ಕಾಂಗ್ರೆಸ್‌ ಪಕ್ಷದ ಹೆಸರಲ್ಲಿ ಕಿಟ್‌ ವಿತರಣೆ ಮಾಡಬಾರದು ಎಂದ 'ಕೈ' ನಾಯಕ

By Kannadaprabha NewsFirst Published Jun 10, 2021, 12:46 PM IST
Highlights

* ಕೊರೋನಾ ರೋಗದಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿದ ಜನತೆ
* ಕಾಂಗ್ರೆಸ್‌ ಪಕ್ಷದ ವತಿಯಿಂದ 2 ಸಾವಿರ ಔಷಧಿ ಕಿಟ್‌ ವಿತರಣೆ 
* ಡಾ. ಸಂಗಮೇಶ ಕೊಳ್ಳಿ ಎಂಬುವವರು ಬಡವರಿಗೆ ಆಹಾರ ಕಿಟ್‌ ವಿತರಣೆ ಮಾಡೋದು ಸರಿಯಾದ ಕ್ರಮವಲ್ಲ

ನರಗುಂದ(ಜೂ.10): ಕಾಂಗ್ರೆಸ್‌ ಪಕ್ಷದ ಸಂಯೋಜಕರೆಂದು ಹೇಳಿಕೊಂಡು ಪಕ್ಷದ ಹೆಸರಲ್ಲಿ ಕಿಟ್‌ ವಿತರಣೆ ಮಾಡುವದು ಖಂಡನೀಯ ಎಂದು ಹೊಳೆಆಲೂರ ಬ್ಲಾಕ್‌ ಕಾಂಗ್ರೆಸ್‌ ಪಕ್ಷದ ಅಧ್ಯಕ್ಷ ಎಂ.ಬಿ. ಕೋಳೇರಿ ಹೇಳಿದರು.

ಬುಧವಾರ ಪಟ್ಟಣದ ಮಲಪ್ರಭಾ ಆಯಿಲ್‌ ಮಿಲ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸದ್ಯ ಜನತೆ ಮಾಹಾಮಾರಿ ಕೊರೋನಾ ರೋಗದಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಇಂತಹ ಸಂದರ್ಭದಲ್ಲಿ ಮಾಜಿ ಸಚಿವರಾದ ಬಿ.ಆರ್‌.ಯಾವಗಲ್ಲ ಅವರು ಕಾಂಗ್ರೆಸ್‌ ಪಕ್ಷದ ವತಿಯಿಂದ ನರಗುಂದ ವಿಧಾನ ಸಭೆ ಮತಕ್ಷೇತ್ರದಲ್ಲಿ ಈಗಾಗಲೇ 2 ಸಾವಿರ ಔಷಧಿ ಕಿಟ್‌ಗಳನ್ನು ವಿತರಣೆ ಮಾಡಿದ್ದಾರೆ. ಆದರೆ, ಕಾಂಗ್ರೆಸ್‌ ಪಕ್ಷದ ರಾಜ್ಯ ವೈದ್ಯಕೀಯ ಘಟಕದ ಅಧ್ಯಕ್ಷ ಹಾಗೂ ಮಾಧ್ಯಮ ವಿಶ್ಲೇಷಕರೆಂದು ಹೇಳಿಕೊಂಡು ಡಾ. ಸಂಗಮೇಶ ಕೊಳ್ಳಿ ಎಂಬುವವರು ಬಡವರಿಗೆ ಆಹಾರ ಕಿಟ್‌ ವಿತರಣೆ ಮಾಡುವುದು ಸರಿಯಾದ ಕ್ರಮವಲ್ಲ. ಮೇಲಾಗಿ ಕೊಳ್ಳಿವರು ಕಾಂಗ್ರೆಸ್‌ ಪಕ್ಷದ ರಾಜ್ಯ ಹಾಗೂ ಜಿಲ್ಲಾ ಅಧ್ಯಕ್ಷರು ಮತ್ತು ಈ ಕ್ಷೇತ್ರದ ಮಾಜಿ ಶಾಸಕರ ಗಮನಕ್ಕೆ ತರದೆ ಕಿಟ್‌ ವಿತರಣೆಯ ವಾಹನದ ಮೇಲೆ ಕಾಂಗ್ರೆಸ್‌ ಚಿಹ್ನೆ ಹಾಗೂ ಕೆಲವು ನಾಯಕರ ಬ್ಯಾನರ್‌ ಹಾಕಿಕೊಂಡು ಕಿಟ್‌ ವಿತರಣೆ ಮಾಡುತ್ತಿರುವುದು ಪಕ್ಷದ ಕಾರ್ಯಕರ್ತರಿಗೆ ಗೊಂದಲ ತರಿಸಿದೆ ಎಂದರು.

ಕೋವಿಡ್‌ ಲಸಿಕೆ ಪಡೆಯದಿದ್ರೂ ನೀಡಿದ ಬಗ್ಗೆ ಮೆಸೇಜ್‌: ಕಕ್ಕಾಬಿಕ್ಕಿಯಾದ ಜನತೆ..!

ನರಗುಂದ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಪ್ರವೀಣ ಯಾವಗಲ್‌ ಮಾತನಾಡಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯ ಕಾಂಗ್ರೆಸ್‌ ಪಕ್ಷದ ಅಧ್ಯಕ್ಷ ಡಿ.ಕೆ. ಶಿವಕುಮಾರ ಅವರ ಆದೇಶದ ಮೇರಗೆ ನಾವು ಈಗಾಗಲೇ ಮತಕ್ಷೇತ್ರದಲ್ಲಿ ಸೋಂಕಿತರು, ಶಂಕಿತರಿಗೆ ಸೇವೆ ಮಾಡಿದ್ದೇವೆ. ಆದರೆ, ಇವರು ಈ ರೀತಿ ಮಾಡುವುದು ಸರಿಯಾದ ಕ್ರಮವಲ್ಲ ಎಂದರು.

ರಾಜು ಕಲಾಲ, ಬಸವರಾಜ ಪಾಟೀಲ, ಪ್ರಕಾಶ ಭಜೆಂತ್ರಿ, ಶರಣಪ್ಪ ಜಂಗಣ್ಣವರ, ಮಹೀಮ ಚಂದೂನವರ, ಚಿತ್ರಗಾರ, ಪ್ರಕಾಶ ಹಡಗಲಿ, ವಿಷ್ಣು ಸಾಠೆ, ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
 

click me!