ದೂರುದಾರರಿಗೆ ಆಗಿರುವ ಅನಾನುಕೂಲ ಮತ್ತು ಮಾನಸಿಕ ತೊಂದರೆಗಾಗಿ ರೂ.50 ಸಾವಿರ ಪರಿಹಾರ ಮತ್ತು ರೂ.05 ಸಾವಿರ ಪ್ರಕರಣದ ಖರ್ಚು ವೆಚ್ಚ ನೀಡುವಂತೆ ಆಯೋಗ ತಿಳಿಸಿದೆ.
ವರದಿ: ಪರಮೇಶ್ವರ ಅಂಗಡಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಧಾರವಾಡ
ಧಾರವಾಡ(ಅ.05): ಹುಬ್ಬಳ್ಳಿಯ ಆನಂದ ನಗರ ನಿವಾಸಿ ಅಲ್ಲಾಭಕ್ಷ ಮುಲ್ಲಾರವರ ಮಗ ಆಶೀಫ್ ಮುಲ್ಲಾರವರು ತನ್ನ ಮೇಲೆ ಸರ್ವ ಸುರಕ್ಷಾ ಲಾಭದ ವಿಮಾ ಪಾಲಸಿಯನ್ನು ಎಚ್‌ಡಿಎಫ್‌ಸಿ ಎರಗೋ ವಿಮಾ ಕಂಪನಿಯಿಂದ 2017 ರಲ್ಲಿ ಪಡೆದಿದ್ದರು. ಅದು ರೂ.10 ಲಕ್ಷ ಮೌಲ್ಯದ ಪಾಲಸಿಯಾಗಿತ್ತು. ಅದಕ್ಕೆ ವಿಮಾದಾರ ರೂ.7,646/- ಹಣ ಪ್ರಿಮಿಯಮ್ ಕಟ್ಟಿದ್ದರು ಆ ಪಾಲಸಿಗೆ ತನ್ನ ತಂದೆ ದೂರುದಾರ ಅಲ್ಲಾಭಕ್ಷರವರನ್ನು ನಾಮಿನಿಯಾಗಿ ಮಾಡಿದ್ದರು. ದಿ:19/12/2019 ರಂದು ಗದಗ ಹುಲಕೋಟಿ ಹತ್ತಿರ ಹೋಗುವಾಗ ಲಾರಿ ಮತ್ತು ಬೈಕಿಗೆ ಡಿಕ್ಕಿಯಾದ ಅಪಘಾತದಲ್ಲಿ ವಿಮಾದಾರ ಆಶೀಪ್ ಮೃತರಾಗಿದ್ದರು ಈ ಬಗ್ಗೆ ಗದಗ ಪೋಲಿಸ್ ಠಾಣೆಯಲ್ಲಿ ಲಾರಿ ಚಾಲಕನ ಮೇಲೆ ಪ್ರಕರಣ ದಾಖಲಾಗಿತ್ತು. ಆ ಎಲ್ಲ ದಾಖಲೆಗಳನ್ನು ದೂರುದಾರ ಪಡೆದುಕೊಂಡು ನಾಮಿನಿಯಾದ ತನಗೆ ಮೃತನ ವಿಮಾ ಕ್ಲೇಮ್ ಕೊಡುವಂತೆ ಅರ್ಜಿ ಸಲ್ಲಿಸಿದ್ದರು.
ದೂರುದಾರರ ಕ್ಲೇಮ ಅರ್ಜಿಯನ್ನು ಪರಿಗಣಿಸದೇ ವಿಮಾ ಕಂಪನಿಯವರು ಮೃತನ ಹೆಂಡತಿ ನೂರಜಹಾನಬಿಯವರಿಗೆ ರೂ.10 ಲಕ್ಷ ವಿಮಾ ಹಣ ಸಂದಾಯ ಮಾಡಿದ್ದರು. ತಾನು ಮೃತನ ವಿಮಾ ಪಾಲಸಿಗೆ ನಾಮಿನಿಯಿರುವುದರಿಂದ ವಿಮಾ ಹಣವನ್ನು ತನಗೆ ಕೊಡಬೇಕಾಗಿತ್ತು. ಆದರೆ ವಿಮಾ ಕಂಪನಿಯವರು ತನ್ನ ಕ್ಲೇಮನ್ನು ದಿಕ್ಕರಿಸಿ ಮೃತನ ಹೆಂಡತಿಗೆ ವಿಮಾ ಹಣ ರೂ.10 ಲಕ್ಷ ಕೊಟ್ಟಿರುವುದು ತಪ್ಪು ಮತ್ತು ಅಂತಹ ವಿಮಾ ಕಂಪನಿಯವರ ನಡಾವಳಿಕೆ ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನ್ಯತೆ ಆಗುತ್ತದೆ ಅಂತಾ ಹೇಳಿ ವಿಮಾ ಕಂಪನಿಯವರ ಮೇಲೆ ಕ್ರಮ ಕೈಗೊಂಡು ತನಗೆ ಪರಿಹಾರಕೊಡಿಸಬೇಕೆಂದು ದೂರುದಾರ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರನ್ನು ಸಲ್ಲಿಸಿದ್ದರು.
ಪ್ರಕರಣ ಹಿಂಪಡೆಯೋಕೆ ತಯಾರಾಗಿದೆಯಾ ತಂತ್ರ ? ಏನಿದು ಹಳೇ ಹುಬ್ಬಳ್ಳಿ ಗಲಭೆ ಕೇಸ್..?
ಸದರಿ ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಈಶಪ್ಪ ಭೂತೆ ಹಾಗೂ ಸದಸ್ಯರುಗಳಾದ ವಿಶಾಲಾಕ್ಷಿ. ಅ. ಬೋಳಶೆಟ್ಟಿ ಮತ್ತು ಪ್ರಭು. ಸಿ. ಹಿರೇಮಠ ಅವರು ದೂರುದಾರ ಮೃತ ಆಸೀಪ್ ಮುಲ್ಲಾರವರ ತಂದೆ ಇದ್ದು ಅವರು ಮೃತ ಮಾಡಿದ ವಿಮಾ ಪಾಲಸಿಗೆ ನಾಮಿನಿ ಇದ್ದಾರೆ. 2015 ರಲ್ಲಿ ಆಗಿರುವ ವಿಮಾ ಕಾಯ್ದೆಯ ತಿದ್ದುಪಡಿಯಂತೆ ವಿಮಾದಾರ ಮೃತನಾದ್ದಲ್ಲಿ ವಿಮಾ ಪಾಲಸಿಯ ಹಣ ಪಡೆಯಲು ನಾಮಿನಿ ಮಾತ್ರ ಅರ್ಹರಿದ್ದಾರೆ. ಆದರೆ ಈ ಪ್ರಕರಣದಲ್ಲಿ ನಾಮಿನಿಯನ್ನು ಬದಿಗಿಟ್ಟು ಮೃತನ ಹೆಂಡತಿ ನೂರಜಹಾನಬಿಗೆ ವಿಮಾ ಕಂಪನಿಯವರು ಹಣ ಸಂದಾಯ ಮಾಡಿರುವುದು ವಿಮಾ ನಿಯಮಕ್ಕೆ ವಿರುದ್ಧವಾಗಿದೆ ಕಾರಣ ವಿಮಾ ಕಂಪನಿಯವರ ಅಂತಹ ನಡಾವಳಿಕೆ ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನ್ಯತೆ ಆಗುತ್ತದೆ ಅಂತಾ ಅಭಿಪ್ರಾಯಪಟ್ಟು ಆಯೋಗ ತೀರ್ಪು ನೀಡಿದೆ.
ತಮ್ಮದೇ ವಿಮಾ ನಿಯಮಕ್ಕೆ ವ್ಯತಿರೀಕ್ತವಾಗಿ ಮೃತನ ಹೆಂಡತಿಗೆ ವಿಮಾ ಹಣ ನೀಡಿರುವುದನ್ನು ಆಯೋಗ ಒಪ್ಪಿಕೊಂಡಿಲ್ಲ. ವಿಮಾ ನಿಯಮದಂತೆ ನಾಮಿನಿಯಾದ ದೂರುದಾರ ವಿಮಾ ಪಾಲಸಿ ಮೊತ್ತ ರೂ.10 ಲಕ್ಷ ಪಡೆಯಲು ಅರ್ಹರಿದ್ದಾರೆಂದು ಆಯೋಗ ತೀರ್ಪಿನಲ್ಲಿ ತಿಳಿಸಿದೆ.
ತೀರ್ಪು ನೀಡಿದ ಒಂದು ತಿಂಗಳ ಒಳಗಾಗಿ ನಾಮಿನಿಯಾದ ದೂರುದಾರನಿಗೆ ವಿಮಾ ಮೊತ್ತ ರೂ. 10 ಲಕ್ಷ ಕೊಡುವಂತೆ ವಿಮ ಕಂಪನಿಗೆ ಆಯೋಗ ಆದೇಶಿಸಿದೆ. ದೂರುದಾರರಿಗೆ ಆಗಿರುವ ಅನಾನುಕೂಲ ಮತ್ತು ಮಾನಸಿಕ ತೊಂದರೆಗಾಗಿ ರೂ.50 ಸಾವಿರ ಪರಿಹಾರ ಮತ್ತು ರೂ.05 ಸಾವಿರ ಪ್ರಕರಣದ ಖರ್ಚು ವೆಚ್ಚ ನೀಡುವಂತೆ ಆಯೋಗ ತಿಳಿಸಿದೆ. ಒಂದು ತಿಂಗಳ ಒಳಗಾಗಿ ಮೇಲೆ ಹೇಳಿದ ವಿಮಾ ಮೊತ್ತ ಕೊಡಲು ಎದುರುದಾರರು ವಿಫಲರಾದಲ್ಲಿ ತೀರ್ಪು ನೀಡಿದ ದಿನಾಂಕದಿಂದ ರೂ.10 ಲಕ್ಷ ಮೇಲೆ ಶೇ.8 ರಂತೆ ಬಡ್ಡಿ ಲೆಕ್ಕ ಹಾಕಿ ಕೊಡುವಂತೆ ಆಯೋಗ ಎದುರುದಾರರಿಗೆ ಆದೇಶಿಸಿದೆ.