ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯ ಶೌಚಾಲಯದಲ್ಲಿ ಸುಮಾರು 7 ತಿಂಗಳ ಹೆಣ್ಣು ಭ್ರೂಣ ಪತ್ತೆಯಾಗಿದೆ. ಚಿಕಿತ್ಸೆಗಾಗಿ ಬಂದಿದ್ದ ಮಹಿಳೆಯೊಬ್ಬರು ವಾಪಸ್ ತೆರಳಿದ ನಂತರ ಭ್ರೂಣ ಪತ್ತೆಯಾಗಿದ್ದು, ಆಸ್ಪತ್ರೆಯ ಸಿಬ್ಬಂದಿ ಪೊಲೀಸರಿಗೆ ದೂರು ನೀಡಿದ್ದಾರೆ.
ಶಿವಮೊಗ್ಗ (ಡಿ.26): ಶಿವಮೊಗ್ಗದ ಸರ್ಕಾರಿ ಮೆಗ್ಗಾನ್ ಆಸ್ಪತ್ರೆಯ ಶೌಚಾಲಯದಲ್ಲಿ ಹೆಣ್ಣು ಭ್ರೂಣ ಪತ್ತೆಯಾಗಿರುವ ಘಟನೆ ನಡೆದಿದೆ. ಸುಮಾರು 7 ತಿಂಗಳ ಭ್ರೂಣ ಇದಾಗಿದ್ದು, ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಸುಮಾರು 7 ತಿಂಗಳ ಹೆಣ್ಣು ಭ್ರೂಣ ಪತ್ತೆಯಾಗಿದ್ದು ಪ್ರಕರಣದ ಸತ್ಯಾಸತ್ಯತೆ ಪರಿಶೀಲಿಸಲು ಶಿವಮೊಗ್ಗದ ದೊಡ್ಡಪೇಟೆ ಠಾಣೆಯ ಪೊಲೀಸರಿಗೆ ಮೆಗ್ಗಾನ್ ಆಸ್ಪತ್ರೆಯ ವೈದ್ಯಕೀಯ ಆಡಳಿತ ಮಂಡಳಿ ದೂರು ನೀಡಿದ್ದಾರೆ.
undefined
ಈ ಕುರಿತು ಮಾತನಾಡಿದ ಮೆಗ್ಗಾನ್ ಆಸ್ಪತ್ರೆಯ ಜಿಲ್ಲಾ ಅಧೀಕ್ಷಕ ಡಾ. ಸಿದ್ದನಗೌಡ ಅವರು, ಹಕ್ಕಿಪಿಕ್ಕಿ ಕ್ಯಾಂಪ್‌ನ ಸೀಮಾ ಹೆಸರಿನ ಮಹಿಳೆ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ಬಂದಿದ್ದರು . ಪತಿಯೊಂದಿಗೆ ಜಗಳವಾಡಿ ಪತಿ ಕೊಟ್ಟ ಮಾತ್ರೆ ತಿಂದಿದ್ದಕ್ಕಾಗಿ ಹೊಟ್ಟೆ ನೋವು ಬರುತ್ತಿದೆ ಎಂದು ಆಸ್ಪತ್ರೆಗೆ ದಾಖಲಾಗಿದ್ದರು. ಮೆಗ್ಗಾನ್ ಆಸ್ಪತ್ರೆಯ ಗರ್ಭಿಣಿಯರ ಚಿಕಿತ್ಸಾ ವಿಭಾಗದಲ್ಲಿ ಚಿಕಿತ್ಸೆಗಾಗಿ ದಾಖಲಾಗಿ ನಂತರ ಚಿಕಿತ್ಸೆ ಪಡೆಯದೆ ವಾಪಸ್ ತೆರಳಿದ್ದರು. ಆ ಮಹಿಳೆ ತೆರಳಿದ ಕೆಲವು ಗಂಟೆಗಳ ನಂತರ ಶೌಚಾಲಯದಲ್ಲಿ ಮೃತ ಸ್ಥಿತಿಯಲ್ಲಿ ಹೆಣ್ಣು ಮಗುವಿನ ಭ್ರೂಣ ಪತ್ತೆಯಾಗಿದೆ.
ಇದನ್ನೂ ಓದಿ: ಮೈಸೂರು ಪ್ರಿನ್ಸೆಸ್ ರಸ್ತೆ ಹೆಸರಿನ ಹಿಂದೆ ಇಷ್ಟೊಂದು ದೊಡ್ಡ ಇತಿಹಾಸ ಇದೆಯೇ?
ಈ ಹಿನ್ನೆಲೆಯಲ್ಲಿ ಆಸ್ಪತ್ರೆಯ ವೈದ್ಯಕೀಯ ಸಿಬ್ಬಂದಿ ಹಕ್ಕಿಪಿಕ್ಕಿ ಜನಾಂಗದ ಮಹಿಳೆಯ ಮೇಲೆ ಶಂಕೆ ವ್ಯಕ್ತಪಡಿಸಿ ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಆಸ್ಪತ್ರೆಯ ಗೈನಕಾಲಜಿ ವಿಭಾಗದ ಒಳಭಾಗದಲ್ಲಿ ಸಿಸಿಟಿವಿ ಇಲ್ಲ. ಕೇವಲ ಹೊರ ಭಾಗದ ರೋಗಿಗಳ ವಿಭಾಗದಲ್ಲಿ ಮಾತ್ರ ಸಿಸಿಟಿವಿ ಅಳವಡಿಸಲಾಗಿದೆ. ಸಿಸಿಟಿವಿ ಇಲ್ಲದ್ದನ್ನು ನೋಡಿಕೊಂಡು ಈ ಮಹಿಳೆ ಕೃತ್ಯ ಎಸಗಿರಬಹುದೆಂದು ಹೇಳಲಾಗುತ್ತಿದೆ. ಆದರೆ, ಪೊಲೀಸರ ಸೂಕ್ತ ತನಿಖೆಯಿಂದಷ್ಟೇ ಸತ್ಯಾಂಶ ಹೊರ ಬರಬೇಕಿದೆ.