ಹಾವೇರಿ: ಮಾಜಿ ಸಚಿವ ಶಂಕರ್‌ಗೆ ವಾಣಿಜ್ಯ ತೆರಿಗೆ ಶಾಕ್‌

By Kannadaprabha News  |  First Published Mar 16, 2023, 6:09 AM IST

ಕಚೇರಿ, ಮನೆ ಮೇಲೆ ದಾಳಿ, ಕೋಟ್ಯಂತರ ರು. ಮೌಲ್ಯದ ಸೀರೆ, ಸ್ಕೂಲ್‌ ಬ್ಯಾಗ್‌, ತಟ್ಟೆ, ಲೋಟ ವಶಕ್ಕೆ


(ರಾಣೆಬೆನ್ನೂರು)ಹಾವೇರಿ(ಮಾ.16):  ವಿಧಾನ ಪರಿಷತ್‌ ಸದಸ್ಯ, ಮಾಜಿ ಸಚಿವ ಆರ್‌.ಶಂಕರ್‌ ಮನೆ ಹಾಗೂ ಕಚೇರಿ ಮೇಲೆ ಉಪವಿಭಾಗಾಧಿಕಾರಿ ಹಾಗೂ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳ ತಂಡ ಮಂಗಳವಾರ ರಾತ್ರಿ 12 ಗಂಟೆ ಸುಮಾರಿಗೆ ದಾಳಿ ನಡೆಸಿದೆ.

ಶಂಕರ್‌ ಚುನಾವಣೆಗೂ ಮುನ್ನ ಮತದಾರರ ಪಟ್ಟಿ ಹಿಡಿದು ಕುಕ್ಕರ್‌, ಸೀರೆ, ತಟ್ಟೆ, ಲೋಟ ಹಂಚುತ್ತಿದ್ದರು ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ದಾಳಿ ನಡೆದಿದೆ ಎನ್ನಲಾಗಿದೆ. ದಾಳಿ ವೇಳೆ ಅವರ ಕಚೇರಿಯಲ್ಲಿ ಕೋಟ್ಯಂತರ ರುಪಾಯಿ ಬೆಲೆಬಾಳುವ ಸೀರೆ, ಸ್ಕೂಲ್‌ ಬ್ಯಾಗ್‌, ತಟ್ಟೆ, ಲೋಟ ದೊರೆತಿದ್ದು, ಅಧಿಕಾರಿಗಳು ಅವುಗಳನ್ನು ವಶಕ್ಕೆ ಪಡೆದು ಪರಿಶೀಲಿಸಿದ್ದಾರೆ. ಅಲ್ಲದೆ, ಅವರ ಮೇಲೆ ಪ್ರಕರಣ ದಾಖಲಿಸುವ ಕುರಿತು ನ್ಯಾಯಾಲಯದ ಅನುಮತಿ ಕೋರಿದ್ದಾರೆ. ನ್ಯಾಯಾಲಯದಿಂದ ಸೂಚನೆ ಬಂದ ಬಳಿಕ ಮುಂದಿನ ಕ್ರಮ ಜರುಗಿಸಲಾಗುವುದು ಎಂದು ಕಂದಾಯ ಅಧಿಕಾರಿಗಳು ತಿಳಿಸಿದ್ದಾರೆ. ಉಪ ವಿಭಾಗಾಧಿಕಾರಿ ನಾರಾಯಣ ರೆಡ್ಡಿ ಕನಕರಡ್ಡಿ ಹಾಗೂ ಕಂದಾಯ ನಿರೀಕ್ಷಕ ಅಶೋಕ್‌ ಅರಳೇಶ್ವರ ಮತ್ತು ತಂಡದವರು ದಾಳಿಯಲ್ಲಿದ್ದರು.

Latest Videos

undefined

Lokayukta Raid Case: ಮಾಡಾಳ್‌ಗೆ ಲಂಚ ಕೊಡಲು ಬಂದಿದ್ದಾಗಿ ಇಬ್ಬರು ಖಾಸಗಿ ವ್ಯಕ್ತಿಗಳಿಂದ ತಪ್ಪೊಪ್ಪಿಗೆ!

ಪೊಲೀಸರ ಜತೆ ವಾಗ್ವಾದ: 

ದಾಳಿ ಸಮಯದಲ್ಲಿ ಶಂಕರ್‌ ಕಚೇರಿಯಲ್ಲಿನ ವಸ್ತುಗಳನ್ನು ಜಪ್ತಿ ಮಾಡುವ ಸಲುವಾಗಿ ಪೊಲೀಸರು ಲಾರಿ ತಂದು ನಿಲ್ಲಿಸುತ್ತಿದ್ದಂತೆ ಆಕ್ರೋಶಗೊಂಡ ಬೆಂಬಲಿಗರು ಪೊಲೀಸರ ವಿರುದ್ಧ ಹರಿಹಾಯ್ದರು. ಕಚೇರಿಯಲ್ಲಿರುವ ಎಲ್ಲ ವಸ್ತುಗಳಿಗೆ ನಾವು ಬಿಲ್‌ ಕೊಡುತ್ತೇವೆ. ಅದನ್ನು ಜಪ್ತಿ ಮಾಡಲು ನಿಮಗೇನು ಹಕ್ಕಿದೆ? ಎಂದು ಆಕ್ರೋಶ ವ್ಯಕ್ತಪಡಿಸಿದರು.

ಯಾವ ಕಾರಣಕ್ಕೂ ವಸ್ತು ಜಪ್ತಿಗೆ ಅವಕಾಶ ಮಾಡಿಕೊಡುವುದಿಲ್ಲ ಎಂದು ಪಟ್ಟುಹಿಡಿದರು. ಇದರಿಂದ ಕೆಲಕಾಲ ಪೊಲೀಸರು ಹಾಗೂ ಕಾರ್ಯಕರ್ತರ ನಡುವೆ ವಾಗ್ವಾದ ನಡೆಯಿತು. ಕೊನೆಗೆ ವಸ್ತುಗಳನ್ನು ಕಚೇರಿಯಲ್ಲೇ ಇಟ್ಟು ಬೀಗ ಹಾಕಲಾಯಿತು.

click me!