
ಹುಬ್ಬಳ್ಳಿ(ಜ.06): ಕೇಂದ್ರ ಸರ್ಕಾರ ಅರಣ್ಯ, ಪರಿಸರ ಹಾಗೂ ಹವಾಮಾನ ಇಲಾಖೆಯಿಂದ ಕರ್ನಾಟಕಕ್ಕೆ ಅನುಮತಿ ನೀಡಿಲ್ಲ. ಮಲಪ್ರಭಾ ಜಲಾನಯನ ಪ್ರದೇಶಕ್ಕೆ ನೀರು ಹರಿಸಲು ಗೋವಾ ಬಿಡುವುದಿಲ್ಲ ಎಂದು ಗೋವಾ ಮುಖ್ಯಮಂತ್ರಿ ಹೇಳಿರುವುದು ಸರಿಯಲ್ಲವೆಂದು ಮಾಜಿ ಶಾಸಕ ಎನ್.ಎಚ್. ಕೋನರಡ್ಡಿ ಹೇಳಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಮಹದಾಯಿ ತಮಗೆ ತಾಯಿಯಷ್ಟೇ ಮುಖ್ಯ ಎಂದು ಗೋವಾ ಮುಖ್ಯಮಂತ್ರಿ ಡಾ. ಪ್ರಮೋದ ಸಾವಂತ ಹೇಳಿದ್ದು, ಕರ್ನಾಟಕದವರಿಗೂ ಮಹದಾಯಿ ‘ಮಹಾತಾಯಿ’ ಅಷ್ಟೇ ಮುಖ್ಯವಾಗಿದೆ. ಅದನ್ನು ಅವರು ಅರ್ಥಮಾಡಿಕೊಳ್ಳಬೇಕು. ಮುಂದಿನ 8ರಿಂದ 10 ದಿನಗಳಲ್ಲಿ ಮಹದಾಯಿ ಪ್ರಾಧಿಕಾರ ರಚಿಸಲು ಒತ್ತಾಯಿಸುವುದಾಗಿ ಮಾತನಾಡುತ್ತಿರುವುದು ಖಂಡನೀಯ ಎಂದಿದ್ದಾರೆ.
ನೀರಾವರಿ ಯೋಜನೆ ಹೆಸರಲ್ಲಿ ಕಾಂಗ್ರೆಸ್ ಡೊಂಬರಾಟ ಆಡ್ತಿದೆ: ಸಚಿವ ಆಚಾರ್
ಗೋವಾ, ಕರ್ನಾಟಕ ಮತ್ತು ಮಹಾರಾಷ್ಟ್ರದ ವಾದ-ವಿವಾದ ಕೇಳಿ ಈಗಾಗಲೇ ಎಲ್ಲ ನ್ಯಾಯಾಲಯಗಳಲ್ಲಿ ಆದೇಶ ಮಾಡಲಾಗಿದೆ. ಅದರಂತೆ 3 ರಾಜ್ಯಗಳು ನಡೆದುಕೊಳ್ಳಬೇಕು. ಕರ್ನಾಟಕ, ಗೋವಾ, ಮಹಾರಾಷ್ಟ್ರ ಹಾಗೂ ಕೇಂದ್ರ ಸರ್ಕಾರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಇದ್ದು, ವಿಶೇಷ ಆಸಕ್ತಿ ವಹಿಸಿ ಮಹದಾಯಿ ಯೋಜನೆ ಜಾರಿಗೊಳಿಸಬೇಕು. ಕೂಡಲೇ ಟೆಂಡರ್ ಕರೆದು ಕಾಮಗಾರಿ ಪ್ರಾರಂಭಿಸಬೇಕು. ಈಗಾಗಲೇ ಕಳಸಾ ಕಾಲುವೆ ಕಾಮಗಾರಿ ಮುಕ್ತಾಯ ಹಂತದಲ್ಲಿದ್ದು, ಅಣೆಕಟ್ಟು ನಿರ್ಮಿಸಿ ನೀರು ತಿರುವು ಮಾಡಬೇಕಾಗಿದೆ. ಬಂಡೂರಿ ನಾಲಾ ಕಾಮಗಾರಿ ಕೂಡಲೇ ಪ್ರಾರಂಭಿಸಬೇಕು ಎಂದು ಒತ್ತಾಯಿಸಿದ್ದಾರೆ.