ಕೊಪ್ಪಳ ನವೀಕೃತ ರೈಲ್ವೆ ನಿಲ್ದಾಣ ಉದ್ಘಾಟನೆಗೂ ಮುನ್ನವೇ ಸೋರಿಕೆ; ಬಯಲಾಯ್ತು ಕಳಪೆ ಕಾಮಗಾರಿ!

Published : Jul 16, 2026, 11:02 PM IST
Koppal Railway Station

ಸಾರಾಂಶ

ಕೊಪ್ಪಳದಲ್ಲಿ ನವೀಕರಣಗೊಂಡ ರೈಲ್ವೆ ನಿಲ್ದಾಣವು ಮೊದಲ ಮಳೆಗೇ ಸೋರಲಾರಂಭಿಸಿದೆ. ಪ್ರಧಾನಿ ನರೇಂದ್ರ ಮೋದಿಯವರಿಂದ ಉದ್ಘಾಟನೆಗೊಳ್ಳುವ ಮುನ್ನವೇ ಈ ಘಟನೆ ನಡೆದಿದ್ದು, ಕೋಟ್ಯಂತರ ರೂಪಾಯಿ ವೆಚ್ಚದ ಕಾಮಗಾರಿಯ ಗುಣಮಟ್ಟದ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೊಪ್ಪಳ (ಜು.16): ಕೊಪ್ಪಳ ಜಿಲ್ಲೆಯಲ್ಲಿ ಕಳೆದೆರಡು ದಿನಗಳಿಂದ ಸುರಿಯುತ್ತಿರುವ ನಿರಂತರ ಮಳೆಯು ರೈಲ್ವೆ ಇಲಾಖೆಯ 'ಅಧ್ವಾನ'ವೊಂದನ್ನು ಜಗಜ್ಜಾಹೀರು ಮಾಡಿದೆ. ನವೀಕರಣಗೊಂಡು ಉದ್ಘಾಟನೆಗೆ ಸಜ್ಜಾಗಿದ್ದ ಕೊಪ್ಪಳ ರೈಲ್ವೆ ನಿಲ್ದಾಣವು ಮೊದಲ ಮಳೆಗೇ ಸೋರಲಾರಂಭಿಸಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ನಾಳೆ ಪ್ರಧಾನಿ ಮೋದಿಯಿಂದ ಉದ್ಘಾಟನೆ:

ವಿಶೇಷವೆಂದರೆ, ಈ ನವೀಕೃತ ರೈಲ್ವೆ ನಿಲ್ದಾಣವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನಾಳೆ (ಸೋಮವಾರ) ವರ್ಚುವಲ್ ಮೂಲಕ ಉದ್ಘಾಟಿಸಬೇಕಿದೆ. ಉದ್ಘಾಟನಾ ಸಮಾರಂಭಕ್ಕಾಗಿ ನಿಲ್ದಾಣದ ಆವರಣದಲ್ಲಿ ಭವ್ಯವಾದ ವೇದಿಕೆ, ಅತ್ಯಾಧುನಿಕ ಸೌಂಡ್ ಸಿಸ್ಟಮ್ ಮತ್ತು ಗಣ್ಯರಿಗಾಗಿ ನೂರಾರು ಕುರ್ಚಿಗಳನ್ನು ಅಳವಡಿಸಲಾಗಿತ್ತು. ಆದರೆ, ನಿಲ್ದಾಣದ ಮೇಲ್ಛಾವಣಿ ಸೋರುತ್ತಿರುವ ಕಾರಣ ಹಾಕಲಾಗಿದ್ದ ಸೌಂಡ್ ಬಾಕ್ಸ್‌ಗಳು ಮತ್ತು ಕುರ್ಚಿಗಳು ನೀರಿನಲ್ಲಿ ನೆನೆದು ಹೋಗಿವೆ.

ನೀರಿನಲ್ಲಿ ತೇಲಿದ ಸಿದ್ಧತೆ:

ನಿಲ್ದಾಣದ ಒಳಭಾಗದಲ್ಲಿ ಮಳೆ ನೀರು ಜಲಪಾತದಂತೆ ಸುರಿಯುತ್ತಿದ್ದು, ಕಾರ್ಯಕ್ರಮಕ್ಕಾಗಿ ಮಾಡಿಕೊಂಡಿದ್ದ ಸಿದ್ಧತೆಗಳೆಲ್ಲವೂ ಮಳೆಗೆ ಆಹುತಿಯಾಗಿವೆ. ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನಿಲ್ದಾಣವನ್ನು ನವೀಕರಿಸಲಾಗಿದೆ ಎಂದು ಹೇಳಲಾಗುತ್ತಿದ್ದರೂ, ಮೊದಲ ಮಳೆಗೇ ಸೋರುತ್ತಿರುವುದು ಕಾಮಗಾರಿಯ ಗುಣಮಟ್ಟವನ್ನು ಪ್ರಶ್ನಿಸುವಂತೆ ಮಾಡಿದೆ.

ಸಾರ್ವಜನಿಕರ ಆಕ್ರೋಶ:

‘ಪ್ರಧಾನ ಮಂತ್ರಿಗಳು ಉದ್ಘಾಟನೆ ಮಾಡುವ ಮುನ್ನವೇ ನಿಲ್ದಾಣದ ಸ್ಥಿತಿ ಹೀಗಾದರೆ, ಮುಂದೆ ಜನಸಾಮಾನ್ಯರ ಗತಿ ಏನು?’ ಎಂದು ಸ್ಥಳೀಯರು ಪ್ರಶ್ನಿಸುತ್ತಿದ್ದಾರೆ. ಅಧಿಕಾರಿಗಳು ಮತ್ತು ಗುತ್ತಿಗೆದಾರರ ನಿರ್ಲಕ್ಷ್ಯದಿಂದಾಗಿ ಕಳಪೆ ಕಾಮಗಾರಿ ನಡೆದಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗಿರುವ ಬೆನ್ನಲ್ಲೇ ಈ ಘಟನೆ ನಡೆದಿರುವುದು ರೈಲ್ವೆ ಇಲಾಖೆಗೆ ಭಾರೀ ಮುಜುಗರ ಉಂಟುಮಾಡಿದೆ.

PREV
Read more Articles on
click me!

Recommended Stories

ಬೆಂಗಳೂರಿನಲ್ಲಿ ರಾತ್ರೋರಾತ್ರಿ 2500 ಕೆಜಿ ದ್ರಾಕ್ಷಿ ಕದ್ದ ಕಳ್ಳರು, ಕಣ್ಣೀರಿಟ್ಟ ರೈತ!
ವಿಜಯಪುರ ರೈತರ ದಶಕದ ಸಂಕಷ್ಟಕ್ಕೆ ಮುಕ್ತಿ; ಮಮದಾಪುರ ಕೆರೆ ಮುಳುಗಡೆ ಪ್ರದೇಶಕ್ಕೆ ₹42 ಕೋಟಿ ಪರಿಹಾರ!