ಹಾವೇರಿ: ಹೆರಿಗೆ ವಾರ್ಡ್‌ಗೆ ಬೆಂಕಿ, ಶಿಶು ಹೊತ್ತು ಓಡಿದ ತಾಯಂದಿರು..!

By Kannadaprabha News  |  First Published Sep 22, 2021, 7:27 AM IST

*  ಹಾವೇರಿ ಜಿಲ್ಲಾಸ್ಪತ್ರೆ ಹೆರಿಗೆ ವಾರ್ಡ್‌ನಲ್ಲಿ ಶಾರ್ಟ್‌ ಸರ್ಕ್ಯೂಟ್‌
*  ಕಟ್ಟಡದಲ್ಲಿ ಹೊಗೆ ತುಂಬಿ ಕೆಲಕಾಲ ಗೊಂದಲ 
*  ತಪ್ಪಿದ ಭಾರೀ ದುರಂತ 
 


ಹಾವೇರಿ(ಸೆ.22): ಇಲ್ಲಿಯ ಜಿಲ್ಲಾಸ್ಪತ್ರೆ ಆವರಣದಲ್ಲಿರುವ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ಹೆರಿಗೆ ವಾರ್ಡ್‌ನಲ್ಲಿ ಮಂಗಳವಾರ ವಿದ್ಯುತ್‌ ಶಾರ್ಟ್‌ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡು ಆತಂಕಮಯ ವಾತಾವರಣ ನಿರ್ಮಾಣವಾಗಿತ್ತು. ನಿದ್ರೆಯ ಮಂಪರಿನಲ್ಲಿದ್ದ ಬಾಣಂತಿಯರು ಗಾಬರಿಗೊಂಡು ಹಸುಗೂಸುಗಳನ್ನು ಎತ್ತಿಕೊಂಡು ಹೊರಗೆ ಓಡಿ ಅಪಾಯದಿಂದ ಪಾರಾದರು.

ಈ ಆಸ್ಪತ್ರೆಯಲ್ಲಿ ಬೆಳಗ್ಗೆ 7 ಗಂಟೆ ಸುಮಾರಿಗೆ ಏಕಾಏಕಿ ಹೊಗೆ ಆವರಿಸಿ ಆತಂಕ ಮನೆಮಾಡಿತು. ಆಸ್ಪತ್ರೆಯ ನೆಲ ಅಂತಸ್ತಿನಲ್ಲಿದ್ದ ವಿದ್ಯುತ್‌ ಬೋರ್ಡ್‌ನಲ್ಲಿ ಶಾರ್ಟ್‌ ಸರ್ಕ್ಯೂಟ್‌ ಆಗಿ ಬೆಂಕಿ ಕಾಣಿಸಿಕೊಂಡಿತು. ಇದರಿಂದ ದಟ್ಟವಾದ ಹೊಗೆ ಕಾಣಿಸಿಕೊಂಡು ಇಡಿ ಆಸ್ಪತ್ರೆಯನ್ನು ಆವರಿಸಿತು. ಆಸ್ಪತ್ರೆಯ ಹೆರಿಗೆ ವಾರ್ಡ್‌ನಲ್ಲಿ ಬಾಣಂತಿಯರು, ನವಜಾತ ಶಿಶುಗಳು, ಹೆರಿಗೆಗೆಂದು ಬಂದಿದ್ದ ಗರ್ಭಿಣಿಯರು, ಅವರೊಂದಿಗೆ ಬಂದಿದ್ದ ಕುಟುಂಬಸ್ಥರು ಸೇರಿದಂತೆ ನೂರಾರು ಜನರಿದ್ದರು. ಏಕಾಏಕಿಯಾಗಿ ಹೊಗೆ ತುಂಬಿ ಏನಾಯಿತೆಂದು ಗೊತ್ತಾಗದೇ ಆತಂಕದಲ್ಲಿ ಪರದಾಡಿದರು.

Latest Videos

undefined

ಆಸ್ಪತ್ರೆಯಲ್ಲಿದ್ದವರು ತಕ್ಷಣ ಅಪಾಯದ ಮುನ್ಸೂಚನೆ ಅರಿತು ಹೊರಗೆ ಓಡಲು ಶುರು ಮಾಡಿದರು. ನವಜಾತ ಶಿಶುಗಳನ್ನು ಎತ್ತಿಕೊಂಡೇ ಅನೇಕ ತಾಯಂದಿರುವ ಹೊರಗೆ ಧಾವಿಸಿದರು. ಈ ವೇಳೆ ಮಕ್ಕಳ ಕೂಗಾಟ, ದೊಡ್ಡವರ ಅರಚಾಟದಿಂದ ಗೊಂದಲದ ವಾತಾವರಣ ನಿರ್ಮಾಣವಾಯಿತು. ಹೆರಿಗೆ ವಾರ್ಡ್‌ನ ಸಮೀಪವೇ ಇದ್ದ ವಿದ್ಯುತ್‌ ಬೋರ್ಡ್‌ನಲ್ಲಿ ಬೆಂಕಿ ಆವರಿಸಿ ಕೆಲ ಹೊತ್ತಿನಲ್ಲೇ ಇಡೀ ಬೋರ್ಡ್‌ ಸುಟ್ಟು ಭಸ್ಮವಾಯಿತು. ವಿಷಯ ಗೊತ್ತಾದ ತಕ್ಷಣ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು. ಇದರಿಂದ ದೊಡ್ಡ ಅನಾಹುತವೊಂದು ತಪ್ಪಿದಂತಾಯಿತು.

ಬೆಂಗಳೂರು;  ಬಿಟಿಎಂನಲ್ಲಿ ಅಗ್ನಿ ದುರಂತ,  ನೋಡ ನೋಡುತ್ತಿದ್ದಂತೆ ಮಹಿಳೆಯರು ಭಸ್ಮ

ಎದ್ದು ಬಿದ್ದು ಹೊರಗೆ ಬಂದರು:

ಬೆಳಗ್ಗೆ ನಿದ್ದೆಯ ಮಂಪರಿನಿಂದ ಇನ್ನೂ ಅನೇಕರು ಹೊರಬಂದಿರಲಿಲ್ಲ. ಎಲ್ಲ ವಾರ್ಡ್‌ಗಳಲ್ಲಿ ಹೊಗೆ ತುಂಬಿ ಏನೂ ಕಾಣಿಸದಂತಾಯಿತು. ಆಸ್ಪತ್ರೆಯಲ್ಲಿ ಕರ್ತವ್ಯದಲ್ಲಿದ್ದ ನರ್ಸ್‌ಗಳು ಹಾಗೂ ಸಿಬ್ಬಂದಿ ವಾರ್ಡ್‌ನಲ್ಲಿ ಮುಚ್ಚಿದ್ದ ಕಿಟಕಿಗಳನ್ನು ತೆರೆದು ಸಮಯಪ್ರಜ್ಞೆ ಮೆರೆದರು. ಜತೆಗೆ ಎಲ್ಲರೂ ಹೊರಹೋಗುವಂತೆ ಸೂಚಿಸಿದರು. ಸೋಮವಾರವಷ್ಟೇ ಹೆರಿಗೆಯಾದ ಹಸಿ ಬಾಣಂತಿಯರೂ ಇದ್ದರು. ಹಸುಗೂಸುಗಳನ್ನು ಎತ್ತಿಕೊಂಡು ತಮ್ಮೊಂದಿಗೆ ತಂದಿದ್ದ ಲಗೇಜ್‌ ಬ್ಯಾಗ್‌, ಕೈಚೀಲಗಳನ್ನು ಹೊತ್ತು ಎಲ್ಲರೂ ಒಮ್ಮೆಲೆ ಆಸ್ಪತ್ರೆಯಿಂದ ಹೊರಕ್ಕೆ ಓಡಿದರು. ಆಸ್ಪತ್ರೆ ಆವರಣದಲ್ಲೇ ತಾಯಂದಿರು ಶಿಶುಗಳೊಂದಿಗೆ ಕುಳಿತುಕೊಂಡಿದ್ದರು. ಅವರೆಲ್ಲ ಗಾಭರಿಯಿಂದ ನಡುಗುತ್ತಿದ್ದರು.

ಇದೇ ವೇಳೆ ಆಸ್ಪತ್ರೆಯಲ್ಲಿ ವೈದ್ಯರೊಬ್ಬರು ಶಸ್ತ್ರಚಿಕಿತ್ಸೆ ಮಾಡುತ್ತಿದ್ದರು. ಆಗ ಕರೆಂಟ್‌ ಕೈಕೊಟ್ಟರೂ ಬ್ಯಾಟರಿ ಹಾಕಿಕೊಂಡು ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಿದರು. ಅಗ್ನಿ ಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ ಬಳಿಕ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಎಲ್ಲರನ್ನೂ ಬೇರೊಂದು ವಾರ್ಡ್‌ಗೆ ಸುರಕ್ಷಿತವಾಗಿ ಸ್ಥಳಾಂತರಿಸಲಾಯಿತು.

ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ಒಳಭಾಗದಲ್ಲಿದ್ದ ವಿದ್ಯುತ್‌ ಬೋರ್ಡ್‌ನಲ್ಲಿ ಓವರ್‌ ಲೋಡ್‌ನಿಂದ ಶಾಶಾರ್ಟ್‌ ಸರ್ಕ್ಯೂಟ್‌ ಆಗಿದೆ. ಎಲ್ಲೆಡೆ ಹೊಗೆ ಆವರಿಸಿದ್ದರಿಂದ ಗೊಂದಲ ಉಂಟಾಗಿತ್ತು. ತಕ್ಷಣ ಎಲ್ಲರನ್ನೂ ಆಸ್ಪತ್ರೆಯಿಂದ ಹೊರಗೆ ಕಳುಹಿಸಿ ಬಳಿಕ ಬೇರೆ ವಾರ್ಡ್‌ಗೆ ಸ್ಥಳಾಂತರಿಸಲಾಗಿದೆ. ಸುದೈವದಿಂದ ಯಾವುದೇ ಅಪಾಯವಾಗಿಲ್ಲ ಎಂದು ಜಿಲ್ಲಾಸ್ಪತ್ರೆ ಸರ್ಜನ್‌ ಡಾ. ಪಿ.ಆರ್‌. ಹಾವನೂರ ತಿಳಿಸಿದ್ದಾರೆ. 

click me!