ಕೊರೋನಾ ಹೊಡೆತ: ಇನ್ನೂ ಚೇತರಿಕೆ ಕಾಣದ ಸಾರಿಗೆ ಸಂಸ್ಥೆ

Kannadaprabha News   | Asianet News
Published : Sep 14, 2020, 10:48 AM IST
ಕೊರೋನಾ ಹೊಡೆತ: ಇನ್ನೂ ಚೇತರಿಕೆ ಕಾಣದ ಸಾರಿಗೆ ಸಂಸ್ಥೆ

ಸಾರಾಂಶ

82 ಮಾರ್ಗಗಳಲ್ಲಿ ಸಂಚರಿಸದ ಬಸ್‌| ಗ್ರಾಮೀಣರಿಗೆ ಖಾಸಗಿ ವಾಹನವೇ ಗತಿ| ಲಾಕ್‌ಡೌನ್‌ಗೂ ಮೊದಲು ಹಾವೇರಿ ವಿಭಾಗದ ಸಾರಿಗೆ ಬಸ್‌ಗಳಿಂದ ನಿತ್ಯ 50 ಲಕ್ಷ ಆದಾಯ ಸಂಗ್ರಹವಾಗುತ್ತಿತ್ತು| ಈಗ ನಿತ್ಯ  20 ರಿಂದ  25 ಲಕ್ಷ ಮಾತ್ರ ಆದಾಯ| 

ಹಾವೇರಿ(ಸೆ.14): ಕೊರೋನಾ ಲಾಕ್‌ಡೌನ್‌ ಸಂದರ್ಭದಲ್ಲಿ ಸ್ಥಗಿತಗೊಂಡಿದ್ದ ಸಾರಿಗೆ ಸಂಸ್ಥೆಯ ಬಸ್‌ ಸಂಚಾರ ಇದುವರೆಗೂ ಪೂರ್ಣಪ್ರಮಾಣದಲ್ಲಿ ಆರಂಭಗೊಂಡಿಲ್ಲ. ಜಿಲ್ಲೆಯ ಗ್ರಾಮೀಣ ಭಾಗ ಸೇರಿದಂತೆ 80ಕ್ಕೂ ಹೆಚ್ಚು ಮಾರ್ಗದಲ್ಲಿ ಬಸ್‌ ಸಂಚಾರ ಇನ್ನೂ ಕಾರ್ಯಾರಂಭಿಸದ ಹಿನ್ನೆಲೆ ಹಲವು ಕಡೆ ಪ್ರಯಾಣಿಕರು ಖಾಸಗಿ ವಾಹನಗಳನ್ನೇ ಅವಲಂಬಿಸುವಂತಾಗಿದೆ.

ಜಿಲ್ಲೆಯಲ್ಲಿ ಲಾಕ್‌ಡೌನ್‌ಗೆ ಮೊದಲು ಹಾವೇರಿ ವಿಭಾಗದ ಸಾರಿಗೆ ಬಸ್‌ಗಳು 502 ಮಾರ್ಗಗಳಲ್ಲಿ ಸಂಚಾರ ಮಾಡುತ್ತಿದ್ದವು. ಲಾಕ್‌ಡೌನ್‌ನಿಂದಾಗಿ ಎಲ್ಲ ಮಾರ್ಗಗಳ ಬಸ್‌ ಸಂಚಾರ ಬಂದ್‌ ಮಾಡಲಾಗಿತ್ತು. ಲಾಕ್‌ಡೌನ್‌ ಸಡಿಲಗೊಳಿಸಿದ ನಂತರ ಸರ್ಕಾರ ಅಗತ್ಯ ಸುರಕ್ಷತಾ ಕ್ರಮಗಳನ್ನು ಒಳಗೊಂಡ ಮಾರ್ಗಸೂಚಿ ಹೊರಡಿಸಿ ಬಸ್‌ ಸಂಚಾರಕ್ಕೆ ಅನುಮತಿ ನೀಡಿತ್ತು. ಜಿಲ್ಲೆಯಲ್ಲಿ ಸದ್ಯ 420 ಮಾರ್ಗಗಳಲ್ಲಿ ಬಸ್‌ ಸಂಚಾರ ಮಾಡುತ್ತಿದ್ದು, ಇನ್ನು 82ಕ್ಕೂ ಅಧಿಕ ಮಾರ್ಗಗಳಲ್ಲಿ ಬಸ್‌ ಸಂಚಾರ ಆರಂಭಗೊಂಡಿಲ್ಲ.

ಲಾಕ್‌ಡೌನ್‌ ಸಡಿಲಗೊಳಿಸಿದ ಆರಂಭದಲ್ಲಿ ಬಸ್‌ ಪ್ರಯಾಣಕ್ಕೆ ಜನರು ಹಿಂದೇಟು ಹಾಕಿದ್ದರಿಂದ ಸಾರಿಗೆ ಸಂಸ್ಥೆ ಆರ್ಥಿಕ ಸಂಕಷ್ಟಕ್ಕೆ ತುತ್ತಾಗುವಂತಾಗಿತ್ತು. ಹೀಗಾಗಿ ಸಾರಿಗೆ ಸಂಸ್ಥೆ ಗ್ರಾಮೀಣ ಭಾಗಗಳಿಗೆ ಸಂಚರಿಸುತ್ತಿದ್ದ ಕೆಲವು ಕಡೆಗಳಲ್ಲಿ ಬಸ್‌ ಬಂದ್‌ ಮಾಡಿದ್ದರೆ ಇನ್ನು ಕೆಲವು ಕಡೆಗಳಲ್ಲಿ ಅಗತ್ಯಕ್ಕೆ ತಕ್ಕಷ್ಟುಬಸ್‌ ಸಂಚಾರ ಆರಂಭಿಸಲಾಗಿದೆ. ಜಿಲ್ಲೆಯ ಬಹುತೇಕ ಗ್ರಾಮೀಣ ಪ್ರದೇಶದಲ್ಲಿ ಬಸ್‌ ಸಂಚಾರ ಮಾಡುತ್ತಿದ್ದು, ಹಂತ- ಹಂತವಾಗಿ ಎಲ್ಲ ಮಾರ್ಗಗಳಲ್ಲಿ ಸಮರ್ಪಕವಾಗಿ ಬಸ್‌ ಸಂಚಾರ ಆರಂಭಿಸಲಾಗುವುದು ಎಂದು ಸಂಸ್ಥೆಯ ಅಧಿಕಾರಿಗಳು ಹೇಳುತ್ತಿದ್ದಾರೆ.

ಹಾವೇರಿ: ಮುಚ್ಚಿದ ಗುಹೆಯಲ್ಲಿ ನಿರಾಹಾರಿಯಾಗಿ 62 ದಿನದ ಬಳಿಕ ಹೊರಬಂದ ಸ್ವಾಮೀಜಿ..!

ಖಾಸಗಿ ವಾಹನಗಳಿಗೆ ಮೊರೆ:

ಜಿಲ್ಲೆಯ ಕೆಲವೊಂದು ಗ್ರಾಮೀಣ ಭಾಗಗಳಲ್ಲಿ ಬಸ್‌ ಸಂಚಾರವಿಲ್ಲದೇ ಜನರಿಗೆ ಬಹಳಷ್ಟುಸಮಸ್ಯೆಯಾಗುತ್ತಿದೆ. ಕೊರೋನಾ ಆತಂಕದ ನಡುವೆಯೂ ಜನಜೀವನ ಸಹಜ ಸ್ಥಿತಿಗೆ ಮರಳುತ್ತಿದ್ದು, ಗ್ರಾಮೀಣ ಪ್ರದೇಶದಿಂದ ಆಸ್ಪತ್ರೆಗೆ ಬರುವವರು, ಉದ್ಯೋಗಿಗಳು, ಸರ್ಕಾರಿ, ಬ್ಯಾಂಕ್‌ ಸೇರಿದಂತೆ ಹಲವಾರು ಕೆಲಸ ಕಾರ್ಯಗಳಿಗೆ, ಜೀವನಾವಶ್ಯಕ ವಸ್ತುಗಳ ಖರೀದಿಗೆ ಜನರು ನಗರ- ಪಟ್ಟಣಗಳಿಗೆ ಆಗಮಿಸುತ್ತಿದ್ದಾರೆ. ಆದರೆ ಸಮರ್ಪಕ ಬಸ್‌ ಸೇವೆ ಇಲ್ಲದೇ ತೊಂದರೆ ಅನುಭವಿಸುತ್ತಿದ್ದು, ಅನಿವಾರ್ಯವಾಗಿ ದುಪ್ಪಟ್ಟು ಹಣ ನೀಡಿ ಖಾಸಗಿ ವಾಹನಗಳಿಗೆ ಮೊರೆ ಹೋಗುವಂತಾಗಿದೆ.

ಆದಾಯದಲ್ಲಿ ಚೇತರಿಕೆ:

ಲಾಕ್‌ಡೌನ್‌ಗೂ ಮೊದಲು ಹಾವೇರಿ ವಿಭಾಗದ ಸಾರಿಗೆ ಬಸ್‌ಗಳಿಂದ ನಿತ್ಯ 50 ಲಕ್ಷ ಆದಾಯ ಸಂಗ್ರಹವಾಗುತ್ತಿತ್ತು. ಆದರೆ ಈಗ ನಿತ್ಯ  20 ರಿಂದ  25 ಲಕ್ಷ ಮಾತ್ರ ಆದಾಯ ಬರುತ್ತಿದ್ದು, ಹಾವೇರಿ ವಿಭಾಗದ ಸಾರಿಗೆ ಸಂಸ್ಥೆ ಶೇ. 50ರಷ್ಟುನಷ್ಟಅನುಭವಿಸುತ್ತಿದೆ. ಲಾಕ್‌ಡೌನ್‌ ತೆರವುಗೊಂಡ ಬಳಿಕ ಸರ್ಕಾರದ ಮಾರ್ಗಸೂಚಿಯಂತೆ ಬಸ್‌ ಸಂಚಾರ ಆರಂಭಿಸಿದ ಸಂದರ್ಭದಲ್ಲಿ ಶೇ. 20 ರಿಂದ 30 ರಷ್ಟು ಮಾತ್ರ ಆದಾಯ ಸಂಗ್ರಹವಾಗುತ್ತಿತ್ತು. ಆದರೆ ಈಗ ಬಸ್‌ಗಳಲ್ಲಿ ಸಂಚರಿಸುವ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತಿದ್ದು, ಆದಾಯದಲ್ಲಿ ಚೇತರಿಕೆ ಕಂಡುಬರುತ್ತಿದೆ. ನಿತ್ಯ ಶೇ. 50 ರಷ್ಟು ಆದಾಯ ಸಂಗ್ರಹವಾಗುತ್ತಿದೆ. ಆದರೂ ಆದಾಯದ ಶೇ. 50 ರಷ್ಟು ನಷ್ಟದಲ್ಲಿಯೇ ಸಾರಿಗೆ ಸಂಸ್ಥೆಯ ಬಸ್‌ಗಳು ಸಂಚರಿಸುತ್ತಿವೆ.

ಜಿಲ್ಲೆಯಲ್ಲಿ ಎಲ್ಲ ಮಾರ್ಗಗಳಲ್ಲಿ ಬಸ್‌ ಸಂಚಾರ ಆರಂಭಿಸಿದರೆ, ಜನರು ಖಾಸಗಿ ವಾಹನಗಳ ಬದಲು ಕ್ರಮೇಣವಾಗಿ ಸಾರಿಗೆ ಬಸ್‌ಗಳಲ್ಲಿ ಸಂಚಾರಕ್ಕೆ ಮುಂದಾಗುತ್ತಾರೆ. ಈ ನಿಟ್ಟಿನಲ್ಲಿ ಸಾರಿಗೆ ಸಂಸ್ಥೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂಬುದು ಜನರ ಆಗ್ರಹವಾಗಿದೆ.

ಲಾಕ್‌ಡೌನ್‌ ತೆರವುಗೊಳಿಸಿದ ನಂತರ ಬಸ್‌ ಸಂಚಾರ ಆರಂಭಿಸಿದ ಸಂದರ್ಭದಲ್ಲಿ ಪ್ರಯಾಣಿಕರು ಇಲ್ಲದೇ ಸಂಸ್ಥೆ ಆರ್ಥಿಕ ನಷ್ಟ ಅನುಭವಿಸುವಂತಾಗುತ್ತು. ಆದರೆ ಈಗ ಬಸ್‌ಗಳಲ್ಲಿ ಸಂಚರಿಸುವ ಪ್ರಯಾಣಿಕರ ಸಂಖ್ಯೆ ಹೆಚ್ಚುತ್ತಿದ್ದು, ಸಂಸ್ಥೆಯ ಆದಾಯದಲ್ಲಿ ಚೇತರಿಕೆ ಆಗುತ್ತಿದೆ. ಹಂತ​- ಹಂತವಾಗಿ ಎಲ್ಲ ಮಾರ್ಗಗಳಲ್ಲಿ ಬಸ್‌ ಸಂಚಾರ ಆರಂಭಿಸಲಾಗುವುದು ಎಂದು ವಾಯವ್ಯ ಸಾರಿಗೆ ಸಂಸ್ಥೆ ವಿಭಾಗೀಯ ನಿಯಂತ್ರಕ ವಿ.ಎಸ್‌. ಜಗದೀಶ ತಿಳಿಸಿದ್ದಾರೆ.  

ಜಿಲ್ಲೆಯ ಗ್ರಾಮೀಣ ಭಾಗಕ್ಕೆ ಸಮರ್ಪಕವಾಗಿ ಬಸ್‌ ಸಂಚಾರ ಆರಂಭಿದ ಪರಿಣಾಮ ಸಮಸ್ಯೆಯಾಗುತ್ತಿದೆ. ನಗರ ಪಟ್ಟಣಗಳಿಗೆ ಬರಬೇಕಾದರೆ ಖಾಸಗಿ ವಾಹನಗಳನ್ನೇ ಅವಲಂಬಿಸಬೇಕಾಗಿದ್ದು, ಅಲ್ಲದೇ ಅವರು ಕೇಳಿದಷ್ಟುಹಣ ನೀಡುವಂತಾಗಿದೆ. ಕೂಡಲೇ ಗ್ರಾಮೀಣ ಭಾಗಕ್ಕೆ ಸಮರ್ಪಕ ಬಸ್‌ ಸೇವೆ ಆರಂಭಿಸಲು ಕ್ರಮ ಕೈಗೊಳ್ಳಬೇಕು ಎಂದು ಪ್ರಯಾಣಿಕ ಶ್ರೀಕಾಂತ ಕುರುಬರ ಹೇಳಿದ್ದಾರೆ. 
 

PREV
click me!

Recommended Stories

ರೈಲ್ವೆ ಮೂಲಸೌಕರ್ಯ ಅಭಿವೃದ್ಧಿಪಡಿಸಲು ಮೋದಿಯಿಂದ ಬದ್ಧತೆಯ ಕಾರ್ಯ: ಸಂಸದ ಬಿ.ವೈ.ರಾಘವೇಂದ್ರ
ಡಿವೈಡರ್‌ನಿಂದ ಹಾರಿ KSRTC ಬಸ್‌ಗೆ ಡಿಕ್ಕಿಯಾದ ಕಾರ್, ಮೂರು ಸಾವು ಚೆಲ್ಲಾಪಿಲ್ಲಿಯಾದ ಮೃತದೇಹಗಳು