* ರೈತರಿಗೆ ಕೃಷಿ, ಗೊಬ್ಬರ, ಬಿಜೋಪಚಾರ ಬಿತ್ತನೆ ಮಾಡುವ ಸಮಗ್ರ ಮಾಹಿತಿ
* ತರಬೇತಿಯಲ್ಲಿ ಭಾಗವಹಿಸಿದ 2,500 ರೈತರು
* ವಾರದಲ್ಲಿ ಮೂರು ದಿನ ಅಂತರ್ಜಾಲದಲ್ಲಿ ತರಬೇತಿ
ರಾಮಮೂರ್ತಿ ನವಲಿ
ಗಂಗಾವತಿ(ಜೂ.05): ಕೋವಿಡ್ ಹಿನ್ನೆಲೆಯಲ್ಲಿ ರೈತರಿಗೆ ತೊಂದರೆಯಾಗಬಾರದೆಂಬ ಕಾರಣಕ್ಕೆ ಇಲ್ಲಿಯ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ಮೂರು ಜಿಲ್ಲೆಯ ರೈತರಿಗೆ ಅಂತರ್ಜಾಲ ಮೂಲಕ ತರಬೇತಿ ನೀಡುವ ಕಾರ್ಯ ಮಾಡುತ್ತಿದ್ದಾರೆ.
ಎರಡು ವರ್ಷಗಳಿಂದ ದೇಶದಲ್ಲಿ ಕೊರೋನಾ ಸೋಂಕಿನಿಂದಾಗಿ ಬಹಳಷ್ಟು ರೈತರು ಕೃಷಿ ಚಟುವಟಿಕೆಯಿಂದ ಹಿಂದಕ್ಕೆ ಬೀಳುತ್ತಿರುವುದನ್ನು ಮನಗಂಡು, ಕೃಷಿ ಚಟುವಟಿಕೆಗೆ ಹಿನ್ನಡೆಯಾಗಬಾರದು ಎಂಬ ಕಾರಣಕ್ಕೆ ಕೃಷಿ ವಿಜ್ಞಾನಿಗಳು ಅಂತರ್ಜಾಲದ ಮೂಲಕವೇ ವಿವಿಧ ರೀತಿಯ ಮಾಹಿತಿ ನೀಡುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ನಕಲಿ ಬೀಜ ಮತ್ತು ಗೊಬ್ಬರ ಬಳಕೆಯಿಂದ ರೈತರು ನಷ್ಟಅನುಭವಿಸುತ್ತಿದ್ದಾರೆ. ಅದರಿಂದಲೂ ಪಾರು ಮಾಡಲು ಕೃಷಿ ವಿಜ್ಞಾನಿಗಳು, ಅಧಿಕಾರಿಗಳು ಜಾಗೃತಿ ಮೂಡಿಸುತ್ತಿದ್ದಾರೆ.
ಮೂರು ಜಿಲ್ಲೆಗಳ ರೈತರಿಗೆ ತರಬೇತಿ:
ಕಳೆದ ಒಂದು ತಿಂಗಳಿನಿಂದ ಕೊಪ್ಪಳ, ಬಳ್ಳಾರಿ ಮತ್ತು ರಾಯಚೂರು ಜಿಲ್ಲೆಗಳ ರೈತರು ಕೃಷಿ ವಿಜ್ಞಾನ ಕೇಂದ್ರದ ಆನ್‌ಲೈನ್ ತರಬೇತಿಯಲ್ಲಿ ಭಾಗವಹಿಸಿದ್ದಾರೆ. ಇಲ್ಲಿಯವರಿಗೆ 35 ಆನ್ ಲೈನ್ ತರಬೇತಿ ನಡೆದಿದ್ದು, 2,500 ರೈತರು ಭಾಗವಹಿಸಿದ್ದಾರೆ. ತರಬೇತಿಯಲ್ಲಿ ಕೃಷಿಗೆ ಸಂಬಂಧಿಸಿದಂತೆ ಮಾಹಿತಿ, ಬಿತ್ತನೆ ಬೀಜ ಮತ್ತು ರಸಗೊಬ್ಬರಗಳ ಬಳಕೆ ಕುರಿತು ಮಾಹಿತಿ ನೀಡಲಾಗಿದೆ. ಅಲ್ಲದೇ, ತೋಟಗಾರಿಕೆ, ಅರಣ್ಯ, ಪಶು ಸಂಗೋಪನೆ ಇಲಾಖೆ ಸೇರಿದಂತೆ ರೈತರಿಗೆ ಅನುಕೂಲವಾಗುವ, ಇಲಾಖೆಗಳಿಂದ ದೊರೆಯುವ ಸೌಲಭ್ಯ ಕುರಿತು ಮಾಹಿತಿ ನೀಡುತ್ತಿದ್ದಾರೆ. ಜತೆಗೆ ಸಂವಾದ ಕಾರ್ಯಕ್ರಮ ಏರ್ಪಡಿಸುತ್ತಿದ್ದಾರೆ. ಪ್ರಮುಖವಾಗಿ ಗುಣಮಟ್ಟದ ಬೀಜ ಬಿತ್ತನೆ, ಬೀಜೋಪಚಾರ, ಸಂಕೀರ್ಣ ಸಮಸ್ಯೆಗಳಿಗೆ ಪರಿಹಾರ, ಮಣ್ಣು ನಿರ್ವಹಣೆ, ಅರಣ್ಯ ಎರೆಹುಳು ಕೃಷಿಗಳ ಬಗ್ಗೆ ಮಾಹಿತಿ ನೀಡಲಾಗಿದೆ.
ಕೊಪ್ಪಳ: ಗವಿಮಠ ಕೋವಿಡ್ ಆಸ್ಪತ್ರೆಗೆ ಎನ್‌ಆರ್‌ಐ ನೆರವು
ತಜ್ಞರಿಂದ ಉಪನ್ಯಾಸ:
ವಾರದಲ್ಲಿ ಮೂರು ದಿನ ಅಂತರ್ಜಾಲದಲ್ಲಿ ತರಬೇತಿ ನೀಡಲಾಗುತ್ತಿದೆ. ಕೃಷಿ ವಿಜ್ಞಾನ ಕೇಂದ್ರದ ತಜ್ಞರು ಉಪನ್ಯಾಸ ನೀಡುತ್ತಿದ್ದಾರೆ. ಜತೆಗೆ ಕೃಷಿ ಇಲಾಖೆಯ ಅಧಿಕಾರಿಗಳು, ಇಫೆ ಕಂಪನಿಯ ಅಧಿಕಾರಿಗಳು ಭಾಗವಹಿಸಿ ರೈತರಿಗೆ ಮಾಹಿತಿ ನೀಡುತ್ತಿದ್ದಾರೆ. ಹಾಸನ ಮತ್ತು ವಿಜಯಪುರ ಜಿಲ್ಲೆಗಳ ರೈತರೂ ಭಾಗವಹಿಸಿ ಮಾಹಿತಿ ಪಡೆದಿದ್ದಾರೆ. ತರಬೇತಿ ಸಂದರ್ಭದಲ್ಲಿ ಆಯಾ ಜಿಲ್ಲೆಗಳ ಪ್ರಮುಖ ಬೆಳೆಗಳ ಬಗ್ಗೆ ಸಂವಾದ ನಡೆಯುತ್ತಿದ್ದು, ಇದರಿಂದ ರೈತರು ಪರಸ್ಪರ ಚರ್ಚೆ ಮಾಡುವುದಕ್ಕೆ ಅನುಕೂಲವಾಗಿದೆ.
ಕಳೆದ ಒಂದು ತಿಂಗಳಿಂದ ಈ ತರಬೇತಿಯಲ್ಲಿ 2,500 ರೈತರು ಭಾಗವಹಿಸಿದ್ದು, ಉತ್ತಮ ಪ್ರತಿಕ್ರಿಯೆ ದೊರೆತಿದೆ. ಈ ತರಬೇತಿಯಲ್ಲಿ ವಿಜ್ಞಾನಿಗಳು ಸಹ ಉಪನ್ಯಾಸ ನೀಡುವ ಜತೆಗೆ ಕೋವಿಡ್ ಸೋಂಕಿನ ಕುರಿತು ಜಾಗೃತಿ ಮೂಡಿಸಿದ್ದಾರೆ ಎಂದು ಗಂಗಾವತಿ ಕೆವಿಕೆ ಮುಖ್ಯಸ್ಥರು ಡಾ. ಎಂ.ವಿ. ರವಿ ತಿಳಿಸಿದ್ದಾರೆ.
ಆನ್‌ಲೈನ್ ಮೂಲಕ ತರಬೇತಿ ನೀಡಿ, ಹೊಸ ತಳಿಗಳು ಮತ್ತು ಮಾರುಕಟ್ಟೆಸೇರಿದಂತೆ ರೈತರಿಗೆ ಉಪಯೋಗ ವಾಗುವ ಸೌಲಭ್ಯಗಳ ಕುರಿತು ಸಂವಾದ ನಡೆಸಿದ್ದಾರೆ. ಇದರಿಂದ ಅನುಕೂಲವಾಗಿದೆ ಎಂದು ಯರಡೋಣದ ಪ್ರಗತಿಪರ ರೈತರ ಸಿದ್ದನಗೌಡ ಹೇಳಿದ್ದಾರೆ.