ಶಿರಾಡಿಘಾಟ್‌ ಸುರಂಗ ಮಾರ್ಗ ನಿರ್ಮಾಣದ ಮೆಗಾ ಯೋಜನೆ ಕೇಂದ್ರದ ಮುಂದಿದೆ: ಸದಾನಂದಗೌಡ

By Girish Goudar  |  First Published May 22, 2022, 8:11 AM IST

*  ಪುತ್ತೂರಲ್ಲಿ ರೈಲು ಅಂಡರ್‌ಪಾಸ್‌ ಯೋಜನೆಗೆ ಗುದ್ದಲಿಪೂಜೆ
*  ಘಾಟಿಯಲ್ಲಿ ನಿರ್ಮಾಣವಾದರೆ ಇದೊಂದು ಕ್ರಾಂತಿಕಾರಿ ವಿದ್ಯಮಾನ
*  ರಾಜ್ಯದಲ್ಲಿ ಎಪಿಎಂಸಿಗಳು ಒಂದಷ್ಟು ಸಂಕಷ್ಟದಲ್ಲಿವೆ


ಪುತ್ತೂರು(ಮೇ.22): ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಶಿರಾಡಿ ಘಾಟಿಗೆ ಸುರಂಗ ಮಾರ್ಗ ನಿರ್ಮಿಸುವ ಮೆಗಾ ಯೋಜನೆ ಕೇಂದ್ರ ಸರ್ಕಾರದ ಮುಂದಿದೆ. ಈಗಾಗಲೇ ಈ ಯೋಜನೆ ಜಾರಿ ಒಂದಷ್ಟು ವಿಳಂಬವಾಗಿದ್ದರೂ ಅನುಷ್ಠಾನ ಆಗುವುದು ಖಚಿತ ಎಂದು ಮಾಜಿ ಮುಖ್ಯಮಂತ್ರಿ, ಕೇಂದ್ರದ ಮಾಜಿ ಸಚಿವ ಡಿ.ವಿ. ಸದಾನಂದ ಗೌಡ ಹೇಳಿದರು. ಪುತ್ತೂರಿನ ಎಪಿಎಂಸಿ ರಸ್ತೆಯಲ್ಲಿ ನಿರ್ಮಾಣವಾಗಲಿರುವ ರೈಲ್ವೆ ಅಂಡರ್‌ಪಾಸ್‌ ಯೋಜನೆಗೆ ಶನಿವಾರ ಗುದ್ದಲಿಪೂಜೆ ನೆರವೇರಿಸಿ ಅವರು ಮಾತನಾಡಿದರು.

ಶಿರಾಡಿ ತಪ್ಪಲಿನಿಂದ ಮುಂದಕ್ಕೆ 17 ಕಿ.ಮೀ. ಉದ್ದದ ಸುರಂಗ ಮಾರ್ಗ ಘಾಟಿಯಲ್ಲಿ ನಿರ್ಮಾಣವಾದರೆ ಇದೊಂದು ಕ್ರಾಂತಿಕಾರಿ ವಿದ್ಯಮಾನವಾಗಲಿದೆ. ಈಗಾಗಲೇ ಜಪಾನಿನ ಜೈಕೋ ಕಂಪನಿಯಿಂದ ಸಮೀಕ್ಷೆ ಕಾರ್ಯ ನಡೆಸಲಾಗಿದೆ. ಕೇಂದ್ರ ಸರ್ಕಾರದ ಮುಂದೆ ಈ ಯೋಜನೆ ಇದೆ. ಸಚಿವ ನಿತಿನ್‌ ಗಡ್ಕರಿ ಜತೆ ನಾವು ಅನೇಕ ಬಾರಿ ಮಾತನಾಡಿದ್ದೇವೆ. ಯೋಜನೆ ಜಾರಿಗೆ ಬರುವುವುದು ನಿಶ್ಚಿತ ಎಂದವರು ನುಡಿದರು.

Tap to resize

Latest Videos

CRZ ವ್ಯಾಪ್ತಿಯ ಮರಳು ಮಾರುವಂತಿಲ್ಲ ಎನ್‌ಜಿಟಿ ಆದೇಶ

ಸಂಸದ ನಳಿನ್‌ ಕುಮಾರ್‌ ಕಟೀಲ್‌ ಮಾತನಾಡಿ, ನಾನು ಮೊದಲ ಬಾರಿ ಸಂಸದನಾಗಿದ್ದಾಗ ಕೇಂದ್ರದ ಮನಮೋಹನ ಸಿಂಗ್‌ ಸರ್ಕಾರ ಜಿಲ್ಲೆಗೆ 9 ಸಾವಿರ ಕೋಟಿ ಅನುದಾನ ನೀಡಿತ್ತು. ಮೋದಿ ಪ್ರಧಾನಿಯಾಗಿ ನಾನು 2ನೇ ಬಾರಿ ಸಂಸದನಾದಾಗ 14 ಸಾವಿರ ಕೋಟಿ ಬಂತು. ಈಗ 3ನೇ ಬಾರಿ ಸಂಸದನಾಗಿ ಕೇವಲ 3 ವರ್ಷ ಅವಧಿಯಲ್ಲೇ 20 ಸಾವಿರ ಕೋಟಿ ಅನುದಾನ ಬಂದಿದೆ ಎಂದರು.

ದ.ಕ. ಜಿಲ್ಲೆಗೆ ಈಗಾಗಲೇ ಅನೇಕ ರೈಲ್ವೆ ಅಂಡರ್‌ಪಾಸ್‌ ಮಂಜೂರಾಗಿದೆ. ರೈಲ್ವೆ ಯೋಜನೆ ಮಂಜೂರು ಮಾಡುವುದು ಬಹಳ ಕಷ್ಟ. ಆದರೂ ಪುತ್ತೂರು ಎಪಿಎಂಸಿ ಅಧ್ಯಕ್ಷ ದಿನೇಶ್‌ ಮೆದು ಅವರು ಬೆನ್ನುಬಿಡದೆ ನಮ್ಮನ್ನೆಲ್ಲ ಬಳಸಿಕೊಂಡು ಈ ಯೋಜನೆ ಮಂಜೂರು ಮಾಡಿಸಿದ್ದಾರೆ. ಭವಿಷ್ಯದಲ್ಲಿ ಮಾನವ ರಹಿತ ಕ್ರಾಸಿಂಗ್‌ ನಿರ್ಮಾಣ ರೈಲ್ವೆ ಉದ್ದೇಶ. ಇದಕ್ಕಾಗಿ ಎಲ್ಲ ಕಡೆ ಅಂಡರ್‌ಪಾಸ್‌ಗಳಾಗುತ್ತಿವೆ ಎಂದರು.

ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ರಾಜ್ಯದಲ್ಲಿ ಎಪಿಎಂಸಿಗಳು ಒಂದಷ್ಟು ಸಂಕಷ್ಟದಲ್ಲಿವೆ. ಹೀಗಾಗಿ ಎಪಿಎಂಸಿಗಳ ಅಭಿವೃದ್ಧಿಗಾಗಿ ನಬಾರ್ಡ್‌ ನೆರವಿನ ಮೂಲಕ 200 ಕೋಟಿ ರು.ಗಳನ್ನು ಸರ್ಕಾರ ಒದಗಿಸುತ್ತಿದೆ. ಅಗತ್ಯ ಬಿದ್ದಲ್ಲಿ ಇನ್ನೂ 300 ಕೋಟಿ ಒದಗಿಸಲು ಬದ್ಧವಾಗಿದೆ ಎಂದರು.

ಮೀನುಗಾರಿಕೆ ಸಚಿವ ಎಸ್‌. ಅಂಗಾರ ಮಾತನಾಡಿದರು. ಶಾಸಕ ಸಂಜೀವ ಮಠಂದೂರು ಸಭಾಧ್ಯಕ್ಷತೆ ವಹಿಸಿದ್ದರು.

Mangaluru: ಶಾಲೆಯಲ್ಲಿ ಶಸ್ತ್ರಾಸ್ತ್ರ ತರಬೇತಿ ತಾಲಿಬಾನ್‌ ಸಂಸ್ಕೃತಿ: ಖಾದರ್‌

ಎಪಿಎಂಸಿ ಪ್ರಾಂಗಣದಲ್ಲಿರುವ ನವೀಕೃತ ವಸತಿ ಗೃಹವನ್ನು ಉದ್ಘಾಟಿಸಲಾಯಿತು. ವಿಧಾನ ಪರಿಷತ್‌ ಸದಸ್ಯ ಪ್ರತಾಪಸಿಂಹ ನಾಯಕ್‌, ಸಹಾಯಕ ಆಯುಕ್ತ ಗಿರೀಶ್‌ ನಂದನ್‌, ನಗರಸಭೆ ಅಧ್ಯಕ್ಷ ಜೀವಂಧರ ಜೈನ್‌, ಪುತ್ತೂರು ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಭಾಮಿ ಅಶೋಕ್‌ ಶೆಣೈ, ಪುತ್ತೂರು ಎಪಿಎಂಸಿ ಅಡಕೆ ವರ್ತಕರ ಸಂಘ ಅಧ್ಯಕ್ಷ ಬಳ್ಳಮಜಲು ರವೀಂದ್ರನಾಥ ರೈ ಉಪಸ್ಥಿತರಿದ್ದರು.

ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಅಮೈ ಮಹಾಲಿಂಗ ನಾಯ್ಕ, ಹರೇಕಳ ಹಾಜಬ್ಬ, ಸಹಕಾರಿ ರತ್ನ ಪ್ರಶಸ್ತಿ ಪುರಸ್ಕೃತ ಸವಣೂರು ಕೆ. ಸೀತಾರಾಮ ರೈ, ಕೃಷಿ ಸಾಧಕ ಮಹಿಳೆ ಲಕ್ಷ್ಮೀ ರಾಜೇಶ್‌ ಎರ್ಕಮನೆ ಅವರನ್ನು ಸನ್ಮಾನಿಸಲಾಯಿತು. 
ಕೇಂದ್ರದ ಮಾಜಿ ಸಚಿವರು, ಸಂಸದರು, ಸಚಿವರು ಮತ್ತು ಶಾಸಕರನ್ನು ಗೌರವಿಸಲಾಯಿತು. ಎಪಿಎಂಸಿ ಅಧ್ಯಕ್ಷ ದಿನೇಶ್‌ ಮೆದು ಅವರನ್ನು ಅಡಕೆ ವರ್ತಕರ ಸಂಘ, ಎಪಿಎಂಸಿ ನಿರ್ದೇಶಕರ ಪರವಾಗಿ ವಿಶೇಷವಾಗಿ ಸನ್ಮಾನಿಸಲಾಯಿತು. ಪ್ರಾಸ್ತಾವಿಕ ಭಾಷಣದಲ್ಲಿ ದಿನೇಶ್‌ ಮೆದು ಅವರು ರೈಲ್ವೆ ಅಂಡರ್‌ಪಾಸ್‌ ಯೋಜನೆ ಬಗ್ಗೆ ವಿವರಿಸಿದರು. ಉಪಾಧ್ಯಕ್ಷ ಮಂಜುನಾಥ ಎನ್‌.ಎಸ್‌. ವಂದಿಸಿದರು. ರಾಕೇಶ್‌ ರೈ ಕೆಡೆಂಜಿ ನಿರ್ವಹಿಸಿದರು. ತೇಜಸ್ವಿನಿ ರೈತ ಗೀತ ಹಾಡಿದರು.
 

click me!