ಪಾಸ್‌ಪೋರ್ಟ್ ಇಲ್ಲದಿದ್ರೂ 55 ದಿನ ಮೈಸೂರಲ್ಲಿದ್ದ ಅಮೆರಿಕನ್!

Kannadaprabha News   | Kannada Prabha
Published : Jul 17, 2026, 06:39 AM IST
Jordan Brown

ಸಾರಾಂಶ

ಪಾಸ್‌ಪೋರ್ಟ್‌ ಮತ್ತು ವೀಸಾ ಇಲ್ಲದೆ ಸಮುದ್ರ ಮಾರ್ಗವಾಗಿ ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಿದ್ದ ಅಮೆರಿಕದ ಪ್ರಜೆ ಜೋರ್ಡಾನ್ ಬ್ರೌನ್‌ನನ್ನು ಭಾರತ-ನೇಪಾಳ ಗಡಿಯಲ್ಲಿ ಬಂಧಿಸಲಾಗಿದೆ. ಗೋವಾ, ಮೈಸೂರು ಮತ್ತು ಬೆಂಗಳೂರಲ್ಲೂ ತಂಗಿದ್ದು, ಈತನ ನಿಗೂಢ ಪ್ರಯಾಣದ ಬಗ್ಗೆ ಭದ್ರತಾ ಏಜೆನ್ಸಿಗಳು ತನಿಖೆ ನಡೆಸುತ್ತಿವೆ.

  • ಯಾವುದೇ ಪಾಸ್‌ಪೋರ್ಟ್‌, ವೀಸಾ ಇರಲಿಲ್ಲ । ಸಮುದ್ರ ಮಾರ್ಗದಲ್ಲಿ ಭಾರತ ಪ್ರವೇಶ
  • ಇತ್ತೀಚೆಗೆ ಉ.ಪ್ರ.-ನೇಪಾಳ ಗಡಿಯಲ್ಲಿ ನೇಪಾಳಕ್ಕೆ ಹೋಗಲು ಯತ್ನಿಸಿದಾಗ ಸೆರೆ

ಬ್ರೌನ್‌ ಹಾದಿ

- 2025ರ ನ.2ರಂದು ಸಮುದ್ರ ಮಾರ್ಗದಲ್ಲಿ ಭಾರತ ಪ್ರವೇಶ. ಮೇ 7 ರವರೆಗೆ ಗೋವಾದಲ್ಲಿ ವಾಸ

- ಬಳಿಕ ಕರ್ನಾಟಕದ ಮೈಸೂರಿಗೆ ಪ್ರಯಾಣ ಅಲ್ಲಿ ಮೇ 14ರಿಂದ ಜುಲೈ 7ರವರೆಗೆ ವಾಸ್ತವ್ಯ

- ನಂತರ ಜುಲೈ 8ರಂದು ಬೆಂಗಳೂರಿಗೆ ಮತ್ತು ಜುಲೈ 9ರಂದು ಹೈದರಾಬಾದ್‌ಗೆ ಪ್ರಯಾಣ

- ಜುಲೈ 10 ರಂದು ಮಧ್ಯಪ್ರದೇಶದ ಮೂಲಕ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ಕ್ಕೆ ಆಗಮನ

- ನಂತರ ಉ.ಪ್ರ.ದ ಮಹಾರಾಜ್‌ಗಂಜ್‌ ಜಿಲ್ಲೆಯ ನೇಪಾಳ ಗಡಿಗೆ । ಅಲ್ಲಿ ಬಂಧನ

ನವದೆಹಲಿ (ಜು.17): ಭಾರತ-ನೇಪಾಳದ ಗಡಿಯಲ್ಲಿ ಮಾನ್ಯ ದಾಖಲೆಗಳಿಲ್ಲದೆ ನೇಪಾಳಕ್ಕೆ ಪ್ರವೇಶಿಸಲು ಯತ್ನಿಸುತ್ತಿದ್ದ ಅಮೆರಿಕದ ಪ್ರಜೆ ಜೋರ್ಡಾನ್‌ ಬ್ರೌನ್‌ (36) ಎಂಬಾತನನ್ನು ಇತ್ತೀಚೆಗೆ ಉತ್ತರ ಪ್ರದೇಶದ ಮಹಾರಾಜ್‌ ಗಂಜ್‌ ಪೊಲೀಸರು ಬಂಧಿಸಿದ್ದಾರೆ. ಈತನ ಬಳಿ ಯಾವುದೇ ಪಾಸ್‌ಪೋರ್ಟ್‌ ಆಗಲಿ, ವೀಸಾ ಆಗಲಿ ಇರಲಿಲ್ಲ, ಸಮುದ್ರ ಮಾರ್ಗದಿಂದ ಭಾರತಕ್ಕೆ ಬಂದಿದ್ದ ಎಂಬ ಸ್ಫೋಟಕ ವಿಚಾರ ಆಗ ಗೊತ್ತಾಗಿತ್ತು. ಇದೀಗ ವಿಚಾರಣೆ ವೇಳೆ ಈತ ಬೆಂಗಳೂರು ಹಾಗೂ ಮೈಸೂರಿಗೂ ಆಗಮಿಸಿದ್ದ. ಬೆಂಗಳೂರಲ್ಲಿ 1 ದಿನ ಹಾಗೂ ಮೈಸೂರಲ್ಲಿ 55 ದಿನ ತಂಗಿದ್ದ ಎಂದು ಗೊತ್ತಾಗಿದೆ.

ತನ್ನನ್ನು ತಾನು ಅಮೆರಿಕ ನೌಕಾಪಡೆ ಹಾಗೂ ವಿಶೇಷ ಪಡೆಯ ಮಾಜಿ ಸಿಬ್ಬಂದಿ ಎಂದು ಹೇಳಿಕೊಂಡಿರುವ ಆತನ ಭಾರತ ಪ್ರವೇಶಿಸಿದ ರೀತಿಯೇ ತನಿಖಾ ಸಂಸ್ಥೆಗಳನ್ನು ದಂಗಾಗಿಸಿದೆ. ಆತ ತನ್ನ ಪ್ರಯಾಣದ ಬಗ್ಗೆ ವಿವರಿಸುತ್ತಾ, ‘ನಾನು ಪ್ರವಾಸಿ ವೀಸಾದ ಮೇಲೆ ಥಾಯ್ಲೆಂಡ್‌ಗೆ ಹೋಗಿದ್ದೆ. ಅಲ್ಲಿ ನನ್ನ ಪಾಸ್‌ಪೋರ್ಟ್ ಕಳೆದುಹೋಯಿತು. ನಂತರ ಅಲ್ಲಿಂದ ಸಮುದ್ರ ಮಾರ್ಗವಾಗಿ ಶ್ರೀಲಂಕಾಕ್ಕೆ ತಲುಪಿ, ಅಲ್ಲಿಂದ 2025ರ ನವೆಂಬರ್ 2 ರಂದು ಸಮುದ್ರ ಮಾರ್ಗದ ಮೂಲಕವೇ ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಿದೆ. ಬಳಿಕ ಗೋವಾದಲ್ಲಿದ್ದೆ’ ಎಂದು ತಿಳಿಸಿದ್ದಾನೆ.

ಮೈಸೂರು, ಬೆಂಗಳೂರಲ್ಲೂ ವಾಸ:

ಮೂಲಗಳ ಪ್ರಕಾರ, ಬ್ರೌನ್ 2025ರ ನ.2ರಂದು ಭಾರತ ಪ್ರವೇಶಿಸಿದ ಬಳಿಕ ಮೇ 7 ರವರೆಗೆ ಗೋವಾದ ಕಾಣಕೋಣದಲ್ಲಿ ಉಳಿದುಕೊಂಡಿದ್ದ. ಬಳಿಕ ಕರ್ನಾಟಕದ ಮೈಸೂರಿಗೆ ಪ್ರಯಾಣ ಬೆಳೆಸಿದ. ಅಲ್ಲಿ ಮೇ 14ರಿಂದ ಜುಲೈ 7ರವರೆಗೆ ಇದ್ದ. ನಂತರ ಜುಲೈ 8ರಂದು ಬೆಂಗಳೂರಿಗೆ ಮತ್ತು ಜುಲೈ 9ರಂದು ಹೈದರಾಬಾದ್‌ಗೆ ತೆರಳಿದ. ಜುಲೈ 10 ರಂದು ಮಧ್ಯಪ್ರದೇಶದ ಬಂದೋಲ್, ಸಿಯೋನಿ ಮೂಲಕ ಪ್ರಯಾಣಿಸಿ ನಂತರ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ ತಲುಪಿದ. ನಂತರ ನೇಪಾಳ ಗಡಿಗೆ ಬಂದಿದ್ದ.

ಸಿನಿಮೀಯ ಚೇಸ್‌, ಬಂಧನ:

ಜುಲೈ 11 ರಂದು ಸೋನೌಲಿ ಗಡಿಯ ಮೂಲಕ ನೇಪಾಳಕ್ಕೆ ಹೋಗಲು ಯತ್ನಿಸುತ್ತಿದ್ದಾಗ, ನಿಯಮಿತ ತಪಾಸಣೆಯ ವೇಳೆ ಎಸ್‌ಎಸ್‌ಬಿ (ಸೀಮಾ ಸುರಕ್ಷಾ ಬಲ) ಸಿಬ್ಬಂದಿ ಆತನನ್ನು ತಡೆದಿದ್ದಾರೆ. ಈ ವೇಳೆ ಆತ ಅಲ್ಲಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದು, ಕಿಲೋಮೀಟರ್‌ಗಟ್ಟಲೆ ಚೇಸ್ ಬಳಿಕ ಪೊಲೀಸರು ಆತನನ್ನು ಸೆರೆಹಿಡಿದಿದ್ದಾರೆ. ಆತನ ಬಳಿ ಆಗ 31 ಸಾವಿರ ರು. ನಗದು ಸಿಕ್ಕಿದೆ. ಯಾವುದೇ ಪ್ರಯಾಣ ದಾಖಲೆ ಇರಲಿಲ್ಲ.

ಕಾನೂನು ಕ್ರಮ ಮತ್ತು ತನಿಖೆ:

ಮಹಾರಾಜ್‌ಗಂಜ್‌ನ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಿದ್ಧಾರ್ಥ್ ಮಾತನಾಡಿ, ‘ಜೋರ್ಡಾನ್ ಬ್ರೌನ್ ಬಳಿ ಯಾವುದೇ ಮಾನ್ಯವಾದ ವೀಸಾ ಅಥವಾ ಪ್ರಯಾಣ ದಾಖಲೆಗಳು ಪತ್ತೆಯಾಗಿಲ್ಲ. ಈ ಹಿನ್ನೆಲೆಯಲ್ಲಿ ಅಕ್ರಮ ಪ್ರವೇಶ ಪ್ರಕರಣ ದಾಖಲಿಸಲಾಗಿದೆ. ಪ್ರಸ್ತುತ ಅಮೆರಿಕ ಪ್ರಜೆಯ ಹೇಳಿಕೆಗಳನ್ನು ಭದ್ರತಾ ಏಜೆನ್ಸಿಗಳು ಮತ್ತು ಗುಪ್ತಚರ ಇಲಾಖೆಯು ಕೂಲಂಕಷವಾಗಿ ಪರಿಶೀಲಿಸುತ್ತಿದೆ. ಸಮುದ್ರ ಮಾರ್ಗದ ಮೂಲಕ ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಿರುವುದು ದೇಶದ ಭದ್ರತೆಯ ದೃಷ್ಟಿಯಿಂದ ಗಂಭೀರ ವಿಚಾರವಾಗಿದ್ದು, ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ’ ಎಂದಿದ್ದಾರೆ.

PREV
Read more Articles on
click me!

Recommended Stories

ಕಸ್ತೂರಿ ರಂಗನ್ ವರದಿ; ಪಶ್ಚಿಮ ಘಟ್ಟಗಳ ಬಗ್ಗೆ ಚರ್ಚಿಸಲು ಒಂದು ದಿನದ ವಿಶೇಷ ಅಧಿವೇಶನ: ಸಿಎಂ ಡಿಕೆಶಿ
Captain Abhimanyu: ಇದು ವಿದಾಯವಲ್ಲ, ಒಂದು ಯುಗದ ಅಂತ್ಯಕ್ಕೆ ಸಂದ ಗೌರವ; ಕೂಬಿಂಗ್ ಸ್ಪೆಷಲಿಸ್ಟ್‌ ಕ್ಯಾಪ್ಟನ್‌ ಅಭಿಮನ್ಯುವಿಗೆ ಭಾವುಕ ಬೀಳ್ಕೊಡುಗೆ!