ಮಂಗಳೂರು: 'ಮೈ ಬೀಟ್ ಮೈ ಪ್ರೈಡ್' ರಾಜ್ಯಕ್ಕೂ ವಿಸ್ತರಣೆ

By Kannadaprabha NewsFirst Published Sep 25, 2019, 10:41 AM IST
Highlights

ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ರಚನೆಗೊಂಡಿರುವ ‘ನನ್ನ ಬೀಟ್-ನನ್ನ ಹೆಮ್ಮೆ’ ಎಂಬ ಹೊಸ ಸ್ವರೂಪದ ಪೊಲೀಸ್ ಬೀಟ್ ವ್ಯವಸ್ಥೆಯನ್ನು ರಾಜ್ಯದಲ್ಲಿ ಜಾರಿಗೆ ತರುವ ಬಗ್ಗೆ ರಾಜ್ಯ ಪೊಲೀಸ್ ಮಹಾನಿರ್ದೇಶಕ ಮತ್ತು ಮಹಾನಿರೀಕ್ಷಕರು ಉತ್ಸುಕರಾಗಿದ್ದಾರೆ. ಮಂಗಳೂರಿನಲ್ಲಿ ಜನಪ್ರಿಯಗೊಂಡ ಪೊಲೀಸ್ ಬೀಟ್‌ ವ್ಯವಸ್ಥೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.

ಮಂಗಳೂರು(ಸೆ.25): ನಾಗರಿಕರ ಸಹಭಾಗಿತ್ವದಲ್ಲಿ ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ರಚನೆಗೊಂಡಿರುವ ‘ನನ್ನ ಬೀಟ್-ನನ್ನ ಹೆಮ್ಮೆ’ ಎಂಬ ಹೊಸ ಸ್ವರೂಪದ ಪೊಲೀಸ್ ಬೀಟ್ ವ್ಯವಸ್ಥೆಯನ್ನು ರಾಜ್ಯದಲ್ಲಿ ಜಾರಿಗೆ ತರುವ ಬಗ್ಗೆ ರಾಜ್ಯ ಪೊಲೀಸ್ ಮಹಾನಿರ್ದೇಶಕ ಮತ್ತು ಮಹಾನಿರೀಕ್ಷಕ(ಡಿಜಿ-ಐಜಿಪಿ)ನೀಲಮಣಿ ಎನ್. ರಾಜು ಉತ್ಸುಕತೆ ವ್ಯಕ್ತಪಡಿಸಿದ್ದಾರೆ.

ಮಂಗಳವಾರ ಕರಾವಳಿ ಜಿಲ್ಲೆ ಭೇಟಿ ವೇಳೆ ಮಂಗಳೂರಿನ ಪಶ್ಚಿಮ ವಲಯ ಐಜಿಪಿ ಕಚೇರಿಯಲ್ಲಿ ಅವರು ಪೊಲೀಸ್ ಅಧಿಕಾರಿಗಳೊಂದಿಗೆ ಅನೌಪಚಾರಿಕ ಸಭೆ ನಡೆಸಿ ಈ ವಿಚಾರ ತಿಳಿಸಿದರು. ಮಂಗಳೂರಿನಲ್ಲಿ ಜಾರಿಗೆ ತಂದಿರುವ ಹೊಸ ಬೀಟ್ ವ್ಯವಸ್ಥೆಯ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದ ನೀಲಮಣಿ ರಾಜು ಅವರು, ನಾಗರಿಕರು ಮತ್ತು ಪೊಲೀಸರ ಮಧ್ಯೆ ಸೇತುವಾಗಿ ಈ ಬೀಟ್ ವ್ಯವಸ್ಥೆ ಕಾರ್ಯ ನಿರ್ವಹಿಸುತ್ತಿರುವುದನ್ನು ತಿಳಿದುಕೊಂಡರು.

ಸ್ವಚ್ಛ ಭಾರತ್ ದಿವಸ್: ರಾಜ್ಯದಿಂದ 200 ಸಾಧಕರು ಆಯ್ಕೆ

ಇದೇ ಮಾದರಿ ಬೀಟ್  ವ್ಯವಸ್ಥೆಯನ್ನು ರಾಜ್ಯಾದ್ಯಂತ ಜಾರಿಗೆ ತರುವ ನಿಟ್ಟಿನಲ್ಲಿ ವಿಸೃತ ಯೋಜನಾ ವರದಿ ಕಳುಹಿಸಿಕೊಡುವಂತೆ ನೀಲಮಣಿ ರಾಜು ಅವರು ನಗರ ಪೊಲೀಸ್ ಕಮಿಷನರ್ ಡಾ.ಪಿ.ಎಸ್.ಹರ್ಷ ಅವರಿಗೆ ಸೂಚನೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

‘ಆಶಾಕಿರಣ’ಗೆ ಪ್ರಶಂಸೆ:

ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ರೌಡಿಶೀಟರ್‌ಗಳಿಗೆ ಕಮಿನಷರ್ ಡಾ.ಪಿ.ಎಸ್.ಹರ್ಷ ಅವರು ನೀಡಿದ ಸನ್ನಡತೆ ಹಾಗೂ ಉದ್ಯೋಗ ಆಫರ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ನೀಲಮಣಿ ರಾಜು ಅವರು, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಜೊತೆಗೆ ಮಾತನಾಡಿ, ಅಗತ್ಯವಾದ ಉದ್ಯೋಗ ಹಾಗೂ ತರಬೇತಿ ನೆರವು ನೀಡುವುದಾಗಿ ಭರವಸೆ ನೀಡಿದರು ಎಂದು ಹೇಳಲಾಗಿದೆ. ಅಲ್ಲದೆ ಈ ನಿಟ್ಟಿನಲ್ಲಿ ಸ್ಥಾಪಿಸಿದ ‘ಆಶಾಕಿರಣ’ ಎಂಬ ಸಂಪರ್ಕ ಸೇತು ಘಟಕದ ಕಾರ್ಯವೈಖರಿಯನ್ನು ಪ್ರಶಂಸಿಸಿದ ನೀಲಮಣಿ ರಾಜು ಅವರು, ಆಶಾಕಿರಣ ಮುಖೇನ ಸನ್ನಡತೆಯ ರೌಡಿಶೀಟರ್‌ಗಳಿಗೆ ಉದ್ಯೋಗ ತರಬೇತಿಯ ಸಮಾರೋಪಕ್ಕೆ ಆಗಮಿಸುವುದಾಗಿ ತಿಳಿಸಿದರು ಎನ್ನಲಾಗಿದೆ.

ಮಂಗಳೂರು: ಬೀಟ್‌ ಪೊಲೀಸ್ ಜೊತೆ ಬೀಟ್‌ ನಡೆಸಿದ ಕಮಿಷನರ್‌!

ಕರಾವಳಿಯಲ್ಲಿ ಪೊಲೀಸ್ ಭದ್ರತೆಯ ಬಲವರ್ಧನೆ ಹಾಗೂ ಜನೋಪಯೋಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಬಗ್ಗೆ ಪೊಲೀಸ್ ಅಧಿಕಾರಿಗಳಿಂದ ನೀಲಮಣಿ ರಾಜು ಸಲಹೆಗಳನ್ನು ಪಡೆದರು ಎಂದು ಮೂಲಗಳು ತಿಳಿಸಿವೆ. ಪಶ್ಚಿಮ ವಲಯದ ಐಜಿಪಿ ಅರುಣ್ ಚಕ್ರವರ್ತಿ, ಜಿಲ್ಲಾ ಎಸ್ಪಿ ಲಕ್ಷ್ಮೀಪ್ರಸಾದ್, ಡಿಸಿಪಿಗಳಾದ ಅರುಣಾಂಗ್ಶು ಗಿರಿ, ಲಕ್ಷ್ಮೀ ಗಣೇಶ್ ಸೇರಿದಂತೆ ಪಶ್ಚಿಮ ವಲಯ ಜಿಲ್ಲೆಗಳ ಪೊಲೀಸ್ ಅಧಿಕಾರಿಗಳು ಇದ್ದರು.

ರೌಡಿ ಶೀಟರ್‌ಗಳಿಗೆ ಕಮಿಷನರ್‌ ಕೊಟ್ರು ಹೊಸ ಆಫರ್‌..!

click me!