Mangaluru: ಕೊನೆಗೂ suratkal tollgate ರದ್ದು; ನಿಲ್ಲಿಸಿಲ್ಲ ಇನ್ನು ಹೋರಾಟ!

By Kannadaprabha News  |  First Published Nov 14, 2022, 11:00 PM IST

ಸುರತ್ಕಲ್‌ ಎನ್‌ಐಟಿಕೆ ಬಳಿ ಇರುವ ಅಕ್ರಮ ಟೋಲ್‌ಗೇಟ್‌ ವಿರುದ್ಧ ನಿರಂತರ ಹೋರಾಟಕ್ಕೆ ಮಣಿದ ಕೇಂದ್ರ ಸರ್ಕಾರ ಕೊನೆಗೂ ಈ ಟೋಲ್‌ಗೇಟ್‌ನ್ನು ಹೆಜಮಾಡಿ ಟೋಲ್‌ಗೇಟ್‌ನೊಂದಿಗೆ ವಿಲೀನಗೊಳಿಸಿ ಆದೇಶ ಹೊರಡಿಸಿದೆ.


ಮಂಗಳೂರು (ನ.14) : ಸುರತ್ಕಲ್‌ ಎನ್‌ಐಟಿಕೆ ಬಳಿ ಇರುವ ಅಕ್ರಮ ಟೋಲ್‌ಗೇಟ್‌ ವಿರುದ್ಧ ನಿರಂತರ ಹೋರಾಟಕ್ಕೆ ಮಣಿದ ಕೇಂದ್ರ ಸರ್ಕಾರ ಕೊನೆಗೂ ಈ ಟೋಲ್‌ಗೇಟ್‌ನ್ನು ಹೆಜಮಾಡಿ ಟೋಲ್‌ಗೇಟ್‌ನೊಂದಿಗೆ ವಿಲೀನಗೊಳಿಸಿ ಆದೇಶ ಹೊರಡಿಸಿದೆ. ಸುರತ್ಕಲ್‌ ಟೋಲ್‌ ಸಂಗ್ರಹ ರದ್ದುಗೊಳಿಸಿರುವ ಕುರಿತು ಸಂಸದ ನಳಿನ್‌ ಕುಮಾರ್‌ ಕಟೀಲು ಸೋಮವಾರ ಟ್ವೀಟ್‌ ಮಾಡಿದ್ದಾರೆ. ಆದರೆ ಇಲ್ಲಿ ಟೋಲ್‌ ಸಂಗ್ರಹ ಸಂಪೂರ್ಣವಾಗಿ ನಿಲ್ಲುವವರೆಗೂ ಹೋರಾಟ ಮುಂದುವರಿಸುವುದಾಗಿ ಹೋರಾಟ ಸಮಿತಿ ತಿಳಿಸಿದೆ.

‘‘ಮಂಗಳೂರು ಸುರತ್ಕಲ್‌ ಸಮೀಪದ ಟೋಲ್‌ ಸಂಗ್ರಹ ಕೇಂದ್ರ ರದ್ದಾಗಿದ್ದು, ನಮ್ಮ ಮನವಿಗೆ ಸೂಕ್ತವಾಗಿ ಸ್ಪಂದಿಸಿದ ಕೇಂದ್ರ ಸಚಿವ ನಿತಿನ್‌ ಗಡ್ಕರಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನಾಗರಿಕರ ಪರವಾಗಿ ಧನ್ಯವಾದಗಳು. ಟೋಲ್‌ ರದ್ದು ಮಾಡುವ ಭರವಸೆಯನ್ನು ಈ ಮೊದಲೇ ಕೇಂದ್ರ ಸಚಿವರು ನೀಡಿದ್ದು, ಈಗ ತಾಂತ್ರಿಕ ಅಂಶ ಪೂರೈಸಲಾಗಿದೆ’’ ಎಂದು ನಳಿನ್‌ ಕುಮಾರ್‌ ಟ್ವೀಟ್‌ ಮಾಡಿದ್ದಾರೆ.

Tap to resize

Latest Videos

Surathkal Toll Gate Cancelled: ಮಂಗಳೂರಿನ ಸುರತ್ಕಲ್ ಟೋಲ್ ಗೇಟ್ ರದ್ದು: ನಳೀನ್ ಕುಮಾರ್ ಕಟೀಲ್ ಟ್ವೀಟ್

ಹೋರಾಟದ ಫಲ: ಸುರತ್ಕಲ್‌ನಲ್ಲಿ ಏಳು ವರ್ಷಗಳ ಹಿಂದೆ ಸುಂಕ ವಸೂಲಿ ಕೇಂದ್ರ ಆರಂಭಿಸುವಾಗಲೇ ನಾಗರಿಕ ಸಂಘಟನೆಗಳ ತೀವ್ರ ವಿರೋಧ ವ್ಯಕ್ತವಾಗಿತ್ತು. ಇದರ ಫಲವಾಗಿ ಒಂದೆರಡು ತಿಂಗಳ ಕಾಲ ಟೋಲ್‌ ಸಂಗ್ರಹ ಸ್ಥಗಿತಗೊಂಡಿದ್ದರೂ ಬಳಿಕ ನ್ಯಾಯಾಲಯದ ತೀರ್ಪಿನ ಹಿನ್ನೆಲೆಯಲ್ಲಿ ಮತ್ತೆ ಸುಂಕ ಸಂಗ್ರಹ ಆರಂಭವಾಗಿತ್ತು. ಅದಾಗಿ ಒಂದು ವರ್ಷದಲ್ಲಿ 20 ಕಿ.ಮೀ. ಅಂತರದೊಳಗೆ ಹೆಜಮಾಡಿ ಟೋಲ್‌ ಗೇಟ್‌ ಆರಂಭವಾದ ಬಳಿಕವಂತೂ ಸುರತ್ಕಲ್‌ ಟೋಲ್‌ ರದ್ದುಗೊಳಿಸುವ ಹೋರಾಟ ತೀವ್ರ ಸ್ವರೂಪ ಪಡೆದುಕೊಂಡಿತ್ತು.

ಇದರ ಬೆನ್ನಲ್ಲೇ ಸುರತ್ಕಲ್‌ ಟೋಲ್‌ಗೇಟ್‌ ರದ್ದುಗೊಳಿಸಲು ಆಗ್ರಹಿಸಿ ಹೋರಾಟ ಸಮಿತಿ ರಚನೆ ಮಾಡಲಾಗಿತ್ತು. ಹೋರಾಟದ ಫಲವಾಗಿ ಸುರತ್ಕಲ್‌ನಲ್ಲಿ ಕೆ.ಎ.19 ಖಾಸಗಿ ವಾಹನಗಳಿಗೆ ಸುಂಕ ರಿಯಾಯ್ತಿ ಸಿಕ್ಕಿತ್ತು. ಬಳಿಕ 5 ಕಿ.ಮೀ. ವ್ಯಾಪ್ತಿಯ ವಾಣಿಜ್ಯ ವಾಹನಗಳಿಗೂ ರಿಯಾಯ್ತಿ ದೊರೆತಿತ್ತು. 2018ರಲ್ಲಿ ಹೋರಾಟ ಸಮಿತಿಯು 11 ದಿನಗಳ ಅಹೋರಾತ್ರಿ ಹೋರಾಟ ಹಮ್ಮಿಕೊಂಡಿತ್ತು. ಇದೀಗ ಕಳೆದೊಂದು ತಿಂಗಳಿನಿಂದ ಹೋರಾಟ ಹೊಸ ಸ್ವರೂಪ ಪಡೆದುಕೊಂಡಿದ್ದು, ಬಿಜೆಪಿಯೇತರ ಎಲ್ಲ ಪಕ್ಷ, ಸಂಘಟನೆಗಳು ಇದರಲ್ಲಿ ಪಾಲ್ಗೊಂಡಿದ್ದವು. ಅ.18ರಂದು ನೂರಾರು ಸಂಖ್ಯೆಯ ಪ್ರತಿಭಟನಾಕಾರರು ಸುರತ್ಕಲ್‌ ಟೋಲ್‌ ಗೇಟ್‌ಗೆ ಮುತ್ತಿಗೆ ಹಾಕಿ, ಪೊಲೀಸರ ಭದ್ರ ಕೋಟೆಯನ್ನು ಧಿಕ್ಕರಿಸಿ ಕೆಲ ಕಾಲ ಟೋಲ್‌ ಸಂಗ್ರಹ ಸ್ಥಗಿತಗೊಳಿಸಿದ್ದು ಭಾರೀ ಗಮನ ಸೆಳೆದಿತ್ತು.

ಈ ಹೋರಾಟದ ಸಂದರ್ಭ ಜನಪ್ರತಿನಿಧಿಗಳು ಸುರತ್ಕಲ್‌ ಟೋಲ್‌ಗೇಟ್‌ ರದ್ದುಗೊಳಿಸಲು 15 ದಿನಗಳ ಗಡುವು ನೀಡಿದ್ದರು. ಈ ನಡುವೆ ಹೋರಾಟ ಸಮಿತಿಯು ಅ.28ರಿಂದ ಮತ್ತೆ ಅಹೋರಾತ್ರಿ ಧರಣಿ ಆರಂಭಿಸಿದ್ದು ಸೋಮವಾರ 18 ದಿನಗಳನ್ನು ಪೂರೈಸಿದೆ. ಇದರಲ್ಲಿ ಉಭಯ ಜಿಲ್ಲೆಗಳ ವಿವಿಧ ಪಕ್ಷ, ಸಂಘಟನೆಗಳು ಕೈಜೋಡಿಸಿ ಹೋರಾಟದ ಕಾವು ತೀವ್ರಗೊಂಡಿತ್ತು. ಹೋರಾಟಕ್ಕೆ ವ್ಯಾಪಕ ಜನ ಬೆಂಬಲ ಸಿಗುತ್ತಿದ್ದಂತೆ ಎಚ್ಚೆತ್ತುಕೊಂಡ ಸರ್ಕಾರ ಇದೀಗ ಸುರತ್ಕಲ್‌ ಟೋಲ್‌ಗೇಟ್‌ ರದ್ದುಗೊಳಿಸಿ ಮಹತ್ವದ ಆದೇಶ ಹೊರಡಿಸಿದೆ.

ಹೆಜಮಾಡಿಯಲ್ಲಿ ಸುಂಕ ಹೆಚ್ಚಳ?: ಸುರತ್ಕಲ್‌ ಟೋಲ್‌ ಗೇಟ್‌ ರದ್ದಾದರೂ ಹೆಜಮಾಡಿಯಲ್ಲಿ ಸುಂಕ ಸಂಗ್ರಹದ ಮೊತ್ತ ಹೆಚ್ಚಾಗುವ ಸಾಧ್ಯತೆ ಕಂಡುಬಂದಿದೆ. ಪ್ರಸ್ತುತ ಹೆದ್ದಾರಿ ಸಚಿವಾಲಯವು ಹೆಜಮಾಡಿಯೊಂದಿಗೆ ಸುರತ್ಕಲ್‌ ಟೋಲ್‌ಗೇಟ್‌ ವಿಲೀನಗೊಳಿಸಿ ಮಾತ್ರ ಆದೇಶ ಹೊರಡಿಸಿದೆ. ಹೆಜಮಾಡಿಯಲ್ಲಿ ಸುಂಕ ಸಂಗ್ರಹದ ಮಾರ್ಗಸೂಚಿ ಇನ್ನಷ್ಟೇ ಪ್ರಕಟವಾಗಬೇಕಿದೆ. ನಂತೂರಿನಿಂದ ಪಡೀಲ್‌ವರೆಗಿನ ರಸ್ತೆ ಬಳಕೆಯ ಸುಂಕವನ್ನು ಹೆಚ್ಚುವರಿಯಾಗಿ ಹೆಜಮಾಡಿಯಲ್ಲಿ ಸಂಗ್ರಹ ಮಾಡುವ ಸಾಧ್ಯತೆಗಳಿವೆ.

Surathkal Toll Gate Issue: ಟೋಲ್ ಗೇಟ್ ಕಿತ್ತೆಸೆಯಲು ನಾಳೆ ನೇರ ಕಾರ್ಯಾಚರಣೆ!

ಟೋಲ್‌ ಸಂಗ್ರಹ ಸ್ಥಗಿತವರಗೆ ಧರಣಿ ನಿಲ್ಲಿಸಲ್ಲ: ಮುನೀರ್‌

ಆರು ವರ್ಷಗಳ ಸತತ ಹೋರಾಟದ ನಂತರ ಸುರತ್ಕಲ್‌ ಟೋಲ್‌ಗೇಟ್‌ ಮುಚ್ಚಲು ಹೆದ್ದಾರಿ ಪ್ರಾಧಿಕಾರ ಆದೇಶ ಹೊರಡಿಸಿದೆ ಎಂದು ತಿಳಿದುಬಂದಿದೆ. ಇದು ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಸಮಸ್ತ ಜನತೆಯ ಒಗ್ಗಟ್ಟಿನ ಹೋರಾಟದ ಫಲ. ಹೋರಾಟ ಸಮಿತಿಗೆ ಟೋಲ್‌ಗೇಟ್‌ ತೆರವು ಕುರಿತು ಈವರೆಗೂ ಜಿಲ್ಲಾಡಳಿತದ ಕಡೆಯಿಂದ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ. ಅಧಿಕೃತ ಮಾಹಿತಿ ಮಾತ್ರವಲ್ಲದೆ, ಟೋಲ್‌ ಗೇಟ್‌ನಲ್ಲಿ ಸುಂಕ ಸಂಗ್ರಹ ನಿಲ್ಲುವವರೆಗೂ ಧರಣಿ ಮುಂದುವರಿಯಲಿದೆ. ಟೋಲ್‌ ಸಂಗ್ರಹ ಸ್ಥಗಿತಗೊಂಡ ಬಳಿಕವೇ ಧರಣಿ ಸ್ಥಗಿತಗೊಳ್ಳಲಿದೆ.

- ಮುನೀರ್‌ ಕಾಟಿಪಳ್ಳ, ಹೋರಾಟ ಸಮಿತಿ ಸಂಚಾಲಕರು

ಬೈಕ್‌ Rallyಗೆ ಪೊಲೀಸ್‌ ತಡೆ

ಟೋಲ್‌ ವಿರೋಧಿ ಹೋರಾಟ ಸಮಿತಿಯ ಅನಿರ್ದಿಷ್ಟಾವಧಿ ಪ್ರತಿಭಟನೆಗೆ ಬೆಂಬಲ ಸೂಚಿಸಿ ಸೋಮವಾರ ಮಂಗಳೂರಿನಿಂದ ಟೋಲ್‌ಗೇಟ್‌ವರೆಗೆ ಡಿವೈಎಫ್‌ಐ ಮತ್ತು ಎಸ್‌ಎಫ್‌ಐ ಬೈಕ್‌ ರಾರ‍ಯಲಿ ಆಯೋಜಿಸಿತ್ತು. ನಾಲ್ಕು ದಿನಗಳ ಹಿಂದೆ ಈ ರಾರ‍ಯಲಿಗೆ ಅನುಮತಿ ಕೋರಲಾಗಿತ್ತು. ಆದರೆ ಸೋಮವಾರ ಸಂಜೆ ಈ ಬೈಕ್‌ ರಾರ‍ಯಲಿಯನ್ನು ಪೊಲೀಸರು ಮಂಗಳೂರು ನಗರದಲ್ಲೇ ತಡೆದರು. ಮಾತ್ರವಲ್ಲದೆ, ಹಲವು ಡಿವೈಎಫ್‌ಐ ಕಾರ್ಯಕರ್ತರನ್ನು ವಶಕ್ಕೆ ಪಡೆದುಕೊಂಡು ಬಳಿಕ ಬಿಡುಗಡೆಗೊಳಿಸಿದರು.

ನ್ಯಾಯ ಪರ ಹೋರಾಟಕ್ಕೆ ಸಂದ ಜಯ: ಸುಶೀಲ್‌ ನೊರೊನ್ಹಾ

ಸುರತ್ಕಲ್‌ ಟೋಲ್‌ಗೇಟ್‌ ವಿರೋಧಿ ಹೋರಾಟ ಸಮಿತಿಯ ಹೋರಾಟಕ್ಕೆ ನ್ಯಾಯ ಸಿಕ್ಕಿದೆ. ಕೇಂದ್ರ ಸರ್ಕಾರ ಹಾಗೂ ಸ್ಥಳೀಯ ಸಂಸದರು ವಿಳಂಬವಾದರೂ ನ್ಯಾಯ ದೊರಕಿಸಿ ಕೊಟ್ಟದ್ದು ಸಂತಸ ತಂದಿದೆ. ಇನ್ನು ಮುಂದೆ ಕೂಡ ನ್ಯಾಯಯುತ ಬೇಡಿಕೆ, ಶಾಂತಿಯುತ ಪ್ರತಿಭಟನೆ ನಡೆದಾಗ ಸರ್ಕಾರ ಎಚ್ಚೆತ್ತುಕೊಂಡು ಜನರ ಬೇಡಿಕೆಗೆ ಸ್ಪಂದಿಸಬೇಕು. ಅದೇ ರೀತಿ ಬ್ರಹ್ಮರಕೂಟ್ಲು ಟೋಲ್‌ ಗೇಟ್‌ ಬಗ್ಗೆಯೂ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಜೆಡಿಎಸ್‌ ಜಿಲ್ಲಾ ವಕ್ತಾರ ಸುಶೀಲ್‌ ನೊರೊನ್ಹಾ ಆಗ್ರಹಿಸಿದ್ದಾರೆ.

click me!