'ಕೊರೋನಾ ಹೆಸರಲ್ಲಿ ಯಡಿಯೂರಪ್ಪ ಸರ್ಕಾರ ಹಣ ಕೊಳ್ಳೆ ಹೊಡೆಯುತ್ತಿದೆ'

By Kannadaprabha NewsFirst Published Sep 14, 2020, 11:30 AM IST
Highlights

ನೀರಾವರಿ ಯೋಜನೆಗಳ ಜಾರಿಯಲ್ಲಿ ಮಿನಮೇಷ ತೋರಿದರೆ ರೈತರನ್ನು ಒಗ್ಗೂಡಿಸಿ ಸರ್ಕಾರದ ಆಡಳಿತದ ವಿರುದ್ಧ ಬೃಹತ್‌ ಪ್ರತಿಭಟನೆ ನಡೆಸಬೇಕಾಗುತ್ತದೆ: ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ| ಈಗಾಗಲೇ ರೈತರು, ಸಾರ್ವಜನಿಕರು, ಬಡವರು ಸರ್ಕಾರದ ಕಾರ್ಯವೈಖರಿ ಬಗ್ಗೆ ರೋಸಿ ಹೋಗಿದ್ದು, ಸರ್ಕಾರದ ವಿರುದ್ಧ ಬಂಡೇಳಲಿದ್ದಾರೆ| 

ಶಿರಹಟ್ಟಿ(ಸೆ.14): ರಾಜ್ಯ ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದು ಎರಡೂವರೆ ವರ್ಷ ಮುಗಿಯುತ್ತಿದ್ದರೂ ಅಭಿವೃದ್ಧಿ ವಿಷಯದಲ್ಲಿ ಸಂಪೂರ್ಣ ವೈಫಲ್ಯ ಹೊಂದಿದೆ. ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ಕೊರೋನಾ ಹೆಸರಲ್ಲಿ ಸರ್ಕಾರದ ಸಚಿವರು ಹಣ ಕೊಳ್ಳೆ ಹಡೆಯುತ್ತಿದ್ದಾರೆ ಎಂದು ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ ಆರೋಪಿಸಿದರು.

ಭಾನುವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಹಿಂದೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರಸ್‌ ಸರ್ಕಾರ ರಾಜ್ಯದಲ್ಲಿ ಆಡಳಿತ ನಡೆಸಿದ ವೇಳೆ ಶಿರಹಟ್ಟಿವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯ ಅಭಿವೃದ್ಧಿಗೆ 3.450 ಕೋಟಿ ಅನುದಾನ ತರಲಾಗಿತ್ತು. ಆದರೆ ಬಿಜೆಪಿ ಸರ್ಕಾರ ಮತದಾರರಿಗೆ ನೀಡಿದ ಭರವಸೆಯನ್ನು ಇಡೇರಿಸದೇ ವಚನ ಭ್ರಷ್ಟವಾಗಿದೆ ಎಂದು ದೂರಿದರು.

ರೈತರಿಗೆ ಉಪಯುಕ್ತವಾಗುವ ಯಾವುದೇ ಯೋಜನೆಯನ್ನು ಜಾರಿಗೆ ತಂದಿಲ್ಲ. ತಾಲೂಕಿನಲ್ಲಿ ನಮ್ಮ ಹೊಲ ನಮ್ಮ ರಸ್ತೆ, ಚೆಕ್‌ಡ್ಯಾಂ ನಿರ್ಮಾಣವಾಗಿಲ್ಲ. ಬಡವರಿಗೆ ಮನೆ ಹಂಚಿಕೆಗಾಗಿ ಶಿರಹಟ್ಟಿವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯ ಮುಂಡರಗಿಯಲ್ಲಿ 25 ಎಕರೆ, ಶಿರಹಟ್ಟಿಯಲ್ಲಿ 5 ಎಕರೆ, ಲಕ್ಷೆ ್ಮೕಶ್ವರದಲ್ಲಿ 60 ಎಕರೆ ಜಮೀನ ಖರೀದಿಸಿದ್ದು, ಇವತ್ತಿನವರೆಗೂ ಫಲಾನುಭವಿಗಳನ್ನು ಆಯ್ಕೆ ಮಾಡಿ ಮನೆ ಹಂಚಿಕೆ ಮಾಡುತ್ತಿಲ್ಲ.

ಗದಗ: ಒಂದು ಕಾಲದಲ್ಲಿ ಹನಿ ನೀರಿಗೂ ಪರದಾಟ, ಇಂದು ಮನೆಗಳಲ್ಲಿ ಜಿನುಗುತ್ತಿದೆ ಅಂತರ್ಜಲ!

ನಮ್ಮ ಅಧಿಕಾರ ಅವಧಿಯಲ್ಲಿ ಬಸವಾ, ಇಂದಿರಾ ಆವಾಸ, ವಾಜಪೇಯಿ ವಸತಿ ಯೋಜನೆ ಅಡಿ 10 ಸಾವಿರ ಮನೆಗಳನ್ನು ಬಡವರಿಗೆ ಹಂಚಿಕೆ ಮಾಡಲಾಗಿತ್ತು. ಜಾಲವಾಡಗಿ ಏತನೀರಾವರಿ ಯೋಜನೆ, 1.049 ಕೋಟಿ ವೆಚ್ಚದ ಡಿಬಿಒಟಿ ಯೋಜನೆಯಡಿ ಪ್ರತಿ ಗ್ರಾಮಕ್ಕೂ ನೀರು ಕೊಡುವ ಯೋಜನೆ ನೆನೆಗುದಿಗೆ ಬಿದ್ದಿದೆ. . 140 ಕೋಟಿ ವೆಚ್ಚದ ಇಟಗಿ ಏತ ನೀರಾವರಿ ಯೋಜನೆ ಜಾರಿಯಾಗಿಲ್ಲ. ಅನ್ನಭಾಗ್ಯ ಯೋಜನೆಯಲ್ಲಿ ಅರ್ಹ ಫಲಾನುಭವಿಗಳ ಸುಮಾರು 60 ಲಕ್ಷ ಕಾರ್ಡ್‌ ರದ್ದುಮಾಡಿದ್ದು, 8 ತಿಂಗಳಿನಿಂದ ಅಂಗವಿಕಲ, ವಿಧವಾ, ವೃದ್ಧಾಪ್ಯ ವೇತನ ನೀಡಿಲ್ಲ. ಹೊಸದಾಗಿ ಅಂಗವಿಕಲರಿಗೆ ಪ್ರಮಾಣ ಪತ್ರ ನೀಡುತ್ತಿಲ್ಲ. ರೈತರಿಗೆ ಸಮರ್ಪಕ ಯೂರಿಯಾ ಗೊಬ್ಬರ ಪೂರೈಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದರು.

ರಾಜ್ಯದ ಜನತೆ ಬಿಜೆಪಿ ಸರ್ಕಾರದ ಮೇಲೆ ಇಟ್ಟ ಭರವಸೆ ಹುಸಿಯಾಗಿದೆ. ನಿತ್ಯ ಬಡ ಜನತೆ ಸಣ್ಣ ಪುಟ್ಟ ಕೆಲಸ ಕಾರ್ಯಕ್ಕೆ ಸರ್ಕಾರಿ ಕಚೇರಿ ಅಲೆಯುತ್ತಿದ್ದು ಯಾವುದೇ ಕೆಲಸ ಕಾರ್ಯಗಳು ಆಗುತ್ತಿಲ್ಲ. ತಾಲೂಕಿನ ಶಾಸಕ ರಾಮಣ್ಣ ಲಮಾಣಿ ಅಧಿಕಾರಿಗಳ ಮೇಲಿನ ಹಿಡಿತ ಕಳೆದುಕೊಂಡಿದ್ದು, ಜನತೆಗೆ ನೀಡಿದ ಭರವಸೆಯಂತೆ ಸ್ಪಂದಿಸುತ್ತಿಲ್ಲ ಎಂದು ದೂರಿದರು.

ನೀರಾವರಿ ಯೋಜನೆಗಳ ಜಾರಿಯಲ್ಲಿ ಮಿನಮೇಷ ತೋರಿದರೆ ರೈತರನ್ನು ಒಗ್ಗೂಡಿಸಿ ಸರ್ಕಾರದ ಆಡಳಿತದ ವಿರುದ್ಧ ಬೃಹತ್‌ ಪ್ರತಿಭಟನೆ ನಡೆಸಬೇಕಾಗುತ್ತದೆ. ಈಗಾಗಲೇ ರೈತರು, ಸಾರ್ವಜನಿಕರು, ಬಡವರು ಸರ್ಕಾರದ ಕಾರ್ಯವೈಖರಿ ಬಗ್ಗೆ ರೋಸಿ ಹೋಗಿದ್ದು, ಸರ್ಕಾರದ ವಿರುದ್ಧ ಬಂಡೇಳಲಿದ್ದಾರೆ ಎಂದರು.

ಶಿರಹಟ್ಟಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಹುಮಾಯೂನ್‌ ಮಾಗಡಿ, ಪಟ್ಟಣ ಪಂಚಾಯಿತಿ ಸದಸ್ಯ ಮಂಜುನಾಥ ಘಂಟಿ, ಪಪಂ ಮಾಜಿ ಅಧ್ಯಕ್ಷ ಬುಡನಶ್ಯಾ ಮಕಾನದಾರ, ವಿರುಪಾಕ್ಷ ನಂದೆಣ್ಣವರ, ಮಹಾಂತೇಶ ದಶಮನಿ, ಮಾಬೂಸಾಬ ಲಕ್ಷ್ಮೇಶ್ವರ, ಮಾಬೂಸಾಬ ಒಂಟಿ ಮತ್ತಿತರರು ಪತ್ರಿಕಗೋಷ್ಠಿಯಲ್ಲಿ ಇದ್ದರು.
 

click me!