ಚಿಕ್ಕಮಗಳೂರಲ್ಲಿ ಬೇಸಿಗೆಗೂ ಮೊದಲೇ ನೀರಿಗೆ ಬರ, ಕಂಗಾಲಾದ ರೈತರು..!

By Girish GoudarFirst Published Feb 20, 2024, 9:18 PM IST
Highlights

ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನಲ್ಲಿ 49 ಸಾವಿರ ಹೆಕ್ಟೇರ್ ನಲ್ಲಿ ತೆಂಗು ಬೆಳೆದಿದ್ರೆ, 27 ಸಾವಿರ ಹೆಕ್ಟೇರ್ ನಲ್ಲಿ ಅಡಿಕೆ ಬೆಳೆದಿದ್ದಾರೆ. 2018 ರಿಂದ 23 ರವರೆಗೆ ಸಮೃದ್ಧ ಮಳೆಯಾಗಿ ತೋಟಗಳು ಚೆನ್ನಾಗಿದ್ವು. ಆದ್ರೆ, 2023ರ ಮಳೆಗಾಲ ಸಂಪೂರ್ಣ ಕೈಕೊಟ್ಟಿದ್ರಿಂದ ಒಂದೇ ವರ್ಷಕ್ಕೆ ತೋಟಗಳು ಒಣಗಿ ನಿಂತಿವೆ. 

ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು(ಫೆ.20):  ಶಾಶ್ವತ ಬರಗಾಲಕ್ಕೆ ತುತ್ತಾದ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ರೈತರಿಗೆ ಅನಿವಾರ್ಯವಾದದ್ದೇ ಅಡಿಕೆ ಬೆಳೆ. ಸಾವಿರಾರು ಹೆಕ್ಟೇರನಲ್ಲಿ ಅಡಿಕೆ ಬೆಳೆದು ಬದುಕು ಸಾಗಿಸ್ತಿದ್ದ ಬೆಳೆಗಾರರ ಬದುಕೀಗ ಬಿಸಲ ಬೇಗೆಗೆ ಸುಟ್ಟು ಕರಕಲಾಗಿದೆ. ಹಚ್ಚ-ಹಸಿರಿನಿಂದ ರಾರಾಜಿಸುತ್ತಿದ್ದ ಅಡಿಕೆ ಮರಗಳೀಗ ನೀರಿಲ್ಲದೆ ಒಣಗಿ ನಿಲ್ಲುತ್ತಿವೆ. ಬೋರ್ ನಲ್ಲಿ ನೀರು ನಿಲ್ಲುತ್ತಿದ್ದಂತೆ ಮರಗಳು ಸುಡಲು ಆರಂಭಿಸಿವೆ. ಒಣಗುತ್ತಿರುವುದು ಮರಗಳಲ್ಲ. ನಮ್ಮ ಬದುಕು ಎಂದು ಬೆಳೆಗಾರರು ಕಂಗಾಲಾಗಿದ್ದಾರೆ. 

ಬಿಸಿಲ ಝಳಕ್ಕೆ ಅಡಿಕೆ, ತೆಂಗು ನಾಶ

ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನಲ್ಲಿ 49 ಸಾವಿರ ಹೆಕ್ಟೇರ್ ನಲ್ಲಿ ತೆಂಗು ಬೆಳೆದಿದ್ರೆ, 27 ಸಾವಿರ ಹೆಕ್ಟೇರ್ ನಲ್ಲಿ ಅಡಿಕೆ ಬೆಳೆದಿದ್ದಾರೆ. 2018 ರಿಂದ 23 ರವರೆಗೆ ಸಮೃದ್ಧ ಮಳೆಯಾಗಿ ತೋಟಗಳು ಚೆನ್ನಾಗಿದ್ವು. ಆದ್ರೆ, 2023ರ ಮಳೆಗಾಲ ಸಂಪೂರ್ಣ ಕೈಕೊಟ್ಟಿದ್ರಿಂದ ಒಂದೇ ವರ್ಷಕ್ಕೆ ತೋಟಗಳು ಒಣಗಿ ನಿಂತಿವೆ. ಶಾಶ್ವತ ಬರಗಾಲಕ್ಕೆ ತುತ್ತಾದ ಕಡೂರಲ್ಲಿ ಅಲ್ಪ ಮಳೆಯಾದ್ರು ಸಾಕೆನ್ನೋ ರಾಗಿ, ಹತ್ತಿ, ಜೋಳ ಬಿಟ್ರೆ ಹೆಚ್ಚಾಗಿ ತೆಂಗು-ಅಡಿಕೆಯನ್ನೇ ಬೆಳೆಯುತ್ತಿದ್ರು. ಆದ್ರೀಗ, ಮಳೆ ಇಲ್ಲದೆ ಅಡಿಕೆ ಬೆಳೆಗಾರರು ಕಂಗಾಲಾಗಿದ್ದಾರೆ. ಬೋರ್ ಇದ್ದವರು ಹೇಗೋ ಇಷ್ಟು ದಿನ ಆಗೊಮ್ಮೆ-ಈಗೊಮ್ಮೆ ನೀರಾಯಿಸಿ ಬದುಕಿಸಿಕೊಂಡಿದ್ದ ಮರಗಳೀಗ ನೆಲಕಾಣುವ ಹಂತಕ್ಕೆ ಬಂದಿವೆ. ಬಿಸಿಲ ಝಳಕ್ಕೆ ಮರಗಳ ಸುಳಿಗಳೇ ಒಣಗುತ್ತಿವೆ.

ಕಾಡಾನೆ ದಾಳಿಗೆ ಸಾವನ್ನಪ್ಪಿದ ಕೇರಳ ವ್ಯಕ್ತಿಗೆ ಕೆಪಿಸಿಸಿಯಿಂದ 15 ಲಕ್ಷ ಪರಿಹಾರ ಕೊಡಿ: ಸಿಟಿ ರವಿ ಆಕ್ರೋಶ

ಒಂದೆಡೆ ಮಳೆ ಅಭಾವ, ಮತ್ತೊಂದೆಡೆ ಇದ್ದ ಬೋರ್ ವೆಲ್ ಗಳಲ್ಲಿ ನೀರಿಲ್ಲ: 

ಕೇವಲ ಕಡೂರಿನಲ್ಲಷ್ಟೇ ಅಲ್ಲದೆ, ಚಿಕ್ಕಮಗಳೂರು ತಾಲೂಕಿನ ಬಯಲುಸೀಮೆಯ ಕಳಸಾಪುರ, ಬೆಳವಾಡಿ, ಲಕ್ಯಾ, ತರೀಕೆರೆ, ಅಜ್ಜಂಪುರ, ಶಿವನಿ ಭಾಗದಲ್ಲೂ ಹೆಚ್ಚಾಗಿ ಅಡಿಕೆ ಬೆಳೆಯುತ್ತಾರೆ. ಚೈನ್ಲಿಂಕ್ನಂತೆ ಒಂದು ವೃತ್ತಿಗೆ ಮತ್ತೊಂದು ಸಂಬಂಧಿಸಿರೋದ್ರಿಂದ ತೆಂಗು-ಅಡಿಕೆ ಮರಗಳು ನಾಶವಾದ್ರೆ ಸ್ವ-ಉದ್ಯೋಗ ಮಾಡೋ ಮತ್ತಷ್ಟು ಮಂದಿ ಬೀದಿಗೆ ಬೀಳೋದು ಗ್ಯಾರಂಟಿ. ಅಲ್ಪ ಮಳೆಯಾದ್ರು ಸಾಕು ಅಂತ ಕಳೆದ ಬಾರಿ ಕಡೂರಿನಲ್ಲಿ ಸುಮಾರು 4500 ಹೆಕ್ಟೇರ್ ನಲ್ಲಿ ಹೊಸದಾಗಿ ಅಡಿಕೆ ಬೆಳೆದಿದ್ದಾರೆ. ಆದ್ರೆ, ಒಂದೇ ವರ್ಷಕ್ಕೆ ಮಳೆ ಇಲ್ಲದೆ ಬೆಳೆಗಳು ನಾಶವಾದ್ರೆ ಬೆಳೆಗಾರರು ಸಾಲಗಾರನೆಂಬ ಹಣೆಪಟ್ಟಿ ಕಟ್ಕೊಳ್ಳೋದು ಗ್ಯಾರಂಟಿ.ಹಾಗಾಗಿ, ಸರ್ಕಾರ ಕೂಡಲೇ ಅಡಿಕೆ-ತೆಂಗು ಬೆಳೆಗಾರರ ಬದುಕಿನತ್ತ  ಗಮನ ಹರಿಸಬೇಕಿದೆ. ದಿನದಿಂದ ದಿನಕ್ಕೆ ತೋಟಗಳು ನಾಶವಾಗ್ತಿರೋ ಸಂಖ್ಯೆಯೇ ಹೆಚ್ಚಾಗಿದೆ. ಬೇಸಿಗೆ ಆರಂಭದಲ್ಲೇ ಹೀಗಾದ್ರೆ ಏಪ್ರಿಲ್-ಮೇ ನಲ್ಲಿ ಬೆಳೆಗಾರರನ್ನ ದೇವರೇ ಕಾಪಾಡಬೇಕು. ಒಟ್ಟಾರೆ, ಮುಗಿಲೆತ್ತರದ ಮರಗಳು ನೆಲಕಾಣ್ತಿರೋದಕ್ಕೆ ಬೆಳೆಗಾರರು ಚಿಂತಾ ಕ್ರಾಂತರಾಗಿದ್ದಾರೆ. 

ಒಂದೆಡೆ ಮಳೆ ಅಭಾವ. ಮತ್ತೊಂದೆಡೆ ಇದ್ದ ಬೋರ್ ವೆಲ್ ಗಳಲ್ಲಿ ನೀರಿಲ್ಲ. 800-1000 ಅಡಿ ಆಳಕ್ಕೆ ಕೊರೆದ್ರು ನೀರು ಬರ್ತಿಲ್ಲ. ಇದು ಕೂಡ ಬೆಳೆಗಾರರನ್ನ ಮತ್ತುಷ್ಟು ಸುಡ್ತಿದೆ. ಕೂಡಲೇ ಸರ್ಕಾರ ಅಡಿಕೆ-ತೆಂಗು ಬೆಳೆಗಾರರ ಸಹಾಯಕ್ಕೆ ಭಾರದಿದ್ರೆ ಅಡಿಕೆ ಬೆಳೆಗಾರರ ಬದುಕು ಮತ್ತಷ್ಟು ಶೋಚನೀಯ ಸ್ಥಿತಿಗೆ ತಲುಪೋದು ಗ್ಯಾರಂಟಿ.

click me!