ವಿವಾಹ ವಿಚಾರವಾಗಿ ಕುಟುಂಬ ಒಂದು ಇದೀಗ ಸಾವಿಗಾಗಿ ಮನವಿ ಮಾಡಿಕೊಂಡಿದೆ. ಮರಣ ದಯಪಾಲಿಸಿ ಎಂದು ಕೇಳುತ್ತಿದೆ.
ರಾಮನಗರ (ನ.04): ಮಗನ ಮದುವೆಗೆ ಕರೆಯಲಿಲ್ಲ ಎಂಬ ನೆಪವೊಡ್ಡಿ ಕುಟುಂಬದವರಿಗೆ ಸಮುದಾಯ ಬಹಿಷ್ಕಾರ ಹಾಕಿದವರ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳಿ, ಇಲ್ಲವೆ ದಯಾ ಮರಣ ಹೊಂದಲು ಅನುಮತಿ ನೀಡುವಂತೆ ಒತ್ತಾಯಿಸಿ ನೊಂದ ಕುಟುಂಬವೊಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದೆ.
ಕನಕಪುರ ತಾಲೂಕು ಕೋಡಿಹಳ್ಳಿ ಗ್ರಾಮದ ತಿಗಳ ಸಮುದಾಯಕ್ಕೆ ಸೇರಿದ ಕೆಂಚೇಗೌಡ ಕುಟುಂಬ ದಯಾಮರಣಕ್ಕೆ ಅನುಮತಿ ನೀಡುವಂತೆ ಕೋರಿಕೊಂಡಿದೆ. ಅಲ್ಲದೆ, ಈ ನೊಂದ ಕುಟುಂಬ ಗ್ರಾಮದ ನಂಜೇಗೌಡ, ಕೆ.ರಮೇಶ್ , ಮಹದೇವಯ್ಯ, ಮುನಿಗೌಡ, ಲಕ್ಷ್ಮಣ ವಿರುದ್ಧ ಸಮುದಾಯದಿಂದ ಬಹಿಷ್ಕಾರ ಹಾಕಿದ ಆರೋಪ ಮಾಡಿದೆ.
‘ನಾವು ಪಾಕಿಸ್ತಾನದವರು’ ಎಂದು ಕೂಗಾಡಿ ವ್ಯಕ್ತಿಯ ಮೇಲೆ ಹಲ್ಲೆ ...
ಏನಿದು ಘಟನೆ? ತಿಗಳ ಸಮುದಾಯಕ್ಕೆ ಸೇರಿದ ಈ ಐದು ಮಂದಿ ಸ್ವಯಂ ಘೋಷಿತ ತಿಗಳ ಸಂಘಟನೆಯ ವಿವಿಧ ಹುದ್ದೆಯ ಹೆಸರಿನಲ್ಲಿ ಅಮಾಯಕ ತಿಗಳ ಸಮುದಾಯದ ಹಲವಾರು ಜನರಿಂದ ಕುಟುಂಬ ಬಹಿಷ್ಕಾರ ಎನ್ನುವ ಹೆಸರಿನಲ್ಲಿ ಲಕ್ಷಾಂತರ ರುಪಾಯಿಗಳನ್ನು ದಂಡದ ರೂಪದಲ್ಲಿ ವಸೂಲಿ ಮಾಡುತ್ತಿದ್ದರು. ಮೊದಲಿನಿಂದಲೂ ನಾವು ಇವರ ಕಾರ್ಯವೈಖರಿ ವಿರೋಧಿಸುತ್ತಾ ಬಂದಿದ್ದವು. ಈಗ ಐವರು ಗ್ರಾಮದಲ್ಲಿ ನಮ್ಮ ಕುಟುಂಬದೊಂದಿಗೆ ಬೆಂಕಿ, ನೀರು ಸೇರಿದಂತೆ ಯಾವುದೇ ವಸ್ತು ನೀಡಬಾರದು, ಅವರಿಂದ ಪಡೆಯಬಾರದು, ಯಾರು ಅವರೊಂದಿಗೆ ಮಾತನಾಡಬಾರದು. ಯಾವುದೇ ಶುಭ ಅಶುಭ ಕಾರ್ಯಗಳಿಗೆ ಆಹ್ವಾನ ಮಾಡಬಾರದೆಂದು ಪಂಚಾಯಿತಿ ನಿರ್ಣಯ ಮಾಡಿ ಸಮುದಾಯದಿಂದ ಬಹಿಷ್ಕಾರದ ಫತ್ವಾ ಹೊರಡಿಸಿದ್ದಾರೆ.
ಚಿಕ್ಕೇನಹಳ್ಳಿಯ ಸಿದ್ದಪ್ಪ ಪುತ್ರಿ ಮಹಾಲಕ್ಷ್ಮೇ ಮತ್ತು ನನ್ನ ಎರಡನೇ ಪುತ್ರ ಕೆ.ದೇವರಾಜು ವಿವಾಹವನ್ನು ಮೇ 31ರಂದು ಕೋವಿಡ್ ನಿಯಮಾವಳಿ ಅನುಸಾರ ನೆರವೇರಿಸಲಾಗಿತ್ತು. ಜೂನ್ 8ರಂದು ನನ್ನ ಮಗನ ವಿವಾಹ ಸಂಬಂಧವಾಗಿಯೇ ಐವರು ಪಂಚಾಯಿತಿ ಇಟ್ಟಿಕೊಂಡಿದ್ದರು. ಆ ದಿನ ಬೀಗರ ಮನೆಯಲ್ಲಿ ಮಗನ ನಿಷೇಕ ಶಾಸ್ತ್ರ ಇದ್ದ ಕಾರಣ ಪಂಚಾಯಿತಿಗೆ ಹಾಜರಾಗಿರಲಿಲ್ಲ. ಮರು ದಿನ ಗ್ರಾಮಕ್ಕೆ ಬರುವಷ್ಟರಲ್ಲಿ ಮಗನ ಮದುವೆಗೆ ತಿಗಳ ಜನಾಂಗದವರಿಗೆ ವೀಳ್ಯ ನೀಡಿ ಕರೆದಿಲ್ಲವೆಂದು ಪಂಚಾಯಿತಿ ನಿರ್ಣಯ ಮಾಡಿಕೊಂಡು ನಮ್ಮ ಕುಟುಂಬಕ್ಕೆ ಬಹಿಷ್ಕಾರ ಹಾಕಿದ್ದಾರೆ.
ಗ್ರಾಮದಲ್ಲಿ ನೆಮ್ಮದಿಯ ಜೀವನ ನಡೆಸಲು ಬಿಡದೆ ನೀಡುತ್ತಿರುವ ಮಾನಸಿಕ ಹಿಂಸೆಯಿಂದ ಕುಟುಂಬ ಆತ್ಮಹತ್ಯೆ ಮಾಡಿಕೊಳ್ಳುವ ಹಂತಕ್ಕೆ ತಲುಪಿದೆ. ಈ ಐವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಿ, ಕ್ರಮ ಕೈಗೊಳ್ಳಬೇಕು. ನಮ್ಮ ಕುಟುಂಬ ನೆಮ್ಮದಿಯಿಂದ ಜೀವನ ನಡೆಸಲು ಅವಕಾಶ ಮಾಡಿಕೊಡುವ ಜತೆಗೆ ಸೂಕ್ತ ರಕ್ಷಣೆ ನೀಡಬೇಕು. ಇಲ್ಲದಿದ್ದರೆ ರಾಜ್ಯಪಾಲರಿಂದ ದಯಾಮರಣ ಹೊಂದಲು ಅನುಮತಿ ಕೊಡಿಸುವಂತೆ ನಂಜೇಗೌಡ ಕುಟುಂಬ ಮನವಿ ಮಾಡಿಕೊಂಡಿದೆ.