ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಕೇಂದ್ರ ಹೊರಡಿಸಿದ ವರದಿಯಲ್ಲಿ ಗದಗ ಜಿಲ್ಲೆಯ ನಾಗಾವಿ ಗ್ರಾಮದಲ್ಲಿ ಕಳೆದ 12 ಗಂಟೆಯ ಅವಧಿಯಲ್ಲಿ ಅಂದ್ರೆ ಸೆ.5ರ ರಾತ್ರಿ 8.30 ರಿಂದ ಇಂದು ಬೆಳಗ್ಗೆ 8:30 ವರೆಗೆ 179.5 ಎಂಎಂ ದಾಖಲೆಯ ಮಳೆಯಾಗಿದೆ.
ಗದಗ (ಸೆ.6): ತಾಲೂಕಿನ ನಾಗಾವಿ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಮಳೆಯಾದ ಬಗ್ಗೆ ವರದಿಯಾಗಿದೆ. ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಕೇಂದ್ರ ಹೊರಡಿಸಿದ ವರದಿಯಲ್ಲಿ ನಾಗಾವಿ ಗ್ರಾಮದಲ್ಲಿ ಕಳೆದ 12 ಗಂಟೆಯ ಅವಧಿಯಲ್ಲಿ ಅಂದ್ರೆ ನಿನ್ನೆ ರಾತ್ರಿ 8.30 ರಿಂದ ಇಂದು ಬೆಳಗ್ಗೆ 8:30 ವರೆಗೆ 179.5 ಎಂಎಂ ದಾಖಲೆಯ ಮಳೆಯಾಗಿದೆ. ನಿನ್ನೆ ಸಂಜೆ 6 ಗಂಟೆಯಿಂದ ಗದಗ ಜಿಲ್ಲೆಯಾದ್ಯಂತ ವರುಣ ಅಬ್ಬರಿಸಿ ಬೊಬ್ಬರಿದಿದ್ದ. ಗದಗ ನಗರದ ಸುತ್ತಮುತ್ತಲ ಪ್ರದೇಶದಲ್ಲಿ ಅತಿ ಹೆಚ್ಚು ಮಳೆಯಾದ ಬಗ್ಗೆ ವರದಿಯಾಗಿದೆ.. ಬೆಟಗೇರಿ ಭಾಗದಲ್ಲಿ ರಾತ್ರಿ ಸುರಿದ ಮಳೆಯಿಂದಾಗಿ ಬಸ್ ನಿಲ್ದಾಣ ಜಲಾವೃತವಾಗಿತ್ತು. ಬೆಟಗೇರಿ ಕಣವಿ ಪ್ಲಾಟ್, ಮಂಜುನಾಥ ನಗರ ಸಂಪೂರ್ಣ ಮುಳುಗಡೆಯಾಗಿತ್ತು. ಮನೆಯಿಂದ ನೀರು ಹೊರ ಹಾಕೋದಕ್ಕೆ ಜನ ಪರದಾಡಿದ್ರು, ಗದಗ ತಾಲೂಕಿನ ನಾಗಾವಿ ಗ್ರಾಮದ ವ್ಯಾಪ್ತಿಯ ರಸ್ತೆಗಳಲ್ಲಿ ಕಂದಕ ಸೃಷ್ಟಿಯಾಗಿದೆ. ಸುಮಾರು 60-70 ಅಡಿಯಷ್ಟು ರಸ್ತೆ ಕುಸಿದಿದ್ದು ಜನರ ಆತಂಕಕ್ಕೆ ಕಾರಣವಾಗಿದೆ. ನಾಗಾವಿ ಗ್ರಾಮದಿಂದ ಮಹಲಿಂಗಪುರ, ಕಬಲಾಯತಕಟ್ಟೆ..ಬೆಳದಡಿ ತಾಂಡಾ, ಹತ್ತಿಕಟ್ಟಿ ಗ್ರಾಮಗಳ ಸಂಪರ್ಕ ಕಟ್ ಆಗಿದೆ. ನಾಗಾವಿಯಿಂದ ಶಿರಹಟ್ಟಿ ಪಟ್ಟಣಕ್ಕೆ ಸಂಪರ್ಕಿಸುವ ರಸ್ತೆ ಬಂದ್ ಆದಂತಾಗಿದೆ..ರಸ್ತೆಯ ಪಕ್ಕದಲ್ಲಿನ ನೀರಿನ ಪೈಪ್ ಲೈನ್, ವಿದ್ಯುತ್ ಕಂಬಗಳು, ಕೇಬಲ್ ಕಟ್ ಆಗಿವೆ.. ರಸ್ತೆ ಕುಸಿದು ನೀರಿನ ರಭಸಕ್ಕೆ ಪಕ್ಕದ ಜಮೀನಿಗೆ ನೀರು ನುಗ್ಗಿ, ಅಪಾರ ಪ್ರಮಾಣದ ಬೆಳೆ ನಾಶವಾಗಿದೆ.
ಉಬ್ಬಿ ಬಂದ ವಿಕ್ಟೋರಿಯಾ ಕೆರೆ : ಬ್ಯಾಂಕ್, ಹಾಸ್ಟೆಲ್ ನಲ್ಲಿ ಕೆರೆ ನೀರ ಅವಾಂತರ.
ರಾತ್ರಿ ಸುರಿದ ಮಳೆಯಿಂದಾಗಿ ಐತಿಹಾಸಿಕ ಡಂಬಳ ಕೆರೆ ಉಕ್ಕಿ ಹರಿದಿದೆ.. ಇದ್ರಿಂದಾಗಿ ಗ್ರಾಮದ ಕೆವಿಜಿ ಬ್ಯಾಂಕ್, ಬಿಸಿಎಂ ಹಾಸ್ಟೆಲ್ ಆವರಣಕ್ಕೂ ನೀರು ನುಗ್ಗಿದೆ. ಗ್ರಾಮದ ರಸ್ತೆಗಳೂ ಕೆರೆಯ ನೀರಿನಂತಾಗಿದ್ವು.
undefined
ಮಳೆ ಅಬ್ಬರಕ್ಕೆ ಹೆದರಿ ಗುಡ್ಡ ಸೇರಿದ ಜನ!
ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಮಜ್ಜೂರು ಗ್ರಾಮದಲ್ಲಿ ವರುಣನ ಅಬ್ಬರಕ್ಕೆ 40 ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ.. ಮನೆಗೆ ನೀರು ನುಗ್ಗಿದ ಪರಿಣಾಮ ಭಯಗೊಂಡಿದ್ದ ಜನ ಮನೆ ಬಿಟ್ಟು ಗುಡ್ಡ ಏರಿ ಕೂತ ಪ್ರಸಂಗ ನಡೆದಿದೆ.. ಮಜ್ಜೂರು ಪ್ಲಾಟ್ ನಲ್ಲಿದ್ದ ವಾಸವಿದ್ದ 40 ಕ್ಕೂ ಹೆಚ್ಚು ಕುಟುಂಬಗಳು, ಮಕ್ಕಳು ವೃದ್ಧರ ಸಮೇತ ಬೆಟ್ಟ ಏರಿ ಕೂತಿದ್ರು.. ನಂತ್ರ ಮಳೆ ಪ್ರಮಾಣ ಕಡಿಮೆಯಾದ ನಂತ್ರ ಮನೆಗೆ ಹಿಂದಿರುಗಿದ್ರು..
ಜಮೀನಿನಲ್ಲಿ ಸಿಕ್ಕಿಹಾಕಿಕೊಂಡ ರೈತರು, ರಕ್ಷಣೆಗೆ ಧಾವಿಸಿದ ಪೊಲೀಸ್
ಜಿಲ್ಲೆಯ ರೋಣ ತಾಲೂಕಿನ ಬೆಳಗೋಡ ಗ್ರಾಮದ ಇಬ್ಬರು ರೈತರು, ಜಮೀನಿನಲ್ಲಿ ಸಿಲುಕಿಕೊಂಡಿದ್ದು, ಸುತ್ತಲೂ ಮಳೆ ನೀರಿನ ಪ್ರವಾಹ ಉಂಟಾಗಿದೆ. ಪಕ್ಕದ ಹಳ್ಳದಲ್ಲಿ ಕೂಡ ನೀರಿನ ಸೆಳೆತ ಜಾಸ್ತಿಯಾಗಿ ಶರಣಪ್ಪ ಹಾಗೂ ಮಹಾಂತೇಶ್ ಎಂಬ ರೈತರಿಗೆ
ಜಮೀನಿನ ಶೆಡ್ ನಿಂದ ಹೊರಬರಲು ಸಾಧ್ಯವಾಗಿಲ್ಲ. ಹೀಗಾಗಿ ಕುಟುಂಬದ ಸದಸ್ಯರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ವಿಷಯ ತಿಳಿದ ಪೊಲೀಸರು, ಅಗ್ನಿಶಾಮಕದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದು, ರಕ್ಷಣೆ ಮಾಡಿದ್ದಾರೆ.
ಚಿಕ್ಕಹಂದಿಗೋಳ ಕೆರೆ ಕೋಡಿ, ಜಮೀನಲ್ಲಿ ಸಿಲುಕಿದ್ದ ಕುರಿಗಾಯಿಗಳು!
ಚಿಕ್ಕಹಂದಿಗೋಳ ಗ್ರಾಮದ ಮಂಜುನಾಥ್ ಎಂಬ ಕುರಿಗಾಯಿ, ಕುರಿ ಮೇಯಿಸಲು ಹೋಗಿ ರಾತ್ರಿಯಿಂದ ಜಮೀನುವಾಸ ಮಾಡುವಂತಾಗಿತ್ತು.. ನಿನ್ನೆ ಬೆಳಗ್ಗೆ ಚಿಕ್ಕಹಂದಿಗೋಳ ಗ್ರಾಮದ ಹೊರವಲಯದಲ್ಲಿ ಜಮೀನಿಗೆ ಮಂಜುನಾಥ್ ಕುರಿಗಾಯಿ ಮೇಯಿಸಲು ಹೋಗಿದ್ರು.. 50 ಕ್ಕೂ ಹೆಚ್ಚು ಕುರಿಗಳು, ಎರಡು ಶ್ವಾನದೊಂದಿಗೆ ಜಮೀನಿಗೆ ತೆರಳಿದ್ರು.. ರಾತ್ರಿ ಏಕಾ ಏಕಿ ಕೆರೆ ಉಕ್ಕಿ ಹರಿದು ಜಲಾವೃತವಾಗಿ ಚಿಕ್ಕಹಂದಿಗೋಳ ಮದಗಾನೂರು ರಸ್ತೆ ಬಂದ್ ಆಗಿತ್ತು.ಹೀಗಾಗಿ ರಾತ್ರಿ ಜಮೀನಲ್ಲೇ ಕಳೆಯುವ ಪರಿಸ್ಥಿತಿ ಎದುರಾಗಿತ್ತು.. ಐದು ಕುರಿಗಳು ನೀರಿನಲ್ಲಿ ಕೊಚ್ಚಿಹೋದ ಬಗ್ಗೆ ಮಂಜುನಾಥ್ ಹೇಳಿಕೊಂಡಿದ್ದಾರೆ.
ನ್ಯಾಯ ಬೇಕು ಇಲ್ಲ ಸಾವು ಬೇಕು
ಮನೆಗೆ ನುಗ್ಗಿದ್ದ ಕೆರೆ ನೀರಿನಲ್ಲಿ ನಿಂತು ಮಹಿಳೆಯ ಪ್ರತಿಭಟನೆ ಮಾಡಿದ ಪ್ರಸಂಗ ಗದಗ ಜಿಲ್ಲೆ ಲಕ್ಷ್ಮೇಶ್ವರ ಪಟ್ಟಣದ ಕಟ್ಟಿಕೇರಿ ಬಡಾವಣೆಯಲ್ಲಿ ನಡೆದಿದೆ. ಕೆರೆ ಕೋಡಿ ಬಿದ್ದು 18 ವಾರ್ಡ್ ನ 15 ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗಿತ್ತು.. ಪದೇ ಪದೆ ನೀರು ನುಗ್ಗಿ ರೋಸಿಹೋಗಿರುವ ಬಡಾವಣೆಯ ದೀಪಾ ಲಮಾಣಿ ಅನ್ನೋ ಮಹಿಳೆ ಪರಿಹಾರ ಕೊಡಿ ಇಲ್ಲ ಸಾಯಿಸಿಬಿಡಿ ಎಂದು ನೀರಿನಲ್ಲಿ ಮುಳುಗೋದಕ್ಕೆ ಹೋಗಿದ್ರು.. ಪೊಲೀಸ್ ಸಿಬ್ಬಂದಿ ಎದುರು ಮಹಿಳೆಯ ಆಕ್ರೋಶ ಹೊರ ಹಾಕಿದ್ರು.. ಮನವೊಲಿಸಿ ದೀಪಾ ಅವರನ್ನ ದಡಕ್ಕೆ ಸ್ಥಳೀಯರು ಕರೆತಂದ್ರು..
ದೇವರಹಳ್ಳದ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿದ್ದ ಮಹಿಳೆ ಶವವಾಗಿ ಪತ್ತೆ
ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಹಳ್ಳಿಕೇರಿ ಗ್ರಾಮದ ವ್ಯಾಪ್ತಿಯ ಹಳ್ಳದಲ್ಲಿ ನಾಪತ್ತೆದ್ದ ಮಹಿಳೆ ಶವವಾಗಿ ಪತ್ತೆಯಾಗಿದ್ದಾರೆ..ಹೊಲದ ಕೆಲಸಕ್ಕೆ ತೆರಳಿದ್ದ ಮಹಿಳೆ ನಾಗಮ್ಮ ವೆಂಕಪ್ಪ ಕವಲೂರು (55) ಶವ ಇಂದು ಪತ್ತೆಯಾಗಿದೆ.. ಜಮೀನು ಕೆಲಸಕ್ಕೆ ಹೋಗಿ ಬರುವಾಗ ಹಳ್ಳದ ರಭಸಕ್ಕರ ಕೊಚ್ಚಿಕೊಂಡ ಹೋಗಿದ್ದರು. ಹಳ್ಳಿಕೇರೆ ಗ್ರಾಮದ ವ್ಯಾಪ್ತಿಯಲ್ಲಿಯ ಹಳ್ಳದ ಪೊದೆಯಲ್ಲಿ ಸಿಕ್ಕಿದ್ದ ಶಾವನ್ನ ಗ್ರಾಮಸ್ಥರ ಸಹಾಯದಿಂದ ಮಹಿಳೆ ಶವ ಹುಡುಕಿದ ಅಗ್ನಿಶಾಮಕ ಸಿಬ್ಬಂದಿ ಹೊರತೆಗೆದಿದ್ದಾರೆ..
ನೀಲಗುಂದ ದೊಡ್ಡ ಹಳ್ಳದಲ್ಲಿ ಕೊಚ್ಚಿಹೋಗಿದ್ದ ಕುರಿಗಳು ಪತ್ತೆ!
ಗದಗ ತಾಲೂಕಿನ ನೀಲಗುಂದ ಗ್ರಾಮದ ದೊಡ್ಡಹಳ್ಳದಲ್ಲಿ ಕೊಚ್ಚಿಹೋಗಿದ್ದ ಕುರಿಗಳು ಪತ್ತೆಯಾಗಿವೆ.. ಕಲ್ಲೂರು ಗ್ರಾಮದ ಹನುಮಪ್ಪ ಹರಿಜನ್ ಎಂಬುವವರಿಗೆ ಸೇರಿದ್ದ ಕುರಿಗಳನ್ನ ಮೇಯಿಸಲು ನೀಲಗುಂದ ವ್ಯಾಪ್ತಿಯ ಜಮೀನುಗಳಿಗೆ ಕರೆತರಲಾಗಿತ್ತು.. ರಾತ್ರಿ ಧಾರಾಕಾರ ಮಳೆ ಹಿನ್ನೆಲೆ ಜಮೀನಲ್ಲಿ ಹರಿದು ಬರುತ್ತಿದ್ದ ಮಳೆ ನೀರಿಂದ ಭಯಗೊಂಡಿದ್ದ ಕುರಿಗಾಯಿ, ನೀಲಗುಂದ ಕೋಳಿವಾಡ ರಸ್ತೆ ಮಧ್ಯದಲ್ಲಿ ಕುರಿಗಳನ್ನ ನಿಲ್ಲಿಸಿದ್ರು.. ಆದ್ರೆ, ರಭಸದಿಂದ ಹರಿದುಬಂದ ಮಳೆ ನೀರಿನೊಂದಿಗೆ ಕುರಿಗಳು ಕೊಚ್ಚಿಹೋಗಿದ್ವು.. 200 ಕುರಿಗಳ ಪೈಕಿ 30 ಕುರಿಗಳು ಕೊಚ್ಚಿಹೋಗಿದ್ದವು.. ಕೊಚ್ಚಿಹೋಗಿದ್ದ 30 ರಲ್ಲಿ ಹಳ್ಳದ ಬದಿ 10 ಕುರಿಗಳು ಪತ್ತೆಯಾಗಿವೆ. ಸ್ಥಳಕ್ಕೆ ಮುಳಗುಂದ ಪೊಲೀಸರ ಭೇಟಿ, ಪರಿಶೀಲನೆ ನಡೆಸಿದ್ರು.
ವರುಣ ಆರ್ಭಟಕ್ಕೆ ಸಾವಿರಾರು ಕೋಳಿಗಳು ಸಾವು
ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ಬನ್ನಿಕೊಪ್ಪ ಗ್ರಾಮದ ಕೋಳಿ ಫಾರ್ಮ್ ಗೆ ನೀರು ನುಗ್ಗಿ 2500 ಕೋಳಿಗಳ ಮಾರಣ ಹೋಮ ನಡೆದಿದೆ.. ಹೊಲದಲ್ಲಿ ಕೋಳಿ ಸಾಕಿದ್ದ ನಾಗೇಂದ್ರಪ್ಪ ಕಂಗಾಲಾಗಿದ್ದಾರೆ.. ನಿನ್ನೆ ಮಳೆಗೆ ದೊಡ್ಡ ಹಳ್ಳ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ.. ಸ್ಥಳಕ್ಕೆ ಸಿಪಿಐ ವಿಕಾಶ ಲಾಮಣಿ, ತಹಶಿಲ್ದಾರ ಶಿರಹಟ್ಟಿ ಕಲ್ಲನಗೌಡ ಪಾಟೀಲ್ ಭೇಟಿ ಪರಿಶೀಲನೆ ನಡೆಸಿದ್ದಾರೆ.
ಹುಬ್ಬಳ್ಳಿ-ಧಾರವಾಡ ಪ್ರವಾಹ ಪೀಡಿತ ಸ್ಥಳಗಳಿಗೆ ಸಚಿವರ ಭೇಟಿ
ಜಿಲ್ಲಾಧಿಕಾರಿ, ನಗರಸಭೆ ಅಧ್ಯಕ್ಷರಿಂದ ಸಿಟಿ ರೌಂಡ್ಸ್
ಜಿಲ್ಲಾಧಿಕಾರಿ ವೈಶಾಲಿ ಎಂಎಲ್ ಅವರು ಗದಗ ಬೆಟಗೇರಿ ಮಂಜುನಾಥ್ ನಗರ ಹಾಗೂ ವಿವಿಧೆಡೆ ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿದ್ರು.. ಜೊತೆಗೆ ನಗರಸಭೆ ಅಧ್ಯಕ್ಷೆ ಉಷಾ ದಾಸರ್ ಅವರು ಸಿಟಿ ರೌಡ್ಸ್ ಮಾಡಿದ್ರು.. ಸಂಕಷ್ಟದಲ್ಲಿರೋ ಜನರ ನೆರವಿಗೆ ಕೂಡ್ಲೆ ಧಾವಿಸ್ಬೇಕು ಅಂತಾ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡ್ಲಾಗಿದೆ.
Belagavi Rain: ಮನೆಯಲ್ಲಿ ಸಿಲುಕಿದ್ದ 12 ದಿನದ ಹಸುಗೂಸು, ಬಾಣಂತಿ ರಕ್ಷಿಸಿದ ಯುವಕರು!
ಒಟ್ಟಾರೆ, ಜಿಲ್ಲೆಯ ವಿವಿಧೆಡೆ ಅಪಾರ ಪ್ರಮಾಣದ ಬೆಳೆ ನಾಶವಾಗಿದೆ. ಹಿಂದೆದೂ ಆಗದ ಮಳೆ ಹಾನಿಗೆ ಗದಗ ಸಾಕ್ಷಿಯಾಗಿದೆ.. ಅನೇಕ ಸೇತುವೆ, ರಸ್ತೆಗಳು ಕೊಚ್ಚಿಹೋಗಿವೆ. ಪರಿಹಾರ ಕಾರ್ಯಗಳು ಸಮರೋಪದಾಯಲ್ಲಿ ನಡೆಯಬೇಕಿದೆ.