* ಗ್ರಾಮೀಣ ಟಾಸ್ಕ್ ಫೋರ್ಸ್‌ಗೆ ಕೋವಿಡ್ ನಿಯಂತ್ರಣದ ಪೂರ್ಣ ಜವಾಬ್ದಾರಿ
* ಗ್ರಾಮೀಣ ಟಾಸ್ಕ್ ಫೋರ್ಸ್ ಮೇಲೆ ಕೋವಿಡ್ ಕೇಸ್
* ಗ್ರಾಮದಿಂದ ಹೊರಗೆ ಹಾಗೂ ಗ್ರಾಮದ ಒಳಗೆ ಓಡಾಟವ ನಿರ್ಬಂಧ
ಹಾವೇರಿ(ಜೂ.05): ಜಿಲ್ಲೆಯಲ್ಲಿ ಕೋವಿಡ್ ಎರಡನೇ ಅಲೆಯ ಸೋಂಕನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಮನೆ ಮನೆಯ ಭೇಟಿ ಹಾಗೂ ರ‍್ಯಾಪಿಡ್ ಸರ್ವೇ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಆದರೆ ನಾಗಲಾಪುರ ಸೇರಿದಂತೆ ಕೆಲ ಗ್ರಾಮಗಳಲ್ಲಿ ಗ್ರಾಮಸ್ಥರು ತಪಾಸಣೆಗೆ ನಿರಾಕರಿಸುತ್ತಿರುವುವುದು ಕಂಡುಬರುತ್ತಿದೆ. ಇಂತಹ ಗ್ರಾಮಗಳನ್ನು ಸಂಪೂರ್ಣ ಲಾಕ್‌ಡೌನ್ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಎಚ್ಚರಿಸಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ವಿಡಿಯೋ ಸಂವಾದ ನಡೆಸಿದ ಅವರು, ಕೋವಿಡ್ ತಪಾಸಣೆಗೆ ಸಹಕರಿಸದೇ ಮನೆಗೆ ಆರೋಗ್ಯ ಸಿಬ್ಬಂದಿ ತಪಾಸಣೆಗೆ ತೆರಳಿದರೆ ಮನೆಯೊಳಗೆ ಸೇರಿಕೊಂಡು ಪ್ರತಿಭಟಿಸುತ್ತಿರುವುದು ಕಂಡುಬಂದಿದೆ. ಬ್ಯಾಡಗಿ ತಾಲೂಕಿನ ನಾಗಲಾಪುರ ಗ್ರಾಮದಲ್ಲಿ ಇಂತಹ ಘಟನೆ ನಡೆದಿದ್ದು, ಇಡೀ ಗ್ರಾಮವನ್ನು ಲಾಕ್‌ಡೌನ್ ಘೋಷಿಸಲಾಗಿದೆ. ಗ್ರಾಮದಿಂದ ಹೊರಗೆ ಹಾಗೂ ಗ್ರಾಮದ ಒಳಗೆ ಓಡಾಟವನ್ನು ಪೂರ್ಣ ನಿರ್ಬಂಧಿಸಲಾಗಿದೆ. ಇದೇ ಮಾದರಿಯಲ್ಲಿ ಇತರ ಗ್ರಾಮಗಳಲ್ಲಿ ಮುಂದುವರಿದರೆ ಇಡೀ ಗ್ರಾಮವನ್ನು ಲಾಕ್‌ಡೌನ್ ಮಾಡಲಾಗುವುದು ಎಂದು ಎಚ್ಚರಿಸಿದರು.
ಲಾಕ್‌ಡೌನ್ ಎಫೆಕ್ಟ್: ನೌಕರಿಗೆ ಗುಡ್ ಬೈ ಹೇಳಿ ಕೃಷಿಗೆ ಜೈ ಎಂದ ಯುವಕರು..!
ಗ್ರಾಮೀಣ ಪ್ರದೇಶದಲ್ಲಿ ಸರ್ವೇ, ಪರೀಕ್ಷೆ ಹಾಗೂ ಪಾಸಿಟಿವ್ ಬಂದರೆ ಕೋವಿಡ್ ಆಸ್ಪತ್ರೆಗೆ ಸೇರಿಸುವುದು ಸೇರಿದಂತೆ ಗ್ರಾಮಗಳಲ್ಲಿ ಗ್ರಾಮೀಣ ಟಾಸ್ಕ್‌ಫೋರ್ಸ್‌ಗೆ ಕೋವಿಡ್ ನಿಯಂತ್ರಣದ ಪೂರ್ಣ ಜವಾಬ್ದಾರಿ ನೀಡಲಾಗಿದೆ. ಆದರೆ ನಾಗಲಾಪುರದಲ್ಲಿ ಸಮರ್ಪಕವಾಗಿ ಕಾರ್ಯನಿರ್ವಹಿಸಿರುವುದಿಲ್ಲ. ಯಾವುದೇ ಗ್ರಾಮಗಳಲ್ಲಿ ಈ ರೀತಿಯ ಬೆಳವಣಿಗೆ ನಡೆದರೆ ಆಯಾ ಗ್ರಾಮದ ಗ್ರಾಮೀಣ ಟಾಸ್ಕ್‌ಫೋರ್ಸ್ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಹಮ್ಮದ ರೋಷನ್, ಅಪರ ಜಿಲ್ಲಾಧಿಕಾರಿ ಯೋಗೇಶ್ವರ, ಆರ್‌ಸಿಎಚ್ ಅಧಿಕಾರಿ ಡಾ. ಜಯಾನಂದ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಚ್.ಎಸ್. ರಾಘವೇಂದ್ರಸ್ವಾಮಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ಪಿ.ವೈ. ಶೆಟ್ಟೆಪ್ಪನವರ, ವಿಕಲಚೇತನರ ಕಲ್ಯಾಣಾಧಿಕಾರಿ ಮಲ್ಲಿಕಾರ್ಜುನ ಮಠದ, ತಾಪಂ ಇಒ ಬಸವರಾಜಪ್ಪ, ತಾಲೂಕು ಆರೋಗ್ಯಾಧಿಕಾರಿ ಡಾ. ಪ್ರಭಾಕರ ಕುಂದೂರ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona