* ಹುಳಿ ತೊಳೆದ ಕಡಲೆ, ನೀರಲ್ಲಿ ನಿಂತ ಗೋದಿ, ಭತ್ತ
* ಅಕಾಲಿಕ ಮಳೆಯಿಂದ ಅನ್ನದಾತರಿಗೆ ತಲೆನೋವು
* ಸರ್ಕಾರ ಕೂಡಲೇ ಸೂಕ್ತ ಬೆಳೆ ಪರಿಹಾರ ನೀಡಲು ಆಗ್ರಹ
ಧಾರವಾಡ(ಡಿ.03): ಗಾಯದ ಮೇಲೆ ಬರೆ ಎಳೆದಂತೆ ರೈತರಿಗೆ(Farmers) ಪೆಟ್ಟಿನ ಮೇಲೆ ಪೆಟ್ಟು ನೀಡುತ್ತಿದೆ ಈ ಅಕಾಲಿಕ ಮಳೆ(Untimely Rain). ಇನ್ನೇನು ಮಳೆ ಕಡಿಮೆ ಆಯ್ತು ಎನ್ನುವಷ್ಟರಲ್ಲಿ ಬುಧವಾರ ತಡರಾತ್ರಿ ಜಿಲ್ಲಾದ್ಯಂತ ಅಪಾರ ಪ್ರಮಾಣದಲ್ಲಿ ಮಳೆ ಸುರಿದಿದ್ದು, ರೈತರಿಗೆ ಮತ್ತೆ ಈ ಮಳೆ ತಲೆನೋವಾಗಿ ಪರಿಣಮಿಸಿದೆ.
10 ದಿನಗಳ ಹಿಂದಷ್ಟೇ ಸುರಿದ ಅಪಾರ ಮಳೆಯಿಂದಾಗಿ ಮುಂಗಾರು ಮತ್ತು ಹಿಂಗಾರು ಹಂಗಾಮಿನ ಬೆಳೆಗಳು ಅಪಾರ(Crop Damage) ಪ್ರಮಾಣದಲ್ಲಿ ಹಾನಿಯಾಗಿದ್ದವು. ಜಿಲ್ಲೆಯಲ್ಲಿ ಸುಮಾರು 10 ಸಾವಿರ ಹೆಕ್ಟೇರ್ ಬೆಳೆಹಾನಿ ಅಂದಾಜಿಸಲಾಗಿತ್ತು. ಒಂದೆರಡು ದಿನ ಚಳಿ ಬಿಟ್ಟಂತೆ ಮಾಡಿ ಮತ್ತೆ ಬುಧವಾರದಿಂದ ಮಳೆ ಶುರುವಾಗಿದ್ದು, ಗುರುವಾರ ಇಡೀ ದಿನವೂ ಜಿಲ್ಲಾದ್ಯಂತ ಮಳೆಯಾಗಿದೆ. ಸಾಮಾನ್ಯವಾಗಿ ಚಳಿಗಾಲದಲ್ಲಿ(Winter) ಮಳೆ ಬಂದಿರುದು ಅಪರೂಪ. ಆದರೆ, ಈ ವರ್ಷ ಮಾತ್ರ ಕಾಲದ ಪರಿವೇ ಇಲ್ಲದೇ ಎಲ್ಲ ಕಾಲದಲ್ಲೂ ಮಳೆಯಾಗುತ್ತಿರುವುದು ರೈತರ ಪಾಲಿಗಂತೂ ಬೇಸರದ ಸಂಗತಿ.
Karnataka Rains: ಮಳೆಯಿಂದ ಕರ್ನಾಟಕದಲ್ಲೇ ಅತಿ ಹೆಚ್ಚು ಬೆಳೆ ಹಾನಿ: ಕೇಂದ್ರ!
ಕಳೆದ 24 ಗಂಟೆಯಲ್ಲಿ ಜಿಲ್ಲೆಯಲ್ಲಿ 0.2 ಮಿಮೀ ವಾಡಿಕೆ ಮಳೆಯಾಗಬೇಕಿತ್ತು. ಆದರೆ, ಆಗಿದ್ದು ಬರೋಬ್ಬರಿ 18.6 ಮಿಮೀ. ಅದರಲ್ಲೂ ಅಳ್ನಾವರದಲ್ಲಿ 0.1 ವಾಡಿಕೆ ಮಳೆಯಾಗಬೇಕಿದ್ದರೆ 35.9 ಮಿಮೀ ಮಳೆಯಾಗಿದೆ. ಕಲಘಟಗಿಯಲ್ಲಿ 0.1 ಮಿಮೀ ಬದಲು 30 ಮಿಮೀ ಮಳೆಯಾಗಿದೆ. ಅದೇ ರೀತಿ ಧಾರವಾಡದಲ್ಲಿ 22.9 ಮಿಮೀ, ಹುಬ್ಬಳ್ಳಿ ಗ್ರಾಮೀಣದಲ್ಲಿ 21.5 ಮಿಮೀ, ಕುಂದಗೋಳದಲ್ಲಿ 11.5, ನವಲಗುಂದದಲ್ಲಿ 7.5, ಹುಬ್ಬಳ್ಳಿ ನಗರದಲ್ಲಿ 29 ಮಿಮೀ ಮಳೆಯಾಗಿದೆ.
ಈಗಾಗಲೇ ಭತ್ತ, ಮೆಕ್ಕೆಜೋಳ, ಹತ್ತಿ, ಕಡಲೆ, ಗೋದಿ ಬೆಳೆಗಳು ಈ ಅಕಾಲಿಕ ಮಳೆಯಿಂದ ತೊಂದರೆಗೆ ಈಡಾಗಿವೆ. ಕಡಲೆ ಮತ್ತು ಗೋಧಿಯಂತೂ ಚಳಿಯಿಂದಲೇ ಬರುವ ಬೆಳೆಗಳು. ಕಡಲೆ ಮಳೆಯಿಂದ ಹುಳಿ ತೊಳೆದು ಹೋಗುತ್ತಿದ್ದು, ಹೂವು ಬಿಡುತ್ತಿಲ್ಲ. ಗೋದಿ ಅಪಾರ ಮಳೆಯಿಂದ ಕೊಳೆಯುವ ಸ್ಥಿತಿಗೆ ಬಂದಿದೆ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಬೆಳವಲು ಭಾಗದ ರೈತರು. ಇನ್ನು, ಅಪಾರ ಮಳೆಯಿಂದ ಭತ್ತ, ಮೆಕ್ಕೆಜೋಳ ಮತ್ತು ಕಬ್ಬು ಸಹ ಹಾಳಾಗಿದ್ದು, ಮಲೆನಾಡು ರೈತರು ಕಣ್ಣೀರು ಹಾಕುತ್ತಿದ್ದಾರೆ.
ರೈತರು ಕಂಗಾಲು:
ಕಲಘಟಗಿ ತಾಲೂಕಿನ ಮುಕ್ಕಲ ಗ್ರಾಮದ ನಿಂಗಪ್ಪ ಚನ್ನಪ್ಪ ಕಲಕಟ್ಟಿ ಬೆಳೆದ ಎರಡು ಎಕರೆ ಭತ್ತದ(Paddy) ಬೆಳೆ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಸಂಪೂರ್ಣ ನಾಶವಾಗಿದೆ. ಮಳೆಯ ಮುನ್ಸೂಚನೆಯಲ್ಲಿ ಬೇಗ ಬೇಗ ಭತ್ತದ ಬೆಳೆ ಕಟಾವು ಮಾಡಲಾಗಿತ್ತು. ಇನ್ನೂ ಬಣವಿ ಹಾಕಿರಲಿಲ್ಲ. ಆದರೆ ಬುಧವಾರ ರಾತ್ರಿ ಸುರಿದ ಅಕಾಲಿಕ ಮಳೆಯಿಂದಾಗಿ ರೈತನಿಗೆ ಸಿಗಬೇಕಾದ ಲಕ್ಷಾಂತರ ರುಪಾಯಿ ಹಾನಿಯಾಗಿದೆ. ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬಂತಾಗಿದೆ. ಕೃಷಿ ಮೇಲೆ ಅವಲಂಬಿಸಿ ಬದುಕುತ್ತಿರುವ ರೈತರ ಸ್ಥಿತಿ ಚಿಂತಾಜನಕವಾಗಿದೆ. ಬಿತ್ತಿನೆ ಆರಂಭದ ಹಿಡಿದು ಗೊಬ್ಬರ(Fertilizer), ಕಳೆ ಕ್ರಿಮಿನಾಶಕ, ಆಳುಗಳಿಂದ ಸಾಕಷ್ಟು ಹಣ ಖರ್ಚು ಮಾಡಿ ಬೆಳೆದ ಬೆಳೆ ಹಾಳಾಗಿರುವುದು ರೈತರು ಕಂಗಾಲಾಗಿದ್ದಾರೆ. ಸರ್ಕಾರದಿಂದ ಕೂಡಲೇ ಸೂಕ್ತ ಬೆಳೆ ಪರಿಹಾರ(Crop Compensation) ನೀಡಬೇಕು ಎಂದು ಕಲಘಟಗಿ ರೈತರು ಮನವಿ ಮಾಡಿದ್ದಾರ. ಇದೇ ಸಮಯದಲ್ಲಿ ನಿಂಗಪ್ಪ ಅವರ ಹೊಲಕ್ಕೆ ಗ್ರಾಮ ಲೆಕ್ಕಾಧಿಕಾರಿ ಅಜಯ ಹೊಸಮನಿ ಗುರುವಾರ ಭೇಟಿ ನೀಡಿ ಪರಿಶೀಲಿಸಿದರು.
ರೈತರಿಗೆ ಈ ವರ್ಷದ ಅಕಾಲಿಕ ಮಳೆಯಿಂದ ತುಂಬಲಾರದಷ್ಟು ನಷ್ಟ ಉಂಟಾಗಿದೆ. ಎಲ್ಲಿ ನೋಡಿದರೂ ಮಳೆಯಿಂದಾದ ಹಾನಿಯೇ ಕಂಡು ಬರುವಂತಾಗಿದೆ. ಈಗ ಬತ್ತ ಕಟಾವಿನ ಹಂತದಲ್ಲಿದ್ದು, ಹಲವಾರು ರೈತರು ಬತ್ತ ಕಟಾವು ಮಾಡಿದ್ದಾರೆ. ಆದರೆ ನಿರಂತರ ಮಳೆಯಿಂದ ಕಟಾವು ಮಾಡಿದ ಬತ್ತ ಕೊಳೆತು ಹೋಗುತ್ತಿದೆ. ಬತ್ತದ ಕಾಳುಗಳೆಲ್ಲ ಉದುರಿ ಹೋಗಿದ್ದು ಉಪಯೋಗಕ್ಕೆ ಬಾರದಂತಾಗಿದೆ. ಕಟಾವು ಮಾಡದೆ ಇದ್ದ ಬತ್ತದ ಗದ್ದೆಗಳು ಕೂಡ ಮಳೆಯಿಂದ ಅಡ್ಡಬಿದ್ದಿವೆ. ಇವು ಕಟಾವು ಮಾಡಲಿಕ್ಕೂ ಸಿಗದೆ ಮಣ್ಣಿನಲ್ಲಿ ಹೂತು ಕೊಳೆದಿವೆ. ಹಂದಿಕಾಟ ಬೇರೆ ಇದೆ.