೆಯೊಂದು ಕೃಷಿಹೊಂಡದ ಖಾಲಿ ಪೈಪ್ ಒಳಗೆ ಸಿಲುಕಿ ಪರದಾಡಿದೆ. ಎಂದಿನಂತೆ ಕುರಿಗಳನ್ನು ಮೇಯಿಸುವುದಕ್ಕೆ ಕುರಿಗಾಹಿಗಳು ತೆರಳಿದ್ದ ವೇಳೆ ಚಿರತೆಯ ಘರ್ಜನೆ ಧ್ವನಿ ಕೇಳಿಸಿದೆ. ಏನೆಂದು ಬಗ್ಗಿ ನೋಡಿದಾಗ ಕೃಷಿ ಹೊಂಡದ ಪೈಪ್‌ನಲ್ಲಿ ಚಿರತೆ ಅಡಗಿ ಕುಳಿತಿದ್ದು, ಎದ್ನೋ ಬಿದ್ನೋ ಅಂತ ಕುರಿಗಾಹಿಗಳು ಅಲ್ಲಿಂದ ಓಡಿಹೋಗಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಆದರೆ, ಇಲ್ಲಿ ಕುರಿಗಳು ಮತ್ತು ಕುರಿಗಾಹಿಗಳ ಪ್ರಾಣ ಉಳಿದಿದ್ದೇ ರೋಚಕವಾಗಿದೆ.
ಮುಂಡರಗಿ ತಾಲೂಕಿನ ಸಿಂಗಟರಾಯನಕೇರಿ ತಾಂಡಾ ನಿವಾಸಿ ಹನುಮಂತ ಪವಾರ್ ಎಂಬುವವರಿಗೆ ಸೇರಿದ ಜಮೀನಿನಲ್ಲಿರುವ ಕೃಷಿಹೊಂಡದ ಪೈಪ್‌ನಲ್ಲಿ ಗಂಡು ಚಿರತೆಯೊಂದು ಅವಿತುಕೊಂಡಿತ್ತು. ಹೊಂಡದಲ್ಲಿ ನೀರಿಲ್ಲದ ಕಾರಣ ಚಿರತೆಯು ನೀರಿಲ್ಲದೆ ನಿತ್ರಾಣಗೊಂಡು ಪೈಪ್‌ನೊಳಗೆ ಕುಳಿತಿತ್ತು. ಜಮೀನಿನ ಬಳಿ ತೆರಳಿದ್ದ ಕುರಿಗಾಹಿಗಳ ಕಣ್ಣಿಗೆ ನಿತ್ರಾಣಗೊಂಡಿದ್ದ ಈ ಚಿರತೆ ಬಿದ್ದಿದೆ. ಕೂಡಲೇ ಎಚ್ಚೆತ್ತ ಕುರಿಗಾಹಿಗಳು ಗಾಬರಿಗೊಳ್ಳದೆ ಅರಣ್ಯ ಇಲಾಖೆಗೆ ತುರ್ತು ಮಾಹಿತಿ ನೀಡಿದ್ದಾರೆ.
ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ಧಾವಿಸಿದ ಡಿಎಫ್‌ಒ (DFO) ಸಂತೋಷ್ ಕುಮಾರ್ ಕೆಂಚೆಪ್ಪನವರ್ ಅವರ ನೇತೃತ್ವದ ಅರಣ್ಯ ಇಲಾಖೆ ತಂಡವು ಕಾರ್ಯಾಚರಣೆ ನಡೆಸಿತು. ಸಿಬ್ಬಂದಿಗಳು ಬಹಳ ಎಚ್ಚರಿಕೆಯಿಂದ ಪೈಪ್‌ನಲ್ಲಿದ್ದ ಚಿರತೆಯನ್ನು ಯಶಸ್ವಿಯಾಗಿ ರಕ್ಷಿಸಿದರು. ನಿತ್ರಾಣಗೊಂಡಿರುವ ಚಿರತೆಗೆ ಸದ್ಯ ಸ್ಥಳದಲ್ಲೇ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದ್ದು, ಚಿಕಿತ್ಸೆ ಪೂರ್ಣಗೊಂಡ ಬಳಿಕ ಅದನ್ನು ಸುರಕ್ಷಿತವಾಗಿ ಕಾಡಿಗೆ ಬಿಡಲಾಗುವುದು ಎಂದು ಡಿಎಫ್‌ಒ ಕೆಂಚಪ್ಪನವರ್ ಅವರು 'ಏಷ್ಯನೆಟ್ ಸುವರ್ಣ ನ್ಯೂಸ್'ಗೆ ಮಾಹಿತಿ ನೀಡಿದ್ದಾರೆ.
ಇನ್ನು ಕೃಷಿ ಹೊಂಡದ ಪೈಪ್‌ನಲ್ಲಿ ಚಿರತೆ ಸಿಕ್ಕಿಕೊಂಡಿದ್ದರಿಂದ ಕುರಿಗಾಹಿಗಳನ್ನು ಅದು ಬೆನ್ನಟ್ಟಿಕೊಂಡು ದಾಳಿ ಮಾಡಲಾಗಿಲ್ಲ. ಒಂದು ವೇಳೆ ಚಿರತೆ ಪೈಪ್‌ನಲ್ಲಿ ಸಿಕ್ಕಿಬೀಳದೇ ಅಡಗಿ ಕುಳಿತಿದ್ದರೆ ಕುರಿಗಾಹಿಗಳ ಮೇಲೆ ದಾಳಿ ಮಾಡುತ್ತಿತ್ತು. ಅಥವಾ ಜಮೀನಿಗೆ ಬಂದ ರೈತರ ಮೇಲಾದರೂ ದಾಳಿ ಮಾಡುವ ಸಂಭವ ಹೆಚ್ಚಾಗಿತ್ತು. ಆದರೆ, ಕುರಿಗಾಹಿಗಳ ಸಮಯೋಚಿತ ಮಾಹಿತಿಯಿಂದ ದೊಡ್ಡ ಅನಾಹುತ ತಪ್ಪಿದಂತಾಗಿದೆ.