
ಬೆಂಗಳೂರು(ಮಾ.16): ನಗರದ ರಾಜರಾಜೇಶ್ವರಿ ನಗರಕ್ಕೆ ಹೊಂದಿಕೊಂಡಂತೆ ಇರುವ ತುರಹಳ್ಳಿ ಅರಣ್ಯ ಪ್ರದೇಶದ 15-20 ಎಕರೆ ಪ್ರದೇಶದಲ್ಲಿ ಕಾಳ್ಗಿಚ್ಚು ಆವರಿಸಿ ಗಿಡ, ಮರಗಳು ಆಹುತಿಯಾಗಿದ್ದು, ಮೂರು ಗಂಟೆಗೂ ಹೆಚ್ಚಿನ ಕಾಲ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಂದಿಸಲಾಗಿದೆ.
ಬುಧವಾರ ಸಂಜೆ 6ರ ಸುಮಾರಿಗೆ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ಸ್ಥಳದಲ್ಲಿದ್ದ ಸಿಬ್ಬಂದಿ ಹಾಗೂ ಸ್ಥಳೀಯರು ಆರಂಭದಲ್ಲಿ ಬೆಂಕಿ ನಂದಿಸಲು ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ. ಅಗ್ನಿಯ ಕೆನ್ನಾಲಿಗೆ ಹರಡುತ್ತಿದ್ದಂತೆ ಸುತ್ತಲು ದಟ್ಟವಾಗಿ ಹೊಗೆ ಆವರಿಸಿತು. ಅರಣ್ಯ ಇಲಾಖೆ ಕಚೇರಿ, ಅಗ್ನಿಶಾಮಕ ದಳಕ್ಕೆ ಮಾಹಿತಿ ದೊರೆತ ತಕ್ಷಣ ಸ್ಥಳಕ್ಕೆ ಅಧಿಕಾರಿಗಳು, ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದ್ದಾರೆ. ಕಗ್ಗಲಿಪುರ ಅರಣ್ಯ ವಲಯ, ಕೃಷ್ಣರಾಜಪುರ ಸೇರಿ ಸುತ್ತಮುತ್ತಲ ವಲಯಗಳ ಅಧಿಕಾರಿಗಳು, ಸಿಬ್ಬಂದಿ ಆಗಮಿಸಿ ಅಗ್ನಿಯನ್ನು ಹತೋಟಿಗೆ ತಂದಿದ್ದಾರೆ.
Forest fire: ಪಶ್ಚಿಮ ಘಟ್ಟದಲ್ಲಿ ಹಬ್ಬಿದ ಕಾಡ್ಗಿಚ್ಚು ನಿಯಂತ್ರಣ, 250 ಎಕರೆ ಅರಣ್ಯ ನಾಶ!
ಈ ಬಗ್ಗೆ ಮಾತನಾಡಿದ ಅರಣ್ಯ ಅಧಿಕಾರಿಗಳು ‘ರಾತ್ರಿ 9.30ರವರೆಗೆ ಬೆಂಕಿ ನಂದಿಸುವ ಕಾರ್ಯ ನಡೆಯಿತು. ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿದ್ದರೂ ಒಳಗೆ ಹೋಗಲು ಸಾಧ್ಯವಾಗಿಲ್ಲ. ಹೀಗಾಗಿ ನಾವು ಕೌಂಟರ್ ಫೈರ್ ತಂತ್ರಗಾರಿಕೆ ಮೂಲಕ ಬೆಂಕಿ ನಂದಿಸಲಾಯಿತು. ಸಾಕಷ್ಟು ಸಿಬ್ಬಂದಿ ಶ್ರಮವಹಿಸಿ ಯಶಸ್ವಿಯಾಗಿ ಬೆಂಕಿ ಹಬ್ಬದಂತೆ ತಡೆದಿದ್ದು, ಹೆಚ್ಚಿನ ಅವಘಡ ಆಗದಂತೆ ಕ್ರಮ ವಹಿಸಲಾಗಿದೆ’ ಎಂದು ತಿಳಿಸಿದರು.
ಏಕಾಏಕಿ ಬೆಂಕಿ ಹೊತ್ತಿಕೊಳ್ಳಲು ಕಾರಣವೇನೆಂದು ತಿಳಿದುಬಂದಿಲ್ಲ. ಸುತ್ತಮುತ್ತಲ ಜನತೆ ಧೂಮಪಾನ ಮಾಡಿ ತುರಹಳ್ಳಿ ಅರಣ್ಯದ ಬಳಿ ಸಿಗರೇಟನ್ನು ಹಾಗೆಯೇ ಎಸೆದು ಹೋಗಬಾರದು. ಬೆಂಕಿ ಹಚ್ಚುವ ಕಿಡಿಗೇಡಿತನ ಮಾಡಬಾರದು. ಈ ರೀತಿ ಅರಣ್ಯದಲ್ಲಿ ಬೆಂಕಿ ಕಂಡ ತಕ್ಷಣ ಇಲಾಖೆಗೆ ಮಾಹಿತಿ ನೀಡುವಂತೆ ಅಧಿಕಾರಿಗಳು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.
ಆಗಿದ್ದೇನು?
*ನಿನ್ನೆ ಸಂಜೆ 6ರ ಸುಮಾರಿಗೆ ಏಕಾಏಕಿ ಬೆಂಕಿ
*ಬೆಂಕಿಯ ಕೆನ್ನಾಲಿಗೆ ನಂದಿಸಲು ಸರ್ಕಸ್
*ಅಗ್ನಿಶಾಮಕ ದಳಕ್ಕೆ ಒಳ ಪ್ರವೇಶಕ್ಕೆ ಅಡ್ಡಿ
*ಕೌಂಟರ್ ಫೈರ್ ಮಾಡಿ ಬೆಂಕಿ ತದಹದಿಗೆ