ಪ್ರವಾಹದಲ್ಲಿ ಪಾರಾದ ಈರುಳ್ಳಿ ಬೆಳೆಗೆ ಈಗ ಮಳೆ ಕಂಟಕ| ಎರಡು ದಿನಗಳಿಂದ ಬೀಳುತ್ತಿರುವ ಮಳೆಗೆ ಸಿಲುಕಿರುವ ಈರುಳ್ಳಿ| ಕಟಾವು ಮಾಡಿ ಹೊಲದಲ್ಲಿ ರಾಶಿ ಹಾಕಿಟ್ಟಿರುವ ಈರುಳ್ಳಿ| ಪ್ರವಾಹದಲ್ಲಿ ನಾಶವಾಗಿತ್ತು 2600 ಹೆಕ್ಟೇರ್ ಈರುಳ್ಳಿ ಬೆಳೆ| ಪ್ರವಾಹದಿಂದ ಬಚಾವಾಗಿದ್ದ ಬೆಳೆಯನ್ನು ಈಗ ಕಟಾವು ಮಾಡುತ್ತಿದ್ದು, ಮಳೆ ಕಾಟ ಆರಂಭವಾಗಿದೆ| ಅಳಿದುಳಿದ ಅಲ್ಪಸ್ವಲ್ಪ ಬೆಳೆಯೂ ಕೈಗೆ ಸಿಗದ ಸ್ಥಿತಿ ನಿರ್ಮಾಣವಾಗಿದೆ|
ನಾರಾಯಣ ಹೆಗಡೆ
ಹಾವೇರಿ(ಅ.5): ಆಗ ನೆರೆ ಹಾವಳಿಗೆ ಸಿಲುಕಿ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದ್ದ ಈರುಳ್ಳಿ ಸಂಪೂರ್ಣ ನಾಶವಾಗಿತ್ತು. ಪ್ರವಾಹದಿಂದ ಬಚಾವಾಗಿದ್ದ ಬೆಳೆಯನ್ನು ಈಗ ಕಟಾವು ಮಾಡುತ್ತಿದ್ದು, ಮಳೆ ಕಾಟ ಆರಂಭವಾಗಿದೆ. ಇದರಿಂದ ಅಳಿದುಳಿದ ಅಲ್ಪಸ್ವಲ್ಪ ಬೆಳೆಯೂ ಕೈಗೆ ಸಿಗದ ಸ್ಥಿತಿ ನಿರ್ಮಾಣವಾಗಿದೆ.
undefined
ಕಳೆದ ಎರಡು ದಿನಗಳಿಂದ ಜಿಲ್ಲೆಯಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯಾಗುತ್ತಿರುವುದು ಈರುಳ್ಳಿ ಬೆಳೆಗಾರರ ಕಣ್ಣಲ್ಲಿ ನೀರು ತರಿಸುತ್ತಿದೆ. ಬರೋಬ್ಬರಿ ಎರಡು ತಿಂಗಳ ಹಿಂದೆ ಜಿಲ್ಲೆಯ ನದಿಗಳಲ್ಲಿ ಪ್ರವಾಹ ಸೃಷ್ಟಿಯಾಗಿ ಎಂಟತ್ತು ದಿನಗಳ ಕಾಲ ಹೊಲಗದ್ದೆಗಳೆಲ್ಲ ಜಲಾವೃತವಾಗಿದ್ದವು. ಇದರಿಂದ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದ್ದ ಈರುಳ್ಳಿ ಸಂಪೂರ್ಣ ನಾಶವಾಗಿತ್ತು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಜಲಾವೃತವಾಗದ ಪ್ರದೇಶದಲ್ಲಿ ಬೆಳೆದಿದ್ದ ಈರುಳ್ಳಿ ಅತಿವೃಷ್ಟಿಗೆ ಸಿಲುಕಿದ್ದರೂ ಅಲ್ಪಸ್ವಲ್ಪ ಉಳಿದಿತ್ತು. ಈರುಳ್ಳಿ ಉತ್ಪಾದನೆ ಕುಸಿತದಿಂದ ಕೆಲವು ದಿನಗಳಿಂದ ಬೆಲೆಯೂ ಏರುಗತಿಯಲ್ಲಿ ಸಾಗುತ್ತಿತ್ತು. ಅದಕ್ಕಾಗಿ ಜಿಲ್ಲೆಯ ರೈತರು ಈರುಳ್ಳಿ ಕಟಾವು ಮಾಡಿ ಹೊಲದಲ್ಲಿ ಒಣಗಿಸಲು ಹಾಕಿ ಮಾರಾಟಕ್ಕೆ ಅಣಿಯಾಗುತ್ತಿರುವಾಗಲೇ ಮತ್ತೆ ಮಳೆ ಅವರನ್ನು ಕಾಡುತ್ತಿದೆ. ಎರಡು ದಿನಗಳಿಂದ ಬೀಳುತ್ತಿರುವ ಮಳೆಗೆ ಹೊಲಗಳಲ್ಲಿ ರಾಶಿ ಹಾಕಿಟ್ಟಿರುವ ಈರುಳ್ಳಿ ಕೊಳೆಯಲು ಆರಂಭವಾಗಿದೆ.
ಕಣ್ಣೀರುಳ್ಳಿ
ಈ ವರ್ಷದ ಪ್ರಾಕೃತಿಕ ವಿಕೋಪಕ್ಕೆ ಜಿಲ್ಲೆಯ ರೈತರು ಬಸವಳಿದಿದ್ದಾರೆ. ಮುಂಗಾರು ಆರಂಭದಲ್ಲಿ ಮಳೆಯೇ ಇಲ್ಲದ್ದರಿಂದ ಬಿತ್ತನೆಯೇ ಸಾಧ್ಯವಾಗಿರಲಿಲ್ಲ. ಜುಲೈನಲ್ಲಿ ಹದವಾದ ಮಳೆ ಸುರಿದಿದ್ದರಿಂದ ಏಕಾಏಕಿಯಾಗಿ ಬಿತ್ತನೆ ಮಾಡಿದ್ದರು. ಆಗಸ್ಟ್ ಮೊದಲ ವಾರ ಅತಿವೃಷ್ಟಿಹಾಗೂ ಪ್ರವಾಹವಾಗಿ ಬಿತ್ತಿದ್ದೆಲ್ಲ ನೀರು ಪಾಲಾಗಿತ್ತು. ಮಳೆಯ ಹೊಡೆತಕ್ಕೆ ಸಿಲುಕಿ ಈರುಳ್ಳಿ ಸಸಿಗಳು ಕೊಳೆತದ್ದರಿಂದ ಅಪಾರ ನಷ್ಟಅನುಭವಿಸುವಂತಾಗಿತ್ತು.
ಎತ್ತರದ ಪ್ರದೇಶದಲ್ಲಿ ಹಾಕಿದ್ದ ಬೆಳೆಯೂ ಸರಿಯಾಗಿ ಬಂದಿರಲಿಲ್ಲ. ಇದರಿಂದ ಗುಣಮಟ್ಟದ ಹಾಗೂ ದೊಡ್ಡ ಗಾತ್ರದ ಈರುಳ್ಳಿ ಈ ಸಲ ಬಂದಿಲ್ಲ. ಆದರೂ ಧಾರಣೆ ಚೆನ್ನಾಗಿದ್ದರಿಂದ ಮಾಡಿದ ಖರ್ಚಾದರೂ ಬಂದೀತು ಎಂದುಕೊಂಡು ರೈತರು ಲಘುಬಗೆಯಲ್ಲೇ ಎಂಟು ದಿನಗಳ ಹಿಂದಿನಿಂದ ಕಟಾವು ಆರಂಭಿಸಿದ್ದರು. ಈರುಳ್ಳಿ ಸಸಿಗಳನ್ನು ಕಿತ್ತು ಹೊಲದಲ್ಲೇ ಗುಡ್ಡೆ ಹಾಕಿಟ್ಟು ಒಣಗಿಸುವುದು ಈ ಭಾಗದ ಪದ್ಧತಿ. ಇದೇ ವೇಳೆ ಈರುಳ್ಳಿ ದರದಲ್ಲೂ ಏಕಾಏಕಿಯಾಗಿ ಇಳಿಮುಖ ಆಗುತ್ತಿರುವುದರಿಂದ ರೈತರು ಹೊಲದಲ್ಲೇ ಈರುಳ್ಳಿ ಬಿಟ್ಟಿದ್ದರು. ಅದೀಗ ಮಳೆ ಪಾಲಾಗುತ್ತಿದೆ. ಗುಡ್ಡೆ ಹಾಕಿದ್ದ ಈರುಳ್ಳಿ ನೀರಿಗೆ ಸಿಲುಕಿ ಕೊಳೆಯುತ್ತಿದೆ. ಈರುಳ್ಳಿ ಬೆಳೆದ ರೈತರು ಕಣ್ಣೀರು ಹಾಕುವಂತಾಗಿದೆ.
ಪ್ರವಾಹಕ್ಕೆ 2286 ಹೆಕ್ಟೇರ್ ನಾಶ
ಜಿಲ್ಲೆಯ ರಾಣಿಬೆನ್ನೂರು, ಹಾವೇರಿ ತಾಲೂಕುಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಈರುಳ್ಳಿ ಬೆಳೆಯಲಾಗುತ್ತದೆ. ಎರಡು ತಿಂಗಳ ಹಿಂದೆ ವರದಾ, ತುಂಗಭದ್ರಾ ನದಿ ಪ್ರವಾಹದಿಂದ ನದಿ ತೀರದ ಹೊಲಗಳೆಲ್ಲ ಜಲಾವೃತಗೊಂಡು ಲಕ್ಷಾಂತರ ಹೆಕ್ಟೇರ್ ಪ್ರದೇಶದಲ್ಲಿನ ಬೆಳೆಗಳು ನಾಶವಾಗಿವೆ. ಅದರಲ್ಲಿ 2286 ಹೆಕ್ಟೇರ್ ಈರುಳ್ಳಿ ಬೆಳೆಯೂ ಹಾನಿಯಾಗಿದೆ. ರಾಣಿಬೆನ್ನೂರು ತಾಲೂಕಿನಲ್ಲಿ 1396 ಹೆಕ್ಟೇರ್, ಹಾವೇರಿ ತಾಲೂಕಿನಲ್ಲಿ 825 ಹೆಕ್ಟೇರ್, ಸವಣೂರು 40 ಹೆಕ್ಟೇರ್, ಹಿರೇಕೆರೂರು 15, ಬ್ಯಾಡಗಿ 10 ಹೆಕ್ಟೇರ್ ಈರುಳ್ಳಿ ಬೆಳೆ ನಾಶವಾಗಿದೆ. ಜಿಲ್ಲೆಯಲ್ಲಿ 5 ಸಾವಿರಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶದಲ್ಲಿ ಈರುಳ್ಳಿ ಬೆಳೆಯಲಾಗುತ್ತಿದ್ದು, ಅರ್ಧದಷ್ಟುಪ್ರದೇಶ ಪ್ರವಾಹಕ್ಕೆ ತುತ್ತಾಗಿದೆ. ಉಳಿದ ಅರ್ಧ ಭಾಗದಲ್ಲಿ ಬೆಳೆದಿದ್ದ ಈರುಳ್ಳಿಗೆ ಈಗ ಮಳೆ ಕಂಟಕ ಎದುರಾಗಿದೆ.
ಈ ಬಗ್ಗೆ ಮಾತನಾಡಿದ ಮಣ್ಣೂರು ಗ್ರಾಮದ ಈರುಳ್ಳಿ ಬೆಳೆಗಾರ ಶಿವಪ್ಪ ಅರಳಿ ಅವರು, ಅತಿವೃಷ್ಟಿಯಿಂದ ಈ ಸಲ ಈರುಳ್ಳಿ ಬೆಳೆಯೇ ಸರಿಯಾಗಿ ಬಂದಿಲ್ಲ. ಉತ್ತಮ ದರವಿದೆ ಎಂದು ಕಟಾವು ಮಾಡಿದ್ದೆವು. ಆದರೆ ಈಗ ಧಾರಣೆಯೂ ಇಳಿದಿದೆ. ಅದಕ್ಕಾಗಿ ಹೊಲದಲ್ಲೇ ಸಸಿ ಸಮೇತ ಈರುಳ್ಳಿಯನ್ನು ರಾಶಿ ಹಾಕಿಟ್ಟಿದ್ದೆವು. ಮಳೆ ಬಂದು ಕೊಳೆಯಲು ಶುರುವಾಗಿದೆ. ಈಗ ಮಾರಾಟ ಮಾಡಿದರೆ ಮಾಡಿದ ಖರ್ಚು, ಕೂಲಿಯೂ ಸಿಗುವುದಿಲ್ಲ. ನಮ್ಮ ಪಾಡು ಯಾರಿಗೂ ಬೇಡ ಎಂದು ಹೇಳಿದ್ದಾರೆ.
ಇನ್ನು ಈ ಬಗ್ಗೆ ಮಾಹಿತಿ ನೀಡಿದ ತೋಟಗಾರಿಕಾ ಉಪನಿರ್ದೇಶಕ ಶರಣಪ್ಪ ಭೋಗಿ ಅವರು, ಪ್ರವಾಹದಲ್ಲಿ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದ್ದ ಈರುಳ್ಳಿ ನಾಶವಾಗಿದ್ದು, ಅದಕ್ಕೆ ರೈತರಿಗೆ ಪರಿಹಾರಕ್ಕಾಗಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ. ಈಗ ಕಟಾವು ನಡೆಯುತ್ತಿದ್ದು, ಮಳೆಗೆ ಸಿಲುಕಿ ಹೊಲದಲ್ಲೇ ಈರುಳ್ಳಿ ಕೊಳೆಯುವ ಸ್ಥಿತಿ ನಿರ್ಮಾಣವಾಗಿದೆ. ಇದರಿಂದ ರೈತರಿಗೆ ಆರ್ಥಿಕವಾಗಿ ನಷ್ಟವಾಗುತ್ತಿದೆ ಎಂದು ಹೇಳಿದ್ದಾರೆ.