Uttara Kannada: ಮಾರುಕಟ್ಟೆಗೆ ಲಗ್ಗೆ ಇಟ್ಟ ಕರಿ ಈಶಾಡ್ ಮಾವಿನ‌ ಹಣ್ಣು: ಖರೀದಿಗೆ ಮುಗಿಬಿದ್ದ ಜನತೆ

By Govindaraj S  |  First Published May 15, 2022, 12:38 AM IST

ಪ್ರವಾಸೋದ್ಯಮಕ್ಕೆ ಖ್ಯಾತಿ ಪಡೆದಿರುವ ಉತ್ತರ ಕನ್ನಡ ಜಿಲ್ಲೆ ಹಣ್ಣುಗಳಿಗೂ ಅಷ್ಟೇ ಫೇಮಸ್. ವಿಶೇಷವಾಗಿ ಇಲ್ಲಿ ದೊರೆಯುವ ಕರಿ ಈಶಾಡ್ ಮಾವಿನ‌ ಹಣ್ಣು ಖರೀದಿಗಾಗಿ ಪ್ರತೀವರ್ಷ ಜನರು ಮುಗಿಬೀಳೋದು ಸಾಮಾನ್ಯವಾಗಿದೆ. 


ಭರತ್‌ರಾಜ್ ಕಲ್ಲಡ್ಕ, ಏಷ್ಯಾನೆಟ್ ಸುವರ್ಣ ನ್ಯೂಸ್, ಕಾರವಾರ

ಉತ್ತರ ಕನ್ನಡ (ಮೇ.15): ಪ್ರವಾಸೋದ್ಯಮಕ್ಕೆ ಖ್ಯಾತಿ ಪಡೆದಿರುವ ಉತ್ತರ ಕನ್ನಡ (Uttara Kannada) ಜಿಲ್ಲೆ ಹಣ್ಣುಗಳಿಗೂ ಅಷ್ಟೇ ಫೇಮಸ್. ವಿಶೇಷವಾಗಿ ಇಲ್ಲಿ ದೊರೆಯುವ ಕರಿ ಈಶಾಡ್ ಮಾವಿನ‌ ಹಣ್ಣು (Kaari Ishad Mango) ಖರೀದಿಗಾಗಿ ಪ್ರತೀವರ್ಷ ಜನರು ಮುಗಿಬೀಳೋದು ಸಾಮಾನ್ಯವಾಗಿದೆ. ಜಿಲ್ಲೆಯ ಕರಾವಳಿ ಪ್ರದೇಶವಾದ ಅಂಕೋಲಾದಲ್ಲಿ (Ankola) ಮಾತ್ರ ವಿಶೇಷವಾಗಿ ಬೆಳೆಯುವ ಈ ಕರಿ ಈಶಾಡ್ ಮಾವಿನ ಹಣ್ಣು ತನ್ನದೇ ಆದ ವೈಶಿಷ್ಟ್ಯ ಹೊಂದಿರುವುದಿಂದ ಬೆಳೆಗಾರರಿಗೂ ಈ ಬಾರಿ ಫಲಪ್ರದಾಯಕವಾಗಿದೆ. ಈ ಕುರಿತ ಒಂದು ವರದಿ ಇಲ್ಲಿದೆ. ಹಣ್ಣುಗಳ ರಾಜ ಎಂದೇ ಖ್ಯಾತಿ ಪಡೆದಿರುವ ಮಾವಿನಹಣ್ಣಿನ ಸೀಸನ್ ಪ್ರಾರಂಭವಾಗಿರೋದ್ರಿಂದ ವಿವಿಧ ಬಗೆಯ ಮಾವುಗಳು ಇದೀಗ ಮಾರುಕಟ್ಟೆಗೆ ಲಗ್ಗೆಯಿಟ್ಟಿವೆ. 

Tap to resize

Latest Videos

ಆಪೂಸು, ಪೈರಿ, ತೋತಾಪುರಿ, ರತ್ನಗಿರಿ, ನೆಕ್ಕರೆ ಮುಂತಾದ ಬಗೆಯ ಮಾವುಗಳ ನಡುವೆ ಉತ್ತರಕನ್ನಡ ಜಿಲ್ಲೆಯ ಅಂಕೋಲಾದಲ್ಲಿ ಮಾತ್ರ ವಿಶೇಷವಾಗಿ ಬೆಳೆಯುವ ಕರಿ ಈಶಾಡ್ ಮಾವಿನ ಹಣ್ಣು ಭರ್ಜರಿಯಾಗಿ ಖರೀದಿಸಲ್ಪಡುತ್ತಿದೆ. ಅಂಕೋಲಾದಲ್ಲಿ ಬೆಳೆದ ಕರಿ ಈಶಾಡ್ ಮಾವಿನ ಹಣ್ಣಿಗೆ ಮಾತ್ರ ವಿಶೇಷ ರುಚಿಯಿರುತ್ತದೆ ಹೊರತು, ಉಳಿದ ಯಾವುದೇ ಪ್ರದೇಶಗಳಾದ ಕಾರವಾರ, ಕುಮಟಾದಲ್ಲಿ ಈ ಹಣ್ಣು ಬೆಳೆಸಿದರೂ ಆ ರುಚಿ ಮಾತ್ರ ದೊರೆಯುವುದಿಲ್ಲ.‌ ಇದೇ ಕಾರಣದಿಂದ ಉತ್ತರ ಕನ್ನಡ ಜಿಲ್ಲಾಡಳಿತ, ಉಳಿದ ಆಹಾರ ವಸ್ತುಗಳ ಜತೆ ಕರಿ ಈಶಾಡ್ ಮಾವಿನ ಹಣ್ಣಿಗೂ ಪೇಟೆಂಟ್ ಮಾಡಿಸಲು ಕೂಡಾ ಮುಂದಾಗಿದೆ. 

ತನ್ನ ತಾಯಿಯನ್ನು ಕೊಂದವರ ಮೇಲೆ ನಾಯಿಯ ಸೇಡು!

ಅಂಕೋಲಾ ತಾಲೂಕಿನಲ್ಲಿ ಅತೀ ಹೆಚ್ಚಾಗಿ ಹಾಲಕ್ಕಿ ಸಮುದಾಯದವರು ಈ ಮಾವನ್ನು ಬೆಳೆಯುತ್ತಿದ್ದು, ಹಾಲಕ್ಕಿ ಮಹಿಳೆಯರು ತಾವು ಬೆಳೆದ ಮಾವನ್ನು ತಂದು ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಇಳಿದಿದ್ದಾರೆ. ಪ್ರತೀ ವರ್ಷ ಏಪ್ರಿಲ್, ಮೇ ಹಾಗೂ ಜೂನ್ ತಿಂಗಳಲ್ಲಿ ಈ ಹಣ್ಣುಗಳು ದೊರೆಯುವುದರಿಂದ ಬೆಳೆಗಾರರು ರಸ್ತೆ ಪಕ್ಕದಲ್ಲೂ ಬೆಳೆಗಾರರು ಇವುಗಳನ್ನು ಮಾರಾಟ ಮಾಡುವುದು ನೋಡಬಹುದಾಗಿದೆ. ಉಳಿದ ಹಣ್ಣುಗಳಿಗೆ ಹೋಲಿಸಿದಲ್ಲಿ ಈ ಹಣ್ಣುಗಳು ದೊಡ್ಡು ಸೈಜುಗಳನ್ನು ಹೊಂದಿದ್ದು, ಯಾವುದೇ ಕೆಮಿಕಲ್ ಬಳಸದ ಹಣ್ಣುಗಳು ಕೆ.ಜಿ.ಗೆ 600ರೂ.ನಿಂದ 700ರೂ.ವರೆಗೆ ಮಾರಾಟವಾಗುತ್ತಿದೆ. ಕಳೆದ ಬಾರಿಯಂತೆ ಈ ಬಾರಿಯೂ ಬೇಗನೆ ಮಳೆ ಸುರಿಯದೇ ಮಳೆರಾಯ ಬೆಳೆಗಾರರಿಗೆ ಸಾಥ್ ಕೊಟ್ಟರೆ, ಕೃಷಿಕರು ಈ ಬಾರಿ ಉತ್ತಮ ಲಾಭ ಪಡೆದುಕೊಳ್ಳಲು ಸಾಧ್ಯ ಅಂತಾರೆ ಸ್ಥಳೀಯರು. 

ಕಳೆದೆರಡು ವರ್ಷ ಕೊರೊನಾ ಕಾರಣದಿಂದಾಗಿ ಮಾರುಕಟ್ಟೆಯಲ್ಲಿ ಈ ಮಾವಿನ ಹಣ್ಣು ಹೆಚ್ಚು ಕಂಡು ಬಂದಿರಲಿಲ್ಲ. ಈ ಬಾರಿ ಸಾಕಷ್ಟು ಪ್ರಮಾಣದಲ್ಲಿ ಮಾವಿನಹಣ್ಣು ಮಾರುಕಟ್ಟೆಗೆ ಲಗ್ಗೆಯಿಟ್ಟಿದ್ದು, ಗ್ರಾಹಕರು ಕೂಡಾ ಮುಗಿಬಿದ್ದು ಖರೀದಿಯಲ್ಲಿ ತೊಡಗಿದ್ದಾರೆ. ಕಾರವಾರ ಮಾತ್ರವಲ್ಲದೇ ನೆರೆಯ ಗೋವಾ, ಮಹಾರಾಷ್ಟ್ರದಿಂದ ಜನರು ಕೂಡಾ ಸ್ಥಳೀಯವಾಗಿ ಬೆಳೆದ ಕರಿಈಶಾಡ್ ಮಾವಿನಹಣ್ಣು  ಖರೀದಿಸಿಕೊಂಡು ತೆರಳುತ್ತಾರೆ. ಅಂದಹಾಗೆ, ಬಿರು ಬಿಸಿಲಿನ ಸಮಯದಲ್ಲೇ ಉತ್ತಮವಾಗಿ ಬೆಳೆಯುವ ಕರಿ ಈಶಾಡ್ ಹಣ್ಣುಗಳು ಮಳೆ ಬಿದ್ದರೆ ತಮ್ಮ ರುಚಿಯನ್ನೇ ಕಳೆದುಕೊಂಡು ಬಿಡುತ್ತವೆ. ಅಲ್ಲದೇ, ಬೇಗ ಹಾಳಾಗಿ ಬಿಡುತ್ತವೆ. ಇನ್ನು ಕೆಲವರು ಲಾಭದ ಉದ್ದೇಶದಿಂದ ಹಣ್ಣಾಗುವ ಮೊದಲೇ ಕೊಯ್ದು ಬಳಿಕ ಕೆಮಿಕಲ್ ಬಳಸಿ ಹಣ್ಣಾಗಿಸುವ ಮೂಲಕ ಮಾರುಕಟ್ಟೆಯಲ್ಲಿ ಇಳಿಸುತ್ತಾರೆ. 

ಉತ್ತರ ಕನ್ನಡ: ಶಿಥಿಲಾವಸ್ಥೆಯಲ್ಲಿದೆ ಶಾಲಾ ‌ಕೊಠಡಿಗಳು, ಆತಂಕದಲ್ಲಿ ಪೋಷಕರು..!

ಈ ಕಾರಣದಿಂದ ಕರಿ ಈಶಾಡ್ ಮಾವಿನ ಹಣ್ಣಿನ ನೈಜ ಸ್ವಾದ ಪಡೆಯಲು ಸಾಧ್ಯವಾಗುವುದಿಲ್ಲ. ಕೆಮಿಕಲ್ ಬಳಕೆ, ಕೆಲವೆಡೆ ಮಳೆ ಮುಂತಾದ ಕಾರಣಗಳಿಂದ ಅಂಕೋಲಾ ಹೊರತುಪಡಿಸಿ ಉಳಿದೆಡೆ ಕರಿ ಈಶಾಡ್ ಹಣ್ಣಿನ ಬೆಲೆ ಕೊಂಚ ಕಡಿಮೆಯಾಗಿದೆ. ಸ್ಥಳೀಯವಾಗಿ ಬೆಳೆಯುವುದರಿಂದ ಅಂಕೋಲಾದಲ್ಲಿ ಈ ಹಣ್ಣಿನ ಬೆಲೆ 600-700ರೂ. ಇದ್ದರೆ ಕಾರವಾರ, ಕುಮಟಾದಲ್ಲಿ 300ರೂ.ನಿಂದ 500ರೂ.ವರೆಗೆ ಮಾರಾಟವಾಗ್ತಿದೆ. ಉಳಿದಂತೆ ಇತರ ಮಾವಿನ ಹಣ್ಣುಗಳು ಡಜನ್‌ಗೆ 200ರೂ.ನಿಂದ 400ರೂ.ವರೆಗೆ ಮಾರಾಟವಾಗ್ತಿದೆ. ಒಟ್ಟಿನಲ್ಲಿ ಮಾರುಕಟ್ಟೆಯಲ್ಲಿ ಹಣ್ಣಿನ ರಾಜನ ಎಂಟ್ರಿ ಭರ್ಜರಿಯಾಗಿದ್ದು, ಬೆಳೆಗಾರರಿಗೆ ಹಾಗೂ ವ್ಯಾಪಾರಿಗಳಿಗೆ ಉತ್ತಮ ಲಾಭ ತಂದಿಡುತ್ತಿದೆ. ಮಳೆರಾಯ ಕೊಂಚ ಲೇಟಾಗಿ ಎಂಟ್ರಿ ಕೊಟ್ಟಲ್ಲಿ ಬೆಳೆಗಾರರ ಪಾಲಿಗೆ ಕರಿಈಶಾಡ್ ಹಾಗೂ ಇತರ ಮಾವಿನ ಹಣ್ಣುಗಳು ವರದಾನವಾಗೋದ್ರಲ್ಲಿ ಎರಡು ಮಾತಿಲ್ಲ. 

click me!