ಕೆಲ ತಾಂತ್ರಿಕ ತೊಂದರೆ ಹಾಗೂ ಕೆರೆಗಳಿಗೆ ಸಂಪರ್ಕಿಸುವ ಕಾಲುವೆಯ ಜಾಲ ಇಲ್ಲದ್ದರಿಂದ ಮುಳವಾಡ ಏತ ನೀರಾವರಿ ಯೋಜನೆಯಡಿ ಒಂದು, ಚಿಮ್ಮಲಗಿ ಯೋಜನೆಯಡಿ ಏಳು ಕೆರೆಗಳನ್ನು ಭರ್ತಿ ಮಾಡುತ್ತಿಲ್ಲ. ಹೀಗಾಗಿ ಒಟ್ಟು 107 ಕೆರೆಗಳ ಪೈಕಿ ಕೇವಲ 99 ಕೆರೆಗಳ ಭರ್ತಿ ಮಾಡಲಾಗುತ್ತಿದೆ.
ಆಲಮಟ್ಟಿ(ಫೆ.20): ವಿಜಯಪುರ ಜಿಲ್ಲೆಯ 99 ಕೆರೆಗಳ ಭರ್ತಿಗಾಗಿ ಸೋಮವಾರದಿಂದಲೇ ಆಲಮಟ್ಟಿ ಎಡದಂಡೆ ಕಾಲುವೆ ಮೂಲಕ ಚಿಮ್ಮಲಗಿ ಏತ ನೀರಾವರಿ ಯೋಜನೆಯ ಕಾಲುವೆ ಹಾಗೂ ಬಳೂತಿ ಜಾಕ್‌ವೆಲ್ ಮೂಲಕ ಮುಳವಾಡ ಏತ ನೀರಾವರಿ ಯೋಜನೆ ಕಾಲುವೆಗಳಿಗೆ ನೀರು ಹರಿಯಲು ಆರಂಭವಾಗಿದೆ. ಈ ಕೆರೆಗಳ ಸಾಮರ್ಥ್ಯದ ಶೇ.50 ರಷ್ಟು ಕೆರೆಗಳನ್ನು ಭರ್ತಿ ಮಾಡಲು ಸಿದ್ಧತೆ ಮಾಡಿಕೊಂಡಿದ್ಧಾಗಿ ಸೂಪರಿಂಟೆಂಡೆಂಟ್ ಎಂಜಿನಿಯರ್ ಡಿ.ಬಸವರಾಜ ತಿಳಿಸಿದರು.
107 ರಲ್ಲಿ 99 ಕೆರೆಗಳ ಭರ್ತಿ:
ಕೆಲ ತಾಂತ್ರಿಕ ತೊಂದರೆ ಹಾಗೂ ಕೆರೆಗಳಿಗೆ ಸಂಪರ್ಕಿಸುವ ಕಾಲುವೆಯ ಜಾಲ ಇಲ್ಲದ್ದರಿಂದ ಮುಳವಾಡ ಏತ ನೀರಾವರಿ ಯೋಜನೆಯಡಿ ಒಂದು, ಚಿಮ್ಮಲಗಿ ಯೋಜನೆಯಡಿ ಏಳು ಕೆರೆಗಳನ್ನು ಭರ್ತಿ ಮಾಡುತ್ತಿಲ್ಲ. ಹೀಗಾಗಿ ಒಟ್ಟು 107 ಕೆರೆಗಳ ಪೈಕಿ ಕೇವಲ 99 ಕೆರೆಗಳ ಭರ್ತಿ ಮಾಡಲಾಗುತ್ತಿದೆ.
ವಿಜಯಪುರ: ಪತ್ನಿಯ ಶೀಲ ಶಂಕಿಸಿ ಸನಿಕೆಯಿಂದ ಹೊಡೆದು ಬರ್ಬರವಾಗಿ ಹತ್ಯೆ ಮಾಡಿದ ಪತಿ!
ಬೇಸಿಗೆಯಲ್ಲಿ ಜನ, ಜಾನುವಾರುಗಳಿಗೆ ಕುಡಿಯುವ ನೀರಿನ ಉದ್ದೇಶಕ್ಕೆ ಸಂಗ್ರಹಿಸಿಡಲಾದ 5.5 ಟಿಎಂಸಿ ಅಡಿ ನೀರಿನ ಪೈಕಿ ಸದ್ಯ 1.8 ಟಿಎಂಸಿ ನೀರು ಬಳಕೆಗೆ ಬೆಳಗಾವಿ ಪ್ರಾದೇಶಿಕ ಆಯುಕ್ತರು ಅನುಮತಿ ನೀಡಿದ್ದಾರೆ. ಆ ಪ್ರಕಾರ ನೀರು ಬಿಡಲು ಸಿದ್ದತೆ ಮಾಡಿಕೊಂಡಿದ್ದು, ಮೊದಲು ಕಾಲುವೆಯ ಕೊನೆ ಹಂತದ ಕೆರೆಗಳ ಭರ್ತಿ ಮಾಡಿಕೊಳ್ಳಲು ಉದ್ದೇಶಿಸಲಾಗಿದೆ. ಆದರೆ ಯಾವುದೇ ಕಾರಣಕ್ಕೂ ಕೃಷಿ ಬಳಕೆಗೆ ಈ ನೀರು ಬಳಸುವಂತಿಲ್ಲ ಎಂದು ಅಣೆಕಟ್ಟು ವಲಯದ ಮುಖ್ಯ ಎಂಜಿನಿಯರ್ ಎಚ್.ಎನ್.ಶ್ರೀನಿವಾಸ ಖಡಕ್ ಸೂಚನೆ ನೀಡಿದ್ದಾರೆ.
ನೀರು ಸದ್ಬಳಕೆ ಬಗ್ಗೆ ಪ್ರತಿನಿತ್ಯವೂ ಸಂಬಂಧಿಸಿದ ಅಧಿಕಾರಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕಿದ್ದು, ಮೇಲ್ವಿಚಾರಣೆ ಮಾಡಲಾಗುವುದು ಎಂದು ತಿಳಿಸಿದ್ಧಾರೆ. ಫೆ.19 ರಿಂದ ಮಾ.10 ರವರೆಗೆ ನಾನಾ ಹಂತಗಳಲ್ಲಿ ನೀರು ಹರಿಯಲಿದೆ. ಚಿಮ್ಮಲಗಿ ಏತ ನೀರಾವರಿ ಯೋಜನೆಯ ಪೂರ್ವ ಮತ್ತು ಪಶ್ಚಿಮ ವ್ಯಾಪ್ತಿಯ 34 ಕೆರೆಗಳ ಪೈಕಿ 27 ಹಾಗೂ ಮುಳವಾಡ ಪೂರ್ವ , ಪಶ್ಚಿಮ ಕಾಲುವೆ ಹಾಗೂ ಮುಳವಾಡ 3ನೇ ಹಂತದ ಕಾಲುವೆ ವ್ಯಾಪ್ತಿಯ 73 ಕೆರೆಗಳ ಪೈಕಿ 72 ಕೆರೆಗಳಿಗೆ ನೀರು ಹರಿಸಲಾಗುತ್ತದೆ.
ಕಾಲುವೆಗೆ ಹರಿಸುತ್ತಿರುವ ನೀರನ್ನು ಕಟ್ಟುನಿಟ್ಟಾಗಿ ಕೆರೆಗಳ ಭರ್ತಿಗೆ ಬಳಸಿಕೊಳ್ಳಬೇಕು. ಈ ಹಿನ್ನಲೆಯಲ್ಲಿ ವಿವಿಧ ಇಲಾಖೆಯವರು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು, ನಿತ್ಯವೂ ಕೆರೆಗಳ ಭರ್ತಿಯ ಬಗ್ಗೆ ಚಿತ್ರ ಸಮೇತ ವರದಿ ನೀಡಬೇಕು, ನೀರು ಯಾವುದೇ ಕಾರಣಕ್ಕು ಪೋಲಾಗದಂತೆ ಎಚ್ಚರವಹಿಸಬೇಕು, ಬಿಸಲಿನ ಪ್ರಖರತೆ ಹೆಚ್ಚುತ್ತಿದ್ದು, ನೀರಿನ ಸಂಗ್ರಹ, ಬಳಕೆಯ ಬಗ್ಗೆ ಎಚ್ಚರದಿಂದ ಹೆಜ್ಜೆ ಇಡಬೇಕು ಎಂದು ಜಿಲ್ಲಾಧಿಕಾರಿ ಟಿ.ಭೂಬಾಲನ್ ತಿಳಿಸಿದ್ದಾರೆ.