Belagavi Rain: ಮನೆಯಲ್ಲಿ ಸಿಲುಕಿದ್ದ 12 ದಿನದ ಹಸುಗೂಸು, ಬಾಣಂತಿ ರಕ್ಷಿಸಿದ ಯುವಕರು!

By Suvarna News  |  First Published Sep 6, 2022, 8:21 PM IST

 ಧಾರಾಕಾರ ಮಳೆಗೆ ರಾಮದುರ್ಗ ತಾಲೂಕಿನ ಜನ ತತ್ತರ. ನೇಕಾರನ ಕುಟುಂಬ ಅತಂತ್ರ, ನೆಲಕಚ್ಚಿದ ಕಬ್ಬು ಅಪಾರ ಬೆಳೆಹಾನಿ. ಗೋಕಾಕ ತಾಲೂಕಿನ ಮಾಣಿಕವಾಡಿಯಲ್ಲಿ ಹಸುಗೂಸು, ಬಾಣಂತಿ ರಕ್ಷಣೆ


ವರದಿ: ಮಹಾಂತೇಶ ಕುರಬೇಟ್, ಏಷ್ಯಾನೆಟ್ ಸುವರ್ಣನ್ಯೂಸ್

ಬೆಳಗಾವಿ (ಸೆ.6): ಕಳೆದ‌ ಕೆಲ ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆ ಭಾರಿ ಅವಾಂತರ ಸೃಷ್ಟಿಸುತ್ತಿದೆ. ಕಳೆದ ರಾತ್ರಿ ರಾಮದುರ್ಗ ಪಟ್ಟಣ ಸೇರಿ ತಾಲೂಕಿನ ವಿವಿಧೆಡೆ ಧಾರಾಕಾರ ಮರೆಯಾಗಿದ್ದು ಹಲವು ಮನೆಗಳ ಕಟ್ಟಡಗಳು ಧರೆಗುರುಳಿ ಅಪಾರ ಬೆಳೆಹಾನಿಯಾಗಿದೆ.‌ ಇತ್ತ ಗೋಕಾಕ್ ತಾಲೂಕಿನ ಮಾಣಿಕವಾಡಿಯಲ್ಲಿ ಮನೆಗೆ ನೀರು ನುಗ್ಗಿ ಸಿಲುಕಿದ್ದ ಹಸುಗೂಸು, ಬಾಣಂತಿ ರಕ್ಷಣಾ ಕಾರ್ಯವೇ ರೋಚಕ. ಬೆಳಗಾವಿ ಜಿಲ್ಲೆಯ ವಿವಿಧೆಡೆ ಕಳೆದ ಕೆಲ ದಿನಗಳಿಂದ ಅಕಾಲಿಕ ಮಳೆಯಾಗುತ್ತಿದ್ದು ರಾಮದುರ್ಗ ಹಾಗೂ ಗೋಕಾಕ ತಾಲೂಕಿನಲ್ಲಿ ಭಾರಿ ಅವಾಂತರ ಸೃಷ್ಟಿಸಿದೆ. ನಿನ್ನೆ ಗೋಕಾಕ್ ತಾಲೂಕಿನ ವಿವಿಧೆಡೆ ಒಂದೂವರೆ ಗಂಟೆಗಳ ಕಾಲ ಸುರಿದ ಧಾರಾಕಾರ ಮಳೆಯಿಂದ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಗೋಕಾಕ್ ಫಾಲ್ಸ್ ಕೂಗಳತೆ ದೂರದಲ್ಲಿ ಇರುವ ಮಾಣಿಕವಾಡಿ ಗ್ರಾಮದ ಸುತ್ತಲೂ ಗುಡ್ಡಗಾಡು ಪ್ರದೇಶವಿದೆ. ಈ ಮಾಣಿಕವಾಡಿ ಗ್ರಾಮದಲ್ಲಿ ಸಮರ್ಪಕ ಚರಂಡಿ ವ್ಯವಸ್ಥೆ ಇರದ ಹಿನ್ನೆಲೆ ಗುಡ್ಡಗಾಡು ಪ್ರದೇಶದಿಂದ ಹರಿದು ಬಂದ ನೀರು ಗ್ರಾಮಕ್ಕೆ ನುಗ್ಗಿ ಪ್ರವಾಹವೇ ಸೃಷ್ಟಿಯಾಗಿತ್ತು. 20ಕ್ಕೂ ಹೆಚ್ಚು ಮನೆಗಳಿಗೆ ಮಳೆ ನೀರು‌ ನುಗ್ಗಿತ್ತು‌. ಈ ವೇಳೆ ಮನೆಯಲ್ಲಿ ಸಿಲುಕಿದ್ದ 12 ದಿನದ ಹಸುಗೂಸು ಹಾಗೂ ಬಾಣಂತಿಯನ್ನು ಸ್ಥಳೀಯರು ರಕ್ಷಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Tap to resize

Latest Videos

ನಿನ್ನೆ ಸಂಜೆ ಒಂದೂವರೆ ಗಂಟೆ ಸುರಿದ ಮಳೆಯಿಂದಾಗಿ ಮನೆಗಳಿಗೆ ನೀರು ನುಗ್ಗಿತ್ತು. ಏಕಾಏಕಿ ಮನೆಗಳಿಗೆ ನೀರು ನುಗ್ಗಿದ್ದರಿಂದ ಮನೆಯೊಳಗೆ ಹಸುಗೂಸು ಬಾಣಂತಿ ಸಿಲುಕಿಕೊಂಡಿದ್ದರು. ಮನೆಗಳ ಮೇಲ್ಛಾವಣಿ ಏರಿ ಕೆಲವು ಕುಟುಂಬ ಸದಸ್ಯರು ಸಿಲುಕಿಕೊಂಡಿದ್ದರು‌‌.‌ ಮನೆ ಒಳಗಡೆ ಸಿಲುಕಿದ್ದ ಬಾಣಂತಿ ಹಸುಗೂಸು ರಕ್ಷಣೆಗೆ ಸ್ಥಳೀಯರು ಹರಸಾಹಸ ಪಟ್ಟರು. ಮೊದಲು ಮೇಲ್ಚಾವಣಿ ಮೇಲೇರಿ ಹಂಚು ತೆಗೆದು ರಕ್ಷಣೆಗೆ ಯತ್ನಿಸಿದಾಗ ಸಾಧ್ಯವಾಗದಿದ್ದಾಗ ಮನೆ ಹೊಕ್ಕು ಒಳಗಡೆ ಸಿಲುಕಿದ್ದ ಮಗು ತಾಯಿಯನ್ನು‌ ಯುವಕರು ರಕ್ಷಿಸಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಯುವಕರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.‌ 

ಒಂದೇ ರಾತ್ರಿ ಸುರಿದ ಮಳೆಗೆ ರಾಮದುರ್ಗ ಜ‌ನರು ಹೈರಾಣ: 
ರಾಮದುರ್ಗ ತಾಲೂಕಿನಲ್ಲಿ ಕಳೆದ ರಾತ್ರಿ 83 ಮಿಲಿಮೀಟರ್ ಮಳೆಯಾಗಿದ್ದು ರಾಮದುರ್ಗ ಪಟ್ಟಣದಲ್ಲಿ ಜನಜೀವನ ಅಸ್ತವ್ಯಸ್ತವಾಗಿತ್ತು. ಎಂಎಲ್‌ಬಿಸಿ ರಸ್ತೆಯಲ್ಲಿ ಮನೆಗಳಿಗೆ ಚರಂಡಿ ನೀರು ನುಗ್ಗಿ ಜನ ಪರದಾಡುವ ಸ್ಥಿತಿ ನಿರ್ಮಾಣ ಆಗಿತ್ತು. ರಾಮದುರ್ಗ ಪಟ್ಟಣದ ಕಿಲ್ಲಾ ಗಲ್ಲಿಯಲ್ಲಿ ನಾಲ್ಕಕ್ಕೂ ಹೆಚ್ಚು ಮನೆಗಳ ಗೋಡೆ ಕುಸಿತವಾಗಿವೆ. ಇನ್ನು ಬೆಳಗಾವಿ ರಾಮದುರ್ಗ ರಸ್ತೆಯಲ್ಲಿ ಇರುವ ಹೀರೋ ಹೋಂಡಾ ಶೋ ರೂಮ್ ಜಲಾವೃತ ಆಗಿತ್ತು.‌ ಇತ್ತ ಕಳೆದ ರಾತ್ರಿ ಸುರಿದ ನಿರಂತರ ಮಳೆಯಿಂದ ಗ್ಯಾರೇಜ್ ಗೋಡೆ ಕುಸಿದಿತ್ತು.‌ 

ಜಲಾವೃತವಾದ ಮಳಿಗೆಗಳಲ್ಲಿ‌‌ನ‌ ನೀರು ಹೊರಹಾಕಲು ಜನ ಹರಸಾಹಸ ಪಟ್ಟರು. ಮಧ್ಯಾಹ್ನ 12 ಗಂಟೆಯಾದರೂ ಸ್ಥಳಕ್ಕೆ ಅಧಿಕಾರಿಗಳು ಬಾರದ ಹಿನ್ನೆಲೆ ರಾಮದುರ್ಗ ತಾಲೂಕು ಆಡಳಿತ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು. ಇನ್ನು ರಾಮದುರ್ಗ ಪಟ್ಟಣ ಅಷ್ಟೇ ಅಲ್ಲದೇ ರಾಮದುರ್ಗ ತಾಲೂಕಿನ ವಿವಿಧ ಗ್ರಾಮಗಳಲ್ಲಿಯೂ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿತ್ತು. ಸುರೇಬಾನ ಬಳಿಯ ಮನಿಹಾಳ ಗ್ರಾಮದಲ್ಲಿ ಮಹಮ್ಮದ್ ರಫೀಕ್ ರಕುಲಸಾಬ್ ಸುರುಕೋಡ ಎಂಬುವರಿಗೆ ಸೇರಿದ ಮನೆ ಗೋಡೆ ಕುಸಿದಿದೆ‌. ಅದೃಷ್ಟವಶಾತ್ ಮನೆಯಲ್ಲಿದ್ದ ನಾಲ್ವರು ಕುಟುಂಬ ಸದಸ್ಯರು ಬಚಾವ್ ಆಗಿದ್ದಾರೆ. ಈ ಕುರಿತು ಮಾತನಾಡಿದ ಮನೆ ಮಾಲೀಕ ಮಹಮ್ಮದ್ ರಫೀಕ್, 'ಮಧ್ಯರಾತ್ರಿ 12.30ಕ್ಕೆ ಮನೆ ಗೋಡೆ ಕುಸಿದಿದೆ. ನಾಲ್ಕು ಜನ ಮನೆಯಲ್ಲಿ ಮಲಗಿದ ವೇಳೆ ಗೋಡೆ ಕುಸಿದಿದೆ.‌ದಯವಿಟ್ಟು ಸೂಕ್ತ ಪರಿಹಾರ ನೀಡಿ' ಎಂದು ಮನವಿ ಮಾಡಿದ್ದಾರೆ. 

ಧಾರಾಕಾರ ಮಳೆಗೆ ನೇಕಾರ ಕುಟುಂಬ ಕಂಗಾಲು
ಇನ್ನು ಧಾರಾಕಾರ ಮಳೆಯಿಂದ ರಾಮದುರ್ಗ ಪಟ್ಟಣದ ನೇಕಾರ ಓಣಿಗೆ ಮಳೆ ನೀರು ನುಗ್ಗಿತ್ತು‌. ನೇಕಾರ ಪ್ರಕಾಶ್ ವಾಲಿ ಎಂಬುವರ ಮನೆಗೋಡೆ ಕುಸಿದು ಮನೆಯಲ್ಲಿದ್ದ ವಸ್ತುಗಳು, ನೇಕಾರಿಕೆಗೆ ಬಳಸುತ್ತಿದ್ದ ಕಚ್ಚಾವಸ್ತುಗಳೆಲ್ಲವೂ ಹಾನಿಯಾಗಿವೆ. ಮನೆಗೆ ನೀರು ನುಗ್ಗಿ ವಿದ್ಯುತ್ ಮಗ್ಗ ಸಂಪೂರ್ಣ ಜಲಾವೃತವಾಗಿದ್ದು, ಒಂದೇ ರಾತ್ರಿ ಸುರಿದ ಧಾರಾಕಾರ ಮಳೆಗೆ ಬಡ ನೇಕಾರ ಕುಟುಂಬಗಳು ಕಂಗಾಲಾಗಿವೆ. ಇತ್ತ ಸೊಪ್ಪಡ್ಲ ಸೇರಿ ವಿವಿಧ ಗ್ರಾಮಗಳಲ್ಲಿ ಮಳೆಯಿಂದಾಗಿ ಕಬ್ಬು ನೆಲಕಚ್ಚಿದೆ. ಕೆಲವೇ ದಿನಗಳಲ್ಲಿ ಕಟಾವು ಮಾಡಬೇಕಿದ್ದ ಕಬ್ಬು ನೆಲಕಚ್ಚಿದ್ದರಿಂದ ರೈತರು ಕಂಗಾಲಾಗಿದ್ದಾರೆ. 

Bengaluru Rain Updates: ಮಹಾಮಳೆಗೆ ಕಳಚಿತು ಮಹಾನಗರದ ಅಸಲಿ ಮುಖ!

ರೈತರಾದ ಅಕ್ಬರ್‌ಸಾಬ್, ಇಮಾಮ್‌ಸಾಬ್, ಮಲ್ಲಿಕಾರ್ಜುನ ರಾಮದುರ್ಗ, ಈರಣ್ಣ ಮಹಾಂತನವರ ಎಂಬುಬರಿಗೆ ಸೇರಿದ ಅಂದಾಜು 40 ಎಕರೆಗೂ ಹೆಚ್ಚು ಪ್ರದೇಶದಲ್ಲಿ ಬೆಳೆದ ಕಬ್ಬು ಸಂಪೂರ್ಣ ನೆಲಕಚ್ಚಿದೆ. ಇತ್ತ ರಾಮದುರ್ಗ ತಾಲೂಕಿನ ಕಲಹಾಳ ಬಳಿಯ ಹಳ್ಳ ಹಾಗೂ ಕಿತ್ತೂರು ಬಳಿಯ ಬೆಣ್ಣೆ ಹಳ್ಳಗಳು ಭರ್ತಿಯಾಗಿವೆ. ಹಳ್ಳದ ನೀರು ನುಗ್ಗಿ ಕೃಷಿಭೂಮಿಗೆ ನುಗ್ಗಿ ನೂರಾರು ಎಕರೆಯಲ್ಲಿ ಬೆಳೆದಿದ್ದ ಮೆಕ್ಕೆಜೋಳ, ಸೂರ್ಯಕಾಂತಿ ಬೆಳೆ ನಾಶವಾಗಿದೆ. ನಿರಂತರ ಮಳೆಯಿಂದ ಸುರೇಬಾನ ಗ್ರಾಮದಲ್ಲಿ ಕಮಲವ್ವ ಕುಂಬಾರ ಶಿಥಿಲಾವಸ್ಥೆಗೊಂಡಿದ್ದ ಮನೆ ಗೋಡೆ ಕುಸಿದು ಮೇಕೆ ಸ್ಥಳದಲ್ಲೇ ಸಾವನ್ನಪ್ಪಿದೆ. ಅದೃಷ್ಟವಶಾತ್ ಮನೆಯಲ್ಲಿದ್ದ ದಂಪತಿ ಬಚಾವ್ ಆಗಿದ್ದಾರೆ. 

ಹುಬ್ಬಳ್ಳಿ-ಧಾರವಾಡ ಪ್ರವಾಹ ಪೀಡಿತ ಸ್ಥಳಗಳಿಗೆ ಸಚಿವರ ಭೇಟಿ

ರಾಮದುರ್ಗ ತಾಲೂಕಿನ ವಿವಿಧೆಡೆ ಮಳೆಯಿಂದ ಅಪಾರ ಹಾನಿಯಾಗಿದ್ದು ಕೃಷಿ ಜಮೀನಿಗೆ ನೀರು ನುಗ್ಗಿ ಅಪಾರ ಬೆಳೆಹಾನಿ ಆಗಿದ್ದು ತಕ್ಷಣ ಸರ್ಕಾರ ಸೂಕ್ತ ನೆರವು ನೀಡಬೇಕು ಎಂದು ಸಾಮಾಜಿಕ ಹೋರಾಟಗಾರ ಸಿ.ಎಮ್‌.ಕುಲಕರ್ಣಿ ಆಗ್ರಹಿಸಿದ್ದಾರೆ. ಕಳೆದ ರಾತ್ರಿಯಷ್ಟೇ ಸುರಿದ ಧಾರಾಕಾರ ಮಳೆಯಿಂದ ರಾಮದುರ್ಗ, ಗೋಕಾಕ ತಾಲೂಕು ಜನ ತತ್ತರಿಸಿದ್ದಾರೆ. ಮಳೆಯಿಂದ ಹಾನಿಗೊಳಗಾದ ಕುಟುಂಬಗಳಲಿಗೆ ಸರ್ಕಾರ ತಕ್ಷಣ ನೆರವಿಗೆ ಧಾವಿಸಲಿ ಎಂಬುದು ಸಾರ್ವಜನಿಕರ ಹಕ್ಕೊತ್ತಾಯ.

click me!