Dharwad: ಸರ್ಕಾರದ ಷರತ್ತು, ರೈತರಿಗೆ ಇಕ್ಕಟ್ಟು..!

By Kannadaprabha News  |  First Published Sep 6, 2022, 9:08 PM IST

ಹೆಸರು-ಉದ್ದು ಖರೀದಿ ಕೇಂದ್ರ ತೆರೆಯಲು ಆದೇಶ, ಇತ್ತ ತೇವಾಂಶ ಶೇ. 12 ಮೀರದಂತೆ ಷರತ್ತು


ಧಾರವಾಡ(ಸೆ.06):  ರೈತರ ನಿರಂತರ ಹೋರಾಟದ ಫಲವಾಗಿ ಕೊನೆಗೂ ಸರ್ಕಾರ ಜಿಲ್ಲೆಯಲ್ಲಿ ಹೆಸರು ಖರೀದಿ ಕೇಂದ್ರ ತೆರೆಯಲು ಆದೇಶಿಸಿದೆ. ಇದರಿಂದ ರೈತರು ಖುಷಿಯಾದ್ರು ಎನ್ನುವಷ್ಟರಲ್ಲಿ ಸರ್ಕಾರ ವಿಧಿಸಿರುವ ಷರತ್ತುಗಳು ಮತ್ತೆ ರೈತರನ್ನು ಸಂಕಷ್ಟಕ್ಕೆ ಸಿಲುಕಿಸಿವೆ.

ಜಿಲ್ಲೆಯಲ್ಲಿ ಈ ಬಾರಿ 71 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಹೆಸರು ಬೆಳೆಯಲಾಗಿತ್ತು. ಈ ಪೈಕಿ ಈಗಾಗಲೇ ಮಳೆಯಿಂದ ಹಾಳಾಗಿದ್ದು, ಬಂದ ಬೆಳೆಯನ್ನು ದಲ್ಲಾಳಿಗೆ ಮಾರಾಟ ಮಾಡಿದ್ದನ್ನು ಹೊರತು ಶೇ. 30ರಷ್ಟುಉಳಿದಿದೆ. ರೈತರು ಅಳಿದುಳಿದ ಹೆಸರನ್ನು ರಾಶಿ ಮಾಡಿ, ಮನೆಯ ಬಳಿಯೇ ಸಂಗ್ರಹಿಸಿ ಇಟ್ಟಿದ್ದಾರೆ. ಈ ಹೆಸರನ್ನು ಮಾರುಕಟ್ಟೆಗೆ ತೆಗೆದುಕೊಂಡು ಹೋದರೆ ಅತಿ ಕಡಿಮೆ ಬೆಲೆ ನಿಗದಿ ಮಾಡಲಾಗುತ್ತಿದೆ. ಇದೇ ಕಾರಣಕ್ಕೆ ರೈತರು ಬೆಂಬಲ ಬೆಲೆಯಡಿ ಹೆಸರನ್ನು ಖರೀದಿಸುವಂತೆ ಒತ್ತಾಯಿಸಿದ್ದರು. ಇದಕ್ಕೆ ಮಣಿದ ಸರ್ಕಾರ ಜಿಲ್ಲೆಯಲ್ಲಿ ಹೆಸರಿಗೆ ಒಟ್ಟು 17 ಖರೀದಿ ಕೇಂದ್ರ ಹಾಗೂ ಉದ್ದಿಗೆ 3 ಕೇಂದ್ರ ತೆರೆಯಲು ಆದೇಶಿಸಿದೆ. ಪ್ರತಿ ಕ್ವಿಂಟಲ್‌ಗೆ . 7755 ಬೆಲೆ ನಿಗದಿ ಮಾಡಿ ಖರೀದಿಸಲು ನಿರ್ಧರಿಸಲಾಗಿದೆ. ಆದರೆ ಈ ವೇಳೆ ಕಾಳಿನಲ್ಲಿನ ತೇವಾಂಶ ಶೇ. 12ರಷ್ಟುಮೀರಬಾರದು. ಒಂದು ವೇಳೆ ತೇವಾಂಶ ಹೆಚ್ಚಾದರೆ ಆ ಹೆಸರು ಕಾಳನ್ನು ಖರೀದಿಸುವುದಿಲ್ಲ ಎಂಬ ಷರತ್ತು ವಿಧಿಸಿರುವುದು ರೈತರ ನಿದ್ದೆಗೆಡಿಸಿದೆ.
ಒಣಗುತ್ತಿಲ್ಲ:

Latest Videos

undefined

ಹುಬ್ಬಳ್ಳಿ-ಧಾರವಾಡ ಪ್ರವಾಹ ಪೀಡಿತ ಸ್ಥಳಗಳಿಗೆ ಸಚಿವರ ಭೇಟಿ

ಜಿಲ್ಲೆಯಲ್ಲಿ ಮೋಡ ಮುಸುಕಿದ ವಾತಾವರಣ ಇದೆ. ಜತೆಗೆ ಸಂಜೆ ದೊಡ್ಡ ಪ್ರಮಾಣದಲ್ಲಿ ಮಳೆ ಬೀಳುತ್ತಿದೆ. ಹೆಸರು ಕಾಳನ್ನು ಒಣಗಿಸಲು ಸಾಧ್ಯವಾಗುತ್ತಿಲ್ಲ. ಅಲ್ಲದೇ ಕೆಲ ದಿನಗಳ ಹಿಂದಷ್ಟೇ ಹೆಸರನ್ನು ಕಿತ್ತು ರಾಶಿ ಮಾಡಲಾಗಿದೆ. ರಾಶಿ ಮಾಡಿದ ಬಳಿಕ ಒಣಗಿಸಲು ಕೂಡ ಸಾಧ್ಯವಾಗುತ್ತಿಲ್ಲ. ಶೇ. 12ಕ್ಕಿಂತ ಹೆಚ್ಚಿನ ತೇವಾಂಶ ಇದ್ದರೆ ಖರೀದಿ ಕೇಂದ್ರದಲ್ಲಿ ಖರೀದಿಸುವುದಿಲ್ಲ ಎನ್ನುವ ಷರತ್ತಿನಿಂದಾಗಿ ರೈತರಿಗೆ ಖರೀದಿ ಕೇಂದ್ರಗಳು ಶುರುವಾದರೂ ಉಪಯೋಗವಾಗುವುದಿಲ್ಲ.
ಸದ್ಯದ ವಾತಾವರಣದ ಸ್ಥಿತಿ ಗಮನಿಸಿದರೆ ರೈತರು ಏನೇ ಮಾಡಿದರೂ ಕಾಳಿನ ತೇವಾಂಶ ಕಡಿಮೆ ಮಾಡಲು ಸಾಧ್ಯವಿಲ್ಲ. ಇನ್ನೂ ಕೆಲ ದಿನ ಹಾಗೆಯೇ ಇಟ್ಟರೆ ಕಾಳು ಕೆಟ್ಟು ಹೋಗುತ್ತವೆ. ಹೀಗಾಗಿ ಈ ತೇವಾಂಶದ ಷರತ್ತನ್ನು ಸರ್ಕಾರ ಸಡಿಲಗೊಳಿಸಬೇಕು. ಈ ಮೂಲಕ ರೈತರ ನೆರವಿಗೆ ಬರಬೇಕು ಎನ್ನುವುದು ಯಾದವಾಡ ಗ್ರಾಮದ ವಿಠ್ಠಲ ದಿಂಡಲಕೊಪ್ಪ ಅವರ ಆಗ್ರಹ.

ಈಗಾಗಲೇ ಅತಿವೃಷ್ಟಿ ಹಾಗೂ ಇನ್ನಿತರ ಸಮಸ್ಯೆಗಳಿಂದ ಜಿಲ್ಲೆಯ ರೈತರು ಜರ್ಜರಿತರಾಗಿದ್ದಾರೆ. ಸಾಕಷ್ಟುಹೋರಾಟದ ನಂತರ ಸರ್ಕಾರ ಸಹಾಯ ಹಸ್ತ ಚಾಚಿದಂತೆ ಮಾಡಿ, ಮತ್ತೊಂದು ಕಡೆಯಿಂದ ರೈತರ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡುತ್ತಿದೆ. ಹೆಸರು ನೋಂದಣಿ, ಖರೀದಿಗೆ ಸಮಯವಕಾಶ ಇದ್ದರೂ ಒಂದೆಡೆ ದಲ್ಲಾಳಿಗಳ ಆಟ, ಮತ್ತೊಂದೆಡೆ ಸರ್ಕಾರದ ಕಣ್ಣೊರಿಸುವ ತಂತ್ರದಿಂದಾಗಿ ರೈತರು ಕಂಗಲಾಗಿದ್ದಾರೆ. ರೈತರು ಯಾವಾಗ ಸರ್ಕಾರದ ವಿರುದ್ಧ ಸಿಡಿದೇಳುತ್ತಾರೆ ಗೊತ್ತಿಲ್ಲ ಎಂದು ಮಾಜಿ ಶಾಸಕ ಎನ್‌.ಎಚ್‌. ಕೋನರಡ್ಡಿ ಬೇಸರ ವ್ಯಕ್ತಪಡಿಸಿದರು.

ಸರ್ಕಾರವು ಹೆಸರಿನೊಂದಿಗೆ ಉದ್ದು ಖರೀದಿಗೆ ಸಹ ಕೇಂದ್ರ ಆರಂಭಿಸುತ್ತಿದೆ. ಜಿಲ್ಲೆಯಲ್ಲಿ ಇನ್ನೂ ಉದ್ದು ಬೆಳೆ ಕಟಾವು ಮಾಡುತ್ತಿದ್ದು ರಾಶಿ ಮಾಡಿ ಒಣಗಿಸುವುದು ಹೆಸರಿಗಿಂತಲೂ ಕಷ್ಟ. ಎರಡೂ ಬೆಳೆಗಳು ಸದ್ಯದ ಸ್ಥಿತಿಯಲ್ಲಿ ಒಣಗುವುದು ಕಷ್ಟವಾಗಿದ್ದರಿಂದ ಈ ಬಗ್ಗೆ ಸರ್ಕಾರ ಚಿಂತನೆ ಮಾಡಬೇಕು ಎಂಬುದು ಕೃಷಿ ತಜ್ಞರ ಆಗ್ರಹ.
 

click me!