40 ಕೋಟಿ ವೆಚ್ಚದಲ್ಲಿ ಬ್ಲ್ಯಾಕ್‌ ಫಂಗಸ್‌ ಔಷಧಿ ಖರೀದಿ: ಡಿಸಿಎಂ ಅಶ್ವತ್ಥನಾರಾಯಣ

By Suvarna News  |  First Published Jun 5, 2021, 2:24 PM IST

* ಬೆಂಗಳೂರು ಗ್ರಾ. ಜಿಲ್ಲೆಯ 4 ತಾಲೂಕು ಆಸ್ಪತ್ರೆಗಳಲ್ಲಿ ಶೀಘ್ರವೇ 100 ಹಾಸಿಗೆಗಳ ವ್ಯವಸ್ಥೆ:  
* ಎಲ್ಲೆಡೆ ಆಕ್ಸಿಜನ್‌ ಜನರೇಟರ್‌, ಐಸಿಯು, ವೆಂಟಿಲೇಟರ್‌ ಸೌಲಭ್ಯ
* ಕಪ್ಪು ಶಿಲೀಂದ್ರ ಕಾಯಿಲೆ ಬಗ್ಗೆ ಹೆಚ್ಚು ಕಾಳಜಿ ವಹಿಸಿದ ಸರ್ಕಾರ 
 


ದೊಡ್ಡಬಳ್ಳಾಪುರ(ಜೂ.05):  ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಾಲ್ಕೂ ತಾಲೂಕು ಆಸ್ಪತ್ರೆಗಳನ್ನು ಸಂಪೂರ್ಣವಾಗಿ ಮೇಲ್ದರ್ಜೆಗೇರಿಸಲಾಗುವುದು ಎಂದು ರಾಜ್ಯ ಕೋವಿಡ್‌ ಕಾರ್ಯಪಡೆ ಅಧ್ಯಕ್ಷರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ಅಶ್ವತ್ಥನಾರಾಯಣ ಹೇಳಿದ್ದಾರೆ. 

ಇಂದು(ಶನಿವಾರ) ತಾಲೂಕಿನ ಘಾಟಿಯಲ್ಲಿ ರೈತರಿಂದ ಖರೀದಿ ಮಾಡಿದ ತರಕಾರಿ, ಆಹಾರ ಧಾನ್ಯವನ್ನು ಆಶಾ ಕಾರ್ಯಕರ್ತೆಯರು, ಮುಂಚೂಣಿ ಕಾರ್ಯಕರ್ತರಿಗೆ ವಿತರಿಸಿ ಹಾಗೂ ಮಹಾತ್ಮ ಗಾಂಧಿ ಟ್ರಸ್ಟ್‌ನಿಂದ ನೀಡಲಾದ  ಎರಡು ಆಂಬ್ಯುಲೆನ್ಸ್‌, ಆಮ್ಲಜನಕ ಸಾಂದ್ರಕಗಳನ್ನು ಸ್ಥಳೀಯ ಆರೋಗ್ಯ ವ್ಯವಸ್ಥೆಗೆ ಹಸ್ತಾಂತರಿಸಿದರು. 

Latest Videos

undefined

ಬಳಿಕ ಮಾಧ್ಯಮಗಳ ಜತೆ ಮಾತನಾಡಿದ ಅಶ್ವತ್ಥನಾರಾಯಣ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ಆಸ್ಪತ್ರೆಯಲ್ಲಿ ಈಗಾಗಲೇ 100 ಬೆಡ್‌ಗಳ ವ್ಯವಸ್ಥೆ ಇದೆ. ಇನ್ನು ನೆಲಮಂಗಲದಲ್ಲಿ 30, ದೇವನಹಳ್ಳಿಯಲ್ಲಿ 30-40, ಹೊಸಕೋಟೆಯಲ್ಲಿ 30-40 ಬೆಡ್‌ಗಳ ವ್ಯವಸ್ಥೆ ಇದೆ. ಈ ಎಲ್ಲ ತಾಲೂಕುಗಳಲ್ಲಿ ಕನಿಷ್ಟ 100  ಹಾಸಿಗೆಗಳ ಅತ್ಯುತ್ತಮ ವ್ಯವಸ್ಥೆ ಮಾಡಲಾಗುವುದು. ಆಕ್ಸಿಜನ್‌, ಐಸಿಯು ಬೆಡ್‌ಗಳ ಜತೆ ಪ್ರತಿ ತಾಲೂಕು ಆಸ್ಪತ್ರೆಯಲ್ಲಿ ಪ್ರತ್ಯೇಕ ಆಕ್ಸಿಜನ್‌ ಜನರೇಟರ್‌ಗಳನ್ನು ಅಳವಡಿಸಲಾಗುವುದು ಎಂದು ತಿಳಿಸಿದ್ದಾರೆ. 

ಬೆಂಗಳೂರು ಪಶ್ಚಿಮ ವಲಯದಲ್ಲಿ ಯಶಸ್ವಿ ವ್ಯಾಕ್ಸಿನೇಷನ್

ಬ್ಲ್ಯಾಕ್‌ ಫಂಗಸ್‌ ಔಷಧಿ ಖರೀದಿ: 

ರಾಜ್ಯದಲ್ಲಿ ಕೋವಿಡ್‌ ಪರಿಸ್ಥಿತಿಯ ಜತೆಗೆ, ಬ್ಲ್ಯಾಕ್‌ ಫಂಗಸ್‌ ನಿವಾರಣೆಗೂ ಬಿಗಿ ಕ್ರಮ ಕೈಗೊಳ್ಳಲಾಗಿದೆ. ಸದ್ಯಕ್ಕೆ 40 ಕೋಟಿ ರೂ.ಗಳಷ್ಟು ಬ್ಲ್ಯಾಕ್ ಫಂಗಸ್ ಔಷಧಿ ಖರೀದಿ ಮಾಡಲಾಗುತ್ತಿದೆ ಎಂದು ಡಿಸಿಎಂ ಹೇಳಿದರು. 
ಕಪ್ಪು ಶಿಲೀಂದ್ರ ಕಾಯಿಲೆ ಬಗ್ಗೆ ಸರ್ಕಾರ ಅತಿ ಹೆಚ್ಚು ಕಾಳಜಿ ವಹಿಸಿದ್ದು, ಮೂರು ದಿನಗಳ ಹಿಂದೆ 40 ಕೋಟಿ ರೂ.ಗಳಷ್ಟು ಮೊತ್ತದ ಔಷಧಿ ಖರೀದಿಗೆ ರಾಜ್ಯ ಸರ್ಕಾರ ಆದೇಶ ನೀಡಿದ್ದು, ಆ ಔಷಧಿಗಳ ಪೂರೈಕೆ ಶುಕ್ರವಾರದಿಂದಲೇ ಆರಂಭವಾಗಿದೆ. ಇದರಲ್ಲಿ ʼಲೈಪೋಸೊಮಲ್‌ ಆಂಪೋಟೆರಿಸಿನ್-ಬಿʼ ಎನ್ನುವ ಔಷಧ ಕೊರತೆ ಇದೆ. ಇದನ್ನು ಅಗತ್ಯ ಪ್ರಮಾಣದಲ್ಲಿ ಒದಗಿಸುವುದಾಗಿ ಕೇಂದ್ರ ಸಚಿವ ಸದಾನಂದ ಗೌಡರು ಭರವಸೆ ನೀಡಿದ್ದಾರೆ. ಹಾಗೆಯೇ ಇದಕ್ಕೆ ಪರ್ಯಾಯವಾಗಿ ʼಎಮಲ್ಷನ್‌ ಆಂಪೋಟೆರಿಸನ್-ಬಿʼ ಔಷಧಿಯನ್ನು ಒಂದು ಲಕ್ಷ ವಯಲ್ಸ್‌ಗಳನ್ನು 30 ಕೋಟಿ ರೂ. ವೆಚ್ಚದಲ್ಲಿ ಖರೀದಿಗೆ ಆದೇಶ ನೀಡಲಾಗಿದೆ. ಅದರ ಜತೆಯಲ್ಲೇ ʼಅಂಪೋಟೆರಿಸಿನ್‌ ಪ್ಲೇನ್‌ʼ ಎನ್ನುವ ಔಷಧಿಯನ್ನೂ ಖರೀದಿಗೆ ಆದೇಶಶಿಸಲಾಗಿದೆ ಎಂದು ಡಿಸಿಎಂ ಮಾಹಿತಿ ನೀಡಿದರು. 

ಇನ್ನು, ರಾಜ್ಯದಲ್ಲಿ ಈವರೆಗೆ ವರದಿಯಾಗಿರುವ ಪ್ರಕರಣಗಳು 800 ಹಾಗೂ ಸಸ್ಪೆಕ್ಟ್ ಆಗಿರುವಂಥವು 700 ಮಾತ್ರ. ಆದರೂ ಸರ್ಕಾರ ಇಷ್ಟು ದೊಡ್ಡ ಪ್ರಮಾಣದಲ್ಲಿ ಔಷಧಿ ಖರೀದಿ ಮಾಡುತ್ತಿದೆ. ಹೀಗಾಗಿ ಆತಂಕಪಡುವ ಅಗತ್ಯ ಇಲ್ಲ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. 

ಈ ಕಾರ್ಯಕ್ರಮದಲ್ಲಿ ಶ್ರೀ ವಿನಯ್‌ ಗುರೂಜಿ ಅವರು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಅರಣ್ಯ ಸಚಿವ ಅರವಿಂದ ಲಿಂಬಾವಳಿ, ಯಲಹಂಕ ಶಾಸಕ ಹಾಗೂ ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್‌, ಶಾಸಕ ವೆಂಕಟರಮಣಪ್ಪ, ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಬೇಳೂರು ರಾಘವೇಂದ್ರ ಶೆಟ್ಟಿ, ಗೀವ್ ಇಂಡಿಯಾ ಮುಖ್ಯಸ್ಥ ವಿನೋದ, ಸರ್ಕಾರದ ಸಿಎಸ್ ಆರ್ ಸಲಹೆಗಾರ ಮಹೇಶ, ಜಿಲ್ಲಾಧಿಕಾರಿ, ಜಿಪಂ ಸಿಇಒ ಮುಂತಾದವರು ಇದ್ದರು.
 

click me!