ತುಮಕೂರು : ಜೆಡಿಎಸ್‌ ಪಾಲಾದ ಅಧಿಕಾರ

By Kannadaprabha NewsFirst Published Nov 4, 2020, 10:58 AM IST
Highlights

ಚುನಾವಣೆ ನಡೆಯುತ್ತಲೇ ಅಧಿಕಾರ ಜೆಡಿಎಸ್ ಪಾಲಾಗಿದೆ. ಈ ಮೂಲಕ ಜೆಡಿಎಸ್ ಗೆ ಶುಭಾರಂಭವಾದಂತಾಗಿದೆ

ಚಿಕ್ಕನಾಯಕನಹಳ್ಳಿ (ನ.04):  ಇಲ್ಲಿನ ಪುರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಜೆಡಿಎಸ್‌ನ ಪುಷ್ಪ ಅಧ್ಯಕ್ಷರಾಗಿ ಹಾಗೂ ರೇಣುಕಮ್ಮ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಇಲ್ಲಿನ ಪುರಸಭೆಯ 23 ಸ್ಥಾನಗಳ ಪೈಕಿ ಜೆಡಿಎಸ್‌ 14 ಸ್ಥಾನಗಳಲ್ಲಿ ಜಯ ಸಾಧಿಸಿತ್ತು. ಉಳಿದಂತೆ ಬಿಜೆಪಿ 5, ಕಾಂಗ್ರೆಸ್‌ 2 ಹಾಗೂ ಪಕ್ಷೇತರರು 2 ಸ್ಥಾನದಲ್ಲಿ ಗೆಲುವು ಸಾಧಿಸಿದ್ದರು.

ಅಧ್ಯಕ್ಷ ಸ್ಥಾನ ಪರಿಶಿಷ್ಠ ಜಾತಿ ಹಾಗೂ ಉಪಾಧ್ಯಕ್ಷ ಸ್ಥಾನ ಹಿಂದುಳಿದ ಮಹಿಳೆಗೆ ಮೀಸಲಾತಿಯನ್ವಯ ಅಧ್ಯಕ್ಷ ಸ್ಥಾನಕ್ಕೆ 22ನೇ ವಾರ್ಡ್‌ನ ಸದಸ್ಯೆ ಜೆಡಿಎಸ್‌ನ ಪುಷ್ಪ ಹಾಗೂ 4ನೇ ವಾರ್ಡ್‌ನ ಬಿಜೆಪಿಯ ಡಿ.ಕೆ. ನಾಗರಾಜು ನಾಮಪತ್ರ ಸಲ್ಲಿಸಿದ್ದರು. ಅದೇ ರೀತಿ ಉಪಾಧ್ಯಕ್ಷಸ್ಥಾನಕ್ಕೆ 23 ನೇ ವಾರ್ಡ್‌ನ ಕಾಂಗ್ರೆಸ್‌ನ ಸಿ. ಉಮಾ ಹಾಗೂ 18ನೇ ವಾರ್ಡ್‌ನ ರೇಣುಕಮ್ಮ ಜೆಡಿಎಸ್‌ನಿಂದ ಸ್ಪರ್ಧಿಸಿದ್ದರು. 14 ಸ್ಥಾನ ಹೊಂದಿರುವ ಜೆಡಿಎಸ್‌ ವಿರುದ್ಧವಾಗಿ ಕಾಂಗ್ರೆಸ್‌, ಬಿಜೆಪಿ, ಪಕ್ಷೇತರ ಮತ್ತು ಶಾಸಕರು ಹಾಗೂ ಸಂಸದರು ನಡೆಸಿದ ಕಡೆಯತನಕದ ಪ್ರಯತ್ನ ವಿಫಲವಾಗಿ ಜೆಡಿಎಸ್‌ನ ಪುಷ್ಪ ಅಧ್ಯಕ್ಷರಾಗಿ, ಉಪಾಧ್ಯಕ್ಷರಾಗಿ ರೇಣುಕಮ್ಮ ತಲಾ 14 ಮತಗಳನ್ನು ಪಡೆಯುವ ಮೂಲಕ ಅಯ್ಕೆಯಾದರು.

ಗೌಪ್ಯಮತದಾನದಲ್ಲಿ ಶಾಸಕರು ಹಾಗೂ ಸಂಸದರ ಒಂದೊಂದು ಸದಸ್ಯಬಲವು ಸೇರಿದಂತೆ ಒಟ್ಟು 25 ಮತಗಳಲ್ಲಿ ಜೆಡಿಎಸ್‌ಗೆ 14 ಹಾಗೂ ವಿರೋಧಿ ಬಣದ ಒಮ್ಮತದ ಅಭ್ಯರ್ಥಿಗಳಿಗೆ 11 ಮತಗಳು ಲಭ್ಯವಾದವು. ತಹಸೀಲ್ದಾರ್‌ ಬಿ. ತೇಜಸ್ವಿನಿ ಚುನಾವಾಣಾಧಿಕಾರಿಯಾಗಿ ಚುನಾವಣಾ ಪ್ರಕ್ರಿಯೆ ನಡೆಸಿದರು.

ಗೆದ್ದರೆ ಜನಾರ್ದನ ತೀರ್ಪು : ಸೋತರೆ ಇವಿಎಂ ಫಾಲ್ಟ್ ...

ಫಲಿತಾಂಶ ಹೊರಬೀಳುತ್ತಿದ್ದಂತಯೇ ಪುರಸಭೆ ಮುಂಭಾಗದಲ್ಲಿದ್ದ ಸಿ.ಬಿ. ಸುರೇಶ್‌ಬಾಬು ಅಭಿಮಾನಿಗಳು ಪಟಾಕಿಸಿಡಿಸಿ ಸಂಭ್ರಮಿಸಿದರು.

ಸಚಿವರ ಪ್ರಯತ್ನ ವಿಫಲ:  ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನದ ಆಯ್ಕೆಯಲ್ಲಿ ಬಹುಮತವಿದ್ದ ಜೆಡಿಎಸ್‌ಗೆ ಅಧಿಕಾರ ಖಾತ್ರಿ ಎಂದು ನಂಬಿದ್ದವರಿಗೆ ಆಯ್ಕೆ ಪ್ರಕ್ರಿಯೆ ಕೊನೆಯವರೆಗೆ ಕುತೂಹಲದಿಂದ ಮತ್ತು ಕೆಲವೊಮ್ಮೆ ಆತಂಕವನ್ನೂ ಮೂಡಿಸಿತ್ತು. ಅಂತೆ ಕಂತೆಗಳ ಹಾರಾಟದಲ್ಲಿ ಜೆಡಿಎಸ್‌ ಮತಗಳು ಬಿಕರಿಯಾಗಿವೆ. ಸಚಿವರ ಪ್ರಭಾವ ತಮ್ಮ ಬಳಸಿ ಜೆಡಿಎಸ್‌ಗೆ ಅಧಿಕಾರ ತಪ್ಪಿಸುವರೆಂದು ಗಾಳಿಸುದ್ದಿ ಹರಿದಾಡಿತ್ತು. ಆದರೆ ಸಚಿವರು ಜೆಡಿಎಸ್‌ ವಿರುದ್ಧ ತಮ್ಮ ಪಕ್ಷದ ಸದಸ್ಯರು ಸೇರಿದಂತೆ ಕಾಂಗ್ರೆಸ್‌ ಹಾಗೂ ಪಕ್ಷೇತರರನ್ನು ಒಗ್ಗೂಡಿಸಿ ನಡೆಸಿದ ಕೊನೆಯವರೆಗಿನ ಪ್ರಯತ್ನ ಜೆಡಿಎಸ್‌ನ ಒಗ್ಗಟ್ಟಿನ ಮುಂದೆ ವಿಫಲವಾಯಿತು.

click me!