ಕೇಂದ್ರ ಮತ್ತು ರಾಜ್ಯ ಸರ್ಕಾರ ಅರಿಶಿಣ ಖರೀದಿ ಮಾಡಬೇಕೆಂದು ಆದೇಶಿಸಿದ್ದರು ಇದ್ಯಾವುದನ್ನು ಗಮನಕ್ಕೆ ತೆಗೆದುಕೊಳ್ಳದೆ, ಕಾಲಹರಣ ಮಾಡುತ್ತಿರುವ ಜಿಲ್ಲಾಡಳಿತದ ವಿರುದ್ಧ ಜಿಲ್ಲಾ ರೈತ ಸಂಘ ಮತ್ತು ಹಸಿರು ಹಾಗೂ ಅರಿಶಿಣ ಬೆಳೆಗಾರರ ಒಕ್ಕೂಟದ ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.
ಚಾಮರಾಜನಗರ (ಮೇ.31): ಕೇಂದ್ರ ಮತ್ತು ರಾಜ್ಯ ಸರ್ಕಾರ ಅರಿಶಿಣ ಖರೀದಿ ಮಾಡಬೇಕೆಂದು ಆದೇಶಿಸಿದ್ದರು ಇದ್ಯಾವುದನ್ನು ಗಮನಕ್ಕೆ ತೆಗೆದುಕೊಳ್ಳದೆ, ಕಾಲಹರಣ ಮಾಡುತ್ತಿರುವ ಜಿಲ್ಲಾಡಳಿತದ ವಿರುದ್ಧ ಜಿಲ್ಲಾ ರೈತ ಸಂಘ ಮತ್ತು ಹಸಿರು ಹಾಗೂ ಅರಿಶಿಣ ಬೆಳೆಗಾರರ ಒಕ್ಕೂಟದ ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು. ನಗರದ ಚಾಮರಾಜೇಶ್ವರ ದೇವಸ್ಥಾನದ ಮುಂಭಾಗದಿಂದ ಜಿಲ್ಲಾಡಳಿತ ಭವನದ ಆವರಣದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ, ಮೆರವಣಿಗೆ ಉದ್ದಕ್ಕೂ ಜಿಲ್ಲಾಡಳಿತ ವಿಳಂಬ ನೀತಿಗೆ ಧಿಕ್ಕಾರದ ಘೋಷಣೆ ಕೂಗಿದರು.
ಜಿಲ್ಲಾಡಳಿತ ಭವನದ ಆವರಣದಲ್ಲಿ ಇಂದಿನಿಂದಲೇ ಅರಿಶಿಣ ಖರೀದಿಸುವಂತೆ ಆಗ್ರಹಿಸಿ ಪಟ್ಟು ಹಿಡಿದು, ಅರಿಶಿಣವನ್ನು ನೆಲಕ್ಕೆ ಸುರಿದು, ಸ್ಥಳಕ್ಕಾಗಮಿಸಿದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಜಿಲ್ಲಾ ರೈತ ಸಂಘದ ಅಧ್ಯಕ್ಷ ಹೊನ್ನೂರು ಪ್ರಕಾಶ್ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರ ಮೂರು ತಿಂಗಳ ಹಿಂದೆಯೇ ಆರಿಶಿಣ ಖರೀದಿ ಮಾಡಬೇಕೆಂದು ಆದೇಶಿಸಿವೆ. ಇಂದು ಕೇಂದ್ರ ಸರ್ಕಾರ ನೀಡಿದ್ದ ಗಡುವು ಮುಗಿದಿದೆ. ಮೇ 21 ರ ಒಳಗಾಗಿ 22 ಸಾವಿರ ಮೆಟ್ರಿಕ್ ಟನ್ ಅರಿಶಿಣ ಖರೀದಿಸಲು ಆದೇಶಿಸಿದ್ದರೂ, ಜಿಲ್ಲೆಯಲ್ಲಿ ಇಲ್ಲಿಯವರೆಗೆ ಯಾವೊಬ್ಬ ರೈತನ ಅರಿಶಿಣ ಖರೀದಿ ಕೇಂದ್ರದ ಮೂಲಕ ಖರೀದಿಸದೆ ರೈತರಿಗೆ ಅನ್ಯಾಯವೆಸಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
undefined
ಮೂಲ ಸೌಲಭ್ಯ ಒದಗಿಸುವುದು ನಮ್ಮ ಕರ್ತವ್ಯ: ಶಾಸಕ ಬಾಲಕೃಷ್ಣ
ಜಿಲ್ಲಾಡಳಿತ ಪಾಲಿಷ್ ಮಾಡಿ ಕೊಡಿ ಖರೀದಿಸುತ್ತೇವೆ ಎಂದು ಹೇಳಿದ ನಂತರ ಎಲ್ಲಾ ರೈತರು ಕಷ್ಟಪಟ್ಟು ಪಾಲಿಷ್ ಮಾಡಿಸಿದ್ದರೂ, ಖರೀದಿ ಮಾಡಿಲ್ಲ. ಇದರಿಂದ ಅರಿಶಿಣ ಹುಳುಕು ಹಿಡಿಯುತ್ತಿದ್ದು ತೂಕ ಕಡಿಮೆಯಾಗಿ ರೈತರಿಗೆ ಅನ್ಯಾಯವಾಗುತ್ತಿದೆ ಎಂದರು. ನಮ್ಮ ಹೋರಾಟದ ಫಲವಾಗಿ ಕೇಂದ್ರ ಸರ್ಕಾರ 6994 ರು. ಬೆಂಬಲ ನೀಡಿ, ಖರೀದಿಸಿ ಎಂದು ಆದೇಶಿಸಿ ಮೂರು ತಿಂಗಳಾಗಿದೆ, ಜಿಲ್ಲಾಡಳಿತದ ಕೃಷಿ, ತೋಟಗಾರಿಕೆ ಮತ್ತು ಸಹಕಾರ ಇಲಾಖೆ ಅಧಿಕಾರಿಗಳ ನಿರ್ಲಕ್ಷತ್ರ್ಯತನದಿಂದಾಗಿ ಜಿಲ್ಲೆಯ ಅರಿಶಿಣ ಬೆಳೆಗಾರರು ನಷ್ಟಅನುಭವಿಸುವಂತಾಗಿದೆ ಎಂದರು.
ಅಧಿಕಾರಿಗಳಿಗೆ ತರಾಟೆ: ಮನವಿ ಸ್ವೀಕರಿಸಲು ಬಂದ ಆಹಾರ ಇಲಾಖೆಯ ಉಪನಿರ್ದೇಶಕ ಯೋಗಾನಂದ್ ಮತ್ತು ತೋಟಗಾರಿಕೆಯ ಇಲಾಖೆಯ ಉಪ ನಿರ್ದೇಶಕ ಶಿವಪ್ರಕಾಶ್ ಅವರು ಚುನಾವಣಾ ನೀತಿ ಸಂಹಿತೆಯಿಂದಾಗಿ ವಿಳಂಬವಾಗಿದೆ, ನಾಳೆಯಿಂದಲೇ ಖರೀದಿಗೆ ವ್ಯವಸ್ಥೆ ಮಾಡಲಾಗುವುದು ಎಂದು ಹೇಳುತ್ತಿದ್ದಂತೆಯೇ ಅವರನ್ನು ತರಾಟೆಗೆ ತೆಗೆದುಕೊಂಡ ಪ್ರತಿಭಟನಾಕಾರರು ನಮಗೆ ನಿಮ್ಮ ಸಬೂಬು ಬೇಡ ಇಂದಿನಿಂದಲೇ ಆರಿಶಿಣ ಖರೀದಿ ಮಾಡಬೇಕೆಂದು ಪಟ್ಟು ಹಿಡಿದು, ಅರಿಶಿಣ ಖರೀದಿ ಮಾಡುವ ಮೂಲಕ ಚಾಲನೆ ನೀಡಬೇಕೆಂದು ಹಠ ಹಿಡಿದು ಕುಳಿತರು.
ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಗಮನಕ್ಕೆ ತಂದು ಖರೀದಿ ದಿನಾಂಕವನ್ನು ವಿಸ್ತರಣೆ ಮಾಡಿಸಿ ರೈತರಿಂದ ಅರಿಶಿಣ ಖರೀದಿ ಮಾಡಿಸಬೇಕೆಂದು ಒತ್ತಾಯಿಸಿದರು. ಅರಿಶಿಣ ಖರೀದಿ ಪ್ರಕ್ರಿಯೆ ಪ್ರಾರಂಭವಾಗದಿದ್ದರೆ, ರೈತರಿಗೆ ಆಗುವ ಆರ್ಥಿಕ ನಷ್ಟಕ್ಕೆ ಅಧಿಕಾರಿಗಳೇ ನೇರ ಹೊಣೆಗಾರರಾಗಿರುತ್ತೀರಿ, ರೈತ ಸಂಘದಿಂದ ಉಗ್ರ ಪ್ರತಿಭಟನೆ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು. ಪ್ರತಿಭಟನೆಯಲ್ಲಿ ನಾಗಾರ್ಜುನ ಕುಮಾರ್, ಡಾ. ಗುರುಪ್ರಸಾದ್, ಕುಂದಕೆರೆ ಸಂಪತ್, ಚಂದ್ರು, ದಡದಹಳ್ಳಿ ಮಹೇಶ್, ಕುಮಾರ್ ಮೇಲಾಜಿಪುರ, ಶಾಂತಮೂರ್ತಿ, ಬಸವರಾಜು, ಮಹದೇವಸ್ವಾಮಿ ಭಾಗವಹಿಸಿದ್ದರು.
ಯಾವುದೇ ಅನುಮಾನ ಬೇಡ, ಗ್ಯಾರಂಟಿ ಅನುಷ್ಠಾನ ಖಚಿತ: ಡಾ.ಜಿ.ಪರಮೇಶ್ವರ್
ಲಂಚ ನೀಡಲು ಮುಂದಾದ ರೈತರು!: ಅರಿಶಿಣ ಖರೀದಿಸುವಂತೆ ಆಗ್ರಹಿಸಿ ಪಟ್ಟು ಹಿಡಿದು ಪ್ರತಿಭಟನೆ ನಡೆಸುತ್ತಿದ್ದ ಸ್ಥಳಕ್ಕೆ ಆಗಮಿಸಿದ ಆಹಾರ ಇಲಾಖೆಯ ಉಪನಿರ್ದೇಶಕ ಯೋಗಾನಂದ್ ಮತ್ತು ತೋಟಗಾರಿಕೆಯ ಇಲಾಖೆಯ ಉಪನಿರ್ದೇಶಕ ಶಿವಪ್ರಕಾಶ್ ಅವರಿಗೆ ರೈತರು ತರಾಟೆಗೆ ತೆಗೆದುಕೊಂಡು, ಖರೀದಿ ಕೇಂದ್ರ ತೆರೆಯಬೇಕಾದರೆ ನಿಮಗೆ ಲಂಚ ಕೊಡಬೇಕಾ, ಒಂದು ಟನ್‌ಗೆ 100 ರು. ನೀಡುತ್ತೇನೆ ತೆಗೆದುಕೊಳ್ಳಿ ಎಂದು ಹೇಳಿ ಪ್ರತಿಭಟನಾಕಾರರ ಹತ್ತಿರ ತಲಾ ನೂರು ವಸೂಲಿ ಮಾಡಿ, ಅಧಿಕಾರಿಗಳಿಗೆ ಕೊಡಲು ಮುಂದಾದರು. ಅಧಿಕಾರಿಗಳು ಗಲಿಬಿಲಿಗೊಂಡರು, ನಂತರ ಹಣವನ್ನು ನೆಲಕ್ಕೆ ಚೆಲ್ಲಿ ಅದರ ಮೇಲೆ ಅರಿಶಿಣ ಹಾಕಿ ಪ್ರತಿಭಟನೆ ನಡೆಸಿದರು.