ಬೆಂಗ್ಳೂರಿಗೆ ಬಂತು ಮೊದಲ ಮಿನಿ ಎಲೆಕ್ಟ್ರಿಕ್‌ ಬಸ್‌

By Kannadaprabha NewsFirst Published Sep 30, 2021, 8:30 AM IST
Highlights

*  300 ಎಲೆಕ್ಟ್ರಿಕ್‌ ಬಸ್‌ ಟೆಂಡರ್‌ಗೆ ಕೊನೆಗೂ ಮುಕ್ತಿ
*  ಬಸ್‌ ಗುತ್ತಿಗೆ ಪಡೆಯಲು ಬಿಎಂಟಿಸಿ ಸತತ 5ನೇ ಬಾರಿ ಕರೆದಿದ್ದ ಟೆಂಡರ್‌ ಯಶಸ್ವಿ
*  ಗುತ್ತಿಗೆ ಅಶೋಕ ಲೇಲ್ಯಾಂಡ್‌ ಪಾಲು
 

ಮೋಹನ ಹಂಡ್ರಂಗಿ

ಬೆಂಗಳೂರು(ಸೆ.30):  ರಾಜಧಾನಿಯಲ್ಲಿ ಪರಿಸರ ಸ್ನೇಹಿ ಎಲೆಕ್ಟ್ರಿಕ್‌ ಬಸ್‌(Electric Bus) ಸಂಚಾರದ ಬಹು ವರ್ಷಗಳ ಕನಸು ಈಡೇರುವ ಸಮಯ ಕೂಡಿ ಬಂದಿದೆ. ಏಕೆಂದರೆ, ಬಿಎಂಟಿಸಿ(BMTC) ಗುತ್ತಿಗೆ ಮಾದರಿಯಡಿ 300 ಎಲೆಕ್ಟ್ರಿಕ್‌ ಬಸ್‌ ಪಡೆಯುವ ಸಂಬಂಧ ಸತತ ಐದನೇ ಬಾರಿ ಕರೆದಿದ್ದ ಟೆಂಡರ್‌ ಕಡೆಗೂ ಯಶ್ವಸಿಯಾಗಿ ಮುಗಿದೆ.

ಈ ಟೆಂಡರ್‌ನಲ್ಲಿ ಪಾಲ್ಗೊಂಡಿದ್ದ ಒಟ್ಟು ಐದು ಕಂಪನಿಗಳ ಪೈಕಿ ಅತಿ ಕಡಿಮೆ ಮೊತ್ತಕ್ಕೆ ಬಿಡ್‌ ಮಾಡಿದ್ದ ಅಶೋಕ ಲೇಲ್ಯಾಂಡ್‌ ಕಂಪನಿ ಟೆಂಡರ್‌ ಪಡೆಯುವಲ್ಲಿ ಯಶಸ್ವಿಯಾಗಿದೆ. ಅಂದರೆ, ಅಶೋಕ್‌ ಲೇಲ್ಯಾಂಡ್‌ ಪ್ರತಿ ಕಿ.ಮೀ.ಗೆ 48.95, ಟಾಟಾ ಮೋಟ​ರ್ಸ್‌ 54.09, ಜೆಬಿಎಂ .57.97 ಹಾಗೂ ಒಲೆಕ್ಟ್ರಾ ಗ್ರಿನ್‌ ಟೆಕ್‌ 59.05ಕ್ಕೆ ಬಿಡ್‌ ಸಲ್ಲಿಸಿದ್ದವು. ಉಳಿದ ವೀರ್‌ ವಾಹನ ಕಂಪನಿ ಟೆಂಡರ್‌ನಲ್ಲಿ ಅನರ್ಹವಾಗಿದೆ.

ಗುತ್ತಿಗೆ ಮಾದರಿಯಡಿ 300 ಎಲೆಕ್ಟ್ರಿಕ್‌ ಬಸ್‌ ಪಡೆಯುವ ಸಂಬಂಧ ಐದನೇ ಬಾರಿ ಕರೆದಿದ್ದ ಟೆಂಡರ್‌ ಮುಕ್ತಾಯವಾಗಿದೆ. ಐದು ಕಂಪನಿಗಳು ಭಾಗಿಯಾಗಿದ್ದರಿಂದ ತೀವ್ರ ಪೈಪೋಟಿ ಏರ್ಪಟಿತ್ತು. ಅಂತಿಮವಾಗಿ ಕಡಿಮೆ ಮೊತ್ತಕ್ಕೆ ಬಿಡ್‌ ಸಲ್ಲಿಸಿದ್ದ ಅಶೋಕ್‌ ಲೇಲ್ಯಾಂಡ್‌ ಕಂಪನಿಗೆ ಟೆಂಡರ್‌ ಸಿಕ್ಕಿದೆ. ಹೀಗಾಗಿ ಶೀಘ್ರದಲ್ಲೇ ನಡೆಯುವ ಬಿಎಂಟಿಸಿ ಮಂಡಳಿ ಸಭೆಯಲ್ಲಿ ಈ ಟೆಂಡರ್‌ ವಿಚಾರ ಚರ್ಚೆಗೆ ಬರಲಿದೆ. ಈ ಸಭೆಯಲ್ಲಿ ಟೆಂಡರ್‌ಗೆ ಅನುಮೋದನೆ ಸಿಕ್ಕರೆ ಹಂತ ಹಂತವಾಗಿ ಬಸ್‌ ಪೂರೈಸಲು ಕಂಪನಿಗೆ ಕಾರ್ಯಾದೇಶ ನೀಡುವುದಾಗಿ ಬಿಎಂಟಿಸಿಯ ಹಿರಿಯ ಅಧಿಕಾರಿಯೊಬ್ಬರು ‘ಕನ್ನಡಪ್ರಭ’ಕ್ಕೆ ತಿಳಿಸಿದರು.

ಗೋವಾದಿಂದ ಕಾರವಾರಕ್ಕೆ ಎಲೆಕ್ಟ್ರಿಕ್‌ ಬಸ್‌ ಸೇವೆ

ಫೇಮ್‌-2ರಡಿ ಅನುದಾನ:

ಸಾರ್ವಜನಿಕ ಸಾರಿಗೆಯಲ್ಲಿ ಪರಿಸರ ಸ್ನೇಹಿ ಎಲೆಕ್ಟ್ರಿಕ್‌ ವಾಹನ ಬಳಕೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ‘ಫೇಮ್‌ ಯೋಜನೆ’ ರೂಪಿಸಿದೆ. ಬಿಎಂಟಿಸಿ ಗುತ್ತಿಗೆ ಮಾದರಿಯಡಿ ಪಡೆಯುವ 300 ಎಲೆಕ್ಟ್ರಿಕ್‌ ಬಸ್‌ಗೆ ಫೇಮ್‌-2 ಯೋಜನೆಯಡಿ ಪ್ರತಿ ಬಸ್‌ಗೆ .55 ಲಕ್ಷ ಹಾಗೂ ರಾಜ್ಯ ಸರ್ಕಾರದಿಂದ ಪ್ರತಿ ಬಸ್‌ಗೆ .33 ಲಕ್ಷ ಸೇರಿದಂತೆ ಒಟ್ಟು .88 ಲಕ್ಷ ಅನುದಾನ ಸಿಗಲಿದೆ. ಹೀಗಾಗಿ ಬಿಎಂಟಿಸಿಗೆ ಇದರಿಂದ ಹೆಚ್ಚಿನ ಆರ್ಥಿಕ ಹೊರೆ ಇಲ್ಲ.

ದಿನಕ್ಕೆ 225 ಕಿ.ಮೀ. ಸಂಚಾರ ಸಾಮರ್ಥ್ಯ:

12 ಮೀಟರ್‌ ಉದ್ದದ 43 ಆಸನ ಸಾಮರ್ಥ್ಯದ ಈ ಎಲೆಕ್ಟ್ರಿಕ್‌ ಬಸ್‌ಗಳು ದಿನಕ್ಕೆ 250 ಕಿ.ಮೀ. ದೂರ ಸಂಚರಿಸುವ ಸಾಮರ್ಥ್ಯ ಹೊಂದಿದೆ. ಅಂದರೆ, 45 ನಿಮಿಷಗಳ ಕಾಲ ಚಾಜ್‌ರ್‍ ಮಾಡಿದರೆ 225 ಕಿ.ಮೀ. ಸಂಚರಿಸಲಿದೆ. ಈ ಬಸ್ಸುಗಳಿಗೆ ಟೆಂಡರ್‌ ಪಡೆದಿರುವ ಅಶೋಕ ಲೇಲ್ಯಾಂಡ್‌ ಕಂಪನಿಯೇ ಚಾಲಕರನ್ನು ನೀಡಲಿದೆ. ಬಿಎಂಟಿಸಿ ಚಾರ್ಜಿಂಗ್‌ ಘಟಕ ಸ್ಥಾಪನೆಗೆ ಜಾಗ ಹಾಗೂ ನಿರ್ವಾಹಕರನ್ನು ಮಾತ್ರ ನೀಡಲಿದೆ. 10 ವರ್ಷಗಳ ಕಾಲ ಗುತ್ತಿಗೆ ಅವಧಿ ಇದ್ದು, ವಿದ್ಯುತ್‌ ದರವನ್ನು ಕಂಪನಿಯೇ ಭರಿಸಲಿದೆ. ಬಿಎಂಟಿಸಿ ಪ್ರತಿ ಕಿ.ಮೀ.ಗೆ .48.95 ಮಾತ್ರ ಕಂಪನಿಗೆ ಪಾವತಿಸಲಿದೆ.

ನಾನ್‌ ಎಸಿ ಬಸ್‌

ಈ 300 ಎಲೆಕ್ಟ್ರಿಕ್‌ ಬಸ್‌ಗಳು ಹವಾನಿಯಂತ್ರಣ ರಹಿತ(ನಾನ್‌ ಎಸಿ) ಬಸ್‌ಗಳಾಗಿದ್ದು, 43 ಆಸನ ಸಾಮರ್ಥ್ಯ ಹೊಂದಿರಲಿವೆ. ಅಂತೆಯೆ ಬಸ್ಸಿನಲ್ಲಿ ಸಿಸಿಟಿವಿ ಕ್ಯಾಮರಾ, ಪ್ಯಾಸೆಂಜರ್‌ ಡಿಸ್‌ಪ್ಲೇ ಬೋರ್ಡ್‌, ಅಂಗವಿಕಲರ ಪ್ರವೇಶಕ್ಕೆ ರಾರ‍ಯಂಪ್‌, ಪ್ಯಾನಿಕ್‌ ಬಟನ್‌ ಸೇರಿದಂತೆ ಹಲವು ಅತ್ಯಾಧುನಿಕ ಸೌಲಭ್ಯಗಳು ಇರಲಿವೆ. ಬಿಎಂಟಿಸಿಯು ಈ ಎಲೆಕ್ಟ್ರಿಕ್‌ ಬಸ್‌ಗಳಿಗಾಗಿಯೇ ಮೂರು ಪ್ರತ್ಯೇಕ ಡಿಪೋ ಮೀಸಲಿರಿಸಲು ಚಿಂತಿಸಿದೆ. ಯಶವಂತಪುರ, ಕೆ.ಆರ್‌.ಪುರ ಹಾಗೂ ಕೆಂಗೇರಿ ಡಿಪೋಗಳನ್ನು ಎಲೆಕ್ಟ್ರಿಕ್‌ ಬಸ್‌ಗಳಿಗೆ ಮೀಸಲಿರಿಸುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ ಎಂದು ಬಿಎಂಟಿಸಿ ಮೂಲಗಳು ತಿಳಿಸಿವೆ.

'ರಾಜ್ಯ​ದಲ್ಲಿ ಶೀಘ್ರವೇ 300 ಎಲೆಕ್ಟ್ರಿಕ್ ಬಸ್‌ ರಸ್ತೆಗೆ'

ಮೊದಲ ಮಿನಿ ಎಲೆಕ್ಟ್ರಿಕ್‌ ಬಸ್‌ ನಗರಕ್ಕೆ ಆಗಮನ

ಬಿಎಂಟಿಸಿಯ ಸೇವೆಗೆ ಮೊದಲ ಮಿನಿ ಎಲೆಕ್ಟ್ರಿಕ್‌ ಬಸ್‌ ನಗರದ ಕೆಂಗೇರಿಗೆ ಆಗಮಿಸಿದ್ದು ಸಾರಿಗೆ ಸಚಿವ ಬಿ.ಶ್ರೀರಾಮುಲು(B Sriramulu) ಇಂದು(ಗುರುವಾರ) ವೀಕ್ಷಣೆ ಮಾಡಲಿದ್ದಾರೆ. ಈ ಬಸ್‌ಗೆ ಸಾರಿಗೆ ಇಲಾಖೆಯಿಂದ ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸಿದ ಬಳಿಕ ರಸ್ತೆಗಳಿಯಲಿದ್ದು, ಮೆಟ್ರೋ ಫೀಡರ್‌ ಸೇವೆಗೆ ಲಭ್ಯವಾಗುವ ಸಾಧ್ಯತೆಯಿದೆ. 

ಗುರುವಾರ ಬೆಳಗ್ಗೆ 10.30 ಕೆಂಗೇರಿಯಲ್ಲಿ ಘಟಕ 37ರಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಎನ್‌.ಎಸ್‌.ನಂದೀಶ್‌ ರೆಡ್ಡಿ, ಉಪಾಧ್ಯಕ್ಷ ಎಂ.ಆರ್‌.ವೆಂಕಟೇಶ್‌ ಹಾಗೂ ಮಂಡಳಿ ನಿರ್ದೇಶಕರವರು ಸಹ ಭಾಗವಹಿಸಲಿದ್ದಾರೆ. ಬಸ್‌ ಮಥುರಾದಿಂದ ಟ್ರಾಲಿ ವಾಹನದಲ್ಲಿ ಬುಧವಾರ ನಗರದ ಕೆಂಗೇರಿ ಘಟಕಕ್ಕೆ ಆಗಮಿಸಿದೆ. ಬಿಎಂಟಿಸಿ ಬೆಂಗಳೂರು ಸ್ಮಾರ್ಟ್‌ ಸಿಟಿ ಯೋಜನೆ ಅನುದಾನದಿಂದ ಗುತ್ತಿಗೆ ಆಧಾರದಡಿ 90 ಮಿನಿ ಎಲೆಕ್ಟ್ರಿಕ್‌ ಬಸ್‌ ಪಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಉಳಿದ ಬಸ್‌ಗಳು ರಾಜ್ಯಕ್ಕೆ ಆಗಮಿಸಲಿವೆ ಎಂದು ಸಾರಿಗೆ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
 

click me!