ಜಿಲ್ಲೆಯ ಬೈಂದೂರು ತಾಲೂಕಿನ ಶಿರೂರಿನಲ್ಲಿ ಸುರಿದ ಅನಿರೀಕ್ಷಿತ ಮಳೆಗೆ ಅಪಾರ ಹಾನಿಯಾಗಿದೆ. ಕೇವಲ ನಾಲ್ಕೈದು ಗಂಟೆಗಳ ಅವಧಿಯಲ್ಲಿ 500 ಮಿಲಿ ಮೀಟರ್‌ಗೂ ಅಧಿಕ ಮಳೆ ಸುರಿದ ಪರಿಣಾಮ, ಹತ್ತಾರು ನಾಡ ದೋಣಿಗಳು ಸಮುದ್ರದಲ್ಲಿ ಕೊಚ್ಚಿ ಹೋದ ಪ್ರಕರಣ ಮೀನುಗಾರರನ್ನು ಕಂಗಡಿಸಿದೆ.
ವರದಿ: ಶಶಿಧರ ಮಾಸ್ತಿಬೈಲು, ಏಷ್ಯಾನೆಟ್ ಸುವರ್ಣ ನ್ಯೂಸ್, ಉಡುಪಿ
ಉಡುಪಿ (ಆ.06): ಜಿಲ್ಲೆಯ ಬೈಂದೂರು ತಾಲೂಕಿನ ಶಿರೂರಿನಲ್ಲಿ ಸುರಿದ ಅನಿರೀಕ್ಷಿತ ಮಳೆಗೆ ಅಪಾರ ಹಾನಿಯಾಗಿದೆ. ಕೇವಲ ನಾಲ್ಕೈದು ಗಂಟೆಗಳ ಅವಧಿಯಲ್ಲಿ 500 ಮಿಲಿ ಮೀಟರ್‌ಗೂ ಅಧಿಕ ಮಳೆ ಸುರಿದ ಪರಿಣಾಮ, ಹತ್ತಾರು ನಾಡ ದೋಣಿಗಳು ಸಮುದ್ರದಲ್ಲಿ ಕೊಚ್ಚಿ ಹೋದ ಪ್ರಕರಣ ಮೀನುಗಾರರನ್ನು ಕಂಗಡಿಸಿದೆ. ಕೋಟ್ಯಾಂತರ ರೂಪಾಯಿ ನಷ್ಟ ಸಂಭವಿಸಿರುವ ಈ ಪ್ರಕರಣದಲ್ಲಿ ರಾಜ್ಯ ಸರ್ಕಾರ ದಿವ್ಯ ನಿರ್ಲಕ್ಷ ತೋರಿರುವ ಬಗ್ಗೆ ಮೀನುಗಾರರು ಹೋರಾಟ ಆರಂಭಿಸಿದ್ದಾರೆ.
ಸುಮಾರು 40ಕ್ಕೂ ಅಧಿಕ ದೋಣಿಗಳು ಸಮುದ್ರದಲ್ಲಿ ಕೊಚ್ಚಿ ಹೋಗಿ 10 ಕೋಟಿ ರೂಪಾಯಿಗೂ ಅಧಿಕ ನಷ್ಟವಾಗಿದೆ. ಇಷ್ಟಾದರೂ ಕನಿಷ್ಠ ಮೀನುಗಾರಿಕಾ ಸಚಿವರು ಸಂಕಷ್ಟ ಕೇಳಲು ಬಂದಿಲ್ಲ. ಸಚಿವ ಎಸ್.ಅಂಗಾರ ಅವರ ಬಗ್ಗೆ ಇಲ್ಲಿನ ಬಡ ಮೀನುಗಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೇವಲ ಹತ್ತು ಕಿಲೋಮೀಟರ್ ದೂರದಲ್ಲಿರುವ ಭಟ್ಕಳಕ್ಕೆ ಬಂದು ಹೋದ ಸಿಎಂ ಮೀನುಗಾರರ ಕಷ್ಟ ಕೇಳಲು ಬರಲಿಲ್ಲ ಎಂಬ ಆಕ್ಷೇಪ ಮೀನುಗಾರರದ್ದು.
ಕುವೈತ್‌ನಲ್ಲಿ ಯೋಗ- ಉಡುಪಿಯ ಯೋಗ ಟೀಚರ್ ಸಿಕ್ಕಿರುವುದು ಯೋಗಾಯೋಗ!
ಸಾವಿರಕ್ಕೂ ಮಿಕ್ಕಿ ಮೀನುಗಾರರಿಂದ ಪ್ರತಿಭಟನೆ: ಹಲವು ಬೇಡಿಕೆಗಳನ್ನು ಮುಂದಿಟ್ಟು ಉಪ್ಪುಂದ ಮತ್ತು ಬೈಂದೂರು ಭಾಗದ ನೂರಾರು ಮೀನುಗಾರರು ಪ್ರತಿಭಟನೆ ನಡೆಸಿದ್ದಾರೆ. ಮುಖ್ಯವಾಗಿ ಬೈಂದೂರು ಉಪ್ಪುಂದ ವ್ಯಾಪ್ತಿಯ ಹಲವು ದೋಣಿಗಳು ಮತ್ತು ಸೊತ್ತುಗಳು ಮೊನ್ನೆಯ ಮಹಾಮಳೆಯಿಂದ ಹಾನಿಗೊಳಗಾಗಿವೆ. ಸುಮಾರು 3000ಕ್ಕೂ ಮಿಕ್ಕಿ ಮೀನುಗಾರರು ಹಾಗೂ ಸ್ಥಳೀಯರು, ಮೀನುಗಾರಿಕಾ ದೋಣಿ ಮತ್ತು ಸೊತ್ತುಗಳನ್ನು ರಕ್ಷಣೆ ಮಾಡಲು ಹೋರಾಡುತ್ತಿದ್ದರೂ ಸರಕಾರ, ಜಿಲ್ಲಾಡಳಿತ ಅಥವಾ ಸ್ಥಳೀಯಾಡಳಿತ ನಮಗೆ ಯಾವುದೇ ಸಹಕಾರ ನೀಡಿಲ್ಲ ಎಂದು ಮೀನುಗಾರರು ಆಕ್ರೋಶ ವ್ಯಕ್ತಪಡಿಸಿದರು.
ಮೊನ್ನೆಯ ಭಾರೀ ಮಳೆ/ಪ್ರಾಕೃತಿಕ ವಿಕೋಪದಿಂದ ಅಂದಾಜು 45 ದೋಣಿ, ಇಂಜಿನ್, ಬಲೆ, ಮತ್ತು ಇತರೆ ಮೀನುಗಾರಿಕೆ ಸಲಕರಣೆಗಳಿಗೆ ಹಾನಿಯುಂಟಾಗಿದೆ. ಇದರಿಂದ ಮೂರು ಕೋಟಿಗೂ ಮಿಕ್ಕಿ ನಷ್ಟ ಸಂಭವಿಸಿದೆ. ಆದರೆ ಸರಕಾರ ನಮ್ಮ ನೆರವಿಗೆ ಬಂದಿಲ್ಲ ಎಂದು ಮೀನುಗಾರರು ಅಸಮಾಧಾನ ಹೊರ ಹಾಕಿದರು.
ಇನ್ನು ಬೈಂದೂರು ತಾಲೂಕಿನ ಕೊಡೇರಿಯಲ್ಲಿ ಕಿರುಬಂದರನ್ನು ಮೀನುಗಾರರ ಅನುಕೂಲಕ್ಕಾಗಿ ನಿರ್ಮಿಸುತ್ತಿದ್ದು, ಅದರ ಕಾಮಗಾರಿ ಈ ತನಕ ಪೂರ್ಣಗೊಂಡಿಲ್ಲ. ಈ ಕಾಮಗಾರಿ ಪೂರ್ಣಗೊಳ್ಳದೇ ವೈಜ್ಞಾನಿಕವಾಗಿ ನಡೆಯದೇ ಇರುವುದರಿಂದ, ಈ ಬಂದರಿನಲ್ಲಿ 4 ಜನ ಮೀನುಗಾರರು ದೋಣಿ ದುರಂತದಲ್ಲಿ ಸಾವನ್ನಪ್ಪಿದ್ದಾರೆ. ಲಕ್ಷಾಂತರ ರೂಪಾಯಿ ಮೀನುಗಾರಿಕಾ ಸೊತ್ತುಗಳು ನಷ್ಟವಾಗಿರುತ್ತದೆ. ಸರಕಾರ ನಮ್ಮ ಸಮಸ್ಯೆಗಳನ್ನು ಈಡೇರಿಸದಿದ್ದರೆ ಮುಂದೆ ಇನ್ನೂ ದೊಡ್ಡ ಮಟ್ಟದ ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನು ಮೀನುಗಾರರು ನೀಡಿದ್ದಾರೆ.
ಶ್ರೀರಾಘವೇಂದ್ರ ಮಠದಲ್ಲಿ ಶಿರೂರು ಮಠದ ಶ್ರೀಲಕ್ಷ್ಮೀವರತೀರ್ಥರ 4 ನೇ ವರ್ಷದ ಆರಾಧನೆ
ಈ ಕುರಿತು ಮಾತನಾಡಿರುವ ಮೀನುಗಾರ ಮುಖಂಡ ವೆಂಕಟರಮಣ ಖಾರ್ವಿ, ಭಟ್ಕಳಕ್ಕೆ ಬಂದಿರುವ ಮುಖ್ಯಮಂತ್ರಿಗಳು ಶಿರೂರಿಗೆ ಬಂದು ಸಮಸ್ಯೆ ಆಲಿಸದಿರುವುದು ಸರಿಯಲ್ಲ. ಮೀನುಗಾರರನ್ನು ಇಷ್ಟು ಹಗುರವಾಗಿ ಪರಿಗಣಿಸುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸದ್ಯ ಅನಾರೋಗ್ಯದಿಂದ ಮಣಿಪಾಲದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸ್ಥಳೀಯ ಶಾಸಕ ಬಿ ಎಂ ಸುಕುಮಾರ ಶೆಟ್ಟಿ ಘಟನಾ ಸ್ಥಳಕ್ಕೆ ಹಾಜರಾಗಲು ಸಾಧ್ಯವಾಗದೇ ಇರುವ ಬಗ್ಗೆ ಖೇದ ವ್ಯಕ್ತಪಡಿಸಿದ್ದು, ಒಂದೆರಡು ದಿನಗಳಲ್ಲಿ ಅಧಿಕಾರಿಗಳ ಸಭೆ ಕರೆದು ಮೀನುಗಾರರ ಸಂಕಷ್ಟಕ್ಕೆ ಸ್ಪಂದಿಸುವ ಕೆಲಸ ಮಾಡುವುದಾಗಿ ಹೇಳಿದ್ದಾರೆ.