
ಬೆಂಗಳೂರು (ಅ.05): ನಮ್ಮ ಮೆಟ್ರೋದ ಆರ್.ವಿ.ರಸ್ತೆ-ಬೊಮ್ಮಸಂದ್ರದ ‘ಹಳದಿ ಮಾರ್ಗ’ವನ್ನು 2024ರ ಫೆಬ್ರವರಿಯಲ್ಲಿ ಜನ ಸಂಚಾರಕ್ಕೆ ಮುಕ್ತಗೊಳಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಬಿಎಂಆರ್‌ಸಿಎಲ್ ಹಾಗೂ ಸಂಬಂಧಿಸಿದ ಇತರೆ ಸಂಸ್ಥೆಗಳ ಜೊತೆ ಮಾತನಾಡಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸಂಸದ ತೇಜಸ್ವಿ ಸೂರ್ಯ ಆಗ್ರಹಿಸಿದರು. ಬುಧವಾರ ಮೆಟ್ರೋದ ಹಳದಿ ಮಾರ್ಗದಲ್ಲಿ ಪರಿಶೀಲನೆ ಕೈಗೊಂಡ ಅವರು ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 2017ರಲ್ಲಿ ಆರಂಭವಾದ ಈ ಕಾಮಗಾರಿ 2021ರ ವೇಳೆಗೆ ಮುಗಿಯಬೇಕಿತ್ತು.
ಆದರೆ, ಕೋವಿಡ್, ಜಯದೇವ ಫ್ಲೈ ಓವರ್ ತೆರವು, ಭೂಸ್ವಾದೀನ ವ್ಯಾಜ್ಯ ಸೇರಿ ಇತರೆ ಕಾರಣದಿಂದ ಪೂರ್ಣಗೊಂಡಿಲ್ಲ. ಇದೀಗ ಬಿಎಂಆರ್‌ಸಿಎಲ್ 2024ರ ಫೆಬ್ರವರಿಯಲ್ಲಿ ಪೂರ್ಣಗೊಳಿಸುವುದಾಗಿ ಹೇಳಿದೆ. ಆದರೆ, ಜನತೆಯಲ್ಲಿ ಬಿಎಂಆರ್‌ಸಿಎಲ್ ನೀಡುವ ಕಾಮಗಾರಿ ಪೂರ್ಣಗೊಳಿಸುವ ನಿಗದಿತ ಅವಧಿ ಬಗ್ಗೆ ನಂಬಿಕೆ ಹೊರಟು ಹೋಗಿದೆ. ರಾಜ್ಯ ಸರ್ಕಾರ ಎಚ್ಚೆತ್ತುಕೊಂಡು ಈ ಮಾರ್ಗದ ಸಮಸ್ಯೆಗಳನ್ನು ನಿವಾರಿಸಲು ಬಿಎಂಆರ್‌ಸಿಎಲ್ ಸೇರಿದಂತೆ ಬೆಸ್ಕಾಂ, ಬಿಬಿಎಂಪಿ, ಸಾರಿಗೆ, ಬೆಸ್ಕಾಂ ಸೇರಿ ಸಂಬಂಧಿತ ಸಂಸ್ಥೆಗಳ ಜೊತೆ ಮಾತನಾಡಿ ಕ್ರಮ ವಹಿಸಬೇಕು ಎಂದರು.
ಬಿಎಂಟಿಸಿಗೆ ಬಹುಕೋಟಿ ವಂಚನೆ, ಅಧಿಕಾರಿಗಳಿಂದಲೇ ನಕಲಿ ಸಹಿ: ಎಷ್ಟು ಹಣ, ಅಧಿಕಾರಿಗಳ ಹೆಸರೇನು?
ಬೋಗಿ ಒದಗಿಸುವ ಚೈನಾ ಕಂಪನಿಗೆ ವೀಸಾ ಸಮಸ್ಯೆ: ಈ ಮಾರ್ಗಕ್ಕೆ ರೈಲ್ವೆ ಬೋಗಿ ಒದಗಿಸುವ ತೀತಾಘರ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರು ಕೆಲ ಸಮಸ್ಯೆಗಳ ಬಗ್ಗೆ ತಿಳಿಸಿದ್ದು, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾಗಿ ಇದರ ಬಗ್ಗೆ ಚರ್ಚಿಸಲಾಗುವುದು. ಅಲ್ಲದೆ, ಚೀನಾದ ಸಿಆರ್‌ಆರ್‌ಸಿ ಕಂಪನಿಯ ಸಿಬ್ಬಂದಿ ಬೆಂಗಳೂರಿಗೆ ಆಗಮಿಸಿ ಅಧ್ಯಯನ ಕೈಗೊಳ್ಳಲು ವೀಸಾ ಸಮಸ್ಯೆ ಎದುರಿಸುತ್ತಿರುವುದಾಗಿ ಹೇಳಿದ್ದಾರೆ. ವಿದೇಶಾಂಗ ಸಚಿವ ಜೈಶಂಕರ್ ಅವರನ್ನು ಮುಂದಿನ ವಾರ ಭೇಟಿಯಾಗಿ ಈ ಸಮಸ್ಯೆ ನಿವಾರಣೆ ಮಾಡಿಕೊಳ್ಳಲು ಪ್ರಯತ್ನಿಸುವುದಾಗಿ ತೇಜಸ್ವಿ ಸೂರ್ಯ ತಿಳಿಸಿದರು.