ನಿಟ್ಟುಸಿರು ಬಿಡುತ್ತಿರುವ ಕಿಮ್ಸ್ ವೈದ್ಯರು| ಸದ್ಯ 70-75 ಕೊರೋನಾ ಪೀಡಿತರು ಮಾತ್ರ ಚಿಕಿತ್ಸೆ ಪಡೆಯುತ್ತಿದ್ದಾರೆ| ಶತಕ ದಾಟಿದ ಪ್ಲಾಸ್ಮಾ ಥೆರಪಿ| ಕೊರೋನಾ ಸೋಂಕಿತ ಗರ್ಭಿಣಿಯರ ಹೆರಿಗೆ ಕೂಡ ಯಶಸ್ವಿಯಾಗಿ ಶತಕ ದಾಟಿರುವುದು ಇಲ್ಲಿ ಸ್ಮರಣೀಯ|
ಮಯೂರ ಹೆಗಡೆ
ಹುಬ್ಬಳ್ಳಿ(ನ.04): ಕೋವಿಡ್-19 ಪೀಡಿತರ ಸಂಖ್ಯೆ ಇಳಿಮುಖವಾಗುತ್ತಲೆ ಕಿಮ್ಸ್‌ನ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ತೆರೆಯಲಾಗಿದ್ದ ವಿಶೇಷ ವಾರ್ಡ್ ಖಾಲಿಯಾಗುತ್ತಿರುವ ಶುಭ ಸುದ್ದಿ ಬಂದಿದೆ. ಇನ್ನು, ಕೋವಿಡ್‌ಗಾಗೆ ಮೀಸಲಿದ್ದ ತಂಡದ ವೈದ್ಯರು ತಮ್ಮ ವಿಭಾಗಕ್ಕೆ ಮರಳುತ್ತಿದ್ದಾರೆ.
undefined
ಜಿಲ್ಲೆಯಲ್ಲಿ ತೀವ್ರ ಆತಂಕ ಸೃಷ್ಟಿಸಿದ್ದ ಕೊರೋನಾ ವಿರುದ್ಧ ಮೊದಲು ಹೋರಾಟಕ್ಕೆ ಸಜ್ಜಾಗಿದ್ದು ಕಿಮ್ಸ್ ಹಾಗೂ ಇಲ್ಲಿನ ವೈದ್ಯರು. ಇವರೀಗ ಕೊಂಚ ನಿಟ್ಟುಸಿರು ಬಿಡುತ್ತಿದ್ದಾರೆ. ಜೂನ್, ಜುಲೈ ವೇಳೆಗೆ ಕೊರೋನಾ ಐಸೋಲೇಶನ್ ವಾರ್ಡ್ ಭರ್ತಿಯಾಗಿ ಹಾಸಿಗೆಗಳೇ ಇಲ್ಲ ಎಂಬಂತ ಸ್ಥಿತಿ ನಿರ್ಮಾಣವಾಗಿತ್ತು. ಆದರೀಗ ಇದೇ ವಾರ್ಡ್‌ಗಳಲ್ಲಿ ಹಲವು ಕೋಣೆಗಳು ಮುಚ್ಚಿವೆ.
ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಕಟ್ಟಡದಲ್ಲಿ ಇದೀಗ 70-75 ಕೊರೋನಾ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಒಟ್ಟಾರೆ ಇಲ್ಲಿ ಕೋವಿಡ್ ಪೀಡಿತರಿಗಾಗಿ 450 ಹಾಸಿಗೆಗಳು ಮೀಸಲಾಗಿದ್ದವು. 120 ಹಾಸಿಗೆಗಳನ್ನು ಕಡಿಮೆ ಪ್ರಮಾಣದ ಸೋಂಕಿತರಿಗೆ ಇಡಲಾಗಿತ್ತು. ಕಳೆದ ವಾರದಿಂದ ಸರಾಸರಿ 30-35 ರೋಗಿಗಳು ಮಾತ್ರ ಕಿಮ್ಸ್‌ಗೆ ದಾಖಲಾಗುತ್ತಿದ್ದಾರೆ. ಅದರಲ್ಲಿ ಗದಗ, ಹಾವೇರಿ, ಉತ್ತರಕನ್ನಡ, ಕೊಪ್ಪಳ, ಗದಗ ಸೇರಿ ಇತರೆ ಜಿಲ್ಲೆಗಳಿಂದ ಗಂಭೀರ ಸ್ಥಿತಿಗೆ ತಲುಪಿದ ರೋಗಿಗಳು ಇದ್ದಾರೆ.
ಕಿಮ್ಸ್ ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರತಾನಿ ಮಾತನಾಡಿ, ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಇಳಿಮುಖವಾಗುತ್ತಿದೆ. ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನೀಡಲೆಂದೆ ಮೊದಲು ರಚಿಸಿದ್ದ ತಂಡದಲ್ಲಿ ವೈದ್ಯರು, ಸ್ಟಾಫ್ ನರ್ಸ್ ಸೇರಿ ನೂರಾರು ಜನರಿದ್ದರು. ಆದರೆ ಈಗ ತಂಡವನ್ನು ಚಿಕ್ಕದಾಗಿಸಲಾಗಿದೆ. ಮೆಡಿಸಿನ್ ವಿಭಾಗ ಸೇರಿ ಕೆಲ ವಿಭಾಗಗಳ ವೈದ್ಯರನ್ನು ಮಾತ್ರ ಕೋವಿಡ್ ವಾರ್ಡ್‌ಗೆ ನಿಯೋಜಿಸಲಾಗಿದೆ ಎಂದರು.
ಕೊರೋನಾ ಎಫೆಕ್ಟ್: ಕರಾಟೆ ಪಟು ಇದೀಗ ಬೀದಿಬದಿ ವ್ಯಾಪಾರಿ..!
ವೈದ್ಯ ಡಾ. ಸಚಿನ್ ಹೊಸಕಟ್ಟಿಮಾತನಾಡಿ, ಆರಂಭದಲ್ಲಿ ಕೊರೋನಾ ಸೋಂಕಿತರಾದರೆ ಗಂಭೀರ ಸ್ವರೂಪಕ್ಕೆ ಆರೋಗ್ಯ ಬಿಗಡಾಯಿಸುವುದು, ಏಕಾಏಕಿ ಮನೆಮಂದಿಗೆಲ್ಲ ಸೋಂಕು ತಗುಲುವುದು ಕಂಡು ಬರುತ್ತಿತ್ತು. ಆದರೆ ಈಗ ಅಷ್ಟರ ಮಟ್ಟಿಗೆ ವೈರಸ್ ಪ್ರಭಾವಶಾಲಿಯಾಗಿ ದಾಳಿ ಮಾಡುತ್ತಿಲ್ಲ. ಆರ್‌ಟಿಪಿಸಿಆರ್ ಮತ್ತು ರಾರಯಪಿಡ್ ಪರೀಕ್ಷೆಯಲ್ಲೂ ಹೆಚ್ಚಿನವರು ಸೋಂಕಿಗೆ ಒಳಗಾಗುತ್ತಿಲ್ಲ. ಹೀಗಾಗಿ ದಾಖಲಾಗುವವರ ಸಂಖ್ಯೆ ಇಳಿಮುಖವಾಗಿದೆ. ಅಂದರೆ ತೀವ್ರ ಅಪಾಯ ಮಟ್ಟವಿಲ್ಲ ಅಷ್ಟೇ, ಹಾಗೆಂದು ಜನತೆ ಏಕಾಏಕಿ ಸುರಕ್ಷತಾ ಕ್ರಮಗಳಿಂದ ವಿಮುಖರಾಗಬೇಕಿಲ್ಲ ಎಂದರು.
ಪ್ಲಾಸ್ಮಾ ಥೆರಮಿ ಶತಕ
ರಾಜ್ಯದಲ್ಲಿ ಮೊದಲ ಬಾರಿ ಪ್ಲಾಸ್ಮಾ ಥೆರಪಿ ನಡೆಸಿ ಯಶಸ್ಸು ಕಂಡಿದ್ದ ಕಿಮ್ಸ್‌ನಲ್ಲಿ ಈ ಚಿಕಿತ್ಸೆಗೆ ಒಳಗಾದವರ ಸಂಖ್ಯೆ ಶತಕ ದಾಟಿದೆ. ಜೂ. 28ರಿಂದ ಕಿಮ್ಸ್‌ನಲ್ಲಿ ಮೊದಲ ಪ್ಲಾಸ್ಮಾ ಥೆರಪಿ ನಡೆದಿತ್ತು. ಮಂಗಳವಾರದವರೆಗೆ ಕಿಮ್ಸ್‌ನಲ್ಲಿ ಒಟ್ಟಾರೆ 105 ಕೊರೋನಾ ಸೋಂಕಿತರಿಗೆ ಪ್ಲಾಸ್ಮಾ ಥೆರಪಿ ನೆರವೇರಿಸಲಾಗಿದೆ. ಇದರಲ್ಲಿ 88 ರೋಗಿಗಳು ಗುಣಮುಖರಾಗಿದ್ದಾರೆ. 14 ರೋಗಿಗಳು ಚೇತರಿಸಿಕೊಳ್ಳದೆ ಮೃತಪಟ್ಟಿದ್ದಾರೆ. ಉಳಿದವರು ವೈದ್ಯರ ನಿಗಾದಲ್ಲಿ ಇದ್ದಾರೆ. ಅದರಂತೆ ದಾನಿಗಳಲ್ಲಿ ಹೆಚ್ಚಿನ ಅರಿವು ಮೂಡುತ್ತಿದ್ದು, ಗುಣಮುಖರಾದವರು ಪ್ಲಾಸ್ಮಾ ದಾನ ಮಾಡುತ್ತಿದ್ದಾರೆ. ಇದೆ ವೇಳೆ ಕೊರೋನಾ ಸೋಂಕಿತ ಗರ್ಭಿಣಿಯರ ಹೆರಿಗೆ ಕೂಡ ಯಶಸ್ವಿಯಾಗಿ ಶತಕ ದಾಟಿರುವುದು ಇಲ್ಲಿ ಸ್ಮರಣೀಯ.
ಕೋವಿಡ್ ಪೀಡಿತರು ಕಡಿಮೆಯಾಗುತ್ತಿರುವುದು, ಕಿಮ್ಸ್‌ನಲ್ಲಿ 70-75 ರೋಗಿಗಳು ಮಾತ್ರ ಚಿಕಿತ್ಸೆಯಲ್ಲಿದ್ದಾರೆ. ಪ್ಲಾಸ್ಮಾ ಥೆರಪಿಗೆ ಒಳಗಾದವರ ಸಂಖ್ಯೆ ಶತಕ ದಾಟಿದೆ. ಇದು ನೆಮ್ಮದಿಯ ವಿಚಾರ. ಆದರೆ, ಜನತೆ ಮೈ ಮರೆಯಬಾರದು ಎಂದು ಕಿಮ್ಸ್ ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರತಾನಿ ಹೇಳಿದ್ದಾರೆ.