* ಶ್ರೀ ಮಾತಾ ಸೀಡ್ಸ್ ಕಂಪನಿ ಮೇಲೆ ದಾಳಿ
* 686 ಕ್ವಿಂಟಲ್ ಬೀಜ ವಶ
* ಕೃತಕ ಅಭಾವ ಸೃಷ್ಟಿಸಿ ಹೆಚ್ಚಿನ ಬೆಲೆಗೆ ಮಾರಾಟ ಪರವಾನಗಿ ಅಮಾನತು
ಹಾವೇರಿ(ಜೂ.10): ಕೃಷಿ ಇಲಾಖೆ ವಿಚಕ್ಷಣ ದಳದ ಅಧಿಕಾರಿಗಳ ತಂಡ ರಾಣಿಬೆನ್ನೂರು ತಾಲೂಕಿನ ಗುಡ್ಡದ ಆನ್ವೇರಿ ಗ್ರಾಮದ ಶ್ರೀ ಮಾತಾ ಸೀಡ್ಸ್ ಕಂಪನಿ ಮೇಲೆ ದಾಳಿ ನಡೆಸಿ ಅಕ್ರಮವಾಗಿ ದಾಸ್ತಾನು ಮಾಡಲಾಗಿದ್ದ ಅಂದಾಜು . 2.1 ಕೋಟಿ ಮೌಲ್ಯದ 686 ಕ್ವಿಂಟಲ್ ಮೆಕ್ಕೆಜೋಳ ಬಿತ್ತನೆ ಬೀಜವನ್ನು ವಶಪಡಿಸಿಕೊಂಡಿದ್ದಾರೆ.
ಬುಧವಾರ ಅಧಿಕಾರಿಗಳ ತಂಡ ಶ್ರೀ ಮಾತಾ ಸೀಡ್ಸ್ ಕಂಪನಿ ಮೇಲೆ ದಾಳಿ ನಡೆಸಿ ಅನಧಿಕೃತವಾಗಿ ದಾಸ್ತಾನು ಮಾಡಿದ್ದ ಒಟ್ಟು 686 ಕ್ವಿಂಟಲ್ ಮೆಕ್ಕೆಜೋಳ ಬಿತ್ತನೆ ಬೀಜವನ್ನು ವಶಪಡಿಸಿಕೊಂಡು ಸಂಬಂಧಿಸಿದ ದಾಸ್ತಾನುಗಾರರ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಯಾವುದೇ ಮಾರಾಟಗಾರರು ಪರವಾನಗಿ ಇಲ್ಲದೆ ಬಿತ್ತನೆ , ರಸಗೊಬ್ಬರ ಮಾರಾಟ ಮಾಡುವುದು ಕಂಡುಬಂದಲ್ಲಿ ಅಂತಹವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು. ಅದಲ್ಲದೇ ಪರವಾನಗಿ ಹೊಂದದೇ ದಾಸ್ತಾನು ಮಳಿಗೆ, ಗೋದಾಮುಗಳಲ್ಲಿ ಬಿತ್ತನೆ ಬೀಜಗಳನ್ನು ಸಂಗ್ರಹಿಸಿದಲ್ಲಿ ಅಂತಹ ಮಾರಾಟಗಾರರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಂಟಿ ಕೃಷಿ ನಿದೇಶಕ ಮಂಜುನಾಥ ಎಚ್ಚರಿಕೆ ನೀಡಿದರು.
ಕೋವಿಡ್ ನಿರ್ವಹಣೆಯಲ್ಲಿ ಸರ್ಕಾರ ವಿಫಲ: ಕಾಂಗ್ರೆಸ್‌ನಿಂದ ಹಳ್ಳಿಗಳಲ್ಲಿ ಫಿವರ್ ಕ್ಲಿನಿಕ್
ಜಿಲ್ಲೆಯ ಎಲ್ಲ ಮಾರಾಟಗಾರರು ರೈತರಿಗೆ ಗುಣಮಟ್ಟದ ಬಿತ್ತನೆ ಬೀಜ, ರಸಗೊಬ್ಬರ ಮತ್ತು ಕೀಟನಾಶಕಗಳನ್ನು ನೀಡಬೇಕು. ಕಡ್ಡಾಯವಾಗಿ ರೈತರಿಗೆ ರಶೀದಿ ನೀಡಬೇಕು. ಕೃತಕ ಅಭಾವ ಸೃಷ್ಟಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುವುದು, ಅವಧಿ ಮುಗಿದ ಕೃಷಿ ಪರಿಕರಗಳನ್ನು ಮಾರಾಟ ಮಾಡುವುದು ಹಾಗೂ ಅನಧಿಕೃತವಾಗಿ ಬೀಜ ಮತ್ತು ರಸಗೊಬ್ಬರ ಸೇರಿ ಇನ್ನಿತರ ಕೃಷಿ ಪರಿಕರಗಳನ್ನು ದಾಸ್ತಾನು ಮಾಡುವುದು ಕಂಡುಬಂದಲ್ಲಿ ಅಂತಹ ಮಾರಾಟಗಾರರ ಪರವಾನಗಿ ಅಮಾನತು ಹಾಗೂ ರದ್ದುಗೊಳಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸೂಚನೆ ನೀಡಲಾಗಿದೆ.
ಸೀಡ್ಸ್ ಕಂಪನಿ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ ರಾಣಿಬೆನ್ನೂರಿನ ಉಪ ಕೃಷಿ ನಿರ್ದೇಶಕರಾದ ಸ್ಪೂರ್ತಿ, ಸಹಾಯಕ ಕೃಷಿ ನಿರ್ದೇಶಕ (ಜಾರಿದಳ-2) ಪ್ರಾಣೇಶ, ಸಹಾಯಕ ಕೃಷಿ ನಿರ್ದೇಶಕ (ಜಾರಿದಳ-1) ನಾರನಗೌಡ, ಸಹಾಯಕ ಕೃಷಿ ನಿರ್ದೇಶಕ (ಕೇಂದ್ರ) ಸುನಿಲ್ ನಾಯ್ಕ, ರಾಣಿಬೆನ್ನೂರು ಸಹಾಯಕ ಕೃಷಿ ನಿರ್ದೇಶಕ ಹಿತೇಂದ್ರ ಗೌಡಪ್ಪಳವರ ಇತರರು ಇದ್ದರು ಎಂದು ಜಂಟಿ ಕೃಷಿ ನಿರ್ದೇಶಕ ಬಿ.ಮಂಜುನಾಥ ತಿಳಿಸಿದ್ದಾರೆ.