ಕೊರೋನಾ ಹಿನ್ನೆಲೆಯಲ್ಲಿ ಕಳೆದೆರಡು ವರ್ಷಗಳಿಂದ ಸರಳವಾಗಿ ಆಚರಿಸಲಾಗುತ್ತಿದ್ದ ಜಾತ್ರೆ ಈ ಬಾರಿ ಮತ್ತೆ ಹಿಂದಿನಂತೆ ವಿಜೃಂಭಣೆಯಿಂದ ನಡೆಯಲಿದೆ
ಭಟ್ಕಳ (ಜು.27) : ಇಲ್ಲಿನ ಸುಪ್ರಸಿದ್ಧ ಮಾರಿ ಜಾತ್ರೆ ಜು.27 ಹಾಗೂ 28 ರಂದು ನಡೆಯಲಿದ್ದು, ಕೊರೋನಾ ಹಿನ್ನೆಲೆಯಲ್ಲಿ ಕಳೆದೆರಡು ವರ್ಷಗಳಿಂದ ಸರಳವಾಗಿ ಆಚರಿಸಲಾಗುತ್ತಿದ್ದ ಜಾತ್ರೆ ಈ ಬಾರಿ ಮತ್ತೆ ಹಿಂದಿನಂತೆ ವಿಜೃಂಭಣೆಯ ಸ್ವರೂಪ ಪಡೆಯಲಿದೆ.
ಮಾರಿಯಮ್ಮನ ಉತ್ಸವ ಮೂರ್ತಿಯನ್ನು ಮಣ್ಕುಳಿಯ ಮಾರುತಿ ಆಚಾರ್ಯ ಅವರ ಮನೆಯಲ್ಲಿ ತಯಾರಿಸಲಾಗಿದ್ದು, ಮಂಗಳವಾರ ರಾತ್ರಿ ಅದ್ಧೂರಿಯ ಪೂಜೆ, ಪುನಸ್ಕಾರ ನಡೆದ ಬಳಿಕ ವಾದ್ಯದೊಂದಿಗೆ ಭಕ್ತರ ಮೆರವಣಿಗೆಯ ಮೂಲಕ ಮಾರಿ ಉತ್ಸವ ಮೂರ್ತಿಯನ್ನು ತಂದು ಮಾರಿಗುಡಿಯಲ್ಲಿ ಹಿಂದಿನ ಸಂಪ್ರದಾಯ ಮತ್ತು ಧಾರ್ಮಿಕ ವಿಧಿ ವಿಧಾನಗಳಂತೆ ಬುಧವಾರ ಬೆಳಗಿನಜಾವ ಪ್ರತಿಷ್ಠಾಪಿಸಲಾಗುತ್ತದೆ. ಮಾರಿ ಜಾತ್ರೆ ಭಟ್ಕಳಿಗರ ಪಾಲಿಗೆ ವಿಶೇಷ ಹಬ್ಬವೇ ಎನ್ನಬಹುದು. ಈ ಜಾತ್ರೆ ತನ್ನದೇ ಆದ ಹಿನ್ನೆಲೆ ಮತ್ತು ಇತಿಹಾಸ ಹೊಂದಿದೆ. ಜಾತ್ರೆ ಆಚರಣೆಯ ಉದ್ದೇಶದ ಬಗ್ಗೆ ಒಂದು ಕಥೆಯೇ ಇದೆ. ಅನಾದಿಕಾಲದಿಂದಲೂ ನಡೆಯುತ್ತಿರುವ ಮಾರಿ ಜಾತ್ರೆಯು ಅನೇಕ ಏಳು ಬೀಳುಗಳೊಂದಿಗೆ ಯಶಸ್ವಿಯಾಗಿ ನಡೆದುಕೊಂಡು ಬಂದಿದ್ದರೂ ಕೂಡಾ ಹಿಂದಿನ ಸಂಪ್ರದಾಯದಲ್ಲಿ ಅಲ್ಪ ಸ್ವಲ್ಪ ಬದಲಾವಣೆಗಳನ್ನು ಮಾಡಿಕೊಂಡು ಆಚರಿಸಲಾಗುತ್ತಿರುವುದು ಇಂದಿನ ವಿಶೇಷ. ಈ ಹಿಂದೆ ಮಾರಿಕಟ್ಟೆಪ್ರದೇಶದಲ್ಲಿ ಮಾರಿ ಜಾತ್ರೆಯ ದಿನದಂದು ಕುರಿ, ಕೋಳಿ ಬಲಿ ಕೊಡುವ ಪದ್ದತಿ ಇತ್ತು.ಆದರೆ ಹತ್ತಾತು ವರ್ಷಗಳಿಂದ ಇಂತಹ ಪದ್ಧತಿ ರದ್ದಾಗಿದ್ದು, ಈಗೇನಿದ್ದರೂ ಭಕ್ತರು ಭಕ್ತಿಪೂರ್ವಕವಾಗಿ ಮಾರಿಯಮ್ಮನಿಗೆ ಹೂವು, ಹಣ್ಣು,ಬೆಳ್ಳಿ ಕಣ್ಣು, ಹೂವಿನ ಟೋಪಿ ಮುಂತಾದ ಸೇವೆ ಒಪ್ಪಿಸುತ್ತಿದ್ದಾರೆ.
ಮಾರಿಕಾಂಬಾ ಜಾತ್ರೆ: ಒಂದು ಕೋಮಿಗೆ ಮಳಿಗೆ ನೀಡದಂತೆ ನಿರ್ಧಾರ
ಮಾರಿ ಹಬ್ಬದ ಪ್ರಯುಕ್ತ ಭಟ್ಕಳದ ಮನೆ ಮನೆಗಳಲ್ಲಿ ಹಬ್ಬವನ್ನು ಆಚರಿಸಲಾಗುತ್ತದೆ. ಮಣ್ಕುಳಿಯಲ್ಲಿನ ಆಚಾರ್ಯರ ಮನೆಯವರು ಕಳೆದ ಒಂದು ವಾರದಿಂದ ತಮ್ಮ ಮನೆಯಲ್ಲಿಯೇ ಅಮಟೆ ಮರದಿಂದ ಸುಂದರ ಮಾರಿ ಮೂರ್ತಿಯನ್ನು ಕೆತ್ತಿ ಮಾರಿಜಾತ್ರೆಯ ಹಿಂದಿನ ದಿನವಾದ ಮಂಗಳವಾರ ರಾತ್ರಿ ಸಮಾಜದವರಿಗೆಲ್ಲ ಊಟದ ವ್ಯವಸ್ಥೆ ಮಾಡಿ,ಅತಿ ವಿಜೃಂಭಣೆಯಿಂದ ಪೂಜೆ ಸಲ್ಲಿಸಿ ನಂತರ ಮಾರಿ ಮೂರ್ತಿ ಬುಧವಾರ ಬೆಳಗಿನ ಜಾವ ಸಂಬಂಧಪಟ್ಟವರಿಗೆ ಬಿಟ್ಟುಕೊಟ್ಟನಂತರ ಮಾರಿ ಜಾತ್ರೆಗೆ ಅಧಿಕೃತ ಚಾಲನೆ ದೊರೆಯುವ ಸಂಪ್ರದಾಯ ನಡೆದು ಬಂದಿದೆ. ಮಾರಿ ಜಾತ್ರೆಗೆ ಮಾರಿಕಾಂಬಾ ದೇವಸ್ಥಾನದಲ್ಲಿ ಇರುವ ಮಾರಿಕಾಂಬೆಯ ಪ್ರತಿಮೆಯ ಎದುರು ಹಿಂದಿನ ಸಂಪ್ರದಾಯದಂತೆ ಉತ್ಸವ ಮೂರ್ತಿಯನ್ನು ಪ್ರತಿಷ್ಟಾಪಿಸಿ ಬುಧವಾರ ಮತ್ತು ಗುರುವಾರ ಅತಿ ವಿಜೃಂಭಣೆಯಿಂದ ಪೂಜಿಸಲಾಗುತ್ತದೆ.
Udupi: ಮಾರಿ ಜಾತ್ರೆಯಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನೋ ಎಂಟ್ರಿ..!
ಮಾರಿ ಜಾತ್ರೆಯ ಸಂದರ್ಭದಲ್ಲಿ ಮಾರಿಯಮ್ಮನಿಗೆ ಪೂಜೆ, ಹರಕೆ ಒಪ್ಪಿಸುವುದರಿಂದ ಕಷ್ಟಕಾರ್ಪಣ್ಯಗಳು ದೂರವಾಗಲಿದೆ ಎನ್ನುವ ಬಲವಾದ ನಂಬಿಕೆ ಭಕ್ತರು ಹೊಂದಿರುವುದರಿಂದ ವರ್ಷಂಪ್ರತಿ ನಡೆಯುವ ಮಾರಿ ಜಾತ್ರೆಯಲ್ಲಿ ಭಟ್ಕಳ ಸೇರಿದಂತೆ ವಿವಿಧ ಭಾಗದಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರ ದಂಡೇ ಹರಿದು ಬರುತ್ತದೆ. ಮಾರಿಗೆ ಬುಧವಾರ ಭಟ್ಕಳ ಗ್ರಾಮೀಣ ಭಾಗದವರು ಬಂದು ಪೂಜೆ ಸಲ್ಲಿಸುವುದು ಹಾಗೂ ಗುರುವಾರ ಬೆಳಗ್ಗೆಯಿಂದ ಮಧ್ಯಾಹ್ನದ ತನಕ ಭಟ್ಕಳ ಪಟ್ಟಣದ ಜನರು ಪೂಜೆ ಸಲ್ಲಿಸುವ ಪದ್ದತಿ ಇದೆ. ಜಾತ್ರೆಯಲ್ಲಿ ಬೆಳ್ಳಿ ಕಣ್ಣು, ಹೂವಿನ ಟೋಪಿ ಮುಂತಾದವುಗಳಿಗೆ ಭಾರೀ ಬೇಡಿಕೆ ಇರಲಿದ್ದು, ಭಕ್ತರು ಇದನ್ನು ಖರೀದಿಸಿ ದೇವರ ಹುಂಡಿಗೆ ಭಕ್ತಿಪೂರ್ವಕವಾಗಿ ಹಾಕಿ ತಮ್ಮ ಹರಕೆ ತೀರಿಸುತ್ತಾರೆ. ಗುರುವಾರ ಸಂಜೆ ಮಾರಿಗುಡಿಯಲ್ಲಿ ಮಾರಿಗೆ ಅಂತಿಮ ಪೂಜೆ ಸಲ್ಲಿಸಿ ಮೂರ್ತಿಯನ್ನು ಪಟ್ಟಣದಿಂದ 7ಕಿಮಿ ದೂರದ ಜಾಲಿಕೋಡಿ ಸಮುದ್ರಕ್ಕೆ ಮೆರವಣಿಗೆಯಲ್ಲಿ ಹೊತ್ತೊಯ್ದು ವಿಸರ್ಜನೆ ಮಾಡುತ್ತಾರೆ.