ರೈತರ ಬದುಕು 2020 ರಲ್ಲಾದರೂ ಹಸನಾಗಲಿ| 2019ಕ್ಕೆ ವಿದಾಯ ಹೇಳಿ ಹೊಸ ನಿರೀಕ್ಷೆಯೊಂದಿಗೆ ಟ್ವೆಂಟಿ ಟ್ವೆಂಟಿಗೆ ಸ್ವಾಗತ | ನೆರೆ ಸಂತ್ರಸ್ತರಿಗೆ ಶೀಘ್ರ ಸಿಗಬೇಕಿದೆ ಪರಿಹಾರ| ಬೆಳೆ ವಿಮೆ, ಬೆಳೆ ನಷ್ಟ ಪರಿಹಾರಗಳಿಗಾಗಿ ರೈತರು ಬೀದಿಗಿಳಿದು ಹೋರಾಟ ನಡೆಸುವ ಪರಿಪಾಠ ನಿಲ್ಲಬೇಕಿದೆ| ಕಾಲಮಿತಿಯಲ್ಲಿ ರೈತರಿಗೆ ಸಿಗಬೇಕಾದ ಸೌಲಭ್ಯ ದೊರೆಯಬೇಕು|
ನಾರಾಯಣ ಹೆಗಡೆ
ಹಾವೇರಿ(ಜ.01): ಪ್ರವಾಹ, ಅತಿವೃಷ್ಟಿಯಿಂದ ಬದುಕು ಮೂರಾ ಬಟ್ಟೆಯಾಗಿರುವ ಜಿಲ್ಲೆಯ ಬಹುಸಂಖ್ಯಾತ ರೈತರು ಕಹಿ ನೆನಪುಗಳೊಂದಿಗೆ 2019 ಕ್ಕೆ ಬೀಳ್ಕೊಟ್ಟು, ಹೊಸ ನಿರೀಕ್ಷೆ, ಹುರುಪಿನೊಂದಿಗೆ ಮುಂಬರುವ ದಿನಗಳಾದರೂ ಎಲ್ಲರ ಬಾಳಲ್ಲಿ ಸಿಹಿ ಬರಲಿ ಎಂಬ ಆಶಯದೊಂದಿಗೆ ಜಿಲ್ಲೆಯ ಜನತೆ 2020ನೇ ಇಸ್ವಿಯನ್ನು ಸ್ವಾಗತಿಸಲು ಸಜ್ಜಾಗಿದ್ದಾರೆ.
undefined
ಕಳೆದ ಅನೇಕ ವರ್ಷಗಳ ಕಾಲ ಬರಗಾಲದಿಂದ ಬೆಂಡಾಗಿದ್ದ ರೈತರು 2019ರಲ್ಲಿ ಭೀಕರ ಪ್ರವಾಹಕ್ಕೆ ಸಿಲುಕಿ ಸಂಪೂರ್ಣ ಅಸಹಾಯಕ ಸ್ಥಿತಿಗೆ ತಲುಪಿದ್ದಾರೆ. ವರ್ಷ ಯಾವುದಾದರೇನು, ನಮ್ಮ ಸಮಸ್ಯೆ ಬಗೆಹರಿಯುವುದಿಲ್ಲ ಎಂಬ ಹತಾಶ ಮನೋಭಾವನೆ ರೈತ ವರ್ಗದಲ್ಲಿ ಬೇರೂರಿದೆ. ವರ್ಷ, ಇಸ್ವಿಗಳು, ಕ್ಯಾಲೆಂಡರ್ ಬದಲಾದ ತಕ್ಷಣ ನಮ್ಮ ಸಂಕಷ್ಟ ಸುಲಭವಾಗಿ ಬಗೆಹರಿದೀತು ಎಂಬ ನಿರೀಕ್ಷೆ ಬಹುತೇಕರಿಗಿಲ್ಲ. ಇದಕ್ಕೆ ಕಳೆದ ಅನೇಕ ವರ್ಷಗಳಲ್ಲಿ ಉಂಡ ಕಹಿ ಅನುಭವವೇ ಕಾರಣ ಎನ್ನಬಹುದು. ಆದರೂ ರೈತರ ಆಶಾವಾದ, ನಾಳಿನ ಬಗೆಗಿನ ಭರವಸೆಗಳು ಕಡಿಮೆಯಾಗಿಲ್ಲ. ನೆರೆಯಿಂದ ಆಸ್ತಿಪಾಸ್ತಿ, ಮನೆ ಮಠ ಕಳೆದುಕೊಂಡರೂ ನಮ್ಮ ಅನ್ನದಾತ ಇನ್ನೂ ತನ್ನ ಕಾಯಕ ಬಿಟ್ಟಿಲ್ಲ. ಮತ್ತೆ ಮತ್ತೆ ಉತ್ತಿ ಬಿತ್ತುತ್ತಿದ್ದಾನೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ನೆರೆಯಲ್ಲಿ ಬದುಕೇ ಕಳೆದುಕೊಂಡರೂ ತನ್ನ ಪ್ರಯತ್ನ ಕೈ ಬಿಟ್ಟಿಲ್ಲ. ಹಿಂದಿನ ವರ್ಷದ ಕಹಿ ಘಟನೆಗಳನ್ನು ಮರೆತು 2020 ರಲ್ಲಾದರೂ ರೈತರಿಗೆ ಸುಖಮಯ ವರ್ಷವಾಗಲಿ ಎಂಬ ಆಶಯ ಎಲ್ಲರದ್ದಾಗಿದೆ. 2019ರಲ್ಲಿ ಕೈಗೊಂಡ ಹಲವು ಅಭಿವೃದ್ಧಿ ಕಾರ್ಯಗಳು ಈ ವರ್ಷದಲ್ಲಿ ನೆರವೇರಲಿ ಎಂಬ ಆಶಾಭಾ ವನೆಯೊಂದಿಗೆ ನೂತನ ವರ್ಷಕ್ಕೆ ಕಾಲಿಡಬೇಕಿದೆ.
ಪರಿಹಾರ ಶೀಘ್ರ ದೊರಕಲಿ:
ಕಳೆದ ಆಗಸ್ಟ್ ಮತ್ತು ಅಕ್ಟೋಬರ್ ತಿಂಗಳಲ್ಲಿ ಜಿಲ್ಲೆಯ ವರದಾ, ತುಂಗಭದ್ರಾ, ಕುಮಧ್ವತಿ, ಧರ್ಮಾ ನದಿಗಳಲ್ಲಿ ಪ್ರವಾಹ ಬಂದು ನದಿ ಪಾತ್ರದ ಹತ್ತಾರು ಗ್ರಾಮಗಳು ಜಲಾವೃತಗೊಂಡಿದ್ದವು. ಹತ್ತು ಸಾವಿರಕ್ಕೂ ಹೆಚ್ಚು ಮನೆಗಳು ಬಿದ್ದವು. ಲಕ್ಷಾಂತರ ಹೆಕ್ಚೇರ್ ಪ್ರದೇಶದಲ್ಲಿ ಬೆಳೆದಿದ್ದ ಬೆಳೆ ನಾಶವಾಗಿತ್ತು. ಇದಾದ ಬಳಿಕ ಸರ್ಕಾರ ಪರಿಹಾರ ಘೋಷಣೆ ಮಾಡಿದ್ದರೂ ಇದುವರೆಗೆ ಸಂತ್ರಸ್ತರಿಗೆ ಪರಿಹಾರ ದೊರೆತಿಲ್ಲ. ಕೆಲವು ಕಡೆಗಳಲ್ಲಿ ಉಳ್ಳವರಿಗೆ ಸೌಲಭ್ಯ ದೊರೆಯುತ್ತಿದ್ದು, ನೈಜ ಸಂತ್ರಸ್ತರಿಗೆ ಪರಿಹಾರ ಸಿಗುತ್ತಿಲ್ಲ ಎಂಬ ಆರೋಪಗಳು ಕೇಳಿಬರುತ್ತಿದೆ. ಸರ್ಕಾರ ಕೊಟ್ಟರೂ ಫಲಾನುಭವಿಗಳಿಗೆ ಎಲ್ಲವೂ ತಲುಪುತ್ತಿಲ್ಲ. ಮನೆ ಕಳೆದುಕೊಂಡವರು ಇನ್ನೂ ಅತಂತ್ರ ಸ್ಥಿತಿಯಲ್ಲೇ ದಿನ ನೂಕುತ್ತಿದ್ದಾರೆ. ಅಂಥವರಿಗೆ ಸರ್ಕಾರದಿಂದ ಶೀಘ್ರದಲ್ಲಿ ಸಹಾಯಹಸ್ತ ದೊರೆಯಬೇಕಿದೆ.
ನಷ್ಟವಾದ ಬೆಳೆಗಳಿಗೆ ಪರಿಹಾರ ಕೊಡಬೇಕು. ಸದ್ಯ ಜಿಲ್ಲೆಯಲ್ಲಿನ ಬಹುತೇಕ ಎಲ್ಲ ಕೆರೆಕಟ್ಟೆಗಳು ಭರ್ತಿಯಾಗಿ ನೀರಾವರಿಗೆ ಅನುಕೂಲಕರ ಸ್ಥಿತಿಯಿದೆ. ಸರ್ಕಾರದಿಂದ ಸೂಕ್ತ ನೆರವು ಸಕಾಲದಲ್ಲಿ ದೊರೆತರೆ ರೈತರು ಬದುಕು ಕಟ್ಟಿಕೊಳ್ಳಲು ಅನುಕೂಲ ವಾಗುತ್ತದೆ. ಈ ನಿಟ್ಟಿನಲ್ಲಿ ವರ್ಷಾರಂಭದಲ್ಲೇ ಆಡಳಿತ ಯಂತ್ರ ರೈತರತ್ತ ಹಸ್ತ ಚಾಚಬೇಕಿದೆ. ಬೆಳೆ ವಿಮೆ, ಬೆಳೆ ನಷ್ಟ ಪರಿಹಾರಗಳಿಗಾಗಿ ರೈತರು ಬೀದಿಗಿಳಿದು ಹೋರಾಟ ನಡೆಸುವ ಪರಿಪಾಠ ನಿಲ್ಲಬೇಕಿದೆ. ಅದಕ್ಕಾಗಿ ಕಾಲಮಿತಿಯಲ್ಲಿ ರೈತರಿಗೆ ಸಿಗಬೇಕಾದ ಸೌಲಭ್ಯ ದೊರೆಯಬೇಕು. ಪ್ರತಿವರ್ಷ ಅಪಾರ ನಿರೀಕ್ಷೆಗಳೊಂದಿಗೆ ಹೊಸ ವರ್ಷಕ್ಕೆ ಕಾಲಿಡುವುದು ಸಹಜ. ಆದರೆ ಆ ನಿರೀಕ್ಷೆಗಳು ಹಾಗೆಯೇ ಉಳಿದರೆ ನಿರಾಸೆಯಾಗುತ್ತದೆ
ಹೊಸ ವರ್ಷ ಸ್ವಾಗತಕ್ಕೆ ಅಣಿ 2019 ಜಿಲ್ಲೆಯಲ್ಲಿ ರಾಜಕೀಯ ಪರ್ವವೇ ನಡೆದ ವರ್ಷ. ಲೋಕಸಭೆ ಚುನಾವಣೆ, ಎರಡು ವಿಧಾನಸಭೆ ಕ್ಷೇತ್ರಗಳಿಗೆ ಉಪಚುನಾವಣೆ ನಡೆದವು. ಬಿಜೆಪಿ ಸರ್ಕಾರ ಅಸ್ಥಿತ್ವಕ್ಕೆ ಬರಲು ಕಾರಣರಾದ ಹಿರೇಕೆರೂರು ಶಾಸಕ ಬಿ.ಸಿ.ಪಾಟೀಲ ಅವರಿಗೆ ಇಷ್ಟರೊಳಗಾಗಿಯೇ ಮಂತ್ರಿಗಿರಿ ಸಿಗಬೇಕಿತ್ತು. ಸಂಕ್ರಾಂತಿ ವೇಳೆಗೆ ಬಿ.ಸಿ.ಪಾಟೀಲ ಮಂತ್ರಿಯಾಗುವ ನಿರೀಕ್ಷೆ ಆ ಪಕ್ಷದ ಕಾರ್ಯಕರ್ತರದ್ದು. ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲೂ ಉತ್ತಮ ಫಲಿತಾಂಶ ನಿರೀಕ್ಷಿಸಲಾಗುತ್ತಿದ್ದು, ಆ ನಿಟ್ಟಿನಲ್ಲಿ ಪ್ರಯತ್ನ ಸಾಗಿದೆ. ಒಟ್ಟಾರೆಯಾಗಿ ಹಳೆ ವರ್ಷ, ಕಹಿ ಘಟನೆಗಳನ್ನು ಮರೆತು ಹೊಸ ನಿರೀಕ್ಷೆಗಳೊಂದಿಗೆ 2020 ನೇ ವರ್ಷದ ಸ್ವಾಗತಕ್ಕೆ ಜಿಲ್ಲೆಯ ಜನತೆ ಅಣಿಯಾಗಿದ್ದಾಗಿದೆ.
ಹೊಸ ವರ್ಷದ ನಿರೀಕ್ಷೆಗಳು
* ಬಹುವರ್ಷಗಳ ಜಿಲ್ಲೆಯ ಜನರ ಬೇಡಿಕೆಯಾದ ಮೆಡಿಕಲ್ ಕಾಲೇಜಿಗೆ ಕೇಂದ್ರ ಸರ್ಕಾರದಿಂದ ಅನುದಾನ ಮಂಜೂರಾಗಿದೆ. ತಕ್ಷಣ ಕಟ್ಟಡ ನಿರ್ಮಾಣ ಕಾಮಗಾರಿ ಆರಂಭಿಸಿದರೆ ಬರುವ ಶೈಕ್ಷಣಿಕ ವರ್ಷದಲ್ಲಾದರೂ ಮೆಡಿಕಲ್ ಕಾಲೇಜು ಕನಸು ಈಡೇರಬಹುದು.
* ಪ್ರತ್ಯೇಕ ಡಿಸಿಸಿ ಬ್ಯಾಂಕ್, ಪ್ರತ್ಯೇಕ ಹಾಲು ಒಕ್ಕೂಟದ ಬೇಡಿಕೆಗಳಿಗೆ ಬಿಜೆಪಿ ಸರ್ಕಾರ ಒಪ್ಪಿಗೆ ನೀಡುವ ನಿರೀಕ್ಷೆ ಎಲ್ಲರದ್ದು. ಇವೆಲ್ಲವೂ ಬಿಜೆಪಿಯ ಭರವಸೆಗಳಾದ್ದರಿಂದ ಈಗ ಅದೇ ಸರ್ಕಾರ ಕಾರ್ಯರೂಪಕ್ಕೆ ತರುವ ಆಶಾವಾದ ಜಿಲ್ಲೆಯ ಜನರದ್ದು. ಜಿಲ್ಲೆಯವರೇ ಆಗಿರುವ ಬಸವರಾಜ ಬೊಮ್ಮಾಯಿ ಅವರ ಬಳಿಯೇ ಸಹಕಾರಿ ಖಾತೆಯೂ ಇರುವುದರಿಂದ ಹಾಲು ಒಕ್ಕೂಟ ರಚನೆಗೆ ಇದು ಸುಸಂದರ್ಭ ಎನ್ನಬಹುದು. ಸಿಕ್ಕಿರುವ ಅವಕಾಶದಲ್ಲಿ ಪ್ರತ್ಯೇಕ ಒಕ್ಕೂಟ ರಚಿಸಿದರೆ ಆ ಕೀರ್ತಿ ಈಗಿನ ಸರ್ಕಾರಕ್ಕೆ ಸಿಗಲಿದೆ.
* ನನೆಗುದಿಗೆ ಬಿದ್ದಿರುವ ತುಂಗಾಮೇಲ್ದಂಡೆ ಸೇರಿದಂತೆ ವಿವಿಧ ಏತ ನೀರಾವರಿ ಯೋಜನೆ ಕಾಮಗಾರಿಗಳನ್ನು ಇನ್ನಷ್ಟು ತ್ವರಿತಗೊಳಿಸಬೇಕಿದೆ. ಹಾವೇರಿ ನಗರದಲ್ಲಿ ದಿನದ 24 ಗಂಟೆಗಳ ಕಾಲ ನೀರು ಪೂರೈ ಸುವ ಯೋಜನೆ ಅನುಷ್ಠಾನ ಗೊಳ್ಳುವ ನಿರೀಕ್ಷೆಯಿದೆ.
* ರಾಣಿಬೆನ್ನೂರನಲ್ಲಿ ಮೆಗಾ ಮಾರ್ಕೆಟ್, ಸರ್ವಜ್ಞ ಪ್ರಾಧಿಕಾರ ಕಾರ್ಯಾರಂಭ, ಹಾವೇರಿ-ಗದಗ ರೈಲು ಮಾರ್ಗ ಸಮೀಕ್ಷೆ, ರೈಲು ನಿಲ್ದಾಣ ಮೇಲ್ದರ್ಜೆ, ಹಾವೇರಿ- ಕಾರವಾರ-ಕೈಗಾ ಹೆದ್ದಾರಿ ಯೋಜನೆ ಘೋಷಣೆಯಲ್ಲಿಯೇ ಉಳಿದಿದ್ದು ಜಾರಿಗೊಳ್ಳಬೇಕಿದೆ. ಹಾವೇರಿ ಹೆಗ್ಗೇರಿಕೆರೆಗೆ ಯುಟಿಪಿ ಕಾಲುವೆ ಮೂಲಕ ನೀರು ಹರಿಸುವಂತಾಗಬೇಕಿದೆ. ಸ್ಪೈಸ್‌ಪಾರ್ಕ್ ಈ ವರ್ಷವಾದರೂ ಕಾರ್ಯಾರಂಭವಾಗಬೇಕಿದೆ. ಎರಡು ವರ್ಷಗಳ ಹಿಂದೆ ಘೋಷಣೆಯಾದ ಇಸ್ರೇಲ್ ಮಾದರಿ ಕೃಷಿ ಪದ್ಧತಿ ರೈತರಿಗೆ ತಲುಪಬೇಕಿದೆ.